ಕಳೆದ ಎರಡುವರೆ ವರ್ಷಗಳಿಂದ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಹೊಳೆಬಸು ಶೆಟ್ಟರ್ ಅವರ ರಾಜಕೀಯ ಆಟಾಟೋದಿಂದ ಮೌನಕ್ಕೆ ಶರಣಾಗಿದ್ದ ಜಿಲ್ಲಾ ಕಾಂಗ್ರೆಸ್ ಪಾಳೆಯದಲ್ಲಿಗ ಅಸಮಾಧಾನದ ಕಟ್ಟೆ ಒಡೆದಿದೆ. ಜಿಲ್ಲಾ ಕಾಂಗ್ರೆಸ್ ಪಾಳೆಯದಲ್ಲಿ ಹೊಳೆಬಸು ಶೆಟ್ಟರ್ ಅವರು ಮುಖ್ಯಮಂತ್ರಿಗಳ ಆಪ್ತರು ಹಾಗೂ ದಿ. ಶಾಸಕ ಎಚ್.ವೈ. ಮೇಟಿ ಅವರು ಶಿಷ್ಯರು ಎನ್ನುವ ಕಾರಣಕ್ಕೆ ಇಡೀ ಜಿಲ್ಲೆಯಲ್ಲಿ ಅವರದ್ದೇ ರಾಜಕೀಯ ಪಾರುಪತ್ಯ ಎನ್ನುವಂತಾಗಿದೆ.
ಬಾದಾಮಿಯಲ್ಲಿ ಬಿಬಿಸಿ ಮಾತು:
2018 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರದಿಂದ ಆಯ್ಕೆಯಾದ ಬಳಿಕ ಹೊಳೆಬಸು ಶೆಟ್ಟರ್ ಜಿಲ್ಲೆಯಲ್ಲಿ ರಾಜಕೀಯವಾಗಿ ಬಹಳಷ್ಟು ಎತ್ತರಕ್ಕೆ ಬೆಳೆದರು. ಪಕ್ಷದ ಹಿರಿ, ಕಿರಿಯರೆಲ್ಲ ಅವರ ಅಣತಿಯಂತೆ ನಡೆಯಲಾರಂಭಿಸಿದರು. ಶೆಟ್ಟರ್ ಈ ಆಟ ಬಾದಾಮಿ ಕ್ಷೇತ್ರದಲ್ಲಿ ಮಾತ್ರ ಅಷ್ಟಕ್ಕಷ್ಟೆ ಎನ್ನುವಂತಿತ್ತು. 2023 ರ ವಿಧಾನಸಭೆ ಚುನಾವಣೆ ವೇಳೆಗೆ ಬಾದಾಮಿ ಕ್ಷೇತ್ರದ ಕಾಂಗ್ರೆಸ್ ಪಾಳೆಯದಲ್ಲಿ ಬಿ.ಬಿ. ಚಿಮ್ಮನಕಟ್ಟಿ ಬಣ ಹಾಗೂ ಹೊಳೆಬಸು ಶೆಟ್ಟರ್ ಬಣ ಎನ್ನುವ ಎರಡು ಸ್ಪಷ್ಟ ಬಣಗಳು ಸೃಷ್ಟಿಯಾದವು. ವಿಷಯ ಸ್ವತಃ ಸಿದ್ದರಾಮಯ್ಯ ಅವರ ಕಿವಿಗೆ ತಲುಪಿದರೂ ಪ್ರಯೋಜನವಾಗಲಿಲ್ಲ. ಕ್ಷೇತ್ರದಲ್ಲಿನ ಬಣ ತಿಕ್ಕಾಟದಲ್ಲಿ ಚಿಮ್ಮನಕಟ್ಟಿ ಅವರ ಬಣ ಮೇಲುಗೈ ಸಾಧಿಸಿತು. ಈಗ ಅಲ್ಲಿ ಎಲ್ಲವೂ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಅವರ ಅಣತಿಯಂತೆ ನಡೆಯುತ್ತಿದೆ.
ಬಾಗಲಕೋಟೆಗೆ ಪಲಾಯನ:
ಬಾದಾಮಿ ಕ್ಷೇತ್ರದಲ್ಲಿ ತಮ್ಮದೇನೂ ನಡೆಯುವುದಿಲ್ಲ ಎನ್ನುವುದು ಗೊತ್ತಾಗುತ್ತಿದ್ದಂತೆ ಹೊಳೆಬಸು ಶೆಟ್ಟರ್ ಬಾಗಲಕೋಟೆ ಕ್ಷೇತ್ರಕ್ಕೆ ಪಲಾಯನಗೈದು ದಿ. ಎಚ್.ವೈ. ಮೇಟಿ ಅವರ ರಾಜಕೀಯ ಪಡಸಾಲೆಯಲ್ಲಿ ಭದ್ರವಾಗಿ ಪವಡಿಸಿ ಬಿಟ್ಟರು. ಇದರಿಂದಾಗಿ ಬಾಗಲಕೋಟೆ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಸಾಕಷ್ಟು ಅಸಮಾಧಾನ ಹುಟ್ಟಿಕೊಂಡಿತು ದಿ.ಶಾಸಕ ಮೇಟಿ ಅವರು ಕೂಡ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಉಂಟಾದ ಅಸಮಾಧಾನ ಬಗೆಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳಲಿಲ್ಲ. ಪರಿಣಾಮವಾಗಿ ಪಕ್ಷದ ಮುಖಂಡರು ಮೌನಕ್ಕೆ ಶರಣಾಗಿ ಬಿಟ್ಟರು. ಜತೆಗೆ ಜಿಲ್ಲಾ ಕಾಂಗ್ರೆಸ್ ಮೇಲೂ ಶೆಟ್ಟರ್ ತಮ್ಮದೇ ಪ್ರಾಬಲ್ಯ ಸಾಧಿಸುವ ಮೂಲಕ ಜಿಲ್ಲೆಯಲ್ಲಿ ಇಡೀ ಪಕ್ಷವನ್ನು ಹಿಡಿತಕ್ಕೆ ತೆಗೆದುಕೊಂಡರು. ಶೆಟ್ಟರ ಈ ನಡೆ ಪಕ್ಷದಲ್ಲಿ ಸಾಕಷ್ಟು ಅಸಮಾಧಾನಕ್ಕೆ ಕಾರಣವಾದರೂ ಯಾರೂ ಇವರ ವಿಷಯದಲ್ಲಿ ಮೂಗು ತುರಿಸುವ ಗೋಜಿಗೆ ಹೋಗಲಿಲ್ಲ.
ಮೇಟಿ ಪುತ್ರಿ ಮಹಾದೇವಿ ಎಂಟ್ರಿ:
ದಿ. ಎಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿರುವ ಬಾಗಲಕೋಟೆ ವಿಧಾಸಭೆ ಕ್ಷೇತ್ರಕ್ಕೆ ಚುನಾವಣೆ ಕಾಲ ಸನ್ನಿಹಿತವಾಗುತ್ತಿದೆ. ಏತನ್ಮಧ್ಯೆ ಟಿಕೆಟ್ ಯಾರಿಗೆ ಎನ್ನುವುದೇ ಕ್ಷೇತ್ರದಾದ್ಯಂತ ಚರ್ಚೆ ಆಗುತ್ತಿದೆ. ಮೇಟಿ ಅವರ ಪುತ್ರರೆಲ್ಲ ಟಿಕೆಟ್‌ಗಾಗಿ ಯತ್ನಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇದುವರೆಗೂ ರಾಜಕಾರಣದಿಂದ ದೂರವೇ ಇದ್ದ ಮೇಟಿ ಅವರ ಕೊನೆ ಸುಪುತ್ರಿ ಮಹಾದೇವಿ ಹುಲ್ಲಪ್ಪ ಮೇಟಿ ದಿಢೀರ್ ಆಗಿ ರಾಜಕೀಯ ಪ್ರವೇಶಿಸಿದ್ದಾರೆ.
ಶೆಟ್ಟರಿಗೆ ಸೆಡ್ಡು ಹೊಡೆದ ಮಹಾದೇವಿ:
ದಿ. ಎಚ್.ವೈ. ಮೇಟಿ ಅವರು ಶಿಷ್ಯ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಮಾಪ್ತ ಹೊಳೆಬಸು ಶೆಟ್ಟರ್ ಅವರ ವಿರುದ್ಧ ಪರೋಕ್ಷವಾಗಿ ತೀವ್ರ ವಾಗ್ದಾಳಿ ನಡೆಸುವ ಮೂಲಕ ಟಿಕೆಟ್‌ಗಾಗಿ ಹಕ್ಕೊತ್ತಾಯ ಮಂಡಿಸಿದ್ದಾರೆ. ಹೊಳೆಬಸು ಶೆಟ್ಟರ್ ವಿರುದ್ಧ ಮಹಾದೇವಿ ಮೇಟಿ ಅವರು ತೀವ್ರ ಕೆಂಡ ಕಾರಿರುವುದು ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. “ಬಾಗಲಕೋಟೆ ಆಡಳಿತ ಬಾಗಲಕೋಟೆಯವರಿಂದ ನಡೆಯಬೇಕು. ಗುಳೇದಗುಡ್ಡದ ವ್ಯಕ್ತಿಯಿಂದ ಅಲ್ಲ” ಎಂದು ಅವರು ಪ್ರಸ್ತಾಪಿಸಿರುವ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಮೇಟಿ ಪುತ್ರಿಗೆ ವ್ಯಾಪಕ ಬೆಂಬಲ:
ದಿ. ಶಾಸಕ ಎಚ್.ವೈ. ಮೇಟಿ ಅವರ ಕುಟುಂಬದವರೇ ಹೊಳೆಬಸು ಶೆಟ್ಟರ್ ವಿರುದ್ಧ ತಿರುಗಿ ಬಿದ್ದಿರುವುದು ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಬಹುತೇಕ ಕಾಂಗ್ರೆಸ್ಸಿಗರಲ್ಲಿ ನಿರಾಳ ಭಾವ ಮೂಡಿಸಿದೆ. ಹೊಳೆಬಸು ಶೆಟ್ಟರ್ ವಿರುದ್ಧ ಧ್ವನಿ ಎತ್ತಿರುವ ಮಹಾದೇವಿ ಹುಲ್ಲಪ್ಪ ಮೇಟಿ ಅವರಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಪಕ್ಷದಲ್ಲಿನ ಕ್ಷೇತ್ರದ ಹಾಗೂ ಜಿಲ್ಲೆಯ ಮುಖಂಡರು ಈಗ ಮಹಾದೇವಿ ಅವರ ಪರ ಬ್ಯಾಟಿಂಗ್ ಆರಂಭಿಸಿದ್ದಾರೆ. ಆದರೆ ಬಹಿರಂಗವಾಗಿ ಶೆಟ್ಟರ್ ವಿರುದ್ಧ ಮಹಾದೇವಿ ಅವರ ಹಾಗೆ ಅಖಾಡಕ್ಕೆ ಇಳಿಯದಿದ್ದರೂ ತೆರೆಮರೆಯಲ್ಲಿ ಅವರ ವಿರುದ್ಧ ವ್ಯೂಹ ರಚಿಸುತ್ತಿದ್ದಾರೆ.
ಪ್ರವಾಹ ತಡೆಗೆ ಯತ್ನ:
ಉಪ ಚುನಾವಣೆ ಸಮಯದಲ್ಲಿ ಶೆಟ್ಟರ್ ವಿರುದ್ಧ ಮೇಟಿ ಅವರ ಪುತ್ರಿಯೇ ಸಮರ ಸಾರಿರುವುದು ಪಕ್ಷದಲ್ಲಿ ತಲ್ಲಣವನ್ನುಂಟು ಮಾಡಿದೆ. ಬಾಗಲಕೋಟೆ ಕ್ಷೇತ್ರದಲ್ಲಿ ಶೆಟ್ಟರ್ ರಾಜಕೀಯ ಪ್ರವಾಹ ತಡೆಯಲು ಮಹಾದೇವಿ ಮೇಟಿ ಅವರೊಂದಿಗೆ ಸಾಕಷ್ಟು ಜನ ಕಾಂಗ್ರೆಸ್ಸಿಗರು ತೆರೆಮರೆಯಲ್ಲಿ ಕೈ ಜೋಡಿಸಿದ್ದಾರೆ. ಈ ಸಮರದಲ್ಲಿ ಮಹಾದೇವಿ ಮೇಟಿ ಎಷ್ಟರ ಮಟ್ಟಿಗೆ ಶೆಟ್ಟರ ವಿರುದ್ಧದ ಸಮರದಲ್ಲಿ ಯಶಸ್ಸು ಕಾಣಲಿದ್ದಾರೆ ಎನ್ನುವುದನ್ನು ಕಾಯ್ದು ನೋಡಬೇಕಷ್ಟೆ.
- ವಿಠ್ಠಲ ಆರ್. ಬಲಕುಂದಿ




