ಆರು ದಶಕಗಳಿಂದ ನನೆಗುದಿಗೆ ಬಿದ್ದಿರುವ ಮಹತ್ವಾಕಾಂಕ್ಷಿ ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಪೂರ್ಣಾನುಷ್ಠಾನದ ಕುರಿತು ಮಂಗಳವಾರ ಬೆಳಗಾವಿ ಅಧಿವೇಶನದಲ್ಲಿ ಪ್ರಶ್ನೋತ್ತರ ವೇಳೆ ವಿಷಯ ಚರ್ಚೆಗೆ ಬಂದಿತಾದರೂ “ಅದೇ ರಾಗ, ಅದೇ ಹಾಡು” ಎನ್ನುವ ಸ್ಥಿತಿಯಿಂದ ಹೊರ ಬರುವ ಯಾವ ಲಕ್ಷಣವೂ ಕಾಣಿಸಲಿಲ್ಲ.
ಅಧಿವೇಶನದಲ್ಲಿ ಮಂಗಳವಾರ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಆರು ದಶಕಗಳ ಹಿಂದೆ ಆರಂಭಗೊಂಡಿರುವ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಯೋಜನೆ ಪೂರ್ಣಗೊಂಡಾಗ ಮಾತ್ರ ರೈತರ ಜಮೀನುಗಳಿಗೆ ನೀರು ಹರಿದು, ಅವರ ಬದುಕು ಹಸನಾಗಲು ಸಾಧ್ಯವಾಗಲಿದೆ. ಯೋಜನೆ ಯಾವಾಗ ಪೂರ್ಣಗೊಳಿಸುತ್ತೀರಿ ಎಂದು ಪ್ರಶ್ನಿಸಿದರು.
ಸಾಲ ಸೋಲ ಮಾಡಲು ಸಿದ್ಧ:
ಶಾಸಕ ಯತ್ನಾಳರ ಪ್ರಶ್ನೆಗೆ ಬೃಹತ್ ನೀರಾವರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಾಲ ಸೋಲ ಮಾಡಿಯಾದರೂ ಯೋಜನೆ ಪೂರ್ಣಗೊಳಿಸಲು ಸಿದ್ದರಿದ್ದೇವೆ. ಕೇಂದ್ರದಲ್ಲಿನ ತಮ್ಮ ಸ್ನೇಹಿತರ ಮೂಲಕ ಕೃಷ್ಣಾ ನ್ಯಾಯಾಧೀಕರಣ -2ರ ವರದಿಯ ಅಧಿಸೂಚನೆ ಹೊರಡಿಸುವಂತೆ ಒತ್ತಾಯಿಸಿರಿ. ಅಧಿಸೂಚನೆ ಬಂದ ಕೂಡಲೇ ಎಲ್ಲಿಂದಾದರೂ ಹಣ ತಂದು ಯೋಜನೆ ಪೂರ್ಣಗೊಳಿಸುತ್ತೇವೆ. ಈಗಾಗಲೇ ಯೋಜನೆ ಅನುಷ್ಠಾನಕ್ಕೆ ಭೂಸ್ವಾಧೀನ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ. ಪ್ರತಿ ಎಕರೆ ಭೂಮಿಗೆ ಪರಿಹಾರ ಧನ ನಿಗದಿಪಡಿಸಿದ್ದೇವೆ. ನಾಲ್ಕು ಆರ್ಥಿಕ ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸಲು ಪ್ರತಿವರ್ಷ 15-20 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲು ಸರ್ಕಾರ ನಿರ್ಧರಿಸಿದೆ ಎನ್ನುವ ಮಾಹಿತಿಯನ್ನು ಉಪ ಮುಖ್ಯಮಂತ್ರಿಗಳು ಸದನಕ್ಕೆ ನೀಡಿದರು.
ಅಧಿಸೂಚನೆ ಯಾವ ಅಡ್ಡಿಯೂ ಇಲ್ಲ:
ಶಾಸಕ ಯತ್ನಾಳ್ ಮತ್ತು ಉಪಮುಖ್ಯಮಂತ್ರಿಗಳ ನಡುವೆ ಚರ್ಚೆ ನಡೆದಾಗ ಬಿಜೆಪಿ ಉಪನಾಯಕ ಅರವಿಂದ ಬೆಲ್ಲದ ಅವರು ಮಧ್ಯೆ ಪ್ರವೇಶಿಸಿ ಕೃಷ್ಣಾ ನದಿ ನೀರು ಹಂಚಿಕೆ ಕುರಿತು ನೆರೆ ರಾಜ್ಯಗಳು ತಕರಾರು ಇರುವುದರಿಂದ ಅಧಿಸೂಚನೆ ಹೊರಡಿಸಲು ವಿಳಂಬವಾಗುತ್ತಿದೆ ಎಂದಾಗ ಕಂದಾಯ ಸಚಿವ ಕೃಷ್ಣ ಭೈರೇಗೌಡರು, ಸದನಕ್ಕೆ ತಪ್ಪು ಮಾಹಿತಿ ನೀಡಬೇಡಿ. ವಿಷಯ ನ್ಯಾಯಾಲಯದಲ್ಲಿದ್ದರೂ ಅಧಿಸೂಚನೆ ಹೊರಡಿಸಲು ಯಾವ ಅಡ್ಡಿಯೂ ಇಲ್ಲ. ಕೇಂದ್ರ ಸರ್ಕಾರ ಮನಸ್ಸು ಮಾಡುತ್ತಿಲ್ಲವಷ್ಟೆ ಎಂದು ವಾದಿಸಿದರು.
ಬಿಜೆಪಿ ಸಂಸದರು ಸಮಯ ಕೊಡುತ್ತಿಲ್ಲ:
ಆಗ ಮಾತು ಮುಂದುವರಿಸಿದ ಉಪ ಮುಖ್ಯಮಂತ್ರಿಗಳು ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರೊಂದಿಗೆ ಮರ್ನಾಲ್ಕು ಬಾರಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಅಧಿಸೂಚನೆ ಹೊರಡಿಸುವಂತೆ ಒತ್ತಾಯಿಸಲಾಗಿದೆ. ಕೇಂದ್ರ ಸರ್ಕಾರ ಮನಸ್ಸು ಮಾಡಿ, ಅಧಿಸೂಚನೆ ಹೊರಡಿಸಬೇಕಿದೆ. ಕೇಂದ್ರದ ಮೇಲೆ ಇನ್ನಷ್ಟು ಒತ್ತಡ ಹಾಕಲು ರಾಜ್ಯದ ಸರ್ವಪಕ್ಷ ಸಂಸದರ ನಿಯೋಗ ಪ್ರಧಾನಿ ಅವರನ್ನು ಭೇಟಿ ಮಾಡಲು ಯೋಚಿಸಿದಾಗಲೂ ಬಿಜೆಪಿ ಸಚಿವರು, ಸಂಸದರು ಸಮಯ ನೀಡುತ್ತಿಲ್ಲ ಎಂದು ದೂರಿದರು.
ಪರಿಣಾಮಕಾರಿ ಚರ್ಚೆ:
ಬೆಳಗಾವಿ ಅಧಿವೇಶನದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನದ ಕುರಿತು ಪ್ರಶ್ನೋತ್ತರ ವೇಳೆ ವಿಷಯ ಪ್ರಸ್ತಾಪವಾದರೂ ಅವರು ಇವರನ್ನು, ಇವರು ಅವರನ್ನು ದೂರುವ ಕೆಲಸ ನಡೆಯಿತು. ಯೋಜನೆ ಅನುಷ್ಠಾನ ಕುರಿತು ಯಾವುದೇ ಸ್ಪಷ್ಟನೆ ಸಿಗಲಿಲ್ಲ. ವಿಜಯಪುರ ಶಾಸಕ ಬಸನಗೌಡರ ಪ್ರಶ್ನೆಗೆ ಸರ್ಕಾರ ಉತ್ತರ ಕೊಡುವುದಕ್ಕೆ ಮಾತ್ರ ವಿಷಯ ಸೀಮಿತವಾಯಿತು. ಅರವಿಂದ ಬೆಲ್ಲದ ಅವರನ್ನು ಬಿಟ್ಟರೆ ಬಿಜೆಪಿ ಶಾಸಕರಾಗಲಿ, ಉತ್ತರ ಕರ್ನಾಟಕ ಶಾಸಕರಾಗಲಿ ಯಾರೂ ವಿಷಯದ ಪರ ಬೆಂಬಲಕ್ಕೆ ಬರಲಿಲ್ಲ. ಬಹುಶಃ ಪ್ರಶ್ನೋತ್ತರ ಸಮಯದಲ್ಲಿನ ವಿಷಯವಾಗಿದ್ದರಿಂದ ವಿಸ್ತ್ರತ ಚರ್ಚೆ ನಡೆಯಲಿಲ್ಲ.
ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನ, ಕೃಷ್ಣಾ ನ್ಯಾಯಾಧೀಕರಣ ಅಧಿಸೂಚನೆ ಹೊರಡಿಸುವಂತೆ ಕೇಂದ್ರದ ಮೇಲೆ ಒತ್ತಡ ತರುವ ಕುರಿತು ಸದನದಲ್ಲಿ ಪ್ರತ್ಯೇಕವಾಗಿ ಸುದೀರ್ಘ ಚರ್ಚೆ ಆಗಬೇಕಿದೆ. ಉತ್ತರ ಕರ್ನಾಟಕದ ಶಾಸಕರು ಪಕ್ಷಾತೀತವಾಗಿ ಈ ಬಗ್ಗೆ ಮಾತನಾಡಬೇಕಿದೆ. ಕೇಂದ್ರದ ಮೇಲೆ ಪರಿಣಾಮಕಾರಿ ಒತ್ತಡ ಬಿದ್ದಾಗ ಮಾತ್ರ ಕೃಷ್ಣಾ ನ್ಯಾಯಾಧೀಕರಣ-2 ರ ಅಧಿಸೂಚನೆ ಹೊರಬರಲು ಸಾಧ್ಯವಾಗಲಿದೆ. ರಾಜ್ಯದಿಂದ ಸಾಂಘಿಕ ಪ್ರಯತ್ನ ಆಗದೆ ಹೋದಲ್ಲಿ, ಕೃಷ್ಣಾ ನ್ಯಾಯಾಧೀಕರಣ-2ರ ಅಧಿಸೂಚನೆ ಇನ್ನಷ್ಟು ವಿಳಂಬವಾಗಲಿದೆ.
- ವಿಠ್ಠಲ ಆರ್. ಬಲಕುಂದಿ




