ಬಾಗಲಕೋಟೆ ಕಾಂಗ್ರೆಸ್ ಬಂಡಾಯಕ್ಕೆ ಸಂಧಾನದ ಮದ್ದು!

ಬಾಗಲಕೋಟೆ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕದ ಆದೇಶ ಹೊರಬಿದ್ದ ಬೆನ್ನಲ್ಲೆ ಸ್ಪೋಟಿಸಿದ್ದ ಬಂಡಾಯ ಧ್ವನಿ ತಣ್ಣಗಾಗಿಸುವ ಕೆಲಸ ಆರಂಭಗೊಂಡಿದೆ. ಅಕ್ಬರ್ ಮುಲ್ಲಾ ಅವರ ನೇಮಕ ಆದೇಶ ಹೊರಬಿದ್ದಾಗ ಅದು ತಮ್ಮ ಗಮನಕ್ಕೆ ಬಂದಿಲ್ಲ ಎನ್ನುವ ಹೇಳಿಕೆ ನೀಡಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಅವರು ಇದೀಗ ಬಂಡಾಯ ತಣ್ಣಗಾಗಿಸುವ ನಿಟ್ಟಿನಲ್ಲಿ ಸಂಧಾನದ ಪ್ರಕ್ರಿಯೆ ಆರಂಭಿಸಿದ್ದಾರೆ.

ಬದಲಾವಣೆ ಇಲ್ಲ:

ಬಾಗಲಕೋಟೆ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕ ನಡೆದಿದ್ದು ತಮ್ಮ ಗಮನಕ್ಕೆ ಬಂದಿಲ್ಲ ಎನ್ನುವ ಮಾತನ್ನಾಡಿದ್ದ ನಂಜಯ್ಯನಮಠ ಅವರು ಬ್ಲಾಕ್ ಕಾಂಗ್ರೆಸ್ ವಲಯದಲ್ಲಿ ಭುಗಿಲೆದ್ದ ಬಂಡಾಯ ಕಂಡು, ಹೇಗಾದರೂ ಮಾಡಿ ಅದನ್ನು ಶಮನವಾಗಿಸುವ ನಿಟ್ಟಿನಲ್ಲಿ ಬಂಡಾಯ ಪಾಳೆಯದಲ್ಲಿನ ಕೆಲ ಪ್ರಮುಖರನ್ನು ಕರೆಯಿಸಿಕೊಂಡು ಮಾತನಾಡಿದ್ದಾರೆ. ನೇಮಕಗೊಂಡಿರುವ ಅಧ್ಯಕ್ಷರ ಬದಲಾವಣೆ ಬೇಡ. ಬೇರೆ ಸಮಾನ ಹುದ್ದೆಗಳಿಗೆ ಬಂಡಾಯ ಗುಂಪಿನ ಪ್ರಮುಖರನ್ನು ನೇಮಕ ಮಾಡುವ ಪ್ರಸ್ತಾವನೆ ಮುಂದಿಟ್ಟಿದ್ದಾರೆ. ಮಾತುಕತೆ, ಚರ್ಚೆಯ ಮೂಲಕ ಎಲ್ಲವನ್ನು ಸರಿ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಕ್ಷೇತ್ರದ ಉಪ ಚುನಾವಣೆ ಎದುರಾಗಿರುವ ಸಮಯದಲ್ಲಿ ಬಂಡಾಯದ ಕೂಗು ಸರಿಯಲ್ಲ. ಅದರಿಂದ ಆಗಬಹುದಾದ ವ್ಯತಿರಿಕ್ತ ಪರಿಣಾಮಗಳು ಉಂಟಾಗುವ ಮುನ್ನವೆ ಶಮನಗೊಳಿಸುವಂತೆ ಕೆಪಿಸಿಸಿಯಿಂದ ಸಂದೇಶ ಬಂದ ಹಿನ್ನೆಲೆಯಲ್ಲಿಯೇ ನಂಜಯ್ಯನಮಠ ಅವರು ಸಂಧಾನ ಸೂತ್ರಕ್ಕೆ ಮುಂದಾಗಿದ್ದಾರಂತೆ. ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಕ್ಬರ್ ಮುಲ್ಲಾ ಅವರ ನೇಮಕ ಆದೇಶ ಹೊರ ಬಿದ್ದಾಗ, ಕ್ಷೇತ್ರದಲ್ಲಿ ಅವರದೇ ಸಮುದಾಯಕ್ಕೆ ಸೇರಿರುವ ಪಕ್ಷದ ಇತರ ಮುಖಂಡರು ಆಕ್ರೋಶ ವ್ಯಕ್ತಪಡಿಸಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧ್ಯಕ್ಷರಿಗೆ ಪತ್ರ ಬರೆದಿದ್ದರು.

ಅರಗಿಸಿಕೊಳ್ಳದ ಸ್ಥಿತಿ:

ಪಕ್ಷದ ಮತಬ್ಯಾಂಕ್ ಆಗಿರುವ ಅಲ್ಪ ಸಂಖ್ಯಾತ ಸಮುದಾಯದಿಂದಲೇ ಬಂಡಾಯದ ಕೂಗು ಕಾಣಿಸಿಕೊಂಡಿದ್ದು, ಪಕ್ಷಕ್ಕೆ ಅರಗಿಸಿಕೊಳ್ಳಲಾಗದ ಸ್ಥಿತಿ ನಿರ್ಮಾಣವಾಗಿತ್ತು. ಚುನಾವಣೆ ಸಮಯದಲ್ಲಿ ಇದೇನಪ್ಪ ಹೊಸ ರಗಳೆ ಎನ್ನುವಂತಾಗಿತ್ತು. ಪಕ್ಷದ ಜಿಲ್ಲಾಧ್ಯಕ್ಷ ನಂಜಯ್ಯನಮಠ ಸಂಧಾನದ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮಾತುಕತೆ ಆರಂಭಿಸಿದ್ದಾರೆ. ಆದರೆ ಅಧ್ಯಕ್ಷರ ಬದಲಾವಣೆ ಇಲ್ಲದೆ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಅವರದ್ದಾಗಿದೆ. ಅವರ ಪ್ರಯತ್ನಕ್ಕೆ ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಹೇಗೆ ಸ್ಪಂದಿಸಲಿದ್ದಾರೆ ಎನ್ನುವುದು ಗಮನಾರ್ಹ.

ಸಮಾನ ಹುದ್ದೆ ಪ್ರಸ್ತಾಪ:

ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಬೇಡ ಎನ್ನುವುದಾದಲ್ಲಿ, ಬಂಡಾಯ ಬಣದ ಮುಖಂಡರ ಬೇಡಿಕೆ ಏನಾಗಿರಲಿದೆ. ಬಂಡಾಯಗಾರರು ಯಾವ ಹುದ್ದೆಗಳ ಬೇಡಿಕೆ ಮುಂದಿಡಲಿದ್ದಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಎಲ್ಲವೂ ಸರಿಯಾಗಿ ಹೊಂಟಾಗ, ಇಲ್ಲದ್ದನ್ನು ಮೈಮೇಲೆ ಹಾಕಿಕೊಂಡರು ಎನ್ನುವಂತೆ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕವಾಗಿದೆ. ಈ ನೇಮಕದ ಹಿಂದಿನ ಕಥೆಯೂ ರೋಚಕವಾಗಿದೆ.

ಮುಂದಾಳತ್ವದ ಪೈಪೋಟಿ:

2008 ರಲ್ಲಿ ವಿಧಾನಸಭೆ ಕ್ಷೇತ್ರಗಳ ಪುನರ್ ವಿಂಗಡಣೆ ಆದಾಗಿನಿಂದ ಕ್ಷೇತ್ರದ ಕರ್ಣಧಾರತ್ವವನ್ನು ದಿ.ಶಾಸಕ ಎಚ್.ವೈ. ಮೇಟಿ ಅವರು ವಹಿಸಿಕೊಂಡು ಪಕ್ಷದ ಬಲತುಂಬಿದ್ದರು. 2008 ರಿಂದ ಇಲ್ಲಿಯವರೆಗೂ ಅತ್ಯಂತ ಯಶಸ್ವಿಯಾಗಿ ಕ್ಷೇತ್ರದಲ್ಲಿ ಪಕ್ಷವನ್ನು ಮುನ್ನಡೆಸಿಕೊಂಡು ಬಂದಿದ್ದರು. ಅವರಿಲ್ಲದ ಈ ಸಮಯದಲ್ಲಿ ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಮುಂದಾಳತ್ವವವನ್ನು ಪಕ್ಷ ಇನ್ನೂ ಯಾರಿಗೂ ವಹಿಸಿಕೊಟ್ಟಿಲ್ಲ. ಕ್ಷೇತ್ರದ ಮುಂದಾಳತ್ವದ ಮೇಲೆ ಅನೇಕ ಹಿರಿಯ ಮುಖಂಡರು ಕಣ್ಣಿಟ್ಟಿದ್ದಾರೆ. ಆದರೆ ಕಾಣದ ಪ್ರಭಾವಿ ಕೈಯೊಂದು ತಾನೇ ಕ್ಷೇತ್ರದ ಮುಂದಾಳತ್ವ ವಹಿಸಿಕೊಳ್ಳಲು ಮನಸ್ಸು ಮಾಡಿರುವುದರಿಂದ ಇಲ್ಲದ ಸಮಸ್ಯೆಗಳು ಹುಟ್ಟಿಕೊಳ್ಳಲಾರಂಭಿಸಿವೆ.

ಕಾಣದ ಕೈ ಮೇಲುಗೈ:

ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕದಿಂದ ಉಂಟಾಗಿರುವ ಬಂಡಾಯ ಶಮನಕ್ಕೆ ನಂಜಯ್ಯನಮಠ ಅವರು ಮುಂದಾಗಿದ್ದಾರಾದರೂ ಕ್ಷೇತ್ರದ ಮುಂದಾಳತ್ವಕ್ಕಾಗಿ ಆರಂಭಗೊಂಡಿರುವ ಗುದ್ದಾಟ ಸದ್ಯಕ್ಕೆ ಮುಗಿಯುವಂತೆ ಕಾಣಿಸುತ್ತಿಲ್ಲ. ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಮೇಲೆ ಇಲ್ಲಿನ ಮುಂದಾಳತ್ವ ಯಾರ ಹೆಗಲಿಗೆ ಎನ್ನುವುದು ಸ್ಪಷ್ಟವಾಗಲಿದೆ. ಅಲ್ಲಿಯವರೆಗೂ ಕ್ಷೇತ್ರದ ಅಧಿಪತ್ಯಕ್ಕಾಗಿ ನಿರಂತರ ಪ್ರಯತ್ನಗಳು ನಡೆಯಲಿದ್ದು, ಸದ್ಯದ ಬೆಳವಣಿಗೆಗಳನ್ನು ಗಮನಿಸಿದಾಗ ಪಕ್ಷದಲ್ಲಿನ ಹಿರಿಯರಿಗೆ ಹಿನ್ನೆಡೆಯಾಗಿ ಕಾಣದ ಪ್ರಭಾವಿ ಕೈ ಮೇಲಾದಂತೆ ಕಾಣಿಸುತ್ತಿದೆ.

  • ವಿಠ್ಠಲ ಆರ್. ಬಲಕುಂದಿ
Scroll to Top