ಆಲಮಟ್ಟಿ ಜಲಾಶಯದ ಎತ್ತರವನ್ನು 519.60 ಮೀಟರ್ ನಿಂದ 524.256 ಮೀಟರ್ ಗೆ ಹೆಚ್ಚಿಸಿ ಲಭ್ಯ ನೀರಿನ ಬಳಕೆಗೆ ಕರ್ನಾಟಕ ಸರ್ಕಾರ ಭರದ ಸಿದ್ಧತೆಯಲ್ಲಿ ತೊಡಗಿರುವಾಗಲೇ ಮಹಾ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಅಣೆಕಟ್ಟು ಎತ್ತರ ವಿಷಯಕ್ಕೆ ಮತ್ತೆ ಖ್ಯಾತೆ ತೆಗೆದಿದ್ದಾರೆ.
ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಸಚಿವರು, ಶಾಸಕರು,ಯೋಜನಾ ವ್ಯಾಪ್ತಿಯ ರೈತ ಮುಖಂಡರು ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ನಿರಂತರ ಸಭೆಗಳನ್ನು ನಡೆಸುತ್ತಿದ್ದಾರೆ.
ಸಿದ್ಧತೆ ಮಧ್ಯೆ ಮಹಾ ಸದ್ದು:
ಯುಕೆಪಿ ಹಂತ -3 ರ ವ್ಯಾಪ್ತಿಯಲ್ಲಿ ಮುಳುಗಡೆ ಆಗುವ ಜಮೀನುಗಳ ಭೂಸ್ವಾಧೀನ , ಪುನರ್ ವಸತಿ, ಪುನರ್ ನಿರ್ಮಾಣ ಕುರಿತಂತೆ ಗಂಭೀರ ಚಿಂತನೆ ನಡೆಸಿದ್ದಾರೆ. ಮುಖ್ಯವಾಗಿ ಮುಳುಗಡೆ ಹೊಂದುವ ಜಮೀನುಗಳ ರೈತರು ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗದ ಹಾಗೆ ಕನ್ಸೆಂಟ್ ಅವಾರ್ಡ ನೀಡಿಕೆ ಕುರಿತು ಆದೇಶ ಹೊರಡಿಸುವ ಹಂತದಲ್ಲಿದ್ದಾರೆ. ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ಈ ಬಗೆಗೆ ಸಾಕಷ್ಟು ಚರ್ಚೆ ನಡೆದಿದೆ.
16 ರಂದು ವಿಶೇಷ ಸಂಪುಟ ಸಭೆ:
ಕನ್ಸೆಂಟ್ ಅವಾರ್ಡ ನಿಗದಿಗಾಗಿಯೇ ಸೆ. 16 ರಂದು ವಿಶೇಷ ಸಚಿವ ಸಂಪುಟ ಸಭೆ ಕರೆದಿದ್ದಾರೆ. ಯೋಜನಾ ವ್ಯಾಪ್ತಿಯ ರೈತರೂ ಸೂಕ್ತ ಪರಿಹಾರ ಘೋಷಣೆಯತ್ತ ಕಾತರದಿಂದ ಕಾಯುತ್ತಿದ್ದಾರೆ. ಏತನ್ಮಧ್ಯೆ ಮಹಾ ಮುಖ್ಯಮಂತ್ರಿ ಆಲಮಟ್ಟಿ ಅಣೆಕಟ್ಟು ಎತ್ತರವನ್ನು ಕರ್ನಾಟಕ ಸರ್ಕಾರ 519.60 ಮೀಟರ್ ನಿಂದ 524.256 ಮೀಟರ್ ಗೆ ಹೆಚ್ಚಿಸುವ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್ಗೆ ಹೋಗುತ್ತೇವೆ ಎನ್ನುವ ಮಾತನ್ನಾಡಿದ್ದಾರೆ.
ಕೃಷ್ಣಾ ನ್ಯಾಯಾಧೀಕರಣ -2 ರ ವರದಿ ಸಲ್ಲಿಕೆ ಆಗಿ ಒಂದುವರೆ ದಶಕವಾಗಿದೆ. 2013 ರಲ್ಲಿ ಸಲ್ಲಿಕೆ ಆಗಿರುವ ಅಂತಿಮ ವರದಿ ಸಲ್ಲಿಕೆ ಆಗಿದೆ. ಅಂತಿಮ ವರದಿಯಲ್ಲಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಅವಕಾಶ ನೀಡಲಾಗಿದೆ. ಅಲ್ಲಿಂದ ಇಲ್ಲಿಯವರೆಗೂ ಸುಮ್ಮನಿದ್ದ ಮಹಾರಾಷ್ಟ್ರದ ಮುಖಂಡರು ಇದೀಗ ಎತ್ತರ ಹೆಚ್ಚಳದ ಬಗೆಗೆ ಅಪಸ್ವರ ತೆಗೆದಿದ್ದಾರೆ.
ಮಹಾ ಮೊಂಡುವಾದ :
ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳದಿಂದ ಮಹಾರಾಷ್ಟ್ರ ಪ್ರದೇಶಗಳಲ್ಲಿ ಪ್ರವಾಹ ಸ್ಥಿತಿ ಉಂಟಾಗದು ಎನ್ನುವ ಕುರಿತು ಸಮೀಕ್ಷಾ ವರದಿ ಬಂದಿದ್ದರೂ ಅನಗತ್ಯವಾಗಿ ಪ್ರವಾಹದ ನೆಪ ಮಾಡಿಕೊಂಡು, ಎತ್ತರ ಹೆಚ್ಚಳಕ್ಕೆ ತಗಾದೆ ತೆಗೆಯುತ್ತಿದೆ. ಮಹಾ ಮುಖ್ಯಮಂತ್ರಿಗಳ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರದ್ದು ರಾಜಕಾರಣದ ಹೇಳಿಕೆ ಆಗಿದೆ. ಪ್ರಧಾನಿಗಳು ತಿಳಿ ಹೇಳಬೇಕು ಎಂದಿದ್ದಾರೆ.
ಕೃಷ್ಣಾ ನ್ಯಾಯಾಧೀಕರಣ -2 ರ ವರದಿಯಲ್ಲಿ ರಾಜ್ಯಕ್ಕೆ ಹಂಚಿಕೆ ಆಗಿರುವ ನೀರನ್ನು ಬಳಕೆ ಮಾಡಿಕೊಳ್ಳಲು ಅಣೆಕಟ್ಟು ಎತ್ತರ ಹೆಚ್ಚಳ ಆಗಬೇಕಿದೆ. ಹಂಚಿಕೆ ನೀರನ್ನು ಬಳಕೆ ಮಾಡಿಕೊಳ್ಳದೆ ಹೋದಲ್ಲಿ ಅದು ವ್ಯರ್ಥವಾಗಿ ಸಮುದ್ರ ಸೇರಲಿದೆ. ಅದಕ್ಕೂ ಮೀಗಿಲಾಗಿ ನೀರಾವರಿ ಪ್ರದೇಶವಾಗಬೇಕಿರುವ ಜಮೀನುಗಳಿಗೆ ನೀರು ಸಿಗುವುದಿಲ್ಲ. ನೀರಾವರಿ ಕನಸು ನನಸಾಗದು. ಹೀಗಾಗದಂತೆ ಕರ್ನಾಟಕ ಸರ್ಕಾರ ನೋಡಿಕೊಳ್ಳಬೇಕಿದೆ.
ಬೇಕಿದೆ ತಂತ್ರಕ್ಕೆ ಪ್ರತಿ ತಂತ್ರ:
ಕೃಷ್ಣಾ ನ್ಯಾಯಾಧೀಕರಣ -2 ಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸುವಂತೆ ಕರ್ನಾಟಕ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹಾಕುತ್ತಲೇ ಇದೆ. ಯಾವುದೇ ಸಮಯದಲ್ಲೂ ಅಧಿಸೂಚನೆ ಹೊರ ಬೀಳುವ ಸಾಧ್ಯತೆಗಳು ದಟ್ಟವಾಗಿವೆ. ಪರಿಸ್ಥಿತಿ ಹೀಗಿರುವಾಗ ಯೋಜನಾನುಷ್ಠಾನಕ್ಕೆ ಕರ್ನಾಟಕ ಸರ್ಕಾರ ಲಭ್ಯ ನೀರಿನ ಬಳಕೆಗಾಗಿ ಪೂರ್ವ ಸಿದ್ಧತೆಗೆ ಮುಂದಾಗಿದೆ. ಈ ಸನ್ನಿವೇಶದಲ್ಲಿ ಮಹಾ ಸರ್ಕಾರ ಅದಕ್ಕೆ ಅಡ್ಡಿ ಪಡಿಸಲು ಮುಂದಾಗಿರುವ ಹಿಂದೆ ರಾಜಕೀಯ ತಂತ್ರಗಾರಿಕೆ ಅಡಗಿದಂತೆ ಕಾಣಿಸುತ್ತಿದೆ. ಅದರ ತಂತ್ರಗಾರಿಕೆ ಪ್ರತಿ ತಂತ್ರ ಹೂಡುವ ಮೂಲಕ ಲಭ್ಯ ನೀರಿನ ಬಳಕೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಿದೆ.
ಇಚ್ಛಾಶಕ್ತಿ ಅಗತ್ಯ:
ಕೃಷ್ಣಾ ನ್ಯಾಯಾಧೀಕರಣ -2 ಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಯಾವಾಗ ಹೊರ ಬಿದ್ದರೂ ಆವಾಗ ನೀರಿನ ಬಳಕೆಗೆ ವ್ಯವಸ್ಥೆ ಆಗಬೇಕು. ಆ ಹಿನ್ನೆಲೆಯಲ್ಲಿ ಭೂಸ್ವಾಧೀನಕ್ಕೆ ಪರಿಹಾರ ಘೋಷಣೆ, ಪುನರ್ ವಸತಿ, ಪುನರ್ ನಿರ್ಮಾಣ ಕಾರ್ಯಗಳು ಇನ್ನಷ್ಟು ಚುರುಕು ಗೊಳ್ಳಬೇಕಿದೆ. ಜತೆಗೆ ಮಹಾ ಸರ್ಕಾರದೊಂದಿಗೆ ರಾಜಕೀಯ ಪ್ರತಿ ತಂತ್ರವನ್ನು ಕರ್ನಾಟಕ ಹೆಣೆಯಬೇಕಿದೆ. ಅದಕ್ಕೆ ಕರ್ನಾಟಕದ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ಇಚ್ಚಾಶಕ್ತಿ ಮೆರೆಯಬೇಕಿದೆ. ಶತಾಯ- ಗತಾಯ ಕೇಂದ್ರದ ಮೇಲೆ ಒತ್ತಡ ಹಾಕಿ, ಅಧೀಸೂಚನೆ ಹೊರ ಬರುವಂತೆ ನೋಡಿಕೊಳ್ಳಬೇಕಿದೆ.
- ವಿಠ್ಠಲ ಆರ್. ಬಲಕುಂದಿ


