ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ಅಣ್ಣ ಬಸವಣ್ಣನವರ ಪ್ರತಿಮೆ ಪ್ರತಿಷ್ಠಾಪನೆ ವಿವಾದ ಇದೀಗ ಹೊಸ ಸ್ವರೂಪ ಪಡೆದುಕೊಂಡಿದೆ. ಕಳೆದ ಐದಾರು ವರ್ಷಗಳಿಂದ ಉಭಯ ಮಹನಿಯರ ಪ್ರತಿಮೆ ಸ್ಥಾಪನೆಗಾಗಿ ಹೋರಾಟಗಳು ನಡೆಯುತ್ತಿವೆ. ಜಿಲ್ಲಾಡಳಿತ ಮಾತ್ರ ಈ ವಿಷಯದಲ್ಲಿ ಯಾವುದೇ ಸ್ಪಷ್ಟ ಪರಿಹಾರ ಕಲ್ಪಿಸುತ್ತಿಲ್ಲ.
ಯಾರ ವಿರೋಧವಿಲ್ಲ:
ಈಗಾಗಲೇ ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ಅಣ್ಣ ಬಸವಣ್ಣನವರ ಪ್ರತಿಮೆಗಳು ಪ್ರತಿಷ್ಠಾಪನೆಗೆ ಸಿದ್ದವಾಗಿವೆ. ಜಾಗೆ ಕೂಡ ಗುರುತಿಸಲಾಗಿದೆ. ಆದರೂ ಅವುಗಳ ಸ್ಥಾಪನೆಗೆ ಅನುಮತಿ ಸಿಕ್ಕುತ್ತಿಲ್ಲ. ಪ್ರತಿಮೆ ಸ್ಥಾಪನೆ ವಿಚಾರ ರಾಜ್ಯಸಭೆಯಲ್ಲೂ ಕೂಡ ಪ್ರಸ್ತಾಪವಾಗಿದೆ. ಪ್ರತಿಮೆ ಸ್ಥಾಪನೆ ವಿಷಯದಲ್ಲಿ ಯಾರ ವಿರೋಧವೂ ಇಲ್ಲ. ಆದರೆ ಪ್ರತಿಮೆ ಸ್ಥಾಪನೆ ವಿಷಯ ರಾಜಕೀಯ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಅನಗತ್ಯ ವಿಳಂಬ ಆಗುತ್ತಿದೆ. ಇದೊಂದು ಪ್ರತಿಷ್ಠೆ ವಿಷಯವಾಗಿ ಪರಿಣಮಿಸಿದೆ.
ಅನುದಾನ ಕೋರಿ ಮನವಿ:
ಏತನ್ಮಧ್ಯೆ ಮುಖ್ಯಮಂತ್ರಿಗಳ ಆಪ್ತರಾಗಿರುವ ಹೊಳೆಬಸು ಶೆಟ್ಟರ್ ಅವರು ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ಅಣ್ಣ ಬಸವಣ್ಣನವರ ಪ್ರತಿಮೆ ಸ್ಥಾಪನೆಗೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ. ಮನವಿಯಲ್ಲಿ ಉಭಯ ಮಹನಿಯರ ಪ್ರತಿಮೆ ಸ್ಥಾಪನೆಗೆ ತಲಾ 40. ಲಕ್ಷ ರೂಪಾಯಿ ಮಂಜೂರಾತಿಸುವಂತೆ ಮನವಿ ಮಾಡಿದ್ದಾರೆ. ಆಪ್ತನ ಮನವಿ ಸ್ವೀಕರಿಸಿರುವ ಅವರು ಆರ್ಥಿಕ ಇಲಾಖೆ ಕಾರ್ಯದರ್ಶಿಗಳಿಗೆ ಶಿಫಾರಸು ಮಾಡಿ, ಹಣಕಾಸು ಬಿಡುಗಡೆಗೆ ಸೂಚಿಸಿದ್ದಾರೆ.
ಪ್ರತಿಮೆಗಳ ಸ್ಥಾಪನೆಗೆ ತಲಾ 40 ಲಕ್ಷ ರೂ.ಗಳನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಿರುವುದು ಹೊಸ ವಿವಾದ ಸೃಷ್ಟಿಗೆ ಕಾರಣವಾಗಿದೆ. ಪ್ರತಿಮೆಗಳ ಸ್ಥಾಪನೆ ವಿಷಯದಲ್ಲಿ ಪರ, ವಿರೋಧ ಅಭಿಪ್ರಾಯಗಳು ಶುರುವಾಗಿವೆ.
ಅನುಮತಿ ಮಾತ್ರ ಬೇಕಿದೆ:
ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ಅಣ್ಣ ಬಸವಣ್ಣನವರ ಪ್ರತಿಮೆಗಳು ಪ್ರತಿಷ್ಠಾಪನೆಗೆ ಸಿದ್ದವಾಗಿದ್ದರೂ ಜಿಲ್ಲಾಡಳಿತ ಅನುಮತಿ ನೀಡದ ಹಿನ್ನೆಲೆಯಲ್ಲಿ ಅವು ಮೂಲೆ ಸೇರಿವೆ. ಪ್ರತಿಮೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ನಗರಸಭೆ ಸಾಮಾನ್ಯಸಭೆ ಒಮ್ಮತದ ನಿರ್ಣಯ ಕೈಗೊಂಡಿದೆ. ಅಗತ್ಯ ದಾಖಲೆಗಳು ಕೂಡ ಪ್ರತಿಮೆ ಪ್ರತಿಷ್ಠಾಪನೆ ಸಮಿತಿ ಬಳಿ ಇವೆ. ಆದರೂ ಜಿಲ್ಲಾಡಳಿತ ಅನುಮತಿ ನೀಡುತ್ತಿಲ್ಲ ಎನ್ನುವುದು ಪ್ರತಿಮೆ ಪ್ರತಿಷ್ಠಾಪನಾ ಸಮಿತಿಯವರ ವಾದವಾಗಿದೆ.
ಎಲ್ಲ ಕಡೆಗಳಲ್ಲೂ ಮಹನಿಯರ ಪ್ರತಿಮೆಗಳ ಸ್ಥಾಪನೆ ಅವಕಾಶ ನೀಡುತ್ತಿರುವಾಗಿ ಇಲ್ಲ ಏಕೆ ಅನುಮತಿ ಸಿಕ್ಕುತ್ತಿಲ್ಲ ಎನ್ನುವುದು ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ. ನಿಯಮಾವಳಿ ಪ್ರಕಾರ ಎಲ್ಲ ದಾಖಲೆಗಳನ್ನು ಸಲ್ಲಿಸಿ ಅನುಮತಿ ಕೇಳಿದರೂ ಜಿಲ್ಲಾಡಳಿತ ಅನುಮತಿಸುತ್ತಿಲ್ಲ. ಅದ್ಯಾವ ಒತ್ತಡ ಜಿಲ್ಲಾಡಳಿತವನ್ನು ಸಂಕಷ್ಟಕ್ಕೆ ಸಿಲುಕಿಸಿದೆಯೋ ಏನೋ ಎನ್ನುವ ಮಾತುಗಳು ಕಡಿಮೆ ಏನಿಲ್ಲ.
ಇಲ್ಲದ ಸಮಸ್ಯೆ ಸೃಷ್ಟಿ:
ಏತನ್ಮಧ್ಯೆ ಮುಖ್ಯಮಂತ್ರಿಗಳ ಆಪ್ತರಾಗಿರುವ ಹೊಳೆಬಸು ಶೆಟ್ಟರ್ ಅವರು ಬಾಗಲಕೋಟೆಯಲ್ಲಿ ಉಭಯ ನಾಯಕರ ಪ್ರತಿಮೆ ಸ್ಥಾಪನೆಗೆ ತಲಾ 40 ಲಕ್ಷ ರೂಪಾಯಿ ಅನುದಾನ ಕೇಳಿರುವುದು ಇಲ್ಲದ ಸಮಸ್ಯೆ ಸೃಷ್ಟಿಗೆ ಕಾರಣವಾಗಿದೆ. ಪ್ರತಿಮೆಗಳ ಪ್ರತಿಷ್ಠಾಪನೆ ವಿಷಯ ಮತ್ತಷ್ಟು ಕಗ್ಗಂಟಾಗುವ ಸಾಧ್ಯತೆಗಳು ಕಾಣಿಸುತ್ತಿವೆ.
ಉಪಚುನಾವಣೆ ಹೊತ್ತಲ್ಲಿ ಪ್ರತಿಮೆಗಳ ಪ್ರತಿಷ್ಠಾಪನೆ ವಿಚಾರ ಎತ್ತಿರುವುದು, ಇಲ್ಲದ ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡಂತಾಗಿದೆ ಎನ್ನುವ ಪ್ರತಿಕ್ರಿಯೆಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿವೆ. ಚುನಾವಣೆ ಸಮಯದಲ್ಲಿ ಪ್ರತಿಮೆಗಳ ಪ್ರತಿಷ್ಠಾಪನೆ ಕೂಡ ರಾಜಕೀಯ ಪಕ್ಷಗಳ ಪಾಲಿಗೆ ರಾಜಕೀಯ ಅಸ್ತ್ರವಾಗಿ ಪರಿಣಮಿಸಲಿದೆ.
ಪರ-ವಿರೋಧ ಚರ್ಚೆ:
ಪ್ರತಿಮೆಗಳ ಸ್ಥಾಪನೆ ವಿಷಯದಲ್ಲಿ ಹೊಳೆಬಸು ಶೆಟ್ಟರ್ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಕುರಿತು ಜಿಲ್ಲಾ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಪ್ರತಿಮೆಗಳ ಸ್ಥಾಪನೆಗೆ ಹಣಕಾಸಿನ ಅಗತ್ಯವಿಲ್ಲ. ಪ್ರತಿಮೆಗಳು ನಿರ್ಮಾಣಗೊಂಡಿವೆ. ಜಾಗೆ ಕೂಡ ಗುರುತಿಸಲಾಗಿದೆ. ಈಗ ಸರ್ಕಾರದ ಅನುದಾನದ ಬದಲು ಅನುಮತಿ ಬೇಕಿದೆ ಎಂದು ಹೇಳಿದ್ದಾರೆ.
14 ರಂದು ಸ್ಪಷ್ಟನೆ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾ.14 ರಂದು ಬಾಗಲಕೋಟೆಗೆ ಆಗಮಿಸಲಿದ್ದಾರೆ. ಆ ಹೊತ್ತಿಗೆ ಪ್ರತಿಮೆಗಳ ಪ್ರತಿಷ್ಠಾನೆ ವಿಷಯ ಒಂದು ಸ್ಪಷ್ಟ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಗಳು ನಿಚ್ಚಳವಾಗಿವೆ. ಒಂದೊಮ್ಮೆ ಮುಖ್ಯಮಂತ್ರಿಗಳು ಮಾ. 14 ರಂದು ಈ ಕುರಿತು ಮಹತ್ವದ ನಿರ್ಧಾರ ಪ್ರಕಟಿಸಿದರೂ ಅಚ್ಚರಿ ಏನಿಲ್ಲ.
- ವಿಠ್ಠಲ ಆರ್. ಬಲಕುಂದಿ




