ರಾಜಕೀಯ ಬಿರುಗಾಳಿ ಎಬ್ಬಿಸಿದ ಜೆ.ಟಿ.: ನಿರಾಣಿ

ರಾಜಕೀಯವಾಗಿ ತಣ್ಣಗಿದ್ದ ಬೀಳಗಿ ವಿಧಾನಸಭೆ ಕ್ಷೇತ್ರದಲ್ಲಿ ನಕಲಿ ಮತಗಳ ಹವಾ ಜೋರಾಗಿದೆ. ಶಾಸಕ ಜೆ.ಟಿ.‌ ಪಾಟೀಲ ಹಚ್ಚಿರುವ ನಕಲಿ ಮತಗಳ ಕಿಚ್ಚು ನಿಗಿನಿಗಿ ಎನ್ನುತ್ತಿದೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ದೇಶದಾದ್ಯಂತ ಮತಗಳ್ಳತನ ವಿರೋಧ ಹೋರಾಟ ತೀವ್ರಗೊಳಿಸಿರುವ‌ ಸಮಯದಲ್ಲಿ ನಕಲಿ ಮತಗಳ ಪರಿಣಾಮವಾಗಿಯೇ 2004 ರ ಚುನಾವಣೆ ಯಲ್ಲಿ ತಾವು ಸೋಲು ಕಾಣಬೇಕಾಯಿತು ಎನ್ನುವ ಹೇಳಿಕೆ ಕ್ಷೇತ್ರದಾದ್ಯಂತ ಸಂಚಲನ ಮೂಡಿಸಿದೆ.

ಅಂದು ಶಾಸಕ ಜೆ.ಟಿ.‌ಪಾಟೀಲರ ವಿರುದ್ಧ ಸ್ಪರ್ಧಿಸಿದ್ದ ಮಾಜಿ‌ ಸಚಿವ ಮುರುಗೇಶ ನಿರಾಣಿ ಕುದ್ದು ಹೋಗಿದ್ದಾರೆ. ಶಾಸಕರ ಹೇಳಿಕೆಯನ್ನು ಸಾರಾಸಾಗಾಟ ತಳ್ಳಿ ಹಾಕಿದ್ದಾರೆ. ಜತೆಗೆ ಜೆ.ಟಿ. ಪಾಟೀಲರೊಂದಿಗೆ ಕಾಂಗ್ರೆಸ್ ಜಾತಕ ಜಾಲಾಡಿದ್ದಾರೆ.

ಕಾಂಗ್ರೆಸ್ ಕಾರಣ:

ಮತಗಳ್ಳತನ ಎನ್ನುವುದು ಕಾಂಗ್ರೆಸ್ಸಿಗರಿಗೆ ಅಂಟಿರುವ ರೋಗವಾಗಿದೆ. ಮತಗಳ್ಳತನ ಕಲ್ಪನೆ ಹುಟ್ಟಿಕೊಂಡಿದ್ದೆ ಕಾಂಗ್ರೆಸ್ಸಿನಿಂದ ಎನ್ನುವುದನ್ನು ಬಿಚ್ಚಿಡುವ ಕೆಲಸ ಮಾಡಿದ್ದಾರೆ. ಡಾ. ಬಾಬಾಸಾಹೇನ್ ಅಂಬೇಡ್ಕರ್ ಅವರ ಸೋಲಿಗೆ ಕಾಂಗ್ರೆಸ್ಸಿಗರ ಮತಗಳ್ಳತನ ಕಾರಣವೆಂದು ಹೇಳಿದ್ದಾರೆ.‌ ಅಷ್ಟಕ್ಕೆ ಸುಮ್ಮನಾಗದ ಅವರು 1975 ರಲ್ಲಿ ಇಂದಿರಾಗಾಂಧಿ ಅವರ ಗೆಲುವಿಗೂ ಕಾಂಗ್ರೆಸ್ಸಿಗರ ಮತಗಳ್ಳತನ ಕಾರಣ ಎಂದು ದೂರಿದ್ದಾರೆ.

ರಾಹುಲ್ ಗಾಂಧಿ ಅವರ ಮತಗಳ್ಳತನ ಹೋರಾಟ ವಿಷಯದಲ್ಲಿ ಕೆ.ಎನ್. ರಾಜಣ್ಣ ಅವರು‌ ಮೂಗು ತುರಿಸಿದ ಪರಿಣಾಮ ಸಂಪುಟದಿಂದಲೇ ವಜಾಗೊಂಡಿ ದ್ದಾರೆ. ಇಂತಹ ಸನ್ನಿವೇಶದಲ್ಲಿ ಶಾಸಕ ಜೆ.ಟಿ.‌ ಪಾಟೀಲ ೨೦೦೪ ರ ಚುನಾವಣೆ ವೇಳೆ ನಕಲಿ ಮತಗಳ ಕುರಿತು‌ ಮಾತನಾಡಿದ್ದಾರೆ. ಅದರ ಹಿಂದೆ ಬಹುದೊಡ್ಡ ತಂತ್ರಗಾರಿಕೆ ಅಡಗಿದೆ. ಮತಗಳ್ಳತನದ ಹೇಳಿಕೆ ನೀಡುವ ಮೂಲಕ ವರಿಷ್ಠರನ್ನು ಮೆಚ್ಚಿಸಿ ಮಂತ್ರಿ ಆಗಲು ಹೊರಟಿದ್ದಾರೆ. ಅವರೊಬ್ಬ ಕಡು ಭ್ರಷ್ಟ ಶಾಸಕ ಎಂದು ನಿರಾಣಿ ಅವರು ಜರಿದಿದ್ದಾರೆ.

ಜೆಟಿ ಭ್ರಷ್ಟ:

ಪ್ರಾಮಾಣಿಕತೆ ಬಗೆಗೆ ಮಾತನಾಡುವ ಶಾಸಕ ಜೆ.ಟಿ.‌ ಪಾಟೀಲ ನಿಜವಾಗಿಯೂ ಪ್ರಾಮಾಣಿಕರಾಗಿದ್ದಲ್ಲಿ ಅವರು ತಮ್ಮ ಶಾಸಕತ್ವಕ್ಕೆ ರಾಜೀನಾಮೆ ನೀಡಿ, ಚುನಾವಣೆ ಆಯೋಗದ ನಿಯಮಾನುಸಾರ ಖರ್ಚು ಮಾಡಿ ಆಯ್ಕೆ ಆಗಲಿ ನೋಡೋಣ ಎನ್ನುವ ಸವಾಲು ಹಾಕಿದ್ದಾರೆ. ಶಾಸಕ ಜೆ.ಟಿ.‌ಪಾಟೀಲರ ನಕಲಿ ಮತದ ಮಾತು ಕ್ಷೇತ್ರ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಇದೇ ಮೊದಲ ಬಾರಿಗೆ ನಿರಾಣಿ ಅವರು ಜೆ.ಟಿ.‌ಪಾಟೀಲರನ್ನು ಕಡುಭ್ರಷ್ಟ ಎನ್ನುವ ಗಂಭೀರ ಆರೋಪ ಮಾಡಿದ್ದಾರೆ. ಆ ಮೂಲಕ ಕ್ಷೇತ್ರದಲ್ಲಿ ತಣ್ಣಗಾಗಿದ್ದ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ.

ಸವಾಲು ಸ್ವೀಕರಿಸಲಿ:

ಮಾಜಿ ಸಚಿವ ನಿರಾಣಿ ಅವರ ಆರೋಪ, ಸವಾಲು ಗಳನ್ನು ಹೇಗೆ ಸ್ವೀಕರಿಸಲಿದ್ದಾರೆ ಎನ್ನುವುದು ಕುತೂಹಲದ ಸಂಗತಿ ಆಗಿದೆ. 2004 ರಲ್ಲಿನ ನಕಲಿ ಮತಗಳ ಪರಿಣಾಮ ತಮಗೆ ಸೋಲಾಯಿತು ಎನ್ನುವ ಪಾಟೀಲರ ಹೇಳಿಕೆ ರಾಜಕೀಯ ಕಿಚ್ಚು ಹಚ್ಚಿದ್ದು, ಅದು ಯಾವಹಂತ ತಲುಪಲಿದೆ ಎನ್ನುವುದನ್ನು ಕಾಯ್ದು ನೋಡಬೇಕಿದೆ.

ಗಮನಾರ್ಹ ಅಂಶವೆಂದರೆ ‌ಶಾಸಕ ಜೆ.ಟಿ. ಪಾಟೀಲರು ಎಲ್ಲಿಯೂ ಮಾಜಿ‌ ಸಚಿವ ನಿರಾಣಿ ಅವರ ಹೆಸರನ್ನು ಪ್ರಸ್ತಾಪಿಸಿಲ್ಲವಾದರೂ, ನಿರಾಣಿ ಅವರು ಜೆ.ಟಿ. ಪಾಟೀಲ‌ ಹಾಗೂ ಕಾಂಗ್ರೆಸ್ಸಿಗರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

  • ವಿಠ್ಠಲ ಆರ್. ಬಲಕುಂದಿ
Scroll to Top