ಬಾಗಲಕೋಟೆ: ಕುಡಚಿ – ಬಾಗಲಕೋಟೆ ರೈಲ್ವೆ ಮಾರ್ಗ ಪೂರ್ಣಗೊಳಿಸಲು ಹಾಗೂ ಲೋಕಾಪುರ – ಧಾರವಾಡ ಹೊಸ ರೈಲ್ವೆ ಮಾರ್ಗ ರಚನೆಗಾಗಿ ರಾಜ್ಯ ರೈಲ್ವೆ ಹೋರಾಟ ಸಮಿತಿಯಿಂದ ನಿರಂತರ ಹೋರಾಟ ನಡೆಯುತ್ತಿದೆ. ಸಾರ್ವಜನಿಕ ವಲಯದಿಂದಲೂ ಸೂಕ್ತ ಸ್ಪಂದನೆ ಸಿಕ್ಕಿದೆ. ಆದರೆ ನಮ್ಮನ್ನಾಳುವ ಜನಪ್ರತಿನಿಧಿಗಳಿಂದ ಮಾತ್ರ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ ಎನ್ನುವುದು ಜನತೆಯಲ್ಲಿ ಬೇಸರವನ್ನುಂಟು ಮಾಡಿದೆ ಎನ್ನುವ ವರದಿ ‘ವೇದಪ್ರಭ‘ ವೆಬ್ ಸೈಟ್ ನಲ್ಲಿ ಪ್ರಕಟಗೊಂಡ ಬೆನ್ನಲ್ಲೆ ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ ಅವರು ಕೇಂದ್ರ ರೈಲ್ವೆ ಸಚಿವರನ್ನು ಭೇಟಿ ಮಾಡಿದ್ದಾರೆ.
ರೈಲ್ವೆ ಮಾರ್ಗಗಳ ಅಭಿವೃದ್ಧಿ ಚರ್ಚೆ:
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ನೇತೃತ್ವದಲ್ಲಿ ಸಂಸದ ಗದ್ದಿಗೌಡರ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರನ್ನು ಭೇಟಿ ಮಾಡಿ, ಬಾಗಲಕೋಟೆ-ಕುಡಚಿ ಮತ್ತು ಲೋಕಾಪುರದಿಂದ ರಾಮದುರ್ಗ ಸವದತ್ತಿ ಯಲ್ಲಮ್ಮ ಮಾರ್ಗವಾಗಿ ಧಾರವಾಡವರೆಗೂ ರೈಲ್ವೆ ಮಾರ್ಗ ನಿರ್ಮಾಣ ಸೇರಿದಂತೆ ವಿವಿಧ ರೈಲ್ವೆ ಸಂಪರ್ಕ ಹಾಗೂ ಅಭಿವೃದ್ಧಿಯ ವಿಚಾರವಾಗಿ ಚರ್ಚಿಸಿದ್ದಾರೆ.
ಇತ್ತೀಚೆಗಷ್ಟೆ ‘ವೇದಪ್ರಭ’ ಬಾಗಲಕೋಟೆ- ಕುಡಚಿ ಮಾರ್ಗ ಪೂರ್ಣಗೊಂಡು, ಲೋಕಾಪುರ- ಧಾರವಾಡ ನೂತನ ರೈಲು ಮಾರ್ಗ ರಚನೆ ಆದಲ್ಲಿ ಈ ಭಾಗದ ಚಿತ್ರಣವೇ ಬದಲಾಗಲಿದೆ. ಹೀಗಿದ್ದು, ಇಲ್ಲಿನ ಜನಪ್ರತಿನಿಧಿಗಳು ಕೇಂದ್ರದ ಮೇಲೆ ಒತ್ತಡ ಹಾಕುವ ಕೆಲಸ ಮಾಡುತ್ತಿಲ್ಲ. ಅಖಂಡ ವಿಜಯಪುರ, ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಿನ್ನೆಲೆಯಲ್ಲಿ ಪಕ್ಷಾತೀತವಾಗಿ ಎರಡೂ ಮಾರ್ಗಗಳ ರಚನೆಗಾಗಿ ಜನಪ್ರತಿನಿಧಿಗಳು ಸಂಸತ್ತಿನಲ್ಲಿ ಧ್ವನಿ ಎತ್ತುವ ಕೆಲಸ ಮಾಡಬೇಕಿದೆ. ಆ ಮೂಲಕ ಬಹುದಿನಗಳ ಬೇಡಿಕೆಗೆ ಸ್ಪಂದಿಸುವ ಪ್ರಾಮಾಣಿಕ ಕೆಲಸ ಮಾಡಬೇಕು ಎನ್ನುವುದು ರೈಲ್ವೆ ಹೋರಾಟಗಾರರ, ವ್ಯಾಪಾರಸ್ಥರ, ಕೃಷಿಕರು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಜನತೆಯ ಆಗ್ರಹವಾಗಿದೆ ಎನ್ನುವ ಅಂಶದ ಮೇಲೆ ಬೆಳಕು ಚೆಲ್ಲುವ ವರದಿ ಮಾಡಿತ್ತು.
ಭರವಸೆ ಮೂಡಿಸಿದ ಸಂಸದರ ಭೇಟಿ:
ಇದೀಗ ಸಂಸದ ಗದ್ದಿಗೌಡರ ಅವರು ರೈಲ್ವೆ ಸಚಿವರನ್ನು ಭೇಟಿ ಆಗಿದ್ದು ಈ ಭಾಗದ ಜನತೆಯಲ್ಲಿ ಹೊಸ ಭರವಸೆ ಮೂಡಿಸಿದೆ. ಸಂಸದ ಪಿ. ಸಿ. ಗದ್ದಿಗೌಡರ ಅವರು ಕಳೆದ ಆರು ದಶಕಗಳಿಂದ ನನೆಗುದಿಗೆ ಬಿದ್ದಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ -3ರ ಯೋಜನೆ ಅನುಷ್ಠಾನಗೊಳ್ಳಬೇಕಿದೆ. ಇದಕ್ಕೆ ಕೇಂದ್ರ ಸರ್ಕಾರ ನಿರ್ಣಾಯಕ ಪಾತ್ರ ವಹಿಸಬೇಕಿದೆ. ಆ ನಿಟ್ಟಿನಲ್ಲಿ ಸಂಸದ ಪಿ.ಸಿ. ಗದ್ದಿಗೌಡರ ಪ್ರಯತ್ನ ಅಗತ್ಯವಿದೆ. ಯುಕೆಪಿ ಹಂತ-3ರ ಅನುಷ್ಠಾನಕ್ಕೆ ಕೃಷ್ಣಾ ನ್ಯಾಯಾಧೀಕರಣ -2ರ ವರದಿಯ ಅಧಿಸೂಚನೆ ಹೊರಡಿಸಬೇಕಿದೆ.
ಅಧಿಸೂಚನೆ ಪ್ರಕಟಗೊಳ್ಳಬೇಕಿದೆ:
ಕೃಷ್ಣಾ ನ್ಯಾಯಾಧೀಕರಣ -2ರ ವರದಿಯ ಐತೀರ್ಪು ಸಲ್ಲಿಕೆ ಆಗಿದ್ದರೂ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಲು ಮೀನಮೇಷ ಮಾಡುತ್ತಿದೆ. ಅಧಿಸೂಚನೆ ಹೊರಡಿಸುವಂತೆ ರಾಜ್ಯ ಸರ್ಕಾರ ಸಾಕಷ್ಟು ಬಾರಿ ಒತ್ತಡ ಹಾಕುತ್ತಿದ್ದರೂ ಕೆಲಸವಾಗುತ್ತಿಲ್ಲ. ರಾಜ್ಯ ಸರ್ಕಾರದ ಜತೆ ಇಲ್ಲಿನ ಸಂಸದರೂ ಇನ್ನಿಲ್ಲದ ಒತ್ತಡ ಹಾಕುವ ಮೂಲಕ ಅಧಿಸೂಚನೆ ಹೊರಡಿಸುವಂತೆ ನೋಡಿಕೊಳ್ಳಬೇಕಿದೆ.
ಕೃಷ್ಣಾ ನ್ಯಾಯಾಧೀಕರಣ -2ರ ವರದಿಯ ಅಧಿಸೂಚನೆ ಹೊರಡದ ಹೊರತು ಆಲಮಟ್ಟಿ ಜಲಾಶಯದ ಎತ್ತರವನ್ನು 519.60 ಮೀಟರಿನಿಂದ 524.256 ಮೀಟರಿಗೆ ಹೆಚ್ಚಿಸಲು ಸಾಧ್ಯವಾಗದು. ಜಲಾಶಯದ ಎತ್ತರ ಹೆಚ್ಚಿಸದ ಹೊರತು ರಾಜ್ಯಕ್ಕೆ ಹಂಚಿಕೆ ಆಗಿರುವ ನೀರನ್ನು ಬಳಕೆ ಮಾಡಲಾಗದು.
ಯೋಜನಾನುಷ್ಠಾನಕ್ಕೆ ಕಾಲಮಿತಿ:
ಏತನ್ಮಧ್ಯೆ ರಾಜ್ಯ ಸರ್ಕಾರ ಯುಕೆಪಿ ಹಂತ- 3 ರ ಅನಷ್ಠಾನಕ್ಕಾಗಿ ನಾಲ್ಕು ಆರ್ಥಿಕ ವರ್ಷಗಳ ಕಾಲಮಿತಿ ಹಾಕಿಕೊಂಡು, ಪ್ರತಿ ವರ್ಷ 15 ರಿಂದ 20 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ನಿರ್ಧರಿಸಿದೆ. ಆದರೆ ಕೇಂದ್ರ ಅಧಿಸೂಚನೆ ಹೊರಡಿಸದ ಹೊರತು ಹಂಚಿಕೆ ನೀರಿನ ಬಳಕೆ ಅಸಾಧ್ಯ. ಹಾಗಾಗಿ ಸಂಸದ ಗದ್ದಿಗೌಡರು ಕೃಷ್ಣಾ ನ್ಯಾಯಾಧೀಕರಣ -2ರ ಅಧಿಸೂಚನೆ ಹೊರಡಿಸುವಂತೆ ರಾಜ್ಯದ ಇತರ ಸಂಸದರು, ಕೇಂದ್ರ ಸಚಿವರ ಜತೆಗೂಡಿ ಪ್ರಧಾನಿಗಳ ಮೇಲೆ ಒತ್ತಡ ಹಾಕಬೇಕಿದೆ.
ಸಾಂಘಿಕ ಪ್ರಯತ್ನ ಅಗತ್ಯ:
ಪ್ರಧಾನಿಗಳ ಮೇಲೆ ಒತ್ತಡ ಹಾಕಿದಾಗ ಮಾತ್ರ ಅಧಿಸೂಚನೆ ಹೊರಬರಲು ಸಾಧ್ಯವಾಗಲಿದೆ. ಅದಕ್ಕಾಗಿ ಸಂಸದ ಗದ್ದಿಗೌಡರು ಇತರ ಸಂಸದರು ಹಾಗೂ ಸಚಿವರ ಮನವೊಲಿಸಿ, ಅಧಿಸೂಚನೆ ಹೊರಬರುವಂತೆ ಪ್ರಯತ್ನಿಸಬೇಕಿದೆ. ಇಂತಹ ಪ್ರಯತ್ನಗಳು ಆದಾಗ ಮಾತ್ರ ಜನರ ಆಶಯಗಳು ಸಾಕಾರಗೊಳ್ಳಲು ಸಾಧ್ಯವಾಗಲಿದೆ.
- ವಿಠ್ಠಲ ಆರ್. ಬಲಕುಂದಿ




