ಅಧಿವೇಶನದಲ್ಲಿ ಉ.ಕ. ಸಮಸ್ಯೆಗಳ ಚರ್ಚೆ ಆಗಲಿ..!

ಬಾಗಲಕೋಟೆ: ಬೆಳಗಾವಿ ಅಧಿವೇಶನ ಎಂದರೆ ಹೋರಾಟ, ಧರಣಿ, ಪ್ರತಿಭಟನೆಗಳ ಸಮಾಗಮ.‌ ಅದನ್ನು ಬಿಟ್ಟರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಪಾಲಿಗೆ ಪಿಕ್ ನಿಕ್ ಗೆ ಒಂದು ಅವಕಾಶ ಎನ್ನುವಂತಾಗಿದೆ.

ಪ್ರತಿವರ್ಷ ಅಧಿವೇಶನ ಆರಂಭದ ದಿನದಿಂದ ಕೊನೆಯ‌ ದಿನದವರೆಗೂ ಪ್ರತಿಭಟನೆಗಳ ಭರಾಟೆ ಇದ್ದೆ ಇರುತ್ತದೆ. ಹಾಗಾಗಿ ಅಧಿವೇಶನದಲ್ಲಿ ಉತ್ತರದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡು ಹಿಡಿಯಲು ಇದುವರೆಗೂ ಸಾಧ್ಯವಾಗಿಲ್ಲ. ಅಧಿವೇಶನದಲ್ಲಿ ಉತ್ತರದ ಸಮಸ್ಯೆಗಳ ಪರಿಹಾರಕ್ಕೆ ಸಿಗಬೇಕಾದಷ್ಟು‌ ಸಮಯಾವಕಾಶ ಸಿಕ್ಕಿಲ್ಲ. ಅಚ್ಚರಿಯ ಸಂಗತಿ ಎಂದರೆ, ಅಧಿವೇಶನದಲ್ಲಿ ಉತ್ತರದ ಜನಪ್ರತಿನಿಧಿಗಳ ಪೈಕಿ ಅಧಿವೇಶನದುದ್ದಕ್ಕೂ ಪಟ್ಟು ಹೊಡೆದು ಕುಳಿತವರ ಸಂಖ್ಯೆ ತೀರಾ ಕಡಿಮೆ. ಇದು ಕೂಡಾ ಸಮಸ್ಯೆಗಳ ಪರಿಹಾರ ಆಗದಿರುವುದಕ್ಕೆ ಕಾರಣಗಳಲ್ಲಿ ಒಂದಾಗಿದೆ.

ಮುಂದಿನ ತಿಂಗಳು‌ ಚಳಿಗಾಲ ಅಧಿವೇಶನಕ್ಕೆ ಭರದ ಸಿದ್ಧತೆಗಳು ನಡೆದಿವೆ. ಅಷ್ಟರ‌ ಮಧ್ಯೆ ಆಡಳಿತಾರೂಢ ಪಕ್ಷದಲ್ಲಿ ರಾಜಕೀಯ ಗೊಂದಲ ಸೃಷ್ಠಿ ಆಗಿರುವಾಗ ಅಧಿವೇಶನ ಎಷ್ಟರ ಮಟ್ಟಿಗೆ ಸಾರ್ಥಕತೆ ಕಾಣಲಿದೆ ಎನ್ನುವ ಅನುಮಾನ ಸಹ ಜನತೆಯಲ್ಲಿ ಸಹಜವಾಗಿ ಹುಟ್ಟಿಕೊಂಡಿದೆ.

ರಾಜ್ಯ ರಾಜಕಾರಣದಲ್ಲಿ ಉಂಟಾಗಿರುವ ರಾಜಕೀಯ ಗೊಂದಲದ ವಾತಾವರಣದ ಮಧ್ಯೆ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಹಾಗೂ ಸವಾಲುಗಳ ಬಗೆಗೆ ಸುದೀರ್ಘ ಚರ್ಚೆ ಆಗಬೇಕಿದೆ. ಇಲ್ಲಿನ ಸಮಸ್ಯೆ, ಸವಾಲುಗಳ ಚರ್ಚೆಗೆ ಎಷ್ಟರ ಮಟ್ಟಿಗೆ ಅವಕಾಶ ಸಿಗಲಿದೆ ಎನ್ನುವ ಸಂಶಯ ಇದೀಗ ಎಲ್ಲರನ್ನೂ ಕಾಡಲಾರಂಭಿಸಿದೆ.

ಬಿಲ್‌ಗಳ ಮಂಡನೆ ಬೇಡ:

ಸರ್ಕಾರ ಪ್ರಸಕ್ತ ಬೆಳಗಾವಿ ಅಧಿವೇಶನದಲ್ಲಿ ೩೧ ಬಿಲ್‌ಗಳನ್ನು ಮಂಡಿಸಲು ಸಜ್ಜಾಗಿದೆ. ಬಿಲ್‌ಗಳ ಮೇಲಿನ ಚರ್ಚೆಗೆ ಸಾಕಷ್ಟು ಸಮಯ ವ್ಯಯ್ಯವಾಗುವುದರಿಂದ ಸಮಸ್ಯೆಗಳ ಬಗೆಗೆ ಇನ್ನೆಲ್ಲಿಯ ಚರ್ಚೆ ಎನ್ನುವ ಅಪಸ್ವರ ಶುರವಾಗಿದೆ.

ಮೇಲ್ಮನೆ ಪ್ರತಿಪಕ್ಷ ನಾಯಕ ಚಲವಾದಿ ನಾರಾಯಣ ಸ್ವಾಮಿ ೩೧ ಬಿಲ್‌ಗಳ ಮಂಡನೆಗೆ ವಿರೋಧ ವ್ಯಕ್ತ ಪಡಿಸಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಬಿಲ್‌ಗಳ ಮಂಡನೆಯೇ ಬೇಡ ಎನ್ನುವ ನಿರ್ಧಾರಕ್ಕೆ ಬಂದಿರುವ ಅವರು ಈ ಕುರಿತಂತೆ ಸಭಾಪತಿಗಳಿಗೆ ಪತ್ರ ಕೂಡ ಬರೆದಿರುವುದು ಉತ್ತಮ ಬೆಳವಣಿಗೆ ಎಂದು ವಿಶ್ಲೇಷಿಸಬಹುದಾಗಿದೆ.

ಸಭಾಪತಿಗೆ ಪತ್ರ:

ಬೆಳಗಾವಿ ಅಧಿವೇಶನಕ್ಕೆ ಇರುವುದೇ ಸ್ವಲ್ಪ ಸಮಯ. ಆ ಸಮಯದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗೆಗೆ ಚರ್ಚೆ ಆಗಬೇಕು. ಅದು ಬಿಟ್ಟು ಬಿಲ್‌ಗಳ ಮಂಡನೆ ಬೇಡ ಎಂದು ಅವರು ಸಭಾಪತಿಗಳಿಗೆ ಬರೆದ ಪತ್ರದಲ್ಲಿ ಅವರು ಪ್ರಸ್ತಾಪ ಮಾಡಿದ್ದಾರೆ. ಪ್ರತಿಪಕ್ಷ ನಾಯಕರ ವಾದದಲ್ಲಿ ಹುರುಳಿದೆ ಎನ್ನಿಸುತ್ತದೆ.

ಬೆಂಗಳೂರಿನಲ್ಲಿ ನಡೆಯುವ ಅಧಿವೇಶನದಲ್ಲಿ ಸಾಕಷ್ಟು ಸಮಯ ಇರುತ್ತದೆ. ಅಲ್ಲಿ ಬಿಲ್‌ಗಳ ಮಂಡನೆ ಆಗಲಿ. ಇಲ್ಲಿ ಇರುವ ಕಡಿಮೆ ಅವಧಿಯಲ್ಲಿ ಬಿಲ್‌ಗಳ ಮಂಡನೆ ಸಾಹಸ ಬೇಡ ಎಂದಿದ್ದಾರೆ. ಒಂದೊಮ್ಮೆ ಸರ್ಕಾರ ಬಿಲ್‌ಗಳ ಮಂಡನೆಗೆ ಮುಂದಾದಲ್ಲಿ ವಿರೋಧಿಸುವುದಾಗಿ ಸ್ಪಷ್ಟನೆ ಕೂಡ ನೀಡಿದ್ದಾರೆ.

ಉ.ಕ. ಜನಪ್ರತಿನಿಧಿಗಳ ಮೌನ:

ಅಚ್ಚರಿಯ ಸಂಗತಿ ಎಂದರೆ ಬೆಳಗಾವಿ ಅಧಿವೇಶನದಲ್ಲಿ ಬಿಲ್‌ಗಳ ಮಂಡನೆಗೆ ಅವಕಾಶ ಬೇಡ ಎಂದು ಉತ್ತರ ಕರ್ನಾಟಕದ ಯಾವೊಬ್ಬ ಮಂತ್ರಿ, ಶಾಸಕರೂ ತಕರಾರು ತೆಗೆದಿಲ್ಲ. ಪ್ರತಿಪಕ್ಷದಲ್ಲಿನ ಈ ಭಾಗದ ಶಾಸಕರೂ ಇದರ ಗೋಜಿಗೆ ಹೋಗಿಲ್ಲ. ಮೊದಲೇ ಬೆಳಗಾವಿ ಅಧಿವೇಶನವೆಂದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು “ಪಿಕ್‌ನಿಕ್‌ಗೆ ಬಂದಂತೆ ಬಂದು ಹೋಗುತ್ತಾರೆ” ಎನ್ನುವ ಮಾತು ಪ್ರಚಲಿತದಲ್ಲಿರುವಾಗ ಬಿಲ್ ಗಳ ಮಂಡನೆಯಲ್ಲಿ ಕಾಲ ಕಳೆದು ಹೋಗಲಿದೆ ಎನ್ನುವ ಬಗೆಗೆ ಗಮನ ಹರಿಸದಿರುವುದು ಸಾರ್ವಜನಿಕ ವಲಯದಲ್ಲಿ ಬೇಸರದ ಮಾತುಗಳು ಕೇಳಿ ಬರಲಾರಂಭಿಸಿವೆ.

ಪರಿಸ್ಥಿತಿ ಹೀಗಿರುವಾಗ ಅಧಿವೇಶನದಲ್ಲಿ ಇಲ್ಲಿನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕೆಲಸ ಜನ ಪತ್ರಿನಿಧಿಗಳಿಂದ ಆಗಬೇಕಿದೆ. ಇಲ್ಲದೆ ಹೋದಲ್ಲಿ ಬೆಳಗಾವಿ ಅಧಿವೇಶನ ಉಂಡೂ ಹೋದ ಕೊಂಡು ಹೋದ ಎನ್ನುವಂತಾಗಲಿದೆ.

ಹಾಗಾಗಿ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆಯುವ ಅಧಿವೇಶನ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳು, ರೈತರು, ನೇಕಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಹುಡುಕುವ ಕೆಲಸ ಆಗಲಿ. ಆ ಮೂಲಕ ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ಒತ್ತು ಸಿಗಲಿ ಎನ್ನುವುದು ಜನತೆಯ ಆಶಯವಾಗಿದೆ. ಜನಾಶಯಕ್ಕೆ ತಕ್ಕಂತೆ ಅಧಿವೇಶನ ನಡೆಯುವಂತೆ ಉತ್ತರದ ಜನಪ್ರತಿನಿಧಿಗಳು ಆಸ್ತೆ ವಹಿಸಬೇಕು. ಅಂದಾಗ ಅಧಿವೇಶನ ಸಾರ್ಥಕತೆ ಪಡೆಯಲು ಸಾಧ್ಯವಾಗಲಿದೆ.

  • ವಿಠ್ಠಲ ಆರ್. ಬಲಕುಂದಿ
Scroll to Top