ಬಾಗಲಕೋಟೆ: ಸತತ ಎರಡು ದಿನಗಳ ಕಾಲ ಸುರಿದ ಜಡಿಮಳೆ, ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಆಪಾರ ಆಸ್ತಿ-ಪಾಸ್ತಿ, ಬೆಳೆದು ನಿಂತ ಪೈರು ಹಾನಿಗೊಳಗಾಗಿದೆ. ಮಣ್ಣಿನ ಮನೆಗಳು ಬಿದ್ದು, ಜೀವ ಹಾನಿ ಕೂಡ ಸಂಭವಿಸಿದೆ.
ಸತತ ಮಳೆಯಿಂದ ಆಗಿರುವ ನಷ್ಟವನ್ನು ಜಿಲ್ಲಾಡಳಿತ ಅಂದಾಜು ಮಾಡುತ್ತಿದೆ. ಜಿಲ್ಲಾಧಿಕಾರಿಗಳು ಹಾನಿಗೊಂಡ ಪ್ರದೇಶಗಳಿಗೆ ಭೇಟಿ ನೀಡಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.
ಆತಂಕದಲ್ಲಿ ಬದುಕು:
ಇಷ್ಟೆಲ್ಲದರ ಮಧ್ಯೆ ಮಳೆಯಿಂದ ನೆನೆದ ಮಣ್ಣಿನ ಇನ್ನಷ್ಟು ಮನೆಗಳು ಹಾನಿಗೆ ಒಳಗಾಗುವ ಭೀತಿ ಜನರನ್ನು ಕಾಡುತ್ತಿದೆ. ಬಿಸಿಲು ಬೀಳುತ್ತಿದ್ದಂತೆ ನೆನೆದ ಮಣ್ಣಿನ ಮನೆಗಳು ಬಿರುಕು ಬಿಟ್ಟು ಬೀಳುವ ಅಪಾಯದ ಮಧ್ಯೆ ಮಣ್ಣಿನ ಮನೆಗಳಲ್ಲಿಯೇ ಜನತೆ ಬದುಕುವಂತಾಗಿದೆ.
ಏತನ್ಮಧ್ಯೆ ಹವಾಮಾನ ಇಲಾಖೆ ಅಕ್ಟೋಬರ್ 3ರ ವರೆಗೆ ಜಿಲ್ಲೆಯಲ್ಲಿ ಹೆಚ್ಚಿನ ಮಳೆ ಆಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದ್ದಾರೆ. ಇದು ಜನತೆಯನ್ನು ಇನ್ಮಷ್ಟು ಆತಂಕಕ್ಕೀಡು ಮಾಡಿದೆ.
ವ್ಯಾಪಾರಕ್ಕೂ ಅಡ್ಡಿ:
ಸತತ ಮಳೆ ಪರಿಣಾಮ ಜಿಲ್ಲಾದ್ಯಂತ ಎರಡು ದಿನಗಳಿಂದ
ವ್ಯಾಪಾರ -ವಹಿವಾಟಿಗೂ ತೊಂದರೆ ಆಗಿದೆ. ಜನ ಮನೆಬಿಟ್ಟು ಹೊರಗೆ ಬಾರದ ಹಿನ್ನೆಲೆಯಲ್ಲಿ ವ್ಯಾಪಾರವಿಲ್ಲದೆ ವ್ಯಾಪಾರಸ್ಥರು ಅಂಗಡಿ- ಮುಂಗಟ್ಟು ತೆರೆದುಕೊಂಡು ಸುಮ್ಮನೆ ಕೂರುವಂತಾಗಿದೆ. ಆಗಾಗ್ಗೆ ಸ್ಥಳೀಯ ಗ್ರಾಹಕರು ಬಂದರೂ ಪರ ಊರಿನವರು ವ್ಯಾಪಾರಕ್ಕೆ ಬರುತ್ತಿಲ್ಲ.
ನೀರು ಪಾಲಾದ ಬೆಳೆ:
ಹೆಚ್ಚು ಕಡಿಮೆ ವಾರದಿಂದ ಆಗಾಗ್ಗೆ ಸುರಿದ ಮಳೆ ಪರಿಣಾಮ ಬೆಳೆದು ನಿಂತ ಪೈರು ಹಾನಿಗೊಂಡಿದೆ. ಜಮೀನುಗಳಲ್ಲಿ ಕಿತ್ತು ಹಾಕಿದ ಉಳ್ಳಾಗಡ್ಡಿ ಮಳೆ ನೀರಿನಿಂದ ಕೊಳೆಯಲಾರಂಭಿಸಿದೆ. ರೈತರು ಬೆಳೆದ ಬೆಳೆ ಕೈಗೆ ಬಾರದೆ, ನಷ್ಟವನ್ನು ಅನುಭವಿಸಬೇಕಾಗಿ ಬಂದಿದೆ.
ಸತತ ಮಳೆಯಿಂದ ಸಂಕಷ್ಟಕ್ಕೀಡಾದ ಜನತೆಗೆ ಸರ್ಕಾರ ಸಹಾಯ ಹಸ್ತ ಚಾಚಬೇಕಿದೆ. ಅನಗತ್ಯ ವಿಳಂಬ ಮಾಡದೆ ಪರಿಹಾರ ಕ್ರಮಕ್ಕೆ ಮುಂದಾಗಬೇಕಿದೆ. ಜಿಲ್ಲೆಯ ಜನಪ್ರತಿಧಿಗಳು ತಮ್ಮ ತಮ್ಮ ಪ್ರದೇಶಗಳಲ್ಲಿ ಹಾನಿಗೀಡಾದ ಜನತೆಗೆ ಧೈರ್ಯ ತುಂಬುವ ಕಾರ್ಯಕ್ಕೆ ಮುಂದಾಗಬೇಕಿದೆ. ಆದಷ್ಟು ತಕ್ಷಣದ ಪರಿಹಾರ ಮಾರ್ಗ ಕಂಡುಕೊಳ್ಳಬೇಕಿದೆ.
ನೀರಿನ ಪ್ರಮಾಣ ಹೆಚ್ಚಳ :
ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿದ್ದು, ಒಡಲು ಮೀರಿ ಹರಿಯುತ್ತಿವೆ. ಬೆಳೆಗಳಲ್ಲಿ ನೀರು ಹೊಕ್ಕಿದೆ. ಜಮೀನುಗಳಿಗೆ ನೀರು ನುಗ್ಗುವ ಪ್ರಮಾಣ ಹೆಚ್ಚುತ್ತಲೇ ಇದೆ. ಹಾಗಾಗಿ ಹಾನಿಯ ಅಂದಾಜು ಸದ್ಯ ಗೊತ್ತಾಗದ ಸ್ಥಿತಿ ಇದೆ. ಮಲಪ್ರಭಾ , ಘಟಪ್ರಭಾ ಮತ್ತು ಕೃಷ್ಣಾ ನದಿ ತೀರಗಳ ಜಮೀನುಗಳಲ್ಲಿ ನೀರಿನ ರಾಶಿ ಕಾಣಿಸುತ್ತಿದೆ.
ಅಗತ್ಯ ಪರಿಹಾರ ಕ್ರಮ:
ಮಳೆಯಿಂದ ಸಂಕಷ್ಟ ಅನುಭವಿಸುತ್ತಿರುವ ಜನತೆಗೆ ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರದ ಮೇಲೆ ಒತ್ತಡ ಹಾಕುವ ಮೂಲಕ ಮನೆಗಳನ್ನು ಕಳೆದುಕೊಂಡವರಿಗೆ ಮನೆ, ಬೆಳೆ ಹಾನಿಗೆ ಒಳಗಾಗಿರುವ ರೈತರಿಗೆ ಸೂಕ್ತ ಬೆಳೆ ಪರಿಹಾರ ವ್ಯವಸ್ಥೆ ಮಾಡಬೇಕಿದೆ.
ಅಕ್ಟೋಬರ್ ಮೂರರವರೆಗೂ ಸುರಿಯಲಿರುವ ಮಳೆಯಿಂದ ತೊಂದರೆ ಆಗದಂತೆ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕಿದೆ. ಸಾಧ್ಯವಾದಷ್ಟು ಜನರಕ್ಷಣಾ ಕೆಲಸ ನಡೆದಲ್ಲಿ ಆಗುವ ಅನಾಹುತಗಳನ್ನು ತಕ್ಕ ಮಟ್ಟಿಗೆ ತಡೆಯಲು ಸಾಧ್ಯವಾಗಲಿದೆ.
- ವಿಠ್ಠಲ ಆರ್. ಬಲಕುಂದಿ



