ತೋಟಗಾರಿಕೆ ಬೆಳೆಗಳಿಗೆ ಹೆಸರಾದ ಬಾಗಲಕೋಟೆ ಜಿಲ್ಲೆಯಲ್ಲಿ ಕಳೆದ ಒಂದೂವರೆ ದಶಕದ ಹಿಂದೆ ರಾಜ್ಯ ಸರ್ಕಾರ ಮುಳುಗಡೆ ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸಲು ಸ್ವಾಧೀನ ಮಾಡಿಕೊಂಡ ನಾಲ್ಕು ನೂರಕ್ಕೂ ಅಧಿಕ ಎಕರೆ ವಿಶಾಲ ಪ್ರದೇಶದಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ ಸ್ಥಾಪನೆ ಆಗಿದೆ. ಅಂದಿನಿಂದ ಇಂದಿನವರೆಗೂ ವಿವಿ ಹತ್ತು ಹಲವು ಏಳು ಬೀಳುಗಳ ಮಧ್ಯೆ ಇಲ್ಲಿಯವರೆಗೂ ನಡೆದುಕೊಂಡು ಬಂದಿದೆ.
ಸಮಸ್ಯೆಗಳ ಸುಳಿಯಲ್ಲಿ ವಿವಿ:
ಇಂದಿಗೂ ವಿವಿ ಸಮಸ್ಯೆಗಳ ಮಧ್ಯೆಯೇ ಸಾಧನೆ ಹಾದಿಯಲ್ಲಿ ಸಾಗಿದ್ದರೂ ಅಲ್ಲಿ ಆಗಬೇಕಾದಷ್ಟು ಕೆಲಸ ಆಗುತ್ತಿಲ್ಲ. ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ಎಷ್ಟೆಲ್ಲ ಬೆಳವಣಿಗೆಗಳು ಆಗುತ್ತಿವೆ. ಆದರೆ ಬಾಗಲಕೋಟೆಯ ತೋವಿವಿಯಲ್ಲಿ ಅಗತ್ಯ ನೀರಿನ ಸಮಸ್ಯೆಯಿಂದ ಸಂಶೋಧನೆ ಕ್ಷೇತ್ರದವರೆಗೂ ಸಮಸ್ಯೆಗಳಿವೆ.
ಸಂಶೋಧನೆಗೆ ಅನುದಾನವಿಲ್ಲ:
ಅಚ್ಚರಿಯ ಸಂಗತಿ ಎಂದರೆ ತೋಟಗಾರಿಕೆ ಕ್ಷೇತ್ರದಲ್ಲಿನ ಸಂಶೋಧನಾ ಕ್ಷೇತ್ರಕ್ಕೆ ಸರ್ಕಾರ ಅನುದಾನವನ್ನೆ ಬಿಡುಗಡೆ ಮಾಡಿಲ್ಲ. ತೋಟಗಾರಿಕೆ ವಿಜ್ಞಾನಗಳ ವಿವಿಯಲ್ಲಿ ತೋಟಗಾರಿಕೆ ಕ್ಷೇತ್ರದಲ್ಲಿ ನಡೆಯುವ ಸಂಶೋಧನೆಗಳ ಫಲ ನೇರವಾಗಿ ರೈತರ ಜಮೀನುಗಳಿಗೆ ತಲುಪಬೇಕು. ಆ ಮೂಲಕ ರೈತರು ತೋಟಗಾರಿಕೆ ಕ್ಷೇತ್ರದಲ್ಲಿನ ಸಂಶೋಧನೆಗಳ ಪ್ರಯೋಜನ ಪಡೆದುಕೊಳ್ಳಬೇಕು. ರೈತರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎನ್ನುವ ಮಹದುದ್ದೇಶದಿಂದ ವಿವಿ ಸ್ಥಾಪನೆಗೊಂಡಿದೆ.
ಲ್ಯಾಬ್ ಟು ಲ್ಯಾಂಡ್ ಬರಿ ಘೋಷಣೆ:
ಸರ್ಕಾರ ಸಂಶೋಧನಾ ಕ್ಷೇತ್ರಕ್ಕೆ ಅನುದಾನ ನೀಡದೇ ಹೋದಲ್ಲಿ, ವಿವಿಯಲ್ಲಿನ ವಿಜ್ಞಾನಿಗಳು ಮಾಡುವುದಾದರೂ ಏನು ಎನ್ನುವ ಪ್ರಶ್ನೆ ಸಹಜವಾಗಿ ಹುಟ್ಟಿಕೊಳ್ಳುತ್ತದೆ. ಹವಾಮಾನದಲ್ಲಾಗುತ್ತಿರುವ ಬದಲಾವಣೆಗೆ ತಕ್ಕಂತೆ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಹೊಸ ಹೊಸ ತಾಂತ್ರಿಕತೆ ಬೆಳೆವಣಿಗೆ ಹಾಗೂ ಸಂಶೋಧನೆಗಳು ನಡೆಯಬೇಕು. ‘ಲ್ಯಾಬ್ ಟು ಲ್ಯಾಂಡ್ ಸಂಸ್ಕೃತಿ’ ಪ್ರತಿ ಹಳ್ಳಿಯ ಜಮೀನಿಗೂ ತಲುಪಬೇಕಿದೆ. ಇಂತಹ ಸನ್ನಿವೇಶದಲ್ಲಿ ಸರ್ಕಾರ ಸಂಶೋಧನೆ ಕ್ಷೇತ್ರಕ್ಕೆ ಅನುದಾನ ನೀಡಲಿಲ್ಲವೆಂದಾದಲ್ಲಿ ವಿವಿ ಇದ್ದು ಪ್ರಯೋಜನ ಏನು ಎಂದು ರೈತರು ಪ್ರಶ್ನಿಸುವಂತಾಗಿದೆ.
ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯ ರಾಜ್ಯದ ಏಕೈಕ ತೋಟಗಾರಿಕೆ ವಿವಿ ಎನ್ನುವ ಹೆಸರು ಮಾಡಿದೆ. ಇಲ್ಲಿ ತೋಟಗಾರಿಕೆ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ, ಹೊಸ ತಳಿಗಳ ಸಂಶೋಧನೆ ಪ್ರಕ್ರಿಯೆ ನಿತ್ಯ ನಡೆಯಬೇಕಿದೆ. ಅನುದಾನವೇ ಇಲ್ಲವೆಂದಾದಲ್ಲಿ, ಸಂಶೋಧನೆ ಪ್ರಕ್ರಿಯೆಗಳು ನಡೆಯುವುದಾದರೂ ಹೇಗೆ? ಇಂದಿನ ಆಧುನಿಕ ತಂತ್ರಜ್ಞಾನ ವ್ಯವಸ್ಥೆಯಲ್ಲಿ ರೈತರು ಹೊಸ ವ್ಯವಸ್ಥೆಗಳಿಗೆ ಹೊಂದಿಕೊಳ್ಳುವುದಾದರೂ ಹೇಗೆ ಎನ್ನುವ ಪ್ರಶ್ನೆ ಎದುರಾಗುತ್ತದೆ.
ಇಡೀ ರಾಜ್ಯದ ತೋಟಗಾರಿಕೆ ವ್ಯವಸ್ಥೆಗೆ ಮಾರ್ಗದರ್ಶಿ ಆಗಿರಬೇಕಿರುವ ತೋವಿವಿ ಸಂಶೋಧನೆ ವಿಭಾಗ ಅನುದಾನ ಕೊರತೆ ಎದುರಿಸುತ್ತಿದೆ ಎನ್ನುವ ಕುಲಪತಿಗಳ ಮಾತನ್ನು ರೈತರು ಅರಗಿಸಿಕೊಳ್ಳುವುದು ಕಷ್ಟವಾಗಿದೆ.
ಗುತ್ತಿಗೆ ನೌಕರರಿಗೆ ವೇತನ ತೊಂದರೆ:
ತೋವಿವಿಯಲ್ಲಿ ಕೇವಲ ಸಂಶೋಧನಾ ವಿಭಾಗ ಮಾತ್ರ ಅನುದಾನ ಸಮಸ್ಯೆ ಎದುರಿಸುತ್ತಿಲ್ಲ. ವಿವಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸಿಬ್ಬಂದಿಗೂ ವೇತನ ಪಾವತಿಸಲು ಅನುದಾನದ ಕೊರತೆ ಇದೆ. ಗುತ್ತಿಗೆ ನೌಕರರ ವೇತನ ಪಾವತಿಗೆ 8 ಕೋಟಿ ರೂ. ಅನುದಾನದ ಅಗತ್ಯವಿದ್ದು, ಕೇವಲ. 50 ಲಕ್ಷ ರೂಪಾಯಿ ಮಾತ್ರ ಅನುದಾನ ಬಂದಿದೆಯಂತೆ. ವಿವಿಯ ಆಗು ಹೋಗುಗಳನ್ನು ಸ್ಥಳೀಯವಾಗಿರುವ ಲಭ್ಯ ಸಂಪನ್ಮೂಲ ಬಳಕೆ ಮಾಡಿಕೊಂಡು ಸರಿದೂಗಿಸುವಂತೆ ಸರ್ಕಾರದ ನಿರ್ದೇಶನವಿದೆಯಂತೆ.
ಸ್ಥಳೀಯ ಸಂಪನ್ಮೂಲದಲ್ಲಿ ಮೇಳ:
ಮೂರು ದಿನಗಳ ಕಾಲ ನಡೆಯುವ ರಾಷ್ಟ್ರೀಯ ತೋಟಗಾರಿಕೆ ಮೇಳ ಆಯೋಜನೆಗೂ ಸ್ಥಳೀಯವಾಗಿಯೇ ಸ್ಪಾನ್ಸರ್ ಗಳಿಂದ ಸಂಪನ್ಮೂಲ ಸಂಗ್ರಹಿಸಬೇಕಿದೆ ಎನ್ನುವುದು ಕುಲಪತಿಗಳ ಹೇಳಿಕೆಯಾಗಿದೆ.
- ವಿಠ್ಠಲ ಆರ್. ಬಲಕುಂದಿ



