ಬರಿ ಕಾಗದಕ್ಕೆ ಸೀಮಿತವಾಯ್ತು ಕಿತ್ತೂರು ಕರ್ನಾಟಕ

ಬಾಗಲಕೋಟೆ: ರಾಜ್ಯದ ಹೈದರಾಬಾದ್ ಕರ್ನಾಟಕ ಪ್ರದೇಶ ಕಲ್ಯಾಣ ಕರ್ನಾಟಕವಾಗಿ, ಮುಂಬಯಿ ಕರ್ನಾಟಕ ಪ್ರದೇಶ ಕಿತ್ತೂರು ಕರ್ನಾಟಕವಾಗಿ ರೂಪಗೊಂಡ ಬಳಿಕ ಆಡಳಿತದ ಪ್ರತಿ ಹಂತದಲ್ಲೂ ಹೈದರಾಬಾದ ಕರ್ನಾಟಕ ಕಲ್ಯಾಣ ಕರ್ನಾಟಕವಾಗಿ ಪರಿವರ್ತನೆಗೊಂಡಿದೆ. ಆದರೆ ಕಿತ್ತೂರು ಕರ್ನಾಟಕ ಬರಿ ನಾಮಕರಣಕ್ಕೆ ಸೀಮಿತವಾಗಿದೆ.

ಹೋರಾಟದಿಂದ ಮರುನಾಮಕರಣ:

ಮುಂಬಯಿ ಪ್ರಾಂತ್ಯದಲ್ಲಿದ್ದ ಕಿತ್ತೂರು ಕರ್ನಾಟಕ ಭಾಗ ಮೈಸೂರು ರಾಜ್ಯಕ್ಕೆ ಸೇರಿದ ಬಳಿಕವೂ ಬೆಳಗಾವಿ ಜಿಲ್ಲೆಯನ್ನೊಳಗೊಂಡಂತೆ ಇತರೆ ಜಿಲ್ಲೆಗಳನ್ನು ಮುಂಬಯಿ ಕರ್ನಾಟಕವೆಂದು ಕರೆಯಲಾಗುತ್ತಿದೆ. ಮೈಸೂರು ಕರ್ನಾಟಕ ರಾಜ್ಯವಾದ ಬಳಿಕವೂ ಹಳೆ ಹೆಸರುಗಳೆ ಮುಂದುವರಿದ್ದವು. ಹೈದರಬಾದ್ ಕರ್ನಾಟಕ ಪ್ರದೇಶವನ್ನು ಕಲ್ಯಾಣ ಕರ್ನಾಟಕ, ಮುಂಬಯಿ ಕರ್ನಾಟಕ ಪ್ರದೇಶವನ್ನು ಕಿತ್ತೂರು ಕರ್ನಾಟಕವೆಂದು ನಾಮಕರಣ ಮಾಡಲು ಸಾಕಷ್ಟು ಹೋರಾಟಗಳು ನಡೆದಿದ್ದವು. ಹೋರಾಟದ ಫಲವಾಗಿ ಎರಡೂ ಪ್ರದೇಶಗಳ ಹೆಸರುಗಳನ್ನು ಮರು ನಾಮಕರಣ ಮಾಡಲಾಯಿತು.

ಕಾಗದದಲ್ಲಿ ಉಳಿದ ಮರು ನಾಮಕರಣ:

ಹೆಸರುಗಳ ಮರುನಾಮಕರಣ ಬಳಿಕ ಕಲ್ಯಾಣ ಕರ್ನಾಟಕ ಎನ್ನುವ ಹೆಸರು ಆ ಪ್ರದೇಶದಲ್ಲಿನ ಆಡಳಿತ ವ್ಯವಸ್ಥೆಯ ಪ್ರತಿ ಹಂತದಲ್ಲೂ ಜಾರಿಗೆ ಬಂದಿದೆ. ಈಶಾನ್ಯ ಸಾರಿಗೆ ಕಲ್ಯಾಣ ಕರ್ನಾಟಕ ಸಾರಿಗೆ ಆಗಿರುವುದು ಇದಕ್ಕೆ ಒಂದು ನಿದರ್ಶನ. ಆದರೆ ಕಿತ್ತೂರು ಕರ್ನಾಟಕ ಹೆಸರು ಮರುನಾಮಕರಣಗೊಂಡರೂ ಆಡಳಿತ ವ್ಯವಸ್ಥೆಯಲ್ಲಿ ಮಾತ್ರ ಅನುಷ್ಠಾನಕ್ಕೆ ಬಂದಿಲ್ಲ. ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಹೆಸರು ಇಂದಿಗೂ ಕಿತ್ತೂರು ಕರ್ನಾಟಕವಾಗಿ ಬದಲಾಗಿಲ್ಲ. ಈ ಬಗೆಗೆ ನಾನಾ ಸಂಘಟನೆಗಳು ಅನೇಕ ಬಾರಿ ಸರ್ಕಾರವನ್ನು ಒತ್ತಾಯಿಸಿದ್ದರೂ ಬದಲಾವಣೆ ಇಂದಿಗೂ ಗಗನ ಕುಸುಮವಾಗಿದೆ.

ಪ್ರತಿ ಹಂತದಲ್ಲೂ ಕಿತ್ತೂರು ಕರ್ನಾಟಕ:

ಬೆಳಗಾವಿ ಸುವರ್ಣ ಸೌಧದಲ್ಲಿ ಡಿ.8ರಿಂದ ಆರಂಭಗೊಳ್ಳಲಿರುವ ಚಳಿಗಾಲ ಅಧಿವೇಶನದಲ್ಲಿ ಈ ಭಾಗದ ಜನಪ್ರತಿನಿಧಿಗಳು ವಿಷಯವನ್ನು ಪ್ರಸ್ತಾಪಿಸಬೇಕಿದೆ. ಮುಂಬಯಿ ಕರ್ನಾಟಕ ಕಿತ್ತೂರು ಕರ್ನಾಟಕವಾಗಿ ಹೆಸರು ಮರು ನಾಮಕರಣಗೊಂಡರೆ ಸಾಲದು, ಅದು ಆಡಳಿತ ವ್ಯವಸ್ಥೆಯಲ್ಲೂ ಜಾರಿಗೆ ಬರಬೇಕು ಎನ್ನುವ ಒತ್ತಾಯ ಆಗಬೇಕಿದೆ. ಅಂದಾಗ ಮಾತ್ರ ಮರುನಾಮಕರಣ ಮಾಡಿದ್ದು ಸಾರ್ಥಕವಾಗಲಿದೆ.

ಆಡಳಿತ ವ್ಯವಸ್ಥೆಯ ಪ್ರತಿ ಹಂತದಲ್ಲೂ ಕಿತ್ತೂರು ಕರ್ನಾಟಕ ಆಗುವ ಜತೆಗೆ ಕಲ್ಯಾಣ ಕರ್ನಾಟಕದಂತೆ ಹಿಂದುಳಿದ ಪ್ರದೇಶವಾಗಿರುವ ಕಿತ್ತೂರು ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಒತ್ತು ಕೊಡುವ ಕೆಲಸ ಸರ್ಕಾರದಿಂದ ಆಗಬೇಕಿದೆ. ಅಭಿವೃದ್ದಿಯಲ್ಲಿನ ಅಸಮಾನತೆ ಪರಿಣಾಮವಾಗಿ ಕಿತ್ತೂರು ಕರ್ನಾಟಕ ಪ್ರದೇಶದಲ್ಲಿ ಆಗಾಗ್ಗೆ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬರುತ್ತಲೇ ಇದೆ. ಕೇವಲ ಜನಪರ ಸಂಘಟನೆಗಳಷ್ಟೆ ಅಲ್ಲ. ಜನಪ್ರತಿನಿಧಿಗಳು ಕೂಡ ಪ್ರತ್ಯೇಕ ರಾಜ್ಯ ನಿರ್ಮಾಣದ ಕುರಿತು ಮಾತನಾಡುತ್ತಲೇ ಇದ್ದಾರೆ.

ಎಲ್ಲ ಕ್ಷೇತ್ರಗಳಲ್ಲೂ ಹಿಂದೆ:

ಕಿತ್ತೂರು ಕರ್ನಾಟಕವು ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಇನ್ನೂ ಸಾಕಷ್ಟು ಅಭಿವೃದ್ಧಿ ಹೊಂದಬೇಕಿದೆ. ಇಲ್ಲಿನ ಯುವ ಜನಾಂಗ ಇಂದಿಗೂ ಉದ್ಯೋಗಾವಕಾಶ ಅರಸಿ ಬೆಂಗಳೂರು, ಪುಣೆ, ಗೋವಾ, ಮಂಗಳೂರು ಪ್ರದೇಶಗಳಿಗೆ ಹೋಗುವ ಸ್ಥಿತಿ ಇದೆ. ಇದನ್ನು ತಪ್ಪಿಸುವ ಕೆಲಸ ಆಗಬೇಕಿದೆ. ಇಲ್ಲಿಯ ಯುವಕರಿಗೆ ಸ್ಥಳೀಯವಾಗಿಯೇ ಉತ್ತಮ ಉದ್ಯೋಗಾವಕಾಶಗಳ ಸೃಷ್ಟಿ ಆಗಬೇಕಿದೆ. ಆ ನಿಟ್ಟಿನಲ್ಲಿ ಸರ್ಕಾರ ಬೃಹತ್ ಕೈಗಾರಿಕೆಗಳ ಸ್ಥಾಪನೆ, ಮಾಹಿತಿ ತಂತ್ರಜ್ಞಾನ ಕೇಂದ್ರಗಳ ಸ್ಥಾಪನೆಗೆ ಒತ್ತು ನೀಡಬೇಕಿದೆ.

ಶೈಕ್ಷಣಿಕ ಅಭಿವೃದ್ಧಿ ಮತ್ತು ಕೈಗಾರಿಕೆಗಳ ಸ್ಥಾಪನೆ ಜತೆಗೆ ಈ ಭಾಗದಲ್ಲಿ ನನೆಗುದಿಗೆ ಬಿದ್ದಿರುವ ಮಹತ್ವಾಕಾಂಕ್ಷಿ ಮಹಾದಾಯಿ ಯೋಜನೆ ಅನುಷ್ಠಾನ, ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಅನುಷ್ಠಾನಕ್ಕಾಗಿ ಕೇಂದ್ರವನ್ನು ಒತ್ತಾಯಿಸುವ ಕೆಲಸ ಅಧಿವೇಶನದಲ್ಲಿ ಆಗಬೇಕಿದೆ. ಕೇಂದ್ರದ ಮೇಲೆ ಒತ್ತಡ ಹಾಕುವ ಕೆಲಸ ಆಗದ ಹೊರತು ಇಲ್ಲಿನ ನೀರಾವರಿ, ಕುಡಿವ ನೀರಿನ ಸಮಸ್ಯೆಗೆ ಪರಿಹಾರಿ ಮರಿಚಿಕೆ ಆಗಲಿದೆ.

ರೈತರ ಸಮಸ್ಯೆಗೆ ಪರಿಹಾರ:

ಕಿತ್ತೂರು ಕರ್ನಾಟಕ ಇಂದು ರಾಜ್ಯದಲ್ಲಿ ಅತೀ ಹೆಚ್ಚು ಕಬ್ಬು ಬೆಳೆಯುವ ಪ್ರದೇಶವಾಗಿದ್ದು, ಕಬ್ಬಿಗೆ ಬೆಲೆ ನಿಗದಿ ಸೇರಿದಂತೆ ಇತರ ವಿಷಯಗಳ ಬಗೆಗೆ ಪ್ರತಿವರ್ಷ ರೈತರು ಬೀದಿಗಿಳಿದು ಹೋರಾಟ ನಡೆಸುವುದನ್ನು ತಪ್ಪಿಸಲು ಗಂಭೀರ ಚಿಂತನೆ ಅಧಿವೇಶನದಲ್ಲಿ ನಡೆಯಬೇಕಿದೆ. ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿ ವಿಷಯ ಕೇಂದ್ರಕ್ಕೆ ಸಂಬಂಧಿಸಿದ್ದು ಎನ್ನುವ ಪಲಾಯನವಾದ ಬಿಟ್ಟು, ಕಬ್ಬು ಬೆಳೆಗಾರರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ವ್ಯವಸ್ಥೆ ಬಗೆಗೆ ಜನಪ್ರತಿನಿಧಿಗಳು ಚಿಂತನೆ ನಡೆಸಬೇಕಿದೆ.

ಬೆಳಗಾವಿ ಅಧಿವೇಶನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಪಾಲಿಗೆ ಪಿಕ್‌ನಿಕ್ ಸ್ಪಾಟ್ ಆಗದೇ, ಈ ಭಾಗದ ಜನತೆ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಧ್ವನಿ ಆಗಬೇಕಿದೆ. ಅಂದಾಗ ಮಾತ್ರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅಧಿವೇಶನ ನಡೆಸಿದ್ದು, ಸಾರ್ಥಕವಾಗಲಿದೆ. ಇಲ್ಲದೆ ಹೋದಲ್ಲಿ ಅಧಿವೇಶನ ಕೇವಲ ಪಿಕ್‌ನಿಕ್ ಸ್ಥಳವಾಗಲಿದೆ.

  • ವಿಠ್ಠಲ ಆರ್. ಬಲಕುಂದಿ
Scroll to Top