ಬಣ ಬಡಿದಾಟದಲ್ಲಿ ಜಿಲ್ಲಾ ಕಾಂಗ್ರೆಸ್ ಶಾಸಕರ ನಡೆ ನಿಗೂಢ

ಬಾಗಲಕೋಟೆ: ನಾಯಕತ್ವ ಬದಲಾವಣೆ ಕೂಗು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡುವರೆ ವರ್ಷ ಪೂರೈಸುತ್ತಿದ್ದಂತೆ ರಾಜಕೀಯ ಬೆಳವಣಿಗೆಗಳು ಗರಿಗೇದರಿವೆ. ಇದುವರೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಸೇರಿದಂತೆ ಆಯ್ದ ಸಚಿವರು ಪಕ್ಷದ ವರಿಷ್ಠರನ್ನು ಆಗಾಗ್ಗೆ ಭೇಟಿ ಮಾಡುತ್ತಲೇ ಇದ್ದಾರೆ. ಪ್ರತಿ ಭೇಟಿ ಬೆನ್ನಲ್ಲೇ ಒಗಟಿನ ಹೇಳಿಕೆಗಳು, ಏಟಿಗೆ, ತಿರುಗೇಟು ನೀಡುವ ಪರೋಕ್ಷ ವಾಗ್ದಾಳಿಗಳು ಸಾಮಾನ್ಯವಾಗಿದ್ದವು.

ಎರಡುವರೆ ವರ್ಷ ಆಗುತ್ತಿದ್ದಂತೆ ಶಾಸಕರು ದಂಡು ಕಟ್ಟಿಕೊಂಡು ದೇಹಲಿಗೆ ತೆರಳವುದು ಶುರುವಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಬೆಂಬಲಿಗರ ಗುಂಪು ಗುರುವಾರ ದೆಹಲಿಗೆ ತೆರಳಿ ವರಿಷ್ಠರ ಭೇಟಿ ಮಾಡಲು ಮುಂದಾಗಿತ್ತು. ಶುಕ್ರವಾರ ಮತ್ತಷ್ಟು ಜನ ಶಾಸಕರು ದೆಹಲಿ ಯಾತ್ರೆ ಕೈಗೊಳ್ಳುವವರಿದ್ದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಬೆಂಗಳೂರಿಗೆ ಆಗಮಿಸಿದ್ದರಿಂದ ಇಲ್ಲಿಯೇ ಕಾಂಗ್ರೆಸ್ ಮುಖಂಡರ ದಂಡು ಭೇಟಿ ಮಾಡಿದೆ.

ಎರಡೂ ಕಡೆ ಗಟ್ಟಿ ನಿಲುವು:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದಂತೆ ನಡೆಯುತ್ತಾರೆ ಎನ್ನುವ ಮಾಜಿ ಸಂಸದ ಡಿ.ಕೆ. ಸುರೇಶ ಅವರ ಹೇಳಿಕೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದು, ಅವರ ಹೇಳಿಕೆ ಗಮನಿಸಿದ ಯಾರಿಗೆ ಆಗಲಿ ಮುಖ್ಯಮಂತ್ರಿ ಪದವಿ ಬಿಟ್ಟು ಕೊಡಲಿದ್ದಾರೆ ಎನ್ನುವ ಅರ್ಥವನ್ನು ಹೇಳುತ್ತದೆ. ಸುರೇಶ ಅವರ ಹೇಳಿಕೆ ಬೆನ್ನಲ್ಲೇ ಶಾಸಕರು ದೆಹಲಿಗೆ ಹೋಗಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಲು ಮುಂದಾಗಿರುವುದು ನಾಯಕತ್ವ ಬದಲಾವಣೆ ಕೂಗಿನ ಮತ್ತೊಂದು ಮೆಟ್ಟಿಲು ಎಂದು ರಾಜಕೀಯ ವಲಯದಲ್ಲಿ ಅರ್ಥೈಸಲಾಗುತ್ತಿದೆ. ಇದೇ ವೇಳೆ “ಯಾವುದೇ ಕಾರಣಕ್ಕೂ ಮುಂದಿನ ಬಜೆಟ್ ನಾನೇ ಮಂಡಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಟ್ಟಿಯಾಗಿ ಹೇಳುತ್ತಿದ್ದಾರೆ.

ಮಾತಿನ ಚೆಕ್‌ಮೆಟ್:

ಮುಖ್ಯಮಂತ್ರಿ ಬದಲಾವಣೆ ಕುರಿತು ರಾಜ್ಯ ಕಾಂಗ್ರೆಸ್ ವಲಯದಲ್ಲಿ ಪರ, ವಿರೋಧ ಚಟುವಟಿಕೆಗಳು ಚುರುಕುಗೊಂಡಿವೆ. ಒಬ್ಬರಿಗೊಬ್ಬರು ಮಾತಿನ ಚೆಕ್‌ಮೆಟ್ ಇಡುತ್ತಿದ್ದಾರೆ. ಇದರ ಮಧ್ಯೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಪರ ಬಣಗಳು ಸೃಷ್ಟಿಯಾಗುತ್ತಿವೆ. ಶಾಸಕರನ್ನು ತಮ್ಮತ್ತ ಸೆಳೆಯುವ ಕಸರತ್ತು ಆರಂಭಗೊಂಡಿದೆ. ಈಗಾಗಲೇ ಕೆಲವರು ಒಬ್ಬೊಬ್ಬರ ಜತೆ ಗುರುತಿಸಿಕೊಂಡಿದ್ದಾರೆ. ಯಾವ ಬಣಕ್ಕೂ ಸೇರದ ಬಹುದೊಡ್ಡ ಸಂಖ್ಯೆಯಲ್ಲಿನ ತಟಸ್ತ‌ ಬಣದ ಶಾಸಕರನ್ನು ಸೆಳೆಯಲು ಎರಡೂ‌ ಬಣಗಳ ಮುಖಂಡರು ಪ್ರಯತ್ನಿಸುತ್ತಿದ್ದಾರೆ. ಏತನ್ಮಧ್ಯೆ ಬಾಗಲಕೋಟೆ ಜಿಲ್ಲೆಯಲ್ಲಿ ನಾಲ್ವರು ಕಾಂಗ್ರೆಸ್ ಶಾಸಕರಿದ್ದಾರೆ. ಅವರಾರೂ ಇನ್ನೂ ಈ ಆಟದಲ್ಲಿ ಎಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ.

ಶಾಸಕರ ನಡೆ ನಿಗೂಢ:

ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ಮಾಧ್ಯಮದವರೊಂದಿಗೆ ಮುಖಾಮುಖಿ ಆದಾಗಲೆಲ್ಲ ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ವಿಷಯವೆಲ್ಲ ಪಕ್ಷದ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಹೇಳುತ್ತ ಬಂದಿದ್ದಾರೆ.

ಹುನಗುಂದ ಶಾಸಕ, ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿ ಆಗಿದ್ದು, ಪಕ್ಷದಲ್ಲಿ ಯಾರನ್ನು ಭೇಟಿ ಮಾಡಬೇಕೋ ಅವರನ್ನು ಭೇಟಿ ಮಾಡಿ ಮಂತ್ರಿ ಸ್ಥಾನದ ಇಂಗಿತ ವ್ಯಕ್ತ ಪಡಿಸಿದ್ದೇನೆ. ಮಂತ್ರಿ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ಹೇಳುತ್ತಲೇ ಇದ್ದಾರೆ. ಆದರೆ ನಾಯಕತ್ವ ಬದಲಾವಣೆ ವಿಷಯದಲ್ಲಿ ಇದುವರೆಗೂ ಯಾವ ಅಭಿಪ್ರಾಯವನ್ನೂ ವ್ಯಕ್ತಪಡಿಸದೇ ಅದೆಲ್ಲ ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು, ಅದನ್ನು ಅವರು ನಿರ್ಧರಿಸುತ್ತಾರೆ ಎಂದು ಹೇಳುವ ಮೂಲಕ ತಟಸ್ಥ ನಿಲುವಿಗೆ ಅಂಟಿಕೊಂಡಿದ್ದಾರೆ. ಜಿಲ್ಲೆಯ ಇತರ ಕಾಂಗ್ರೆಸ್ ಶಾಸಕರು ಸದ್ಯದ ಬೆಳವಣಿಗೆಗಳ ಬಗೆಗೆ ಮಾತನಾಡುವ ಗೋಜಿಗೆ ಹೋಗಿಲ್ಲ. ಎಲ್ಲವನ್ನೂ ಕಾಯ್ದು ನೋಡುವ ತಂತ್ರಕ್ಕೆ ಮೋರೆ ಹೋದಂತಿದೆ.

ಯಾರ ಪರವೂ ಬ್ಯಾಟಿಂಗ್ ಇಲ್ಲ:

ಮುಖ್ಯಮಂತ್ರಿ ಸ್ಥಾನದ ಬದಲಾವಣೆ, ಸಂಪುಟ ಪುನಾರಚನೆ ವಿಷಯ ಅಂತಿಮ ಘಟ್ಟಕ್ಕೆ ಬರುವವರೆಗೂ ಬಾಗಲಕೋಟೆ ಜಿಲ್ಲೆಯ ಕಾಂಗ್ರೆಸ್ ಶಾಸಕರ ನಿಲುವು ಗೊತ್ತಾಗದು. ಕೊನೆ ಕ್ಷಣದ ವರೆಗೆ ಗೌಪ್ಯತೆ ಕಾಪಾಡಿಕೊಂಡು ಬರುವ ಸಾಧ್ಯತೆಗಳು ನಿಚ್ಚಳವಾಗಿವೆ. ಏತನ್ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ನಿಲ್ಲಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ. 2013ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡರೂ, ಅವರು ಮೇಲ್ಮನೆಗೆ ಆಯ್ಕೆಗೊಂಡು ಮಂತ್ರಿಯೂ ಆಗಿದ್ದರ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರ ಅನನ್ಯವಾಗಿದೆ. ಹಾಗಾಗಿ ಅವರು ಸಿದ್ದರಾಮಯ್ಯನವರ ಪರ ನಿಲ್ಲಬಹುದು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆದರೆ ತಿಮ್ಮಾಪುರ ಅವರು ಮಾತ್ರ ಇದುವರೆಗೂ ಯಾರ ಪರವೂ ಬ್ಯಾಟಿಂಗ್ ಮಾಡಿಲ್ಲ. ಹಾಗೆ ಜಿಲ್ಲೆಯ ಇತರ ಶಾಸಕರೂ ಬಹಿರಂಗವಾಗಿ ಯಾರ ಪರವೂ ನಿಂತಿಲ್ಲ. ಮುಂದಿನ ಬೆಳವಣಿಗೆಗಳನ್ನು ಕಾಯ್ದು ನೋಡಬೇಕಷ್ಟೆ.

  • ವಿಠ್ಠಲ ಆರ್. ಬಲಕುಂದಿ
Scroll to Top