ಅರ್ಧ ಶತಮಾನಕ್ಕಿಂತಲೂ ಅಧಿಕ ಕಾಲದಿಂದ ನನೆಗುದಿಗೆ ಬಿದ್ದಿರುವ ಮಹತ್ವಾಕಾಂಕ್ಷಿ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ(ಯುಕೆಪಿ)-3 ರನ್ನು ರಾಷ್ಟ್ರೀಯ ಯೋಜನೆಯಾಗಿ ರೂಪಿಸಬೇಕು ಎನ್ನುವ ಹಲವು ದಶಕಗಳ ಕೂಗಿಗೆ ಬೆಳಗಾವಿ ಅಧಿವೇಶನ ಸಕಾರಾತ್ಮಕವಾಗಿ ಸ್ಪಂದಿಸುವ ಕೆಲಸ ಮಾಡಿದೆ. ಅಧಿವೇಶನದ ಕೊನೆಯ ದಿನ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರನ್ನು ರಾಷ್ಟ್ರೀಯ ಯೋಜನೆಯಾಗಿ ರೂಪಿಸಬೇಕು ಎನ್ನುವ ಐತಿಹಾಸಿಕ ನಿರ್ಣಯ ಕೈಗೊಂಡಿರುವುದು ಕೃಷ್ಣೆಯ ಮಕ್ಕಳ ಬದುಕಿಗೆ ಹೊಸ ಆಶಾಕಿರಣವಾಗಿದೆ.
ಐತಿಹಾಸಿಕ ನಿರ್ಣಯ:
ಬೆಳಗಾವಿ ಅಧಿವೇಶನದಲ್ಲಿ ಈ ಬಾರಿ ಉತ್ತರದ ಸಮಸ್ಯೆಗಳ ಬಗೆಗೆ ಗಂಭೀರ ಚರ್ಚೆ ನಡೆದದ್ದು ವಿಶೇಷ. ಇಡೀ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳು, ಅಭಿವೃದ್ಧಿ ಬಗೆಗೆ ಸಮಗ್ರ ಚರ್ಚೆ ನಡೆಯಿತು. ಅಧಿವೇಶನದುದ್ದಕ್ಕೂ ಉಭಯ ಸದನಗಳಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತು ಸುದೀರ್ಘ ಚರ್ಚೆ ನಡೆದು, ಕೇಂದ್ರ ಸರ್ಕಾರ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ನ್ನು ರಾಷ್ಟ್ರೀಯ ಯೋಜನೆಯಾಗಿ ರೂಪಿಸಬೇಕು. ಆ ಮೂಲಕ ರಾಜ್ಯದ ಮಹತ್ವಾಕಾಂಕ್ಷಿ ಯೋಜನೆ ಅನುಷ್ಠಾನಕ್ಕೆ ಬೆಂಬಲವಾಗಿ ನಿಲ್ಲಬೇಕು ಎನ್ನುವ ನಿರ್ಣಯ ಕೈಗೊಂಡಿದ್ದು ಐತಿಹಾಸಿಕ ದಾಖಲೆಯೆ ಸರಿ.
ಹಲವು ದಶಕಗಳ ಬೇಡಿಕೆ:
ತೊಬ್ಬಂತ್ತರ ದಶಕದಿಂದಲೇ ಯುಕೆಪಿ ಹಂತ-3ನ್ನು ರಾಷ್ಟ್ರೀಯ ಯೋಜನೆಯಾಗಿ ರೂಪಿಸಬೇಕು ಎನ್ನುವ ಕೂಗು ಆರಂಭಗೊಂಡಿದೆ. ಆರಂಭಿಕ ವರ್ಷಗಳಲ್ಲಿ ಈ ಕೂಗನ್ನು ಯಾವ ಸರ್ಕಾರಗಳೂ ಅಷ್ಟೊಂದು ಗಂಭೀರವಾಗಿ ಪರಿಗಣಿಸಲಿಲ್ಲ. ವರ್ಷಗಳು ಉರುಳಿದಂತೆ ಯುಕೆಪಿ ಯೋಜನೆ ಅನುಷ್ಠಾನ ವಿಳಂಬವಾಗುತ್ತ ಬಂದು ಇದೀಗ ಲಕ್ಷಾಂತರ ಕೋಟಿ ರೂ.ಗಳ ಅಗತ್ಯತೆಗೆ ಬಂದು ನಿಂತಿದೆ. ಇದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಎರಡೂ ಕಾರಣವಾಗಿವೆ.
ಯೋಜನೆಯನ್ನು ಹೇಗಾದರೂ ಮಾಡಿ ಪೂರ್ಣಗೊಳಿಸಿ, ರೈತರ ಜಮೀನುಗಳಿಗೆ ನೀರು ಹರಿಯುವಂತಾಗಲು ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ರೂಪಿಸಬೇಕು. ಇದೊಂದೆ ಇರುವ ಏಕೈಕ ಪರಿಹಾರವೆಂದು ಕೇಂದ್ರ ಉಕ್ಕು ಸಚಿವರಾಗಿರುವ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಬಾಗಲಕೋಟೆ ತೋಟಗಾರಿಕೆ ವಿವಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಯುಕೆಪಿ ಹಂತ-3 ರಾಷ್ಟ್ರೀಯ ಯೋಜನೆಯಾಗಿ ರೂಪಿಸಬೇಕು ಎಂದು ಕೇಂದ್ರವನ್ನು ಒತ್ತಾಯಿಸಿದ ಬಳಿಕ ಈ ಕೂಗೂ ಜೋರಾಯಿತು.
ವಿಳಂಬ ಸೃಷ್ಟಿಸಿದ ಅನಿವಾರ್ಯತೆ:
ಬಳಿಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ಅವಧಿಯಲ್ಲೂ ರಾಷ್ಟ್ರೀಯ ಯೋಜನೆ ಒತ್ತಾಯ ಕೇಳಿಬಂದಿತು. ಕೇಂದ್ರ ಸರ್ಕಾರ ಕೃಷ್ಣಾ ನ್ಯಾಯಾಧೀಕರಣ -2ರ ವರದಿಯ ಅಧಿಸೂಚನೆಯನ್ನು ಹೊರಡಿಸುವಲ್ಲಿ ವಿಳಂಬ ಮಾಡಿದ ಪರಿಣಾಮ ಇಂದು ರಾಜ್ಯ ಸರ್ಕಾರ ಯುಕೆಪಿ ಹಂತ-3ನ್ನು ರಾಷ್ಟ್ರೀಯ ಯೋಜನೆಯಾಗಿ ರೂಪಿಸುವಂತೆ ನಿರ್ಣಯ ಕೈಗೊಳ್ಳಬೇಕಾದ ಅನಿವಾರ್ಯತೆ ಬಂದೊದಗಿತು.
ಚುನಾವಣೆ ಅಸ್ತ್ರ:
ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಪ್ರಮುಖ ರಾಜಕೀಯ ಪಕ್ಷಗಳು ರಾಜಕೀಯ ಅಸ್ತ್ರವಾಗಿ ಬಳಕೆ ಮಾಡಿಕೊಂಡು ಅಧಿಕಾರ ಹಿಡಿದ ನಿದರ್ಶನಗಳು ಇವೆ. ಕೃಷ್ಣೆ ಹೆಸರಲ್ಲಿ ಅಧಿಕಾರಕ್ಕೆ ಬಂದ ಬಳಿಕ ರಾಜಕೀಯ ಪಕ್ಷಗಳು ನೀಡಿದ ಭರವಸೆ ಮರೆತಿದ್ದು, ಮುಳುಗಡೆ ಸಂತ್ರಸ್ತರಲ್ಲಿನ ಅಸಮಾಧಾನಕ್ಕೆ ಕಾರಣವಾಗಿದೆ. ಕಳೆದ ವರ್ಷ ನಡೆದ ಬೆಳಗಾವಿ ಅಧಿವೇಶನದ ವೇಳೆ ಬಾಗಲಕೋಟೆಯಲ್ಲಿ ಮುಳುಗಡೆ ಸಂತ್ರಸ್ತರು ಅಹೋರಾತ್ರಿ ಧರಣಿ ಕೈಗೊಂಡರು. ಆಗಿನಿಂದ ಸರ್ಕಾರ ಎಚ್ಚೆತ್ತುಕೊಂಡು ಯೋಜನೆ ಅನುಷ್ಠಾನದ ಗಂಭೀರ ಪ್ರಯತ್ನಕ್ಕೆ ಮುಂದಾಗಿ ಹಲವು ಕ್ರಮಗಳನ್ನು ಕೈಗೊಂಡಿದೆ.
ಯೋಜನಾನುಷ್ಠಾನಕ್ಕೆ ಕ್ರಮ:
ಹಂತ-3ರ ಅನುಷ್ಠಾನಕ್ಕೆ ನಾಲ್ಕು ಆರ್ಥಿಕ ವರ್ಷಗಳ ಕಾಲಮಿತಿ ಹಾಕಿಕೊಂಡಿದ್ದು, ಮೊದಲ ಹಂತದಲ್ಲಿ ಮುಳುಗಡೆ ಆಗುವ ಜಮೀನುಗಳಿಗೆ ಒಪ್ಪಿತ (ಕನ್ಸೆಂಟ್) ದರ ನಿಗದಿ ಮಾಡಿದೆ. ಪ್ರತಿ ಎಕರೆ ನೀರಾವರಿ ಭೂಮಿಗೆ 40 ಲಕ್ಷ ರೂ., ಒಣಬೇಸಾಯಿ ಭೂಮಿಗೆ 30 ಲಕ್ಷ ರೂ. ನಿಗದಿ ಮಾಡಿದೆ. ಕಾನೂನಾತ್ಮಕ ಕ್ರಮಗಳಿಗೂ ಮುಂದಾಗಿದೆ. ಇಂತಹ ಸನ್ನಿವೇಶದಲ್ಲಿ ಬೆಳಗಾವಿ ಅಧಿವೇಶನದಲ್ಲಿ ಯೋಜನಾನುಷ್ಠಾನದ ಬಗೆಗೆ ಬಹಳಷ್ಟು ಚರ್ಚೆ ನಡೆದ ಬಳಿಕ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ರೂಪಿಸಬೇಕು. ಯೋಜನಾನುಷ್ಟಾನಕ್ಕೆ ರಾಜ್ಯ ಸರ್ಕಾರಕ್ಕೆ ಬೆಂಬಲವಾಗಿ ನಿಲ್ಲಬೇಕು ಎನ್ನುವ ನಿರ್ಣಯ ಕೈಗೊಂಡಿರುವುದಕ್ಕೆ ವ್ಯಾಪಕ ಸ್ವಾಗತ ವ್ಯಕ್ತವಾಗಿದೆ.
ಸಂಸದರ ಇಚ್ಛಾಶಕ್ತಿ ಮುಖ್ಯ :
ರಾಜ್ಯ ಸರ್ಕಾರ ಕೈಗೊಂಡಿರುವ ಈ ನಿರ್ಣಯದ ಅನುಷ್ಠಾನಕ್ಕೆ ರಾಜ್ಯ ಸರ್ಕಾರದ ಜತೆಗೆ ಇಲ್ಲಿನ ಸಂಸದರು ಪಕ್ಷಾತೀತವಾಗಿ ಬೆಂಬಲಕ್ಕೆ ನಿಂತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವ ಕೆಲಸಕ್ಕೆ ಮುಂದಾಗಬೇಕಿದೆ. ಕೇಂದ್ರ ಸರ್ಕಾರ ಯಾವುದೇ ವಿಳಂಬವಿಲ್ಲದೆ ಕೃಷ್ಣಾ ನ್ಯಾಯಾಧೀಕರಣ -2ರ ಅಧಿಸೂಚನೆ ಹೊರಡಿಸಬೇಕು. ಹಾಗೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ರೂಪಿಸುವಂತೆ ಶೀರ್ಘ್ರ ನಿರ್ಧಾರ ಕೈಗೊಳ್ಳಬೇಕು. ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಗಳು ನಡೆಯಬೇಕು. ಅಂದಾಗ ಮಾತ್ರ ಆಲಮಟ್ಟಿ ಜಲಾಶಯದ ಎತ್ತರವನ್ನು 519.60 ರಿಂದ 524.256 ಮೀಟರ್‌ಗೆ ಹೆಚ್ಚಿಸಲು ಸಾಧ್ಯವಾಗಲಿದೆ. 5 ಲಕ್ಷಕ್ಕೂ ಅಧಿಕ ಎಕರೆ ಜಮೀನುಗಳಿಗೆ ನೀರಾವರಿ ಆಗಬೇಕು ಎನ್ನುವ ಕನಸು ನನಸಾಗಲಿದೆ.
- ವಿಠ್ಠಲ ಆರ್. ಬಲಕುಂದಿ




