ರಾಜ್ಯಕ್ಕೆ ಹಂಚಿಕೆ ಆಗಿರುವ ಕೃಷ್ಣೆಯ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ಆಲಮಟ್ಟಿ ಜಲಾಶಯದ ಎತ್ತರವನ್ನು 519.60 ಮೀಟರಿನಿಂದ 524.256. ಮೀಟರಿಗೆ ಹೆಚ್ಚಿಸಲು ಕೇಂದ್ರದ ಅನುಮತಿ ಕೇಳಿದ್ದೆ ತಡ ಮಹಾರಾಷ್ಟ್ರ ತಕರಾರು ಶುರುಮಾಡಿತ್ತು. ಇದೀಗ ತೆಲಂಗಾಣದಲ್ಲಿ ಕೂಡ ಅಪಸ್ವರ ಕಾಣಿಸಿಕೊಂಡಿದ್ದು, ಅದು ಮಹಾ ಹಾದಿ ಹಿಡಿದಿದೆ.
ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕಾಗಿ ಕರ್ನಾಟಕ ಸರ್ಕಾರ ಅಣೆಕಟ್ಟು ಎತ್ತರ ಹೆಚ್ಚಿಸಲು ನಿರ್ಧರಿಸಿದ ಬೆನ್ನಲ್ಲೆ ಮಹಾ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಅಣೆಕಟ್ಟು ಎತ್ತರ ಹೆಚ್ಚಿಸುವುದರಿಂದ ಮಹಾರಾಷ್ಟ್ರದ ಕೆಲ ಪ್ರದೇಶಗಳು ಪ್ರವಾಹ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ವಿವರಿಸಿದ್ದರು.
ಕೇಂದ್ರಕ್ಕೆ ಸಿದ್ದರಾಮಯ್ಯ ಮನವಿ:
ಮಹಾ ಮುಖ್ಯಮಂತ್ರಿ ಪತ್ರದ ಬಳಿಕವೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರಕ್ಕೆ ಪತ್ರ ಬರೆದು ಕೃಷ್ಣಾ ನ್ಯಾಯಾಧೀಕರಣ -2ರಲ್ಲಿ ಹಂಚಿಕೆ ಅಗಿರುವ ನೀರನ್ನು ಬಳಕೆ ಮಾಡಿಕೊಳ್ಳಲು ಅಣೆಕಟ್ಟು ಎತ್ತರ ಹೆಚ್ಚಿಸುವುದು ಅನಿವಾರ್ಯ. ಹಾಗಾಗಿ ಅಣೆಕಟ್ಟು ಎತ್ತರವನ್ನು 519.60 ಮೀಟರಿನಿಂದ 524.256. ಮೀಟರಿಗೆ ಹೆಚ್ಚಿಸಲು ಅನುಮತಿ ನೀಡಬೇಕು. ಕೃಷ್ಣಾ ನ್ಯಾಯಾಧೀಕರಣ -2ರ ಅಧಿಸೂಚನೆ ಹೊರಡಿಸಬೇಕು ಎಂದು ಮನವಿ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೆ ತಡ, ಮಹಾ ಮುಖ್ಯಮಂತ್ರಿಗಳು ಕೇಂದ್ರ ಜಲಶಕ್ತಿ ಸಚಿವರನ್ನು ನಿಯೋಗದಲ್ಲಿ ಭೇಟಿ ಮಾಡಿ ಅಣೆಕಟ್ಟು ಎತ್ತರಿಂದ ಮಹಾರಾಷ್ಟ್ರದ ಕೆಲ ಪ್ರದೇಶಗಳಲ್ಲಿ ಪ್ರವಾಹ ಸ್ಥಿತಿ ಉಂಟಾಗಲಿದೆ ಎಂದು ವಿವರಿಸಿ, ಮತ್ತೆ ಆಕ್ಷೇಪ ವ್ಯಕ್ತಪಡಿಸಿದರು.
ತಕರಾರು ಮಧ್ಯೆ ಹಕ್ಕಿನ ಮಾತು:
ಮಹಾರಾಷ್ಟ್ರ ಸರ್ಕಾರದ ತಕರಾರಿನ ಮಧ್ಯೆಯೂ ಕರ್ನಾಟಕ ಯುಕೆಪಿ ಹಂತ-3ರ ಅನುಷ್ಠಾನಕ್ಕಾಗಿ ಹತ್ತು ಹಲವು ಕ್ರಮಗಳಿಗೆ ಮುಂದಾದದ್ದನ್ನು ಸಹಿಸದ ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಇನ್ನೂ ಒಂದು ಹೆಜ್ಜೆ ಮುಂದುಹೋಗಿ ಅಣೆಕಟ್ಟು ಎತ್ತರ ಹೆಚ್ಚಿಸಲು ಮುಂದಾದಲ್ಲಿ ಸುಪ್ರೀಂ ಕೋರ್ಟಿಗೆ ಹೋಗುವ ಎಚ್ಚರಿಕೆ ಮಾತುಗಳನ್ನು ಆಡಿದೆಯಾದರೂ ಕರ್ನಾಟಕ ಮಾತ್ರ ಅದಾವುದಕ್ಕೂ ಜಗ್ಗದೆ ಹಂಚಿಕೆ ನೀರಿನ ಬಳಕೆ, ಅಣೆಕಟ್ಟು ಎತ್ತರ ಹೆಚ್ಚಳ ನಮ್ಮ ಹಕ್ಕು ಎಂದು ಪ್ರತಿಪಾದಿಸಿದೆ. ಯುಕೆಪಿ ಹಂತ-3ರ ಅನುಷ್ಠಾನಕ್ಕಾಗಿ ಅಗತ್ಯ ಕ್ರಮಗಳಿಗೆ ಸಜ್ಜಾಗುತ್ತಿದೆ.
ತೆಲಂಗಾಣದಲ್ಲೂ ಅಪಸ್ವರ:
ಇಷ್ಟರ ಮಧ್ಯೆ ನೆರೆಯ ಇನ್ನೊಂದು ರಾಜ್ಯ ತೆಲಂಗಾಣ ದಲ್ಲೂ ಕೂಡ ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ವಿರೋಧ ವ್ಯಕ್ತವಾಗಿದೆ. ಅಣೆಕಟ್ಟೆಯ ಎತ್ತರ ಹೆಚ್ಚಿಸುವ ಯೋಜನೆ ಅನುಷ್ಠಾನಕ್ಕೆ ಕರ್ನಾಟಕ ಮುಂದಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಅಲ್ಲಿನ ಬಿಆರ್ಎಸ್ ಪಕ್ಷದ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ಎಚ್ಚರಿಕೆ ನೀಡಿದ್ದಾರೆ.
‘ಕರ್ನಾಟಕದ ಈ ನಡೆ ತೆಲಂಗಾಣ ರೈತರ ಪಾಲಿಗೆ ಮರಣ ಶಾಸನವಾಗಲಿದೆ’ ಎನ್ನುವ ಹೇಳಿಕೆ ನೀಡಿದ್ದಾರೆ. ಈ ವಿಚಾರ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ರೇವಂತ ರೆಡ್ಡಿ ಅವರು ತೆಲಂಗಾಣ ರೈತರಿಗೆ ಉತ್ತರಿಸಬೇಕು ಎಂದೂ ಆಗ್ರಹಿಸಿದ್ದಾರೆ.
ಹೀಗೆ ತೆಲಂಗಾಣ ರಾಜ್ಯದಿಂದಲೂ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ವಿರೋಧ ವ್ಯಕ್ತವಾಗಿದೆ. ನೆರೆಯ ಎರಡು ರಾಜ್ಯಗಳ ತೀವ್ರ ವಿರೋಧದ ಮಧ್ಯೆ ಕರ್ನಾಟಕ ಕೃಷ್ಣೆಯಲ್ಲಿನ ತನ್ನ ಹಕ್ಕಿನ ಪಾಲಿನ ನೀರನ್ನು ಬಳಕೆ ಮಾಡಿಕೊಳ್ಳಲು ದೃಢ ನಿರ್ಧಾರ ಮಾಡಬೇಕಿದೆ. ಅದಕ್ಕಾಗಿ ಕೇಂದ್ರದ ಮೇಲೆ ಇನ್ನಿಲ್ಲದ ಒತ್ತಡ ಹಾಕಿ ಕೃಷ್ಣಾ ನ್ಯಾಯಾಧೀಕರಣ -2 ರ ಅಧಿಸೂಚನೆ ಜಾರಿಗೆ ಒತ್ತಾಯಿಸುವ ಜತೆಗೆ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಅನುಮತಿ ಪಡೆಯಬೇಕಿದೆ. ಇದಕ್ಕೆ ಪಕ್ಷಾತೀತ ಪ್ರಯತ್ನದ ಅಗತ್ಯವಿದೆ.
ಒಗ್ಗಟ್ಟು ಪ್ರದರ್ಶನ ಅಗತ್ಯ:
ಕೃಷ್ಣಾ ನ್ಯಾಯಾಧೀಕರಣ -2 ರ ವರದಿ ಸಲ್ಲಿಕೆ ಆಗಿ 15 ವರ್ಷಗಳು ಸಂದಿವೆ. ಇಲ್ಲಿಯವರೆಗೂ ಅಣೆಕಟ್ಟು ಹೆಚ್ಚಳ ವಿಷಯದಲ್ಲಿ ಚಕಾರವೆತ್ತದ ನೆರೆ ರಾಜ್ಯಗಳು ಈಗ ಎದ್ದು ಕೂತಿವೆ. ನೆರೆಯವರ ತಕರಾರು ಏನೇ ಆಗಿರಲಿ, ಕರ್ನಾಟಕ ಮಾತ್ರ ಕೃಷ್ಣಾ ಮೇಲ್ದಂಡೆ ಯೋಜನೆ ಸಾಕಾರಕ್ಕಾಗಿ ಅಚಲ ನಿಲುವಿಗೆ ಮುಂದಾಗಬೇಕಿದೆ. ಕೇಂದ್ರದ ಮೇಲೆ ಪಕ್ಷಾತೀತ ಒಗ್ಗಟ್ಟು ಪ್ರದರ್ಶನ ಮಾಡಬೇಕಿದೆ.
ಜತೆಗೆ ಕೇಂದ್ರದ ಅಧಿಸೂಚನೆ ಹೊರ ಬೀಳುವ ಮುನ್ನವೇ ಯುಕೆಪಿ ಹಂತ-3 ರಲ್ಲಿ ಸ್ವಾಧೀನಕ್ಕೋಳಪಡುವ ಜಮೀನುಗಳ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ. ಹಾಗೆ ಪುನರ್ವಸತಿ, ಪುನರ್ ನಿರ್ಮಾಣದತ್ತಲೂ ಆದ್ಯ ಗಮನ ಹರಿಸಬೇಕಿದೆ.
- ವಿಠ್ಠಲ ಆರ್. ಬಲಕುಂದಿ




