ಬಾದಾಮಿ ರಂಗಲೋಕದಲ್ಲೊಂದು ಹೊಸ ಪ್ರಯೋಗ!

ನಾಡಿನ ರಂಗಭೂಮಿ ಕಲಾವಿದರ ಪಾಲಿನ ತವರು ಬಾದಾಮಿ ಬನಶಂಕರಿ ಜಾತ್ರೆ. ಈ ಜಾತ್ರೆಗೆ ಬರುವ ವೃತ್ತಿರಂಗಭೂಮಿ ನಾಟಕ ಕಂಪನಿಗಳು‌ ಮತ್ತು ರಂಗಭೂಮಿ ಕಲಾವಿದರ ಪಾಲಿಗೆ ವರ್ಷದ ಅನ್ನ ನೀಡುವ ಜಾತ್ರೆಯಾಗಿದೆ.

ಪ್ರತಿವರ್ಷ ಹತ್ತಾರು ನಾಟಕ ಕಂಪನಿಗಳು ಇಲ್ಲಿಗೆ ಬಂದು ತಿಂಗಳಾನುಗಟ್ಟಲ್ಲೇ ನಾಟಕಗಳನ್ನು ಪ್ರದರ್ಶಿಸುತ್ತವೆ. ಜನತೆ ಕೂಡಾ ನಾಟಕಗಳಿಗೆ ಪ್ರೋತ್ಸಾಹ ನೀಡುತ್ತಲೇ ಬಂದಿದ್ದಾರೆ.

ಏಕವ್ಯಕ್ತಿ ನಾಟಕ ಪ್ರದರ್ಶನ:

ಏತನ್ಮಧ್ಯೆ ಈ ಬಾರಿ ಜಾತ್ರೆಯ ನಾಟಕ ಲೋಕದಲ್ಲೊಂದು ಹೊಸ ಪ್ರಯೋಗಕ್ಕೆ ಬಿಎಸ್‌ಆರ್ ಗುಬ್ಬಿ ನಾಟಕ ಕಂಪನಿ ಮುಂದಾಗಿದೆ. ಬೆಂಗಳೂರಿನ ರಂಗ ಸಂಪದ ಸಹಕಾರದೊಂದಿಗೆ ಹಿರಿಯ ರಂಗಭೂಮಿ ಕಲಾವಿದೆ ಹಾಗೂ ನಟಿ ಉಮಾಶ್ರೀ ಅವರ ಅಭಿನಯದ ‘ಶರ್ಮಿಷ್ಠೆ’ ಎಂಬ ಏಕವ್ಯಕ್ತಿ ನಾಟಕ ಪ್ರದರ್ಶನ ಆಯೋಜನೆ ಮಾಡಿದೆ.

ರಾಜ್ಯದ ಜನತೆಯ ಅದರಲ್ಲೂ ಉತ್ತರ ಕರ್ನಾಟಕದ ಜನರ ಮನೆ ಮಾತಾಗಿರುವ ಕನ್ನಡ ರಂಗಭೂಮಿ, ಹಿರಿತೆರೆ, ಕಿರುತೆರೆ ಕ್ಷೇತ್ರದ ಅಭಿಜಾತ ಕಲಾವಿದೆ. ನಾಲ್ಕು ದಶಕಕ್ಕೂ ಹೆಚ್ಚು ಕಾಲದಿಂದ ಕನ್ನಡ ರಂಗಭೂಮಿ ಕ್ಷೇತ್ರದಲ್ಲಿ ಅನುಪಮವಾದ ಸೇವೆಯನ್ನು ಸಲ್ಲಿಸುತ್ತಿರುವ ಉಮಾಶ್ರೀ ಅವರು ಭಾರತೀಯ ಅಭಿನಯ ಪರಂಪರೆಯಲ್ಲಿ ಒಂದು ಅಮೂಲ್ಯ ಮಾದರಿ.

ಶರ್ಮಿಷ್ಠೆಯಾಗಿ ಉಮಾಶ್ರೀ:

ಹವ್ಯಾಸಿ, ವೃತ್ತಿ, ಗ್ರಾಮೀಣ ರಂಗಭೂಮಿಯನ್ನು ಸೇರಿದಂತೆ ರಂಗ ಕ್ಷೇತ್ರದ ಪ್ರಕಾರಗಳಲ್ಲಿ ಅವರು ಅಭಿನಯಿಸಿದ್ದಾರೆ. ಚಲನಚಿತ್ರರಂಗದಲ್ಲಿ ತಮ್ಮ ಮನೋಜ್ಞ ಅಭಿನಯದಿಂದ ಹೆಸರು ಮಾಡಿರುವ ಉಮಾಶ್ರೀ ಅವರು ಅತ್ಯಂತ ವಿಭಿನ್ನ ರೀತಿಯ ಮತ್ತು ಸಂವೇದನಾಶೀಲ ಪಾತ್ರಗಳನ್ನು ನಿರ್ವಹಿಸಿದ್ದಾರೆ.

‘ಒಡಲಾಳ’ ನಾಟಕದ ಸಾಕವ್ವನ ಮೂಲಕ ಭಾರತೀಯ ಗ್ರಾಮೀಣ ಪಾತ್ರದ ಅಸ್ಮಿತೆಯೊಂದನ್ನು ಎತ್ತಿ ಹಿಡಿದರು. ವೃತ್ತಿ ರಂಗಭೂಮಿಯಲ್ಲಿ ಬಾಕ್ಸ್ ಆಫೀಸ್ ಹಿಟ್ ನಟಿಯಾದ ಇವರು ಸಾವಿರಾರು ಪ್ರದರ್ಶನಗಳಲ್ಲಿ ಅಭಿನಯಿಸಿದ್ದಾರೆ. ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಅತ್ಯುತ್ತಮ ನಟಿ ಪ್ರಶಸ್ತಿಗಳನ್ನು ಪಡೆದಿರುವ ಉಮಾಶ್ರೀ ಅವರ ಸಾಧನೆ ಕನ್ನಡ ಸಾಂಸ್ಕೃತಿಕ ಲೋಕದ ಹೆಮ್ಮೆ.

‘ರಂಗಸಂಪದ’ ಮೂಲಕ ಹವ್ಯಾಸಿ ರಂಗಭೂಮಿಯಲ್ಲಿ ಮನ್ನಣೆಯನ್ನು ಪಡೆದ ಉಮಾಶ್ರೀ ಅವರು ಈಗ ಇದೇ ತಂಡದ ಮೂಲಕ ಶರ್ಮಿಷ್ಠೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಅನೇಕ ಕಡೆಗಳಲ್ಲಿ ಶರ್ಮಿಷ್ಠೆ ಪ್ರದರ್ಶನಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಶರ್ಮಿಷ್ಠೆ ಪ್ರದರ್ಶನ ನೋಡಿ ಪಾತ್ರಕ್ಕಾಗಿ ಭೇಷ್ ಎಂದಿದ್ದಾರೆ.

ಜಾತ್ರೆಯಲ್ಲಿ ಹೊಸ ಪ್ರಯೋಗ:

  • ಬಾದಾಮಿ ಬನಶಂಕರಿ ಜಾತ್ರೆಯಲ್ಲಿ ಏಕವ್ಯಕ್ತಿ ನಾಟಕ ಪ್ರದರ್ಶನ ಹೊಸ ಪ್ರಯೋಗ ಎಂದೇ ಕರೆಯಬಹುದು.
  • ಹಿರಿಯ ರಂಗಭೂಮಿ ಕಲಾವಿದೆ ಹಾಗೂ ನಟಿ ಉಮಾಶ್ರೀ ಅವರ ಅಭಿನಯದ ‘ಶರ್ಮಿಷ್ಠೆ’ ಎಂಬ ಏಕವ್ಯಕ್ತಿ ಒಂದುವರೆ ತಾಸಿನ ನಾಟಕ ಎರಡು ದಿನಗಳ ಕಾಲ ಪ್ರದರ್ಶನಗೊಳ್ಳಲಿದೆ. ಜ. 18 ಮತ್ತು 19 ರಂದು ಮಧ್ಯಾಹ್ನ 3 ಗಂಟೆಯಿಂದ 4.30 ರವರೆಗೆ ಪ್ರದರ್ಶನಗೊಳ್ಳಲಿದೆ.
  • ರಂಗಾಸಕ್ತರ ಆಸಕ್ತಿ ನೋಡಿಕೊಂಡು “ಶರ್ಮಿಷ್ಠೆ” ಪ್ರದರ್ಶನ ಮುಂದುವರಿಸುವ ಬಗೆಗೆ ನಿರ್ಧರಿಸಲಾಗುವುದು ಎಂದು ಆಯೋಜಕರಾದ ರಂಗಭೂಮಿ ನಿರ್ದೆಶಕ ಜೇವರ್ಗಿ ರಾಜಣ್ಣ ಮಾಹಿತಿ ಹಂಚಿಕೊಂಡಿದ್ದಾರೆ.

ಎರಡು ದಿನ‌ ಪ್ರದರ್ಶನ:

ಪ್ರತಿ ದಿನ ಒಂದೇ ಪ್ರದರ್ಶನವಾಗಿ ನಡೆಯಲಿದ್ದು, ಪ್ರವೇಶ ದರವನ್ನು 200 ರೂ. ಮತ್ತು 300 ರೂ. ನಿಗದಿಪಡಿಸಲಾಗಿದೆ. ‘ಶರ್ಮಿಷ್ಠೆ’ ನಾಟಕದ ಕಥಾರಚನೆ ಬೇಲೂರ ರಘುನಂದನ್‌ ಅವರದ್ದು. ನಾಟಕದ ವಿನ್ಯಾಸ ಹಾಗೂ ನಿರ್ದೆಶನವನ್ನು ಚಿದಂಬರ ರಾವ್ ಜಂಬೆ ಅವರು ವಹಿಸಿಕೊಂಡಿದ್ದಾರೆ. ನಾಟಕಕ್ಕೆ ಅಗತ್ಯವಿರುವ ರಂಗವೇದಿಕೆ ವಿನ್ಯಾಸ, ಸಂಗೀತ ಹಾಗೂ ಕಲಾತ್ಮಕ ಸಿದ್ಧತೆಗಳು ಪೂರ್ಣಗೊಂಡಿವೆ.

Scroll to Top