ಕನ್ಸಂಟ್ ಅವಾರ್ಡ್ ಗೆ ಬಂದು ನಿಂತ ಸರ್ಕಾರ

ಕೃಷ್ಣ ಮೇಲ್ದಂಡ ಯೋಜನೆ ಅನುಷ್ಠಾನದಲ್ಲಿ ದಿವ್ಯ ನಿರ್ಲಕ್ಷ್ಯ ಪರಿಣಾಮವಾಗಿ ಇಂದು ರಾಜ್ಯ ಸರ್ಕಾರ ಯೋಜನೆ ಪೂರ್ಣಗೊಳಿಸಲು ಒದ್ದಾಡುತ್ತಿದೆ. ನ್ಯಾಯಾಲಯಗಳು ಘೋಷಿಸಿರುವ ಪರಿಹಾರ ನೀಡಲು ಸಾಧ್ಯವಾಗದ ಸ್ಥಿತಿಗೆ ಬಂದು ನಿಂತಿದೆ.

ಪ್ರಮುಖ ರಾಜಕೀಯ ಪಕ್ಷಗಳು ಇದೆ ಕೃಷ್ಣೆಯ ಹೆಸರಲ್ಲಿ ಹಲವು ಬಾರಿ ಅಧಿಕಾರ ಗದ್ದುಗೆ ಹಿಡಿದಿವೆ. ಆದರೆ ಯೋಜನೆ ಅನುಷ್ಠಾನದಲ್ಲಿ ಮಾತ್ರ ಸಂಪೂರ್ಣ ವಿಫಲವಾಗಿವೆ. ಅಧಿಕಾರಕ್ಕಾಗಿ ಕೃಷ್ಣೆಯ ಹೆಸರಲ್ಲಿ ಚುನಾವಣೆ ರಾಜಕೀಯ ಮಾಡಿದ ರಾಜಕೀಯ ಪಕ್ಷಗಳು ಬಳಿಕ ದಿವ್ಯ ನಿರ್ಲಕ್ಷ್ಯ ವಹಿಸುತ್ತ ಬಂದ ಹಿನ್ನೆಲೆಯಲ್ಲಿ ಯೋಜನೆ ಪೂರ್ಣಗೊಳ್ಳುತ್ತಿಲ್ಲ. ಇದರ ಯೋಜನಾ ವೆಚ್ಚ ಮಾತ್ರ ಬರ್ಪೂರ ಹೆಚ್ಚುತ್ತಿದೆ.‌

ಯೋಜನಾನುಷ್ಠಾನದಲ್ಲಿ ನಿರ್ಲಕ್ಷ್ಯ ವಹಿಸಿದ್ದರಿಂದಾಗಿ ಇದೀಗ ಯೋಜನೆ ಪೂರ್ಣಗೊಳ್ಳಲು 2 ಲಕ್ಷ ಕೋಟಿ ರೂ.ಗಳ ಅಗತ್ಯವಿದೆ. ಅಂದರೆ ದಿನಕ್ಕೊಂದು ಕೋಟಿ ಹೆಚ್ಚುತ್ತಿದೆ. ಇಷ್ಟೊಂದು ಹಣ ಎಲ್ಲಿಂದ ಹೊಂದಿಸುವುದು ಎಂದು ನೀರಾವರಿ ಸಚಿವರು ಸನದಲ್ಲೇ ಪ್ರಶ್ನಿಸಿದ್ದಾರೆ.
ಹೇಗಾದರೂ ಮಾಡಿ ಯೋಜನೆ ಪೂರ್ಣಗೊಳಿಸಲೇ ಬೇಕು ಎನ್ನುವ ಒತ್ತಡ ಪಕ್ಷಾತೀತವಾಗಿ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಭೂಸ್ವಾದೀನಕ್ಕೊಳಪಡುವ ಜಮೀನುಗಳ ರೈತರ ಸಭೆ ಕರೆಯಲು ಮುಂದಾಗಿದೆ.

ರೈತರ ಸಭೆಯಲ್ಲಿ ಕನ್ಸಂಟ್ ಅವಾರ್ಡ ಬಗೆಗೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರಲು ಸಜ್ಜಾಗಿದೆ. ಈ ಬಗೆಗೆ ಮಂಗಳವಾರ ನಡೆದ ಸಚಿವರು, ಶಾಸಕರ ಸಭೆಯಲ್ಲಿ ನೀರಾವರಿ ಸಚಿವ ಡಿ.ಕೆ. ಶಿವಕುಮಾರ ಈ ವಿಷಯ ಪ್ರಸ್ತಾಪಿಸಿದ್ದಾರೆ.‌ ಅದಕ್ಕೆ ಜನಪ್ರತಿನಿದಿಗಳು ಅಸ್ತು ಎಂದಿದ್ದಾರೆ. ಈ ಹಿಂದೆಯೂ ಅನೇಕ ಬಾರಿ ಕನ್ಸಂಟ್ ಅವಾರ್ಡ ಬಗೆಗೆ ಚರ್ಚೆಗಳು ನಡೆದಿವೆ. ಈಗ ಮತ್ತೆ ಮುನ್ನೆಲೆಗೆ ಬಂದಿದೆ.

ನೀರಾವರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ರೈತರ ಸಭೆ ಕರೆಯುವ ಬಗೆಗೆ ಮಾತನಾಡಿರುವ ಬೆನ್ನಲ್ಲೇ ಯುಕೆಪಿ ಹಂತ-೩ ರ ವ್ಯಾಪ್ತಿಯ ರೈತರಲ್ಲಿ ಕನ್ಸಂಟ್ ಅವಾರ್ಡ ಕುರಿತು ವ್ಯಾಪಕ ಚರ್ಚೆ ಆರಂಭಗೊಂಡಿದೆ. ನೀರಾವರಿ ಸಚಿವರ ಕನ್ಸಂಟ್ ಅವಾರ್ಡ ಚಿಂತನೆಯನ್ನು ರೈತರು ಎಷ್ಟರ ಮಟ್ಟಿಗೆ ಒಪ್ಪಲಿದ್ದಾರೆ ಎನ್ನುವುದು ಬಹಳ ಮುಖ್ಯವಾಗಿದೆ.

ಸರ್ಕಾರ ಪ್ರತಿ ಎಕರೆಗೆ ಎಷ್ಟು ಕನ್ಸಂಟ್ ಅವಾರ್ಡ ನೀಡಬೇಕು ಎನ್ನುವ ಬಗೆಗೆ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಆದರೆ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ಎಕರೆಗೆ ಇಂತಿಷ್ಟು ಕೊಡುವುದಾಗಿ ಈಗಾಗಲೇ ಅನೇಕ ಬಾರಿ ಹೇಳಿಕೆ ನೀಡಿದ್ದಾರೆ.

ಬಾಗಲಕೋಟೆ ಜಿಲ್ಲೆಯೊಂದರಲ್ಲೇ ಜಮೀನುಗಳ ಮಾರುಕಟ್ಟೆ ಬೆಲೆ ವಿಭಿನ್ನವಾಗಿದೆ. ಮುಧೋಳದಲ್ಲೊಂದು ದರ, ಜಮಖಂಡಿಯಲ್ಲೊಂದು ದರ, ಬೀಳಗಿ, ಬಾಗಲಕೋಟೆಯಲ್ಲೊಂದು ದರ ಇದೆ.‌ ಹಾಗಾಗಿ ಸರ್ಕಾರ ಎಲ್ಲವನ್ನು ಅಧ್ಯಯನ ಮಾಡಿ, ಒಣ ಬೇಸಾಯಕ್ಕೊಂದು, ನೀರಾವರಿ ಜಮೀನಿಗೊಂದು ದರ ನಿಗದಿ ಪಡಿಸಬೇಕಾಗುತ್ತದೆ. ಸರ್ಕಾರ ನಿಗದಿ ಪಡಿಸುವ ದರವನ್ನು ರೈತರು ಎಷ್ಟರ ಮಟ್ಟಿಗೆ ಒಪ್ಪುತ್ತಾರೆ ಎನ್ನುವುದು ಗಮನಾರ್ಹ ಅಂಶವಾಗಿದ್ದರೂ, ಮಾತುಕತೆ ಮೂಲಕ ಒಂದು ನಿರ್ಧಾರಕ್ಕೆ ಬರಬೇಕಾಗಿತ್ತದೆ.

ಕನ್ಸಂಟ್ ಅವಾರ್ಡ ವಿಷಯದಲ್ಲಿ ರೈತರ ಮನವೊಲಿಸಬೇಕಾದ ಗುರುತರ ಜವಾಬ್ದಾರಿ ಜನಪ್ರತಿನಿಧಿಗಳ ಮೇಲಿದೆ. ಒಂದೆ ಬಾರಿಗೆ ನಿರ್ಧಾರಕ್ಕೆ ಬರುವುದು ಕಷ್ಟವಾಗಿದ್ದರೂ ಆ ನಿಟ್ಟನಲ್ಲಿ ಸಭೆ ಆಯೋಜನೆಗೆ ಮುಂದಾಗಿರುವುದು ಆಶಾದಾಯಕ ಬೆಳವಣಿಗೆಯೇ ಸರಿ. ಇದುವರೆಗೂ ಕೃಷ್ಣೆಯ ಹೆಸರಲ್ಲಿ ರಾಜಕಾರಣ ಮಾಡುತ್ತ ಬಂದಿರುವ ರಾಜಕಾರಣಿಗಳು ಕನ್ಸಂಟ್ ಅವಾರ್ಡ ವಿಷಯದಲ್ಲಿ ಒಗ್ಗಟ್ಟು ಪ್ರದರ್ಶಿಸಿದಾಗ ಮಾತ್ರ ಹಲವು ಸಭೆಗಳ ಬಳಿಕವಾದರೂ ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿದೆ. ಇಲ್ಲದೆ ಹೋದಲ್ಲಿ ಪರಿಹಾರ ದರ ನಿಗದಿ ಕೂಡ ಅಸಾಧ್ಯ ವಾಗಲಿದೆ ಎನ್ನುವುದಂತೂ ಸ್ಪಷ್ಟ. ಹಾಗಾಗಿ ಸರ್ಕಾರ ಅಳೆದು ತೂಗಿ ನಿರ್ಧಾರಕ್ಕೆ ಬರಬೇಕಿದೆ.

Scroll to Top