ಚಳಿಗಾಲ ಅಧಿವೇಶನ ಉತ್ತರದ ಸಮಸ್ಯೆಗಳಿಗೆ ಧ್ವನಿಯಾಗಲಿ

ಬೆಳಗಾವಿ ಸುವರ್ಣ ಸೌಧದಲ್ಲಿ ಆರಂಭಗೊಂಡಿರುವ ಚಳಿಗಾಲ ಅಧಿವೇಶನ ಒಂದು ದಿನ ಕಳೆದಿದ್ದು, ಮಂಗಳವಾರದಿಂದ ಉತ್ತರದ ಸಮಸ್ಯೆಗಳ ಪರಿಹಾರಕ್ಕೆ ಧ್ವನಿಯಾಗಲಿದೆ ಎನ್ನುವ ಭರವಸೆ ಇಲ್ಲಿನ ಜನರಲ್ಲಿ‌ ಮನೆಮಾಡಿದೆ.

ಕಾರವಾರದಿಂದ ಬೀದರ್ ವರೆಗಿನ ಉತ್ತರ ಕರ್ನಾಟಕ ವ್ಯಾಪ್ತಿಯ ಪ್ರದೇಶ ಸಾಕಷ್ಟು ಸಮಸ್ಯೆಗಳ ಸುಳಿಯಲ್ಲಿದ್ದು, ಅವುಗಳಿಗೆ ಪರಿಹಾರ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಆಗಬೇಕಿದೆ. ಆ ನಿಟ್ಟಿನಲ್ಲಿ ಅಧಿವೇಶನದಲ್ಲಿ ಪಕ್ಷಾತೀತವಾಗಿ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ, ಪರಿಹಾರ ಹುಡುಕುವ ಕೆಲಸ ನಡೆಯಬೇಕಿದೆ.

ಉತ್ತರ ಕರ್ನಾಟದ ಬಹುತೇಕ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಪರಿಹಾರ ಕಲ್ಪಿಸಬೇಕಿದೆ. ಹಾಗಾಗಿ‌ ರಾಜ್ಯ ಸರ್ಕಾರ ಚರ್ಚೆಯ ಪ್ರತಿ ಹಂತದಲ್ಲೂ ಕೇಂದ್ರದತ್ತ ಬೊಟ್ಟು‌ ಮಾಡುವ ಲಕ್ಷಣಗಳು ಹೆಚ್ಚಾಗಿವೆ.

ನೀರಾವರಿ ಯೋಜನೆಗಳು:

ಪ್ರಮುಖವಾಗಿ ಮಹಾದಾಯಿ ಯೋಜನೆ ಅನುಷ್ಠಾನ ಕುರಿತು ಚರ್ಚೆಯ ವೇಳೆ, ಯೋಜನೆ ಅನುಷ್ಠಾನಕ್ಕೆ ಸಿದ್ದರಿದ್ದೇವೆ. ಕೇಂದ್ರದಿಂದ ಪರಿಸರ ಇಲಾಖೆಯ ಅನುಮತಿ ಸಿಗಬೇಕಿದೆ.‌ ಅನುಮತಿ ಸಿಗದ ಕಾರಣ ಮಹಾದಾಯಿ ಯೋಜನೆ ನನೆಗುದಿಗೆ ಬಿದ್ದಿದೆ. ಬಿಜೆಪಿಗರು ಕೇಂದ್ರದ ಮೇಲೆ ಒತ್ತಡ ತಂದು ಪರಿಸರ ಇಲಾಖೆಯ ಕ್ಲೀಯರನ್ಸ್ ಕೊಡಿಸಿ ಎಂದು ಜಾರಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಬಹುದು.

ಮಹತ್ವಾಕಾಂಕ್ಷಿ ಕೃಷ್ಣಾ ಮೇಲ್ದಂಡೆ ಯೋಜನೆ ವಿಷಯದಲ್ಲೂ ರಾಜ್ಯ ಸರ್ಕಾರ ಕೇಂದ್ರದತ್ತ ಕೈ ಮಾಡಲಿದೆ. ಈಗಾಗಲೇ ರಾಜ್ಯ ಸರ್ಕಾರ ಯುಕೆಪಿ ಹಂತ-3 ರ ಅನುಷ್ಠಾನಕ್ಕೆ ನಾಲ್ಕು ಆರ್ಥಿಕ ವರ್ಷಗಳ ಕಾಲಮೀತಿ ಹಾಕಿಕೊಂಡಿದೆ.‌ ಪ್ರತಿ ವರ್ಷ 18 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲು ಸಜ್ಜಾಗಿದೆ. ಆದರೆ ಯೋಜನೆ ಅನುಷ್ಠಾನಕ್ಕೆ ಕೃಷ್ಣಾ ನ್ಯಾಯಾಧೀಕರಣ -2ರ ಅಧಿಸೂಚನೆಯನ್ನು ಕೇಂದ್ರ ಹೊರಡಿಸಬೇಕಿದೆ.

ಕೇಂದ್ರದ ಅಧಿಸೂಚನೆ:

2013 ರಲ್ಲಿಯೇ ಕೃಷ್ಣಾ ನ್ಯಾಯಾಧೀಕರಣ -2ರ ಐತೀರ್ಪು ಸಲ್ಲಿಕೆಯಾಗಿದ್ದರೂ, ಇದುವರೆಗೂ ಸರ್ಕಾರ ಅಧಿಸೂಚನೆ ಹೊರಡಿಸುವ ಗೋಜಿಗೆ ಹೋಗಿಲ್ಲ. ರಾಜ್ಯದ ಕೇಂದ್ರ ಸಚಿವರು, ಸಂಸದರು ಅಧಿಸೂಚನೆ ಹೊರಡಿಸುವಂತೆ ಪರಿಣಾಮಕಾರಿ ಪ್ರಯತ್ನ ಮಾಡುತ್ತಿಲ್ಲ.

ಸದ್ಯ ರಾಜ್ಯದವರೇ ಕೇಂದ್ರ ಜಲಶಕ್ತಿ ಖಾತೆ ಸಹಾಯಕ ಸಚಿವರಿದ್ದಾರೆ. ಜತೆಗೆ ಪ್ರಭಾವಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಇದ್ದಾರೆ. ಇವರ ಜತೆಗೆ ರಾಜ್ಯದ ಸಂಸದರೆಲ್ಲ ಸೇರಿ ಅಧಿಸೂಚನೆ ಹೊರಡಿಸುವಂತೆ ಒತ್ತಡ ಹಾಕಬೇಕಿದೆ. ಆದರೆ ಆ ಪ್ರಯತ್ನ ಆಗುತ್ತಿಲ್ಲ.

ಒಂದೊಮ್ಮೆ ಕೇಂದ್ರದಿಂದ ಅಧಿಸೂಚನೆ ಹೊರ ಬಿದ್ದಲ್ಲಿ, ಆಲಮಟ್ಟಿ ಜಲಾಶಯದ ಎತ್ತರವನ್ನು 519.60 ಮೀಟರ್ ನಿಂದ 524.256 ಮೀಟರ್ ಗೆ ಹೆಚ್ಚಿಸಿ, ರಾಜ್ಯಕ್ಕೆ ಹಂಚಿಕೆ ಆಗಿರುವ ನೀರನ್ನು ಸಂಗ್ರಹಿಸುವುದರಿಂದ 5 ಲಕ್ಷಕ್ಕೂ ಅಧಿಕ ಎಕರೆ ಜಮೀನು ನೀರಾವರಿ ವ್ಯಾಪ್ತಿಗೆ ಒಳಪಡಲಿದೆ. ರಾಜ್ಯ ಹಾಗೂ ಕೇಂದ್ರದಲ್ಲಿನ ರಾಜ್ಯದ ಪ್ರತಿನಿಧಿಗಳು ಒಟ್ಟಾಗಿ ಕೇಂದ್ರದ ಮೇಲೆ ಒತ್ತಡ ಹಾಕಬೇಕಿದೆ. ಆ ನಿಟ್ಟಿನಲ್ಲಿ ಪರಿಣಾಮಕಾರಿ ಚರ್ಚೆ ಆಗಬೇಕಿದೆ.

ಭದ್ರಾ ಜಲಾಶಯ ಸುಧಾರಣೆಗೆ 5000 ಕೋಟಿ ರೂಪಾಯಿಗಳನ್ನು ಕೇಂದ್ರ ಬಜೆಟ್ ನಲ್ಲಿ ಘೋಷಣೆ ಮಾಡಿದೆ. ಆದರೆ ಆ ಹಣ ಇಂದಿಗೂ ಬಿಡುಗಡೆ ಆಗಿಲ್ಲ.

ಇವುಗಳ ಜತೆಗೆ ಕಬ್ಬು ಬೆಳೆಗಾರರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಕೆಲಸ ಆಗಬೇಕಿದೆ.‌ ಪ್ರಸಕ್ತ ಹಂಗಾಮಿನ ಆರಂಭಕ್ಕೂ ಮುನ್ನ ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಗಾಗಿ ರೈತರು ನಡೆಸಿದ ಹೋರಾಟ ಹಿಂಸೆಗೆ ತಿರುಗಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ.

ಕಬ್ಬು ಬೆಳೆಗಾರರ ಸಮಸ್ಯೆ:

ರೈತರ ಹೋರಾಟದ ವೇಳೆ ರಾಜ್ಯ ಸರ್ಕಾರ ಬೆಲೆ ನಿಗದಿ ವಿಷಯ ರಾಜ್ಯಕ್ಕೆ ಸಂಬಂಧಿಸಿದ್ದಲ್ಲ. ಅದು ಕೇಂದ್ರಕ್ಕೆ ಸಂಬಂಧಿಸಿದ್ದು ಎನ್ನುವ ವಾದಕ್ಕೆ ಅಂಟಿಕೊಂಡಿತಾದರೂ ಪರಿಸ್ಥಿತಿ ಕೈ ಮೀರಿದಾಗ, ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರು, ರೈತ ಮುಖಂಡರ ಸಭೆ ನಡೆಸಿ ಕಬ್ಬಿಗೆ ಬೆಲೆ ನಿಗದಿ ಪಡಿಸಿರುವ ಸಂಗತಿ ಇನ್ನೂ ಹಸಿಹಸಿಯಾಗಿದೆ.

ಹೀಗೆ ಹತ್ತು ಹಲವು ಸಮಸ್ಯೆಗಳಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರ ಪರಸ್ಪರ ಮಾತುಕತೆ ಮೂಲಕ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ. ಅದಕ್ಕೆ ಬೆಳಗಾವಿಯ ಅಧಿವೇಶನ ಸೂಕ್ತ ವೇದಿಕೆ ಆಗಬೇಕು. ಅಧಿವೇಶನದಲ್ಲಿ ಪರಿಣಾಮಕಾರಿ ಚರ್ಚೆ ಆಗಬೇಕು. ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ಮಧ್ಯೆ ಬರೀ ಆರೋಪ, ಪ್ರತ್ಯಾರೋಪಗಳಿಗೆ ಚರ್ಚೆ ಸೀಮಿತವಾಗಬಾರದು. ಉತ್ತರದ ಸಮಸ್ಯೆಗಳಿಗೆ ಪರಿಹಾರ ಸಿಗುವಂತಾಗಬೇಕು.

  • ವಿಠ್ಠಲ ಆರ್. ಬಲಕುಂದಿ
Scroll to Top