ಬಾಗಲಕೋಟೆ: ಕಾವಿ ಬಿಟ್ಟು ಖಾದಿ ತೊಡಿ ಎಂದು ಈ ಹಿಂದೆ ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳಿಗೆ ಸಲಹೆ ಮಾಡಿದ್ದ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಇದೀಗ ಕೊಲ್ಹಾಪುರ ಕನ್ಹೇರಿ ಮಠದ ಕಾಡಸಿದ್ದೇಶ್ವರ ಶ್ರೀಗಳಿಗೂ “ಕಾವಿ ಬಿಟ್ಟು ಖಾದಿ ಹಾಕಿ ಬನ್ನಿ” ಎಂದು ಸವಾಲು ಹಾಕಿದ್ದಾರೆ.
ಕನ್ಹೇರಿಶ್ರೀ ದೇವ ಮಾನವರಾ?:
ರಾಯಬಾಗದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕನ್ಹೇರಿ ಶ್ರೀಗಳು ಲಿಂಗಾಯತ ಮಠಾಧೀಶರನ್ನು ‘ಬಸವ ತಾಲಿಬಾನಿಗಳು’ ಎಂದು ಸಂಬೋಧಿಸಿದ ಹಿನ್ನೆಲೆಯಲ್ಲಿ ವಿಜಯಾನಂದ ಕಾಶಪ್ಪನವರ ಅವರು ಕನ್ಹೇರಿ ಶ್ರೀಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ. ಲಿಂಗಾಯತ ಮಠಾಧೀಶರನ್ನು ಬಸವ ತಾಲೀಬಾನಿಗಳು ಎಂದು ಹೇಳಿದ್ದಲ್ಲದೆ, ರಾತ್ರಿಹೊತ್ತು ಟೀ ಶರ್ಟ್ ಬರ್ಮುಡಾ ಧರಿಸಿ ಬಾರ್‌ಗಳಿಗೆ ಹೋಗುತ್ತಾರೆ ಎನ್ನುವ ಮಾತನ್ನೂ ಆಡಿರುವುದಕ್ಕೆ ಕಾಶಪ್ಪನವರ ಶ್ರೀಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕನ್ಹೇರಿ ಶ್ರೀಗಳಿಗೆ ಹುಚ್ಚು ಹಿಡಿದಿದೆ. ಮದವೇರಿದೆ. ನಾನೇ ಶ್ರೇಷ್ಠ ಎನ್ನುವ ಅಹಂ ಬಂದಿದೆ. ಇವರೇನು ಆಕಾಶದಿಂದ ಉದುರಿ ಬಂದವರಾ? ತಾಯಿಯ ಹೊಟ್ಟೆಯಲ್ಲಿಯೇ ಬಂದವರು. ಇವರೇನು ದೇವ ಮಾನರಾ ಎಂದು ಜರಿದ ಅವರು ಶ್ರೀಗಳ ಮಾತುಗಳು ಮೌಲ್ಯಯುತವಾಗಿರಬೇಕು. ಗೌರವ ತರುವಂತಿರಬೇಕು. ಅದು ಬಿಟ್ಟು ಇನ್ನೊಬ್ಬರ ಬಗೆಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ಹಾಗೊಂದು ವೇಳೆ ಮಾತನಾಡಲೇಬೇಕು ಎನ್ನುವುದಾದಲ್ಲಿ “ಕಾವಿ ಬಿಟ್ಟು ಖಾದಿ ತೊಟ್ಟು ಬನ್ನಿ” ಎನ್ನುವ ಸವಾಲನ್ನು ಕಾಶಪ್ಪನವರ ಹಾಕಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಅವರು ಕೀಳು ಬಾಷೆ ಮುಂದುವರಿಸಿದಲ್ಲಿ ಈಗಾಗಲೇ ಇವರ ಮಾತುಗಳಿಂದ ರೊಸಿ ಹೋಗಿರುವ ಜನರಿಂದ ಬಡಿಸಿಕೊಳ್ಳುತ್ತಾರೆ ಎನ್ನುವ ಎಚ್ಚರಿಕೆ ಕೂಡ ನೀಡಿದ್ದಾರೆ.
ಬೆಂಕಿ ಹಚ್ಚುವ ಕೆಲಸ ನಡೆದಿದೆ:
ಧರ್ಮದ ಬಗೆಗೆ ಕೀಳು ಮಾತುಗಳನ್ನಾಡಿ, ಜನರ ದಾರಿ ತಪ್ಪಿಸಿ, ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಇನ್ನೊಂದು ಧರ್ಮದ ಬಗೆಗೆ ಕೀಳು ಮಾತನಾಡುವ ಇವರು ಪ್ರತ್ಯೇಕ ಸನಾತನ ದೇಶ ಮಾಡಿಕೊಳ್ಳಲಿ. ಅವರ ಮಾತಿನ ಹಿಂದೆ ವ್ಯವಸ್ಥಿತ ಸಂಚು ಇದೆ ಎಂದು ಆಪಾದಿಸಿದ ಅವರು ವಿಜಯಪುರದ ಶ್ರೀ ಸಿದ್ದೇಶ್ವರ ಶ್ರೀಗಳು ಕಟ್ಟಿದ ಮಠವನ್ನು ಇವರು ಹಾಳು ಮಾಡುತ್ತಿದ್ದಾರೆ ಎಂದು ಗಂಭೀರ ಆಪಾದನೆ ಮಾಡಿದ್ದಾರೆ.
ದೇಶ ಬಿಟ್ಟುಹೋಗಲಿ:
ದೇಶ ಮೊದಲಿನಿಂದಲೂ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಕನ್ಹೇರಿ ಶ್ರೀಗಳಂತಹ ಸಂಕುಚಿತ ಭಾವನೆಯವರು ಬೇಕಿದ್ದರೆ ದೇಶ ಬಿಟ್ಟು ಹೊಗಲಿ. ಇವರ ಸನಾತನ, ಹಿಂದುತ್ವ, ಸನಾತನ ಧರ್ಮ ಹೆಸರಿನಲ್ಲಿ ದೊಡ್ಡ ಜಾಲ ಇದೆ ಎಂದು ಆರೋಪಿಸಿರುವ ಕಾಶಪ್ಪನವರ ಅವರು ಎಲ್ಲರೂ ಅವರವರ ಭಾವಕ್ಕೆ ತಕ್ಕಂತೆ ಇರಬೇಕು. ಕುಂಕುಮ ಹಚ್ಚುವವರು ಕುಂಕುಮ ಹಚ್ಚಲಿ, ನಾಮ ಹಾಕಿಕೊಳ್ಳುವರು ನಾಮ ಹಾಕಿಕೊಳ್ಳಲಿ. ಇನ್ನೊಂದು ಧರ್ಮ ತೆಗಳುವ ಹಕ್ಕು ಯಾರಿಗೂ ಇಲ್ಲ. ಮಾನವಿಯತೆ ಗೊತ್ತಿಲ್ಲದ ಕನ್ಹೇರಿ ಶ್ರೀಗಳು ಒಬ್ಬ ಜೋಕರ್ ಎಂದು ಕರೆದಿದ್ದಾರೆ.
ಕನ್ಹೇರಿ ಶ್ರೀಗಳು ಆಡಿರುವ ಮಾತುಗಳಿಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈ ಹಿಂದೆ ಅವರು ಬಸವ ತತ್ವ ಮಠಾಧೀಶರ ಬಗೆಗೆ ಅಪಮಾನಕರ ಮಾತುಗಳನ್ನಾಡಿದಾಗಲೂ ರಾಜ್ಯದಾದ್ಯಂತ ವಿರೋಧ ವ್ಯಕ್ತವಾಗಿ ಪ್ರತಿಭಟನೆಗಳು ನಡೆದಿದ್ದವು. ಅಷ್ಟೆ ಅಲ್ಲ, ಗಡಿಪಾರು ಆದೇಶ ಕೂಡ ಆಗಿತ್ತು ಎನ್ನುವುದು ಗಮನಾರ್ಹ. ಇದೀಗ ರಾಯಬಾಗದಲ್ಲಿ ಆಡಿರುವ ಮಾತುಗಳು ಯಾವ ಹಂತಕ್ಕೆ ಹೋಗಲಿವೆ ಎನ್ನುವುದನ್ನು ಕಾಯ್ದುನೋಡಬೇಕಷ್ಟೆ.




