ಬೆಳಗಾವಿ ಅಧಿವೇಶನ: ಮಾತೇ ಸಾಧನೆ ಆಗಬಾರದು!

ಬೆಳಗಾವಿಯಲ್ಲಿ ನಡೆದ ಅಧಿವೇಶನದುದ್ದಕ್ಕೂ ಉತ್ತರ ಕರ್ನಾಟಕದ ಸಮಸ್ಯೆಗಳು, ಅಭಿವೃದ್ಧಿ ಹಾಗೂ ಕೈಗೊಳ್ಳಬೇಕಿರುವ ಕ್ರಮಗಳ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಸಚಿವರು, ಶಾಸಕರು ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಬೆಳಗಾವಿ ಸುವರ್ಣ ಸೌಧದಲ್ಲಿ ಇದೇ ಮೊದಲ ಬಾರಿಗೆ ಉತ್ತರ ಕರ್ನಾಟಕದ ಸಮಸ್ಯೆಗಳು, ಅಭಿವೃದ್ಧಿ ಬಗೆಗೆ ಸುದೀರ್ಘವಾಗಿ ಮಾತನಾಡಿದ್ದಾರೆ. ಹಾಗಂತ ಮಾತೇ ಸಾಧನೆ ಆಗಬಾರದು. ಆಡಿದ ಮಾತುಗಳ ಅನುಷ್ಠಾನಕ್ಕೆ ಬರಬೇಕು.

ಉತ್ತರದ ಸಮಸ್ಯೆಗಳು:

ಇಡೀ ಸದನದುದ್ದಕ್ಕೂ ಕೃಷ್ಣಾ ಮೇಲ್ದಂಡೆ ಯೋಜನೆ, ಮಹಾದಾಯಿ ಯೋಜನೆ, ಸಮಾನಾಂತರ ಭದ್ರಾ ಅಣೆಕಟ್ಟು ನಿರ್ಮಾಣ, ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆ, ಬೆಳಗಾವಿ ಜಿಲ್ಲೆಯ ವಿಭಜನೆ ಕುರಿತು ಸಾಕಷ್ಟು ಚರ್ಚೆಗಳು ನಡೆದವು. ಚರ್ಚೆಯಲ್ಲಿ 39 ಶಾಸಕರು ಭಾಗವಹಿಸಿ ಮಾತನಾಡಿದರೆಂದು ಮುಖ್ಯಮಂತ್ರಿಗಳೇ ಸದನದಲ್ಲಿ ದೃಢಪಡಿಸಿದ್ದಾರೆ.

ಗಮನಾರ್ಹ ಸಂಗತಿ ಎಂದರೆ ಇಡೀ ಸದನದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ ಉತ್ತರ ಭಾಗದ ಸಮಸ್ಯೆಗಳ ಮೇಲೆ ಸದಸ್ಯರು ಪಕ್ಷಬೇಧ ಮರೆತು ಪಕ್ಷಾತೀತವಾಗಿ ಮಾತನಾಡಿದರು. ಸದನ ಆರಂಭಗೊಂಡ ಎರಡನೇ ದಿನದಿಂದಲೇ ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನ ಕುರಿತು ಆರಂಭಗೊಂಡ ಚರ್ಚೆ ಸದನದ ಕೊನೆ ದಿನದವರೆಗೂ ನಡೆಯಿತು.

ಸದನದ ಕಲಿಗಳು:

ಯುಕೆಪಿ ಹಂತ-3ರ ಅನುಷ್ಠಾನಕ್ಕೆ ಇರುವ ಸಮಸ್ಯೆಗಳು, ಪರಿಹಾರೋಪಾಯಗಳು ಕುರಿತು ನಡೆದ ಚರ್ಚೆಯ ವೇಳೆ ರಾಜ್ಯ ಹಾಗೂ ಕೇಂದ್ರದ ಜವಾಬ್ದಾರಿಗಳ ಕುರಿತು ಆರೋಗ್ಯಕರ ಚರ್ಚೆ ನಡೆಯಿತು. ಕೃಷ್ಣ ಮೇಲ್ದಂಡೆ ಯೋಜನೆ ವಿಷಯದಲ್ಲಿ ಕೆಳಮನೆಯಲ್ಲಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಮೇಲ್ಮನೆಯಲ್ಲಿ ಪಿ.ಎಚ್. ಪೂಜಾರ ಮತ್ತು ಎಚ್.ಆರ್. ನಿರಾಣಿ ನಿತ್ಯವೂ ಒಂದಿಲ್ಲೊಂದು ಅವಕಾಶಗಳನ್ನು ಬಳಕೆ ಮಾಡಿಕೊಂಡು ಯುಕೆಪಿ ಅನುಷ್ಠಾನದ ಕುರಿತು ಮಾತನಾಡಿದರು.

ಸರ್ಕಾರದಿಂದ ಸಮರ್ಥನೆ:

ಕಾಂಗ್ರೆಸ್ಸಿನ ಬಹುತೇಕ ಸಚಿವರು, ಶಾಸಕರು ಯುಕೆಪಿ ಹಂತ -3ರ ಅನುಷ್ಠಾನ ಹಿನ್ನೆಲೆಯಲ್ಲಿ ಸಂಪುಟ ಸಭೆ ಕೈಗೊಂಡ ನಿರ್ಣಯಗಳನ್ನು ಸಮರ್ಥಿಸಿಕೊಳ್ಳುವ ಕೆಲಸ ಮಾಡಿದರು. ನಾಲ್ಕು ಆರ್ಥಿಕ ವರ್ಷಗಳಲ್ಲಿ ಹಂತ -3 ರ ಯೋಜನೆ ಅನುಷ್ಠಾನಕ್ಕೆ ಪ್ರತಿ ವರ್ಷ 15-20 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡುವ ಮೂಲಕ ಯೋಜನೆ ಪೂರ್ಣಗೊಳಿಸಬೇಕು.

ಮೊದಲ ಹಂತದಲ್ಲಿ ಮುಳುಗಡೆ ಆಗುವ ಜಮೀನುಗಳಿಗೆ ನಿಗದಿ ಪಡಿಸಿದ ಒಪ್ಪಿದ ದರ ರೈತರಿಗೆ ತಲುಪಿಸುವ ಕೆಲಸ, ಬಳಿಕ ಉಳಿದಂತೆ ಕಾಲುವೆ ಕಾಮಗಾರಿ, ಪುನರ್ವಸತಿ, ಆಲಮಟ್ಟಿ ಎತ್ತರ ಹೆಚ್ಚಳ ಬಗೆಗೆ ಮಾತನಾಡಿದರು. ಯಾರಿಂದಲೂ ವಿರೋಧ ಬಾರದ ರೀತಿಯಲ್ಲಿ ಮುಳುಗಡೆ ಜಮೀನುಗಳಿಗೆ ದರ ನಿಗದಿ ಪಡಿಸಿದ್ದು ಸರ್ಕಾರದ ಸಾಧನೆ ಎನ್ನುವುದನ್ನು ಆಡಳಿತ ಪಕ್ಷದ ಸದಸ್ಯರು ಸಮರ್ಥಿಸಿಕೊಂಡರು.

ಅಣೆಕಟ್ಟು ಎತ್ತರ ಹೆಚ್ಚಳ:

ಕೇಂದ್ರ ಸರ್ಕಾರ ಕೃಷ್ಣಾ ನ್ಯಾಯಾಧೀಕರಣ-2ರ ಕುರಿತು ಅಧಿಸೂಚನೆ ಹೊರಡಿಸದ ಹೊರತು ಯುಕೆಪಿ ಹಂತ-3ರ ಅನುಷ್ಠಾನ ಕಷ್ಟವಾಗಲಿದೆ. ಆಲಮಟ್ಟಿ ಜಲಾಶಯದ ಎತ್ತರವನ್ನು 519 ರಿಂದ 524.256 ಮೀಟರ್‌ಗೆ ಹೆಚ್ಚಿಸಿದಾಗ ಮಾತ್ರ ರಾಜ್ಯಕ್ಕೆ ಹಂಚಿಕೆ ಆಗಿರುವ ನೀರನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಲು ಸಾಧ್ಯವಾಗಲಿದೆ ಎನ್ನುವ ಕುರಿತು ಉಭಯ ಸದನಗಳಲ್ಲೂ ಗಂಭೀರ ಚರ್ಚೆ ನಡೆಯಿತು.

ಕೇಂದ್ರದತ್ತ ಬೊಟ್ಟು:

ಚರ್ಚೆಯ ವೇಳೆ ಬಿಜೆಪಿ ಸದಸ್ಯರು ಕೇಂದ್ರ ಸರ್ಕಾರ ಕೃಷ್ಣಾ ನ್ಯಾಯಾಧೀಕರಣ-2ರ ಕುರಿತು ಅಧಿಸೂಚನೆ ಹೊರಡಿಸಲು ತಾಂತ್ರಿಕ ಸಮಸ್ಯೆಗಳಿವೆ. ವಿಷಯ ನ್ಯಾಯಾಲದಲ್ಲಿದೆ ಎಂದು ಕೇಂದ್ರದ ಪರ ಬಿಜೆಪಿ ಉಪನಾಯಕ ಅರವಿಂದ ಬೆಲ್ಲದ ಸೇರಿದಂತೆ ಹಲವರು ಬ್ಯಾಟಿಂಗ್ ಮಾಡಿದರು. ಇದಕ್ಕೆ ಅಷ್ಟೆ ತೀಕ್ಷ್ಣವಾಗಿ ಆಡಳಿತಾರೂಢ ಪಕ್ಷದ ಸಚಿವರು, ಶಾಸಕರು ತಿರುಗುತ್ತರ ನೀಡಿದರು.

ಒಂದು ಹಂತದಲ್ಲಿ ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಎಚ್. ಕೆ. ಪಾಟೀಲ ಅವರು ಕಾವೇರಿ ಮತ್ತು ಮಹಾದಾಯಿ ವಿಚಾರದಲ್ಲಿ ನದಿ ನೀರು ಹಂಚಿಕೆ ವಿಷಯ ನ್ಯಾಯಾಲದಲ್ಲಿದ್ದರೂ, ಷರತ್ತಿಗೊಳಪಟ್ಟು ಅಧಿಸೂಚನೆ ಹೊರಡಿಸಲಾಗಿದೆ. ಕೃಷ್ಣೆಯ ವಿಚಾರದಲ್ಲಿ ಏಕೆ ರಾಜಕಾರಣ ಎಂದು ಬಿಜೆಪಿ ಉಪನಾಯಕ ಬೆಲ್ಲದ ಅವರನ್ನು ಪ್ರಶ್ನಿಸಿದರು. ಬಳಿಕ ಆಡಳಿತ ಮತ್ತು ಪ್ರತಿಪಕ್ಷದವರೆಲ್ಲ ಸೇರಿದ ಯುಕೆಪಿ ಹಂತ -3ರ ಯೋಜನೆ ಪೂರ್ಣಗೊಳಿಸಲು ಕೃಷ್ಣಾ ನ್ಯಾಯಾಧೀಕರಣ -2ರ ಅಧಿಸೂಚನೆ ಹೊರಡಿಸುವಂತೆ ಒತ್ತಡ ಹಾಕುವ ನಿರ್ಧಾರಕ್ಕೆ ಬಂದಿರುವುದು ಆಶಾದಾಕ ಬೆಳವಣಿಗೆ ಎಂದು ವಿಶ್ಲೇಷಿಸಬಹುದು.

ರಾಜಕಾರಣ ಬೇಡ:

ಉತ್ತರ ಕರ್ನಾಟಕದ ಮಹತ್ವಾಕಾಂಕ್ಷಿ ಯೋಜನೆಗಳ ಅನುಷ್ಠಾನದ ಜತೆಗೆ ಮೂಲ ಸೌಕರ್ಯಗಳ ಕೊರತೆ, ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯ ಹಿಂದುಳಿದಿರುವಿಕೆ ಬಗೆಗೂ ಚರ್ಚೆ ನಡೆದದ್ದು ವಿಶೇಷ ಎನ್ನಬಹುದಾಗಿದೆ. ಸಮಸ್ಯೆಗಳ ಮಧ್ಯೆಯೇ ಅಧಿವೇಶನದುದ್ದಕ್ಕೂ ಮುಖ್ಯಮಂತ್ರಿಗಳ ಬದಲಾವಣೆ, ಸಂಪುಟ ವಿಸ್ತರಣೆ ಬಗೆಗೆ ನಿತ್ಯ ಚರ್ಚೆಗಳು ನಡೆದವು. ಪ್ರತಿಪಕ್ಷಗಳೂ ಸದಾ ಮುಖ್ಯಮಂತ್ರಿಗಳ ಕಾಲೆಳೆಯುವ ನಿರಂತರ ಪ್ರಯತ್ನ ನಡೆಸಿದರು.

ಮುಂದೆಯೂ ನಾನೇ ಸಿಎಂ:

ಅಧಿವೇಶನದ ಕೊನೆ ದಿನವಂತೂ ಪ್ರತಿಪಕ್ಷ ನಾಯಕ ಆರ್. ಅಶೋಕ್, ಶಾಸಕರಾದ ಸುನೀಲ ಕುಮಾರ, ಬಸನಗೌಡ ಪಾಟೀಲ ಅವರು ನಾಯಕತ್ವ ಬದಲಾವಣೆ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸುವ ಮೂಲಕ “ಮಂದಿನ ದಿನಗಳಲ್ಲೂ ನಾನೇ ಮುಖ್ಯಮಂತ್ರಿ” ಎನ್ನುವ ಮಾತನ್ನು ಹೇಳಿಸುವಲ್ಲಿ ಯಶಸ್ವಿಯಾದರು.

ಅಧಿವೇಶನ ಆರಂಭಕ್ಕೂ ಮೊದಲಿನಿಂದಲೂ ಚರ್ಚೆಗೆ ಗ್ರಾಸವಾಗಿರುವ ನಾಯಕತ್ವ ಬದಲಾವಣೆ ವಿಷಯ ಬೆಳಗಾವಿಯಲ್ಲಿ ನಿತ್ಯ ಡಿನ್ನರ್ ಪಾರ್ಟಿಗಳು ನಡೆಯುವ ಮೂಲಕ ಹಾಗೆ ಮುಂದುವರಿಯಿತು. ಅಧಿವೇಶನದ ಬಳಿಕ ಅದು ಇನ್ನಷ್ಟು ಚರ್ಚೆಗೆ ಒಳಪಡಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಚರ್ಚಿತ ವಿಷಯ ಅನುಷ್ಠಾನ:

ಕಾಂಗ್ರೆಸ್ಸಿನಲ್ಲಿ ನಾಯಕತ್ವ ಬದಲಾವಣೆ ವಿಷಯ ಏನೇ ಆಗಿರಲಿ, ಅಧಿವೇಶನದುದಕ್ಕೂ ಇದೇ ಮೊದಲಬಾರಿ ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನ ಸೇರಿದಂತೆ ಉತ್ತರದ ಸಮಸ್ಯೆಗಳ ಮೇಲೆ ಸದಸ್ಯರು ಸದನದಲ್ಲಿ ಅತ್ಯಂತ ಗಂಭೀರವಾಗಿ ಚರ್ಚಿಸಿದ್ದು ಸಮಾಧಾನಕರ ಸಂಗತಿ ಆಗಿದೆ. ಉತ್ತರದ ಸಮಸ್ಯೆಗಳು ಕೇವಲ ಚರ್ಚೆಗೆ ಸೀಮಿತವಾಗದೇ ಅವುಗಳ ಪ್ರಾಮಾಣಿಕ ಅನುಷ್ಠಾನಕ್ಕೆ ಸರ್ಕಾರ ಮುಂದಾಗಬೇಕಿದೆ. ಅಂದಾಗ ಮಾತ್ರ ಉತ್ತರ, ದಕ್ಷಿಣ ನಡುವಿನ ತಾರತಮ್ಯ ನಿವಾರಿಸಲು ಸಾಧ್ಯವಾಗಲಿದೆ ಎನ್ನುವ ಜನತೆಯ ಆಶಯವಾಗಿದೆ.

  • ವಿಠ್ಠಲ ಆರ್. ಬಲಕುಂದಿ
Scroll to Top