ರಾಜ್ಯದಲ್ಲಿ ಮತ್ತೆ ಅಬಕಾರಿ ಇಲಾಖೆ ಸದ್ದು ಮಾಡುತ್ತಿದೆ. ಲೈಸನ್ಸ್ ನೀಡಿಕೆ ವಿಷಯದಲ್ಲಿ ಅಬಕಾರಿ ಡಿಸಿ ಜಗದೀಶ್ ನಾಯ್ಕ್ ಅವರು ಲೋಕಾಯುಕ್ತ ದಾಳಿಯಲ್ಲಿ ಸಿಲುಕಿದ್ದೆ ತಡ ಪ್ರತಿಪಕ್ಷಗಳ ಮುಖಂಡರು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ರಾಜೀನಾಮೆಗೆ ಒತ್ತಾಯಿಸತೊಡಗಿದ್ದಾರೆ. ಪ್ರತಿಪಕ್ಷಗಳ ಮುಖಂಡರ ಆರೋಪಕ್ಕೆ ಮಾರುತ್ತರ ನೀಡಿರುವ ಸಚಿವ ತಿಮ್ಮಾಪುರ ಅವರು ಲಂಚ ಪ್ರಕರಣದ ತನಿಖೆ ನಡೆದು, ಆರೋಪ ಸಾಬೀತಾದಲ್ಲಿ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ.
ಸದಾ ಸುದ್ದಿಯಲ್ಲಿ :
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿ ಆಗಿ ಅಧಿಕಾರ ಚುಕ್ಕಾಣಿ ಹಿಡಿದಾಗಿನಿಂದಲೂ ಅಬಕಾರಿ ಇಲಾಖೆ ಆಗಾಗ್ಗೆ ಭ್ರಷ್ಟಾಚಾರ ಆರೋಪದ ವಿಷಯದಲ್ಲಿ ಸದ್ದು ಮಾಡುತ್ತಲೇ ಇದೆ. ಒಂದು ಹಂತದಲ್ಲಿ ಇಲ್ಲಿನ ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಆರೋಪಿಸಿದ್ದುಂಟು.
ಅಬಕಾರಿ ಇಲಾಖೆಯ ಮೇಲೆ ಪ್ರತಿ ಭಾರಿ ಆರೋಪ ಬಂದಾಗಲೂ, ಆ ಆರೋಪಗಳಲ್ಲಿ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರೊಂದಿಗೆ ಅವರ ಪುತ್ರನ ಹೆಸರು ಥಳಕು ಹಾಕಿಕೊಳ್ಳುತ್ತಲೇ ಇದೆ. ಇದೀಗ ಲೈಸನ್ಸ್ ನೀಡಿಕೆ ವಿಚಾರದಲ್ಲಿ ಅಬಕಾರಿ ಡಿಸಿ ಜಗದೀಶ್ ನಾಯ್ಕ್ ಅವರು ಲಂಚ ಸ್ವೀಕರಿಸುತ್ತಿದ್ದ ವೇಳೆಯೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಈಗಲೂ ಸಚಿವ ತಿಮ್ಮಾಪುರ ಮತ್ತು ಅವರ ಪುತ್ರ ವಿನಯ ತಿಮ್ಮಾಪುರ ಹೆಸರು ಪ್ರಸ್ತಾಪಗೊಂಡಿದೆ.
ರಾಜೀನಾಮೆಗೆ ಒತ್ತಾಯ:
ಪ್ರಸಕ್ತ ಪ್ರಕರಣದಲ್ಲಿನ ಗಮನಾರ್ಹ ಅಂಶವೆಂದರೆ “ಮಂತ್ರಿಗೆ ಲಂಚ ಕೊಡಬೇಕು” ಎನ್ನುವ ಆಡಿಯೋ ಇದೆ. ಅದರಲ್ಲಿ ಮಂತ್ರಿಗೆ ತಿಂಗಳಿಗೆ ಇಂತಿಷ್ಟು ಲಂಚ ಕೊಡಬೇಕು ಎಂದು ಅಧಿಕಾರಿ ಹೇಳಿದ್ದಾರೆ ಎಂದು ಬಿಜೆಪಿ ಪ್ರತಿಪಕ್ಷ ನಾಯಕರಾದ ಆರ್. ಅಶೋಕ, ಚಲುವಾದಿ ನಾರಾಯಣಸ್ವಾಮಿ ಆಪಾದಿಸಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ಅಬಕಾರಿ ಸಚಿವರ ರಾಜೀನಾಮೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
ಪ್ರತಿಪಕ್ಷಗಳಿಗೆ ಅಸ್ತ್ರ:
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ 2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಅಬಕಾರಿ ಇಲಾಖೆ ಮದ್ಯಮ ಬೆಲೆ ಹೆಚ್ಚಳ ಮತ್ತು ಭ್ರಚ್ಟಾಚಾರ ಆರೋಪಗಳಿಂದ ಸದ್ದು ಮಾಡುತ್ತಲೇ ಇದೆ. ಇಷ್ಟರ ಮಧ್ಯೆ ಜ.22 ರಿಂದ ನರೇಗಾ ಯೋಜನೆ ತಿದ್ದುಪಡಿ ಕುರಿತು ಚರ್ಚಿಸಲು ವಿಧಾನ ಮಂಡಳದ ಜಂಟಿ ಅಧಿವೇಶನ ಆರಂಭಗೊಳ್ಳುತ್ತಿದೆ.
ಅಧಿವೇಶನದಲ್ಲಿ ನರೇಗಾ ವಿಷಯಕ್ಕಿಂತ ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿರುವ ಭ್ರಷ್ಟಾಚಾರ, ಮಂತ್ರಿಗಳಿಗೆ ಲಂಚ ನೀಡಬೇಕು ಎನ್ನುವ ಕುರಿತ ಆಡಿಯೋಗಳ ಸದ್ದು ಜೋರಾಗಿ ಕೇಳಿ ಬರಲಿದ್ದು, ಅಬಕಾರಿ ಸಚಿವರ ರಾಜೀನಾಮೆಗೆ ಪ್ರತಿಪಕ್ಷಗಳು ಇನ್ನಿಲ್ಲದ ಒತ್ತಡ ಹಾಕಲಿವೆ. ವಿಶೇಷ ಅಧಿವೇಶನದಲ್ಲಿ ಇದೇ ಪ್ರತಿಪಕ್ಷಗಳ ಪಾಲಿಗೆ ಪ್ರಬಲ ಅಸ್ತ್ರವಾಗಿ ಪರಿಣಮಿಸಲಿದೆ.
ತನಿಖೆಗೆ ಒತ್ತಡ:
ಲಂಚ ಸ್ವೀಕರಿಸುತ್ತಿರುವ ವೇಳೆಯೇ ಅಬಕಾರಿ ಡಿಸಿ ದಯಾನಂದ ನಾಯಕ ಲೋಕಾಯುಕ್ತ ಬಲೆಗೆ ಬಿದ್ದಿರುವುದು, ಮಂತ್ರಿಗೆ ಲಂಚ ನೀಡಬೇಕು ಎನ್ನುವ ಆಡಿಯೋ ಕುರಿತು ಪ್ರತಿಪಕ್ಷಗಳ ಆರೋಪ ಬೆನ್ನಲ್ಲೇ ಸ್ವತಃ ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ ಅವರು ಪ್ರಕರಣದ ಕುರಿತು ತನಿಖೆ ನಡೆಯಲಿ. ಆರೋಪ ಸಾಬೀತಾದ ಕೂಡಲೇ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಹಾಗಾಗಿ ಪ್ರತಿಪಕ್ಷಗಳ ಲಂಚ ಪ್ರಕರಣ ಕುರಿತು ಅಧಿವೇಶನದಲ್ಲಿ ತನಿಖೆ ನಡೆಸುವಂತೆ ಒತ್ತಡ ಹಾಕುವ ಸಾಧ್ಯತೆಗಳು ಹೆಚ್ಚಾಗಿವೆ.
ಕಾಯ್ದು ನೋಡುವ ತಂತ್ರ:
ಈ ಹಿಂದೆ ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಸದ್ದು ಕೇಳಿ ಬಂದಾಗ ಕಾಂಗ್ರೆಸ್ ಹೈಕಮಾಂಡ್ ಕೂಡ ಅಬಕಾರಿ ಸಚಿವ ತಿಮ್ಮಾಪುರ ಅವರ ರಾಜೀನಾಮೆ ಪಡೆಯಬೇಕು ಎನ್ನುವ ಹಂತಕ್ಕೆ ಬಂದು ಮುಟ್ಟಿತ್ತು. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಮ್ಮಾಪುರ ಪರ ಬ್ಯಾಟಿಂಗ್ ಮಾಡಿದ್ದರಿಂದ ತಲೆದಂಡದಿಂದ ಬಚಾವ್ ಆಗಿದ್ದರು. ಜತೆಗೆ ಸಂಪುಟ ಪುನಾರಚಣೆ ಮಾತು ಬಂದಾಗಲೇ ಸಂಪುಟದಿಂದ ಕೈ ಬಿಡುವವರ ಪಟ್ಟಿಯಲ್ಲೂ ತಿಮ್ಮಾಪುರ ಹೆಸರು ಕೇಳಿ ಬರುತ್ತಲೇ ಇದೆ.
ಇದೀಗ ಅಬಕಾರಿ ಡಿಸಿ. ದಯಾನಂದ ನಾಯ್ಕ್ ಲಂಚ ಪಡೆಯುತ್ತಿರುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ವರಿಷ್ಠರ ನಿಲುವು ಏನಾಗಲಿದೆ ಎನ್ನುವುದು ಕೂಡ ಕುತೂಹಲದ ಸಂಗತಿ ಆಗಿದೆ. ವಿಧಾನಮಂಡಳ ವಿಶೇಷ ಅಧಿವೇಶನದಲ್ಲಿ ಈ ವಿಷಯ ಯಾವ ಹಂತದಲ್ಲಿ ಚರ್ಚೆಗೆ ಬರಲಿದೆ, ಚರ್ಚೆಯ ಪರಿಣಾಮ ಏನು ಎನ್ನುವುದರ ಮೇಲೆ ಕಾಂಗ್ರೆಸ್ ವರಿಷ್ಠರ ನಿಲುವು ಸ್ಪಷ್ಟವಾಗಲಿದೆ.
ತಿಮ್ಮಾಪುರ ಮಾತು:
“ನಾನು ದುಡ್ಡು ತಿಂದಿಲ್ಲ, ಯಾವನಿಗೂ ಪೋನ್ ಮಾಡಿಲ್ಲ, ಇಲಾಖೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕೈಗೊಂಡ ಕಠಿಣ ಕ್ರಮಗಳ ಹಿನ್ನೆಲೆಯಲ್ಲಿ ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ಉಪ್ಪು ತಿಂದವ ನೀರು ಕುಡಿಯಲೇ ಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಲಿ ಎನ್ನುವ ಮಾತನ್ನು ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷ ಸಚಿವ ತಿಮ್ಮಾಪುರ ನಿಂತುಕೊಳ್ಳಲಿದೆ. ಹೇಗೆ ಬ್ಯಾಟಿಂಗ್ ಮಾಡಲಿದೆ ಎನ್ನುವುದನ್ನು ಕಾಯ್ದು ನೋಡಬೇಕಷ್ಟೆ.
- ವಿಠ್ಠಲ ಆರ್. ಬಲಕುಂದಿ




