ಬಾಗಲಕೋಟೆ: ಹುನಗುಂದದ ಕ್ಷೇತ್ರದಲ್ಲಿನ ಅಕ್ರಮ ವ್ಯವಹಾರಗಳ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರ ವಿರುದ್ಧ ನಿರಂತರ ವಾಗ್ದಾಳಿ ನಡೆಸುತಿರುವ ಶಾಸಕ ವಿಜಯಾನಂದ ಕಾಶಪ್ಪನವರ, ಹಿಂದಿನ ಅವಧಿಯಲ್ಲಿ ನಡೆದಿವೆ ಎನ್ನಲಾಗುವ ಹಫ್ತಾ ವಸೂಲಿ, ಅಕ್ರಮ ದಂಧೆಗಳ ಬಗೆಗೆ ದಾಖಲೆ ಸಹಿತ ಬಹಿರಂಗ ಚರ್ಚೆಗೆ ದೊಡ್ಡನಗೌಡ ಪಾಟೀಲರಿಗೆ ಆಹ್ವಾನ ನೀಡಿದ್ದಾರೆ.
ವೇದಿಕೆ ಸಿದ್ದಗೊಳ್ಳಲಿ:
ಕಳೆದ ಹದಿನೈದು ವರ್ಷಗಳ ಅವಧಿಯಲ್ಲಿ ಪರಸ್ಪರರ ನಡುವೆ ಕೇಳಿ ಬರುತ್ತಿರುವ ಆರೋಪ, ಪ್ರತ್ಯಾರೋಪಗಳಿಂದ ಬೇಸತ್ತಿರುವ ಜನತೆ ಬಹಿರಂಗ ಚರ್ಚೆಯ ಮೂಲಕ ಎಲ್ಲವೂ ಬಗೆಹರಿದು ಬಿಡಲಿ. ಹೇಗೂ ಶಾಸಕರೇ ಚರ್ಚೆಗೆ ಆಹ್ವಾನ ನೀಡಿದ್ದಾರೆ. ಕ್ಷೇತ್ರದ ಹಿತದೃಷ್ಠಿಯಿಂದ ಇದೊಂದು ಒಳ್ಳೆಯ ಬೆಳವಣಿಗೆ. ಹಾಗಾಗಿ ಬಹಿರಂಗ ಚರ್ಚೆಗೆ ಶೀಘ್ರ ವೇದಿಕೆ ಸಿದ್ದವಾಗಲಿ ಎನ್ನುವ ಮಾತು ಸಾರ್ವಜನಿಕ ವಲಯದಿಂದ ವ್ಯಕ್ತವಾಗುತ್ತಿದೆ.
ದಾಖಲೆ ಸಮೇತ ಚರ್ಚೆ:
ಕಳೆದ ಎರಡುವರೆ ವರ್ಷಗಳಲ್ಲಿ ಶಾಸಕ ಕಾಶಪ್ಪನವರಿಂದ ಅಕ್ರಮ ಉಸುಕು ಸಾಗಣೆ, ಜೂಜಾಟಗಳು ಎಗ್ಗಿಲ್ಲದೆ ನಡೆಯುತ್ತಿವೆ ಎನ್ನುವ ದೊಡ್ಡನಗೌಡರ ಆರೋಪಕ್ಕೆ ತಿರುಗೇಟು ನೀಡಿರುವ ಕಾಶಪ್ಪನವರ, ದೊಡ್ಡನಗೌಡ ಪಾಟೀಲರು ಶಾಸಕರಾಗಿದ್ದ ವೇಳೆ ಎಗ್ಗಿಲ್ಲದೆ ಅಕ್ರಮಗಳು ನಡೆದಿವೆ. ಅಕ್ರಮ ಮರಳು ದಂಧೆ ನೋಡಿಕೊಳ್ಳಲು ಶಾಸಕರ ಏಜೆಂಟರನ್ನು ನೇಮಕ ಮಾಡಲಾಗಿತ್ತು. ಸರ್ಕಾರಿ ಕಾಮಗಾರಿಗಳಲ್ಲಿ ಪರ್ಸೆಂಟೆಜ್ ನಿಗದಿ ಆಗಿತ್ತು. ಈಗ ಹಾಗಿಲ್ಲ. ಅವರಂತೆ ನಮ್ಮ ಆಡಳಿತವಲ್ಲ. ಅವರು ಸುಮ್ಮನೆ ಏನೇನೋ ಮಾತನಾಡುವುದು ಸರಿಯಲ್ಲ. ಅವರು ಬೇಕಿದ್ದರೆ ಸಾರ್ವಜನಿಕ ಚರ್ಚೆಗೆ ಬರಲಿ. ದಾಖಲೆ ಸಹಿತ ಎಲ್ಲವನ್ನು ಬಹಿರಂಗ ಪಡಿಸುವುದಾಗಿ ಕಾಶಪ್ಪನವರ ಹೇಳಿಕೊಂಡಿದ್ದಾರೆ.
ಬಹಿರಂಗ ಚರ್ಚೆಯ ಕುರಿತಂತೆ ಕಾಶಪ್ಪನವರ ನೀಡಿದ ಹೇಳಿಕೆಗೆ ಇದುವರೆಗೂ ದೊಡ್ಡನಗೌಡರು ಯಾವುದೇ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿಲ್ಲ. ಇದರಿಂದಾಗಿ ಶಾಸಕ ಕಾಶಪ್ಪನವರ ಸವಾಲನ್ನು ದೊಡ್ಡನಗೌಡರು ಒಪ್ಪಿಕೊಂಡು ಸಾರ್ವಜನಿಕ ಚರ್ಚೆಗೆ ಒಪ್ಪುತ್ತಾರೋ ಹೇಗೆ ಎನ್ನುವುದು ಸದ್ಯ ಯಕ್ಷಪ್ರಶ್ನೆಯಾಗಿದೆ.
ಗೊಂದಲ ನಿವಾರಣೆ:
ಕಾಶಪ್ಪನವರ ಆಹ್ವಾನ ಒಪ್ಪಿಕೊಂಡು ಬಹಿರಂಗ ಚರ್ಚೆಗೆ ಬರುವುದರಿಂದ ಸಾರ್ವಜನಿಕರಲ್ಲಿ ಇರುವ ಗೊಂದಲವೂ ನಿವಾರಣೆ ಆಗಲಿದೆ. ನಿತ್ಯದ ವೈಯಕ್ತಿಕ ಆರೋಪ, ಪ್ರತ್ಯಾರೋಪಗಳಿಗೂ ತೆರೆ ಬೀಳಲಿದೆ ಎನ್ನುವ ಅಭಿಪ್ರಾಯ ವ್ಯಾಪಕವಾಗಿದೆ.
ಬಹಿರಂಗ ಚರ್ಚೆಯಿಂದ ಯಾರೂ ಎಷ್ಟು ಅಭಿವೃದ್ಧಿ ಮಾಡಿದ್ದಾರೆ ಎನ್ನುವುದು ಸಾಬೀತಾಗಲಿದೆ. ಇಲ್ಲದೆ ಹೋದಲ್ಲಿ ಪರಸ್ಪರರ ನಡುವಿನ ವಾಗ್ದಾಳಿಗೆ ಕೊನೆ, ಮೊದಲಿಲ್ಲದಂತೆ ಮುಂದುವರಿಯಲಿದೆ. ಸದ್ಯ ಕ್ಷೇತ್ರದಲ್ಲಿ ನಡೆಯುವ ಸಭೆ, ಸಮಾರಂಭಗಳು ಪರಸ್ಪರರ ಆರೋಪ, ಪ್ರತ್ಯಾರೋಪಗಳು ಸಾಮಾನ್ಯ ಎನ್ನುವಂತಾಗಿದೆ.
ಅಕ್ರಮಗಳ ದಾಖಲೆ ಬಿಡುಗಡೆ:
ಶಾಸಕ ವಿಜಯಾನಂದ ಕಾಶಪ್ಪನವರ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದು, ವೇದಿಕೆಯಲ್ಲೇ ಅಕ್ರಮ ದಂಧೆಗಳು, ಪರ್ಸೆಂಟೆಜ್ ಮತ್ತು ಅಭಿವೃದ್ಧಿ ಬಗೆಗೆ ಉಭಯತರು ಅಗತ್ಯ ದಾಖಲೆಗಳನ್ನು ಬಿಡುಗಡೆ ಮಾಡಲಿ. ಆ ಮೂಲಕವಾದರೂ ಕ್ಷೇತ್ರದ ಜನತೆಗೆ ಕೀಳು ಮಟ್ಟದ ಆರೋಪ, ಪ್ರತ್ಯಾರೋಪಗಳ ಸದ್ದು ಕಡಿಮೆ ಆಗುವುದು ಹೇಗೆ ಎನ್ನುವುದು ಸ್ಪಷ್ಟವಾಗಲಿದೆ. ಸದ್ಯ ಇವರಿಬ್ಬರ ಮಾತುಗಳು ಸಣ್ಣ ಹುಡುಗರ ಜಗಳದಂತೆ ಆಗಿ ಬಿಟ್ಟಿದೆ. ಯಾರೂ ಇವರ ಆರೋಪ, ಪ್ರತ್ಯಾರೋಪಗಳನ್ನು ಗಂಭೀರವಾಗಿ ಪರಿಗಣಿಸುತ್ತಿರುವುದು ಕಂಡು ಬರುತ್ತಿಲ್ಲ.
ಹೇಗೂ ಕಾಶಪ್ಪನವರ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದು, ಯಾರದು ಏನು ವ್ಯವಹಾರ ಎನ್ನುವುದು ಬಯಲಾಗಿ ಬಿಡಲಿ ಎನ್ನುವುದು ಜನತೆಯ ಆಶಯವಾಗಿದೆ.
ನಿಜಸ್ಥಿತಿ ಬಯಲು:
ಮಾಜಿ ಶಾಸಕ ದೊಡ್ಡನಗೌಡ ಪಾಟೀಲರು, ಶಾಸಕ ಕಾಶಪ್ಪನವರ ನೀಡಿರುವ ಬಹಿರಂಗ ಚರ್ಚೆಯ ಸವಾಲು ಸ್ವೀಕರಿಸಬೇಕಿದೆ. ಕ್ಷೇತ್ರದ ಅಭಿವೃದ್ಧಿ ಮತ್ತು ಅಕ್ರಮಗಳ ನಿಜಸ್ಥಿತಿ ಏನು ಎನ್ನುವುದು ಗೊತ್ತಾಗಲಿದೆ. ಅಂದಾಗ ಮಾತ್ರ ಪರಸ್ಪರರು ಗಾಳಿಯಲ್ಲಿ ಗುಂಡು ಹಾರಿಸುವ ವಾತಾವರಣ ಬದಲಾಗಲಿದೆ.
ಗಮನಾರ್ಹ ಅಂಶವೆಂದರೆ ಕ್ಷೇತ್ರದಲ್ಲಿ ಇದುವರೆಗೂ ಆಗಿರುವ ಅಭಿವೃದ್ಧಿಯ ಹಾಗೂ ಅಕ್ರಮ ವ್ಯವಹಾರಗಳ ಬಹಿರಂಗ ಚರ್ಚೆಯಿಂದ ಯಾರು ಅಭಿವೃದ್ಧಿಗೆ ಒತ್ತು ಕೊಟ್ಟಿದ್ದಾರೆ ಎನ್ನುವುದು ಸಾಬೀತಾಗಲಿದೆ. ಪರಿಣಾಮವಾಗಿ ಅನಗತ್ಯ ಟೀಕೆ, ಆರೋಪ – ಪ್ರತ್ಯಾರೋಪಗಳಿಗೆ ಕಡಿವಾಣ ಬೀಳಲಿದೆ. ಯಾವುದಕ್ಕೂ ದೊಡ್ಡನಗೌಡರು ಶಾಸಕರ ಸವಾಲನ್ನು ಸ್ವೀಕರಿಸುವರೋ ಹೇಗೆ ಎನ್ನುವುದರ ಮೇಲೆ ಎಲ್ಲ ನಿಂತಿದೆ.
- ವಿಠ್ಠಲ ಆರ್. ಬಲಕುಂದಿ




