ಮೊನ್ನೆತಾನೆ ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಬಾಗಲಕೋಟೆ ಜಿಲ್ಲೆಯ ಮುಖಂಡರ ಸಭೆಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ್ದ ಮುಖಂಡರು, ಶನಿವಾರ ಸಂಸದ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಾನೊಂದು ತೀರ, ನಿನೊಂದು ತೀರ ಎನ್ನುವಂತಿದ್ದರು.
ಒಗ್ಗಟ್ಟಿನ ಮಂತ್ರ:
ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಾಗಲಕೋಟೆ ಜಿಲ್ಲೆಯ ಬಿಜೆಪಿ ಮುಖಂಡರ ಸಭೆ ನಡೆದಿತ್ತು. ಆ ಸಭೆಯಲ್ಲಿ ಜಿಲ್ಲೆಯ ಮುಖಂಡರು ಅಸಮಾಧಾನ ಬದಿಗಿಟ್ಟು ಒಗ್ಗಟ್ಟಿನ ಮಂತ್ರ ಜಪಿಸಿರುವುದನ್ನು ಮಾಧ್ಯಮಗಳ ಮುಂದೆ ಬಹಿರಂಗವಾಗಿ ಹೇಳಿಕೊಂಡಿದ್ದರು. ಅದು ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ಹೊಸ ಹುಮ್ಮಸ್ಸು ಮೂಡಲು ಕಾರಣವಾಗಿತ್ತು.
ಎಲ್ಲಾ ಉಲ್ಟಾಪಲ್ಟಾ:
ಬೆಂಗಳೂರಿನಲ್ಲಿ ನಡೆದ ಸಭೆಯ ಬೆನ್ನಲ್ಲೇ ಶನಿವಾರ ಬಾಗಲಕೋಟೆಯ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸಂಸದ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜಕೀಯ ಕಡು ವೈರಿಗಳಂತಿರುವ ಮೇಲ್ಮನೆ ಸದಸ್ಯ ಪಿ.ಎಚ್. ಪೂಜಾರ್, ಮಾಜಿ ಶಾಸಕ ವೀರಣ್ಣ ಚರಂತಿಮಠ ಕಾಣಿಸಿಕೊಂಡರು. ಸಂಸದ ಜಗದೀಶ್ ಶೆಟ್ಟರ್ ಮಾತನಾಡಿದ ಬಳಿಕ ಉಭಯ ಮುಖಂಡರು ಮಾತನಾಡುತ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ ಕಾಯ್ದಿತ್ತು. ಪತ್ರಿಕಾಗೋಷ್ಠಿಯ ವೇದಿಕೆಯಲ್ಲಿ “ ಉಭಯ ಮುಖಂಡರು ನಾನೊಂದು ತೀರ… ನಿನೊಂದು ತೀರ” ಎನ್ನುವ ಹಾಗೆ ಬೇರೆ ಬೇರೆ ಕುಳಿತುಕೊಂಡಿದ್ದರು. ಪರಸ್ಪರ ಮಾತನಾಡಲಿಲ್ಲ. ಒಬ್ಬರಿಗೊಬ್ಬರು ಎದುರಾಗಲಿಲ್ಲ.
ಪತ್ರಿಕಾಗೋಷ್ಠಿ ಬಳಿಕ ನಡೆದ ಪಕ್ಷದ ಸಂಘಟನಾ ಸಭೆಯಲ್ಲಿ ಮೇಲ್ಮನೆ ಸದಸ್ಯ ಪಿ.ಎಚ್. ಪೂಜಾರ್ ಕಾಣಿಸಿಕೊಳ್ಳಲಿಲ್ಲ. ಮಾಜಿ ಶಾಸಕ ವೀರಣ್ಣ ಚರಂತಿಮಠ ಮಾತ್ರ ಹಾಜರಾಗಿದ್ದು ಕಂಡು ಬಂದಿತು.
ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದವರು, ೪೮ ಗಂಟೆಗಳಲ್ಲಿ ನಡೆದ ಸಭೆಗಳಲ್ಲಿ ಎಲ್ಲವೂ ತಿರುವು ಮುರುವಾದಂತೆ ಕಾಣಿಸಿತು. ಬೆಂಗಳೂರಿನಲ್ಲಿ ನಡೆದ ಮುಖಂಡರ ಸಭೆಯ ಬಳಿಕ ಕ್ಷೇತ್ರದಲ್ಲಿ ನಡೆಯುವ ಪಕ್ಷದ ಸಭೆ, ಸಮಾರಂಭಗಳಲ್ಲಿ ಇಬ್ಬರು ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಪಕ್ಷದ ಕಾರ್ಯಕರ್ತರ ಆಸೆಗೆ ಆರಂಭದಲ್ಲೇ ತಣ್ಣೀರು ಎರಚಿದಂತಾಗಿದೆ.
ಕ್ಷೇತ್ರದ ಇಬ್ಬರು ಪ್ರಬಲ ಮುಖಂಡರ ನಡುವೆ ಇರುವ ಇಷ್ಟೊಂದು ಅಸಮಾಧಾನದ ಮಧ್ಯೆ ಕಾರ್ಯಕರ್ತರು ಒಗ್ಗಟ್ಟಿನಿಂದ ಚುನಾವಣೆ ಎದುರಿಸುವುದಾದರೂ ಹೇಗೆ ಎನ್ನುವ ಸಹಜ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಗುವ ಸಾಧ್ಯತೆಗಳು ಕಾಣಿಸುತ್ತಿಲ್ಲ.
ಚುನಾವಣೆ ಕಷ್ಟ:
ಉಭಯ ಮುಖಂಡರ ನಡುವಿನ ಅಸಮಾಧಾನ ಶಮನಗೊಳಿಸದೇ ಉಪ ಚುನಾವಣೆಯನ್ನು ಎದುರಿಸುವುದು ಕಷ್ಟ ಎನ್ನುವ ಭಾವನೆ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನಲ್ಲಿ ಮನೆ ಮಾಡಿದೆ. ಪಕ್ಷದ ಮುಖಂಡರು ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸಿ ಉಪಚುನಾವಣೆ ಗೆಲ್ಲುತ್ತೇವೆ ಎನ್ನುವ ಮಾತುಗಳನ್ನು ಹೇಳುತ್ತಿದ್ದಾರೆ.
ಪಕ್ಷದಲ್ಲಿ ಒಗ್ಗಟ್ಟಿಲ್ಲದೆ, ಪ್ರತಿಪಕ್ಷ ಸ್ಥಾನದಲ್ಲಿದ್ದುಕೊಂಡು ಆಳುವ ಪಕ್ಷದ ಅಭ್ಯರ್ಥಿಯನ್ನು ಎದುರಿಸುವುದು ಸುಲಭದ ಕೆಲಸವಲ್ಲ. ಆದರೆ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳ ದೊಡ್ಡ ಪಡೆಯೇ ಇದೆ. ಈಗಲೂ ಅದು ಸಮರ್ಥವಾಗಿದೆ. ಆದರೆ ಪ್ರಮುಖರ ನಡುವಿನ ಅಸಮಾಧಾನ, ಭಿನ್ನಾಭಿಪ್ರಾಯ ನುಂಗಲಾರದ ತುತ್ತಾಗಿದ ಪರಿಣಮಿಸಿದೆ.
ಮೇಲ್ಮನೆ ಸದಸ್ಯ ಪಿ.ಎಚ್. ಪೂಜಾರ್ ಮತ್ತು ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರ ನಡುವಿನ ಭಿನ್ನಮತ ನಿವಾರಣೆಗೆ ಯಾರೆಲ್ಲ ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಸ್ವತಃ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಧ್ಯ ಪ್ರವೇಶದಿಂದ ನಿಧಾನವಾಗಿ ಎಲ್ಲವೂ ಶಮನಗೊಳ್ಳಲಿದೆ ಎನ್ನುವ ಬಲವಾದ ನಂಬಿಕೆ ಕಾರ್ಯಕರ್ತರಲ್ಲಿ ಮೂಡಲಾರಂಭಿಸುತ್ತಿದ್ದಂತೆ ಶನಿವಾರ ನಡೆದ ಪ್ರಸಂಗಗಳು ಕ್ಷೇತ್ರದ ಪ್ರಮುಖರ ನಡುವಿನ ಅಸಮಾಧಾನ ಶಮನಗೊಳ್ಳಲು ಸಾಧ್ಯವೆ ಎನ್ನುವ ಯಕ್ಷಪ್ರಶ್ನೆ ಹುಟ್ಟಿಗೆ ಕಾರಣವಾಗಿದೆ.
ಉಪಚುನಾವಣೆ ಹೊತ್ತಿಗೆ ಎಲ್ಲವೂ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಪಕ್ಷದ ರಾಜ್ಯ ಮುಖಂಡರ ಆಶಯದಂತೆ ಉಭಯ ಮುಖಂಡರ ನಡುವೆ ಹೊಂದಾಣಿಕೆ ಮೂಡಲಿ ಎನ್ನುವ ಭಾವನೆ ಎಷ್ಟರ ಮಟ್ಟಿಗೆ ಸಾಕಾರಗೊಳ್ಳಲಿದೆ ಎನ್ನುವುದನ್ನು ಕಾಯ್ದು ನೋಡಬೇಕಷ್ಟೆ.
- ವಿಠ್ಠಲ ಆರ್. ಬಲಕುಂದಿ



