ಮೇಟಿ ಪುತ್ರರ ಕ್ಷೇತ್ರ ಪ್ರವಾಸ; ಬಿಜೆಪಿಯಲ್ಲಿ ಹೊಸಬರ ಸಿದ್ಧತೆ!

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಅಧಿವೇಶನ ಮುಕ್ತಾಯಗೊಳ್ಳುತ್ತಿದ್ದಂತೆ ಪ್ರಮುಖ ರಾಜಕೀಯ ಪಕ್ಷಗಳು ರಾಜ್ಯದಲ್ಲಿ ನಡೆಯಬೇಕಿರುವ ಉಪಚುನಾವಣೆ ಚಟುವಟಿಕೆಗಳತ್ತ ಚಿತ್ತೈಸಲಿವೆ. ಬಾಗಲಕೋಟೆ ವಿಧಾನಸಭೆ ಕ್ಷೇತ್ರದಲ್ಲಿ ಈಗಾಗಲೇ ತೆರೆಮರೆಯಲ್ಲಿ ಉಪಚುನಾವಣೆ ಪ್ರಕ್ರಿಯೆಗಳು ಆರಂಭಗೊಂಡಿವೆ.

ದಿ.ಶಾಸಕ ಎಚ್.ವೈ. ಮೇಟಿ ಅವರ ಪುತ್ರ ಉಮೇಶ ಮೇಟಿ ಕ್ಷೇತ್ರದಾದ್ಯಂತ ಓಡಾಟ ಆರಂಭಿಸಿದ್ದಾರೆ. ಬಿಜೆಪಿ ಪಾಳೆಯದಲ್ಲೂ ಕ್ಷೇತ್ರದಲ್ಲಿನ ಕಾರ್ಯಕರ್ತರು, ಅಭಿಮಾನಿಗಳ ಭೇಟಿಯನ್ನು ಮುಖಂಡರು ಶುರು ಮಾಡಿಕೊಂಡಿದ್ದಾರೆ. ದಿ. ಶಾಸಕ‌ ಮೇಟಿ ಅವರ ಕುಟುಂಬಕ್ಕೆ ಟಿಕೆಟ್ ಗ್ಯಾರಂಟಿ ಎನ್ನಲಾಗುತ್ತಿದೆ. ಆ ನಿಟ್ಟಿನಲ್ಲಿ ಮೇಟಿ ಅವರ ಪುತ್ರರು ಕ್ಷೇತ್ರ ಪ್ರವಾಸ ನಡೆಸಿದ್ದಾರೆ. ಬಿಜೆಪಿಯಲ್ಲೂ ಇಂತಹ ಚಟುವಟಿಕೆಗಳು ನಡೆದಿವೆ.

ಬಿಜೆಪಿ ನಡೆ ನಿಗೂಢ:

ದೇಶದ ರಾಜಕೀಯ ಇತಿಹಾಸದಲ್ಲಿ ಹಲವು ಅಚ್ಚರಿಗಳಿಗೆ ಕಾರಣವಾಗಿರುವ ಬಿಜೆಪಿ, ಬಾಗಲಕೋಟೆ ವಿಧಾನಸಭೆ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಆಯ್ಕೆ ವಿಷಯದಲ್ಲೂ ಕುತೂಹಲದ ಹೆಜ್ಜೆ ಹಾಕಲಿದೆ ಎನ್ನುವ ವಾತಾವರಣ ಸೃಷ್ಟಿ ಆಗುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಓಡಾಡುತ್ತಿದ್ದ ಹತ್ತಾರು ಹೆಸರುಗಳನ್ನು ಕೈಬಿಟ್ಟು, ಯಾರೂ ಊಹಿಸದ ಬಿಹಾರದ ಮಂತ್ರಿ ನಿತಿನ್ ನಬಿನ್ ಅವರನ್ನು ಕರೆ ತಂದು ಪಕ್ಷದ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಕೂಡಿಸಿದೆ.

ಹೊಸ ಪ್ರಯೋಗಕ್ಕೆ ಅಖಾಡ:

ಈಗಾಗಲೇ ಹಲವು ಬಾರಿ ರಾಜಕಾರಣದಲ್ಲಿ ಇಂತಹ‌ ಅನೇಕ ಅಚ್ಚರಿಯ ಇತಿಹಾಸ ಬರೆದಿರುವ ಬಿಜೆಪಿ, ಬಾಗಲಕೋಟೆ ವಿಧಾನಸಭೆ ಉಪ ಚುನಾವಣೆಯಲ್ಲೂ ಹೊಸ ಹೆಜ್ಜೆ ಇಡುವ ಆಲೋಚನೆಯಲ್ಲಿದೆ ಎನ್ನುವ ಮಾತುಗಳು ಬಿಜೆಪಿ ಮೊಗಸಾಲೆಯಲ್ಲಿ ಓಡಾಡುತ್ತಿವೆ.

ಪಕ್ಷದ ಸ್ಥಳೀಯ ಮಟ್ಟದಲ್ಲಿ ಮುಖಂಡರ ಮಧ್ಯೆ ಬಗೆಹರಿಸಲಾಗದ ಬಿಕ್ಕಟ್ಟು ಉಂಟಾಗಿದ್ದು, ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲಿ ಯಾರಿಂದಲೂ‌ ಗಂಭೀರ ಪ್ರಯತ್ನ ಆಗಿಲ್ಲ. ಇತ್ತೀಚೆಗಷ್ಟೆ, ಕೇಂದ್ರ ಸಚಿವರೊಬ್ಬರು ಉಭಯ ಮುಖಂಡರ ಜತೆ ಮಾತುಕತೆ ನಡೆಸಿದ್ದಾರೆ ಎಂದು‌ ಹೇಳಲಾಗುತ್ತಿದ್ದು, ಯಾವುದೇ ತಾರ್ಕಿಕ ಅಂತ್ಯ ಕಂಡಿಲ್ಲ.

ಅಸಮಾಧಾನಕ್ಕೆ ಮದ್ದು:

ಉಪ ಚುನಾವಣೆಯಲ್ಲಿ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಇಲ್ಲಿಯೂ ಹೊಸ ತಲೆಮಾರನ್ನು ಪಕ್ಷದ ಮುಂದಿನ ನಾಯಕತ್ವಕ್ಕೆ ಸಜ್ಜುಗೊಳಿಸುವ ಪ್ರಯತ್ನ ನಡೆಯಲಿದೆ ಕಾಯ್ದು ನೋಡಿ ಎನ್ನುವ ಮಾತುಗಳು ಪಕ್ಷದ ಕಾರ್ಯಕರ್ತರ ವಲಯದಲ್ಲಿ ಶುರುವಾಗಿವೆ.

ಚರಂತಿಮಠ ಸೂಕ್ತ ಎದುರಾಳಿ:

ಬಾಗಲಕೋಟೆ ವಿಧಾನ ಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಸಮರ್ಥವಾಗಿ ಎದುರಿಸಲು ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರೇ ಅಭ್ಯರ್ಥಿ ಆಗಬೇಕು. ಅವರು ಅಭ್ಯರ್ಥಿ ಆದಲ್ಲಿ ಮಾತ್ರ ಕಾಂಗ್ರೆಸ್ಸನ್ನು ಎದುರಿಸಲು ಸಾಧ್ಯವಾಗಲಿದೆ ಎನ್ನುವ ಆಶಯ ಅವರ ಬೆಂಬಲಿಗರು ಹಾಗೂ ಅಭಿಮಾನಿಗಳದ್ದಾಗಿದೆ. ಆದರೆ ಕ್ಷೇತ್ರದಲ್ಲಿನ ನಿಜ ಪರಿಸ್ಥಿತಿ ಅಂದುಕೊಂಡಷ್ಟು ಸುಲಭವಾಗಿಲ್ಲ ಎನ್ನುವುದನ್ನು ಯಾರೆ ಆದರೂ ಒಪ್ಪಿಕೊಳ್ಳುತ್ತಾರೆ.

ಹೊರ ಶಕ್ತಿಗಳ ಕುಮ್ಮಕ್ಕು:

ಪಕ್ಷದ ಹಿರಿಯ ಮುಖಂಡರಲ್ಲಿ ಬಗೆಹರಿಸಲಾಗದಷ್ಟು ಅಸಮಾಧಾನ ಮಡುಗಟ್ಟಿದ್ದು, ಇದನ್ನು ಒಳಗಿನ ಶಕ್ತಿಗಿಂತ, ಕ್ಷೇತ್ರದ ಹೊರಗಿನ ಶಕ್ತಿಗಳು ಪೋಷಿಸುತ್ತಿವೆ ಎನ್ನುವುದು ಬಹಿರಂಗ ಗುಟ್ಟು. ಇದಕ್ಕೆಲ್ಲ ಅಂತ್ಯಹಾಡಿ, ಪಕ್ಷದಲ್ಲಿ ಒಗ್ಗಟ್ಟು ತರುವ ಮೂಲಕ ಭವಿಷ್ಯದಲ್ಲಿ ಪಕ್ಷ ಸಂಘಟನೆಯನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಹೊಸ ಮುಖದ ಶೋಧಕ್ಕೆ ಮುಂದಾದಲ್ಲಿ ಅಚ್ಚರಿ ಪಡಬೇಕಿಲ್ಲ.

ಆಸಕ್ತರ ಕೊರತೆ ಇಲ್ಲ:

ಉಪ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎನ್ನುವ ಇರಾದೆ ಕೆಲವರಲ್ಲಿ ಮನೆ ಮಾಡಿದೆ. ಆಪ್ತರಲ್ಲಿ ಹೇಳಿಕೊಂಡವರೂ ಇದ್ದಾರೆ. ಆದರೆ ಬಹಿರಂಗವಾಗಿ ಹೇಳಿಕೊಳ್ಳಲು ಆಗದ ಸ್ಥಿತಿಯಲ್ಲಿದ್ದಾರೆ. ಚರಂತಿಮಠರು ಅಭ್ಯರ್ಥಿ ಆಗಲು ಒಪ್ಪದಿದ್ದರೆ ತಮಗೆ ಅವಕಾಶ ಕೊಡಿ ಎಂದು ಕೇಳುವವರು ಇದ್ದು, ಚುನಾವಣೆ ಹತ್ತಿರದಲ್ಲಿ ಅವರು ತಮ್ಮ ಹಕ್ಕು ಮಂಡಿಸುವ ವಿಚಾರದಲ್ಲಿ ಇದ್ದಂತೆ ಕಾಣಿಸುತ್ತಿದೆ.

ಹೇಗೂ ಉಪ ಚುನಾವಣೆ:

ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದೆ. ಸರ್ಕಾರದಲ್ಲಿನ ಜನಪ್ರತಿನಿಧಿಗಳೇ ಮುಂದೆ ನಿಂತು ಚುನಾವಣೆ ಮಾಡಲಿದ್ದಾರೆ. ಇಂತಹ ಸನ್ನಿವೇಶದಲ್ಲಿ ಹೊಸಮುಖ ಕಣಕ್ಕೆ ಇಳಿಸುವ ಮೂಲಕ ಹೊಸ ಪ್ರಯೋಗ ಮಾಡೋಣ. ಪಕ್ಷದ ಶಕ್ತಿ, ಹೊಸ ಮುಖದ ಶಕ್ತಿ ಗೊತ್ತಾಗಲಿದೆ. ಜತೆಗೆ ಅಸಮಾಧಾನಿತರ ಶಕ್ತಿಯೂ ಅನಾವರಣಗೊಳ್ಳಲಿದೆ. ಭವಿಷ್ಯದಲ್ಲಿ ಪಕ್ಷದ ಸಶಕ್ತ ಸಂಘಟನೆಗೂ ಅನುಕೂಲವಾಗಲಿದೆ ಎನ್ನುವ ಲೆಕ್ಕಾಚಾರದ ಮಾತುಗಳು ಬಿಜೆಪಿ ಪಾಳೆಯದಲ್ಲಿ ಓಡಾಡುತ್ತಿವೆ. ಬಿಜೆಪಿ ವರಿಷ್ಠರು ಕೊನೆ ಗಳಿಗೆಯಲ್ಲಿ ಹೇಗೆ ದಾಳ ಉರುಳಿಸಲಿದ್ದಾರೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ಕಾಯ್ದು ನೋಡಬೇಕಷ್ಟೆ.

  • ವಿಠ್ಠಲ ಆರ್. ಬಲಕುಂದಿ
Scroll to Top