ಬಯಲಾಯ್ತು ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನ

ಬಾಗಲಕೋಟೆ: ಕಾರ್ಯಕರ್ತರ ನಿರ್ಲಕ್ಷ್ಯ ಹಾಗೂ ಬಾಗಲಕೋಟೆ ವಿಧಾನಸಭೆ ಉಪ ಚುನಾವಣೆ ಕುರಿತು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಕಾವೇರಿದ ಚರ್ಚೆ ನಡೆಯಿತು. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಪಕ್ಷದ ಜಿಲ್ಲಾ ಕಚೇರಿಗೆ ಭೇಟಿ ನೀಡಿದ್ದ ವೇಳೆ ಈ ಪ್ರಹಸನ ನಡೆದಿದೆ.

ತೋಟಗಾರಿಕೆ ವಿಶ್ವವಿದ್ಯಾಲಯ ಆಯೋಜಿಸಿದ್ದ ತೋಟಗಾರಿಕೆ ಮೇಳದಲ್ಲಿ ಭಾಗವಹಿಸಲು ಆಗಮಿಸಿದ್ದ ಸಚಿವ ಜಾರಕಿಹೊಳಿ ಅವರು ಪಕ್ಷದ ಕಚೇರಿಗೆ ಭೇಟಿ ನೀಡಿ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಅಹವಾಲು ಆಲಿಸಿದರು. ಈ ವೇಳೆ ಪಕ್ಷದ ಕಾರ್ಯಕರ್ತರು, ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಅಳಲು ತೋಡಿಕೊಂಡಿದ್ದು ಗಮನಾರ್ಹ ಸಂಗತಿ.

ಕಾರ್ಯಕರ್ತರಿಗೆ ಅನ್ಯಾಯ:

ಪಕ್ಷ ಅಧಿಕಾರಕ್ಕೆ ಬಂದರೂ ಪಕ್ಷದ ಕಾರ್ಯಕರ್ತರಿಗೆ ನಾಮ ನಿರ್ದೇಶನಗಳ ನೇಮಕದಲ್ಲಿ ಸೂಕ್ತ ಅವಕಾಶ ಸಿಕ್ಕಿಲ್ಲ. ಖಾಲಿ ಇರುವ ಹುದ್ದೆಗಳಿಗೆ ಕಾರ್ಯಕರ್ತರನ್ನು ನೇಮಕ ಮಾಡಬೇಕು. ಆ ಮೂಲಕ ಮುಂದಿನ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಬೇಕು ಎಂದು ಪಕ್ಷದ ಪ್ರಮುಖ ಕಾರ್ಯಕರ್ತರು ಆಗ್ರಹಿಸಿದರು. ಪ್ರಮುಖವಾಗಿ ಖಾಲಿ ಇರುವ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಆಡಳಿತ ಮಂಡಳಿಗೆ ಶೀಘ್ರ ನೇಮಕವಾಗಬೇಕು ಎನ್ನುವ ಬೇಡಿಕೆ ಕೇಳಿಬಂದಿತು.

ಪಕ್ಷದ ಹಿರಿಕಿರಿಯ ಮುಖಂಡರು ಪ್ರಾಧಿಕಾರದ ಸಭಾಪತಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಚುನಾವಣೆ ಮುನ್ನವೇ ನೇಮಕಾತಿ ನಡೆಯಬೇಕು. ಆ ಮೂಲಕ ಪಕ್ಷದ ಕಾರ್ಯಕರ್ತರಿಗೆ ಆದ್ಯತೆ ನೀಡಬೇಕು ಎನ್ನುವ ತೀವ್ರ ಒತ್ತಾಯ ಕೇಳಿ ಬಂದಿತು.

ಗೊಂದಲ ನಿವಾರಿಸಲಿ:

ಕಾರ್ಯಕರ್ತರು ತಮ್ಮಲ್ಲಿರುವ ಅಸಮಾಧಾನ ತೋಡಿಕೊಳ್ಳುತ್ತಲೇ, ಬರಲಿರುವ ಉಪಚುನಾವಣೆ ಸಿದ್ಧತೆ ಕುರಿತು ಅಭಿಪ್ರಾಯಗಳನ್ನೂ ವ್ಯಕ್ತ ಪಡಿಸಿದರು. ಸೂಕ್ತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕು ಎನ್ನುವ ಒತ್ತಾಯದ ಮಧ್ಯೆ ದಿ.ಶಾಸಕ ಎಚ್.ವೈ. ಮೇಟಿ ಅವರ ಕುಟುಂಬದ ಯಾರಿಗೆ ಟಿಕೆಟ್ ನೀಡಿದರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸುವ ಭರವಸೆ ಕೆಲವರಿಂದ ವ್ಯಕ್ತವಾದರೆ, ಇನ್ನೂ ಕೆಲವರು ಕುಟುಂಬದಲ್ಲಿ ಯಾರಿಗೆ ಟಿಕೆಟ್ ಎನ್ನುವುದು ಸ್ಪಷ್ಟವಾಗುತ್ತಿಲ್ಲ. ಉಮೇಶ ಮೇಟಿ, ಮಲ್ಲಿಕಾರ್ಜುನ ಮೇಟಿ ಪರ ಪ್ರಯತ್ನಗಳು ನಡೆದಿವೆ. ಈ ಗೊಂದಲ ನಿವಾರಣೆ ಮಾಡಬೇಕು ಎನ್ನುವ ಮಾತನ್ನು ಕಾರ್ಯಕರ್ತರು ಸಚಿವರ ಗಮನಕ್ಕೆ ತರುವ ಕೆಲಸ ಮಾಡಿದರು.

ಒಗ್ಗಟ್ಟಿನ ಮಂತ್ರದ ಜಪ:

ಕಾರ್ಯಕರ್ತರ ಮಾತುಗಳನ್ನು ಆಲಿಸಿದ ಸಚಿವ ಸತೀಶ್ ಜಾರಕಿಹೊಳಿ ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಗೆಗೆ ಪ್ರಮುಖರು ಕುಳಿತು ಚರ್ಚಿಸಿ ನಿರ್ಧಾರಕ್ಕೆ ಬನ್ನಿ. ಆ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಭೇಟಿ ಮಾಡಿ ಯಾರಿಗೆ ಟಿಕೆಟ್ ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳೊಣ. ಮುಂದಿನ ದಿನಮಾನಗಳಲ್ಲಿ ಪಕ್ಷಕ್ಕಾಗಿ ಕೆಲಸ ಮಾಡಿ ಪ್ರಮುಖ ಕಾರ್ಯಕರ್ತರನ್ನು ಗುರುತಿಸಿ ಸೂಕ್ತ ಅವಕಾಶಗಳನ್ನು ಕಲ್ಪಿಸುವ ವ್ಯವಸ್ಥೆ ಮಾಡೋಣ. ಅದಕ್ಕೂ ಮೊದಲು ಎಲ್ಲರೂ ಒಗ್ಗಟ್ಟಿನಿಂದ ಉಪಚುನಾವಣೆ ಎದುರಿಸೋಣ ಎನ್ನುವ ಮಾತನ್ನು ಹೇಳಿ ಎಲ್ಲರನ್ನು ಸಮಾಧಾನ ಪಡಿಸುವ ಕೆಲಸವನ್ನು ಸಚಿವರು ಮಾಡಿದರು.

ಮಡುಗಟ್ಟಿರುವ ಅಸಮಾಧಾನ:

ಸಚಿವರ ನೇತೃತ್ವದಲ್ಲಿ ನಡೆದ ಪ್ರಮಖ ಕಾರ್ಯಕರ್ತರ ಸಭೆಯಿಂದ ಒಂದಂತೂ ಸ್ಪಷ್ಟವಾದಂತಾಗಿದೆ. ನಿಗಮ – ಮಂಡಳಿ ಸೇರಿದಂತೆ ಇತರೆ ಹುದ್ದೆಗಳ ನೇಮಕದಲ್ಲಿ ಆಗಿರುವ ಬೆಳವಣಿಗೆಯಿಂದ ಕಾರ್ಯಕರ್ತರಲ್ಲಿ ಅಸಮಾಧಾನ ಮಡುಟ್ಟಿದೆ ಎನ್ನುವುದಂತೂ ಸ್ಪಷ್ಟವಾದಂತಾಗಿದೆ. ಈ ಅಸಮಾಧಾನ ಇಷ್ಟಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಜಿಲ್ಲೆಯಲ್ಲಿ ಹಿರಿಯರಿಗೆ ಮಣೆ ಹಾಕಿರುವ ಪಕ್ಷ, ಪ್ರಮುಖ ಕಾರ್ಯಕರ್ತರನ್ನು ಗುರುತಿಸಿ ಆದ್ಯತೆ ನೀಡುವಲ್ಲಿ ವಿಫಲವಾಗಿದೆ ಎನ್ನುವುದನ್ನು ಕಾರ್ಯಕರ್ತರ ಮಾತಿನಿಂದಲೇ ಸ್ಪಷ್ಟವಾಗುತ್ತಿತ್ತು.

ಉಪಚುನಾವಣೆ ಟಿಕೆಟ್ ವಿಷಯ ಕೂಡ ಬಹಳ ಗಂಭೀರವಾಗಿ ಪ್ರಸ್ತಾಪವಾಗಿದ್ದು, ಗಮನಾರ್ಹ ಸಂಗತಿ. ದಿ. ಶಾಸಕ ಎಚ್.ವೈ. ಮೇಟಿ ಅವರ ಕುಟುಂಬದಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಒಗ್ಗಟ್ಟಿನಿಂದ ಕೆಲಸ ಮಾಡುವುದಾಗಿ ಕೆಲವರು ಭರವಸೆ ನೀಡಿದರಾದರೂ ಮೇಟಿ ಅವರ ಪುತ್ರರ ಪೈಕಿ ಯಾರಿಗೆ ಟಿಕೆಟ್ ಎನ್ನುವುದೇ ಸದ್ಯ ಯಕ್ಷಪ್ರಶ್ನೆಯಾಗಿದೆ.

ಮೇಟಿ ಪುತ್ರರ ನಿರ್ಧಾರ ಮುಖ್ಯ:

ದಿ. ಶಾಸಕ ಎಚ್. ವೈ. ಮೇಟಿ ಅವರ ಪುತ್ರರ ಬೆಂಬಲಿಗರು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಇವರಿಗೆ ಟಿಕೆಟ್ ನೀಡಬೇಕು ಎನ್ನುವ ರೀತಿಯಲ್ಲಿ ಪೊಸ್ಟ್ ಗಳನ್ನು ಮಾಡುತ್ತಿರುವುದು ಗಮನಿಸಬೇಕಿರುವ ಅಂಶವಾಗಿದೆ. ಇಂದಿನ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯದಂತೆ ಮೇಟಿ ಅವರ ಪುತ್ರರು ಆದಷ್ಟು ಬೇಗ ಟಿಕೆಟ್ ವಿಷಯದಲ್ಲಿ ಒಂದು ಸ್ಪಷ್ಟತೆಗೆ ಬರಬೇಕಿದೆ. ಇದು ವಿಳಂಬವಾದಷ್ಟು ಕಾರ್ಯಕರ್ತರಲ್ಲಿ ಗೊಂದಲ ಉಂಟಾಗುವ ಸಾಧ್ಯತೆಗಳು ಹೆಚ್ಚಿವೆ. ಹಾಗಾಗಿ ಟಿಕೆಟ್ ವಿಷಯದಲ್ಲಿ ಮೇಟಿ ಅವರ ಪುತ್ರರ ಸ್ಪಷ್ಟ ನಿರ್ಧಾರವನ್ನು ಕಾರ್ಯಕರ್ತರು ಕುತೂಹಲದಿಂದ ಕಾಯುತ್ತಿದ್ದಾರೆ. ಯಾವಾಗ ಅವರು ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ ಎನ್ನುವುದನ್ನು ಕಾಯ್ದು ನೋಡಬೇಕಷ್ಟೆ.

  • ವಿಠ್ಠಲ ಆರ್. ಬಲಕುಂದಿ
Scroll to Top