ಉಪಚುನಾವಣೆ: ಕಮಲ ಪಾಳೆಯಲ್ಲಿ ದಿನಕ್ಕೊಂದು ಹೆಸರು!

ಬಾಗಲಕೋಟೆ ವಿಧಾನಸಭೆ ಕ್ಷೇತ್ರ ಈ ಹಿಂದೆ ಎರಡು ಉಪಚುನಾವಣೆ ಎದುರಿಸಿದ್ದು, ಇದೀಗ ಶಾಸಕ ಎಚ್.ವೈ. ಮೇಟಿ ಅವರ ನಿಧನದಿಂದಾಗಿ ಮತ್ತೊಂದು ಉಪಚುನಾವಣೆ ಎದುರಿಸಲು ಸಜ್ಜಾಗುತ್ತಿದೆ. ಬಿಜೆಪಿಯ ಭದ್ರಕೋಟೆ ಎಂದು ಹೇಳುವ ಈ ಕ್ಷೇತ್ರವನ್ನು ದಿ. ಶಾಸಕ ಎಚ್.ವೈ. ಮೇಟಿ ಅವರು ಎರಡು ಬಾರಿ ಶಾಸಕರಾಗುವ ಮೂಲಕ ‘ಕೈ’ ಕೋಟೆಯಾಗಿ ರೂಪಿಸಿದ್ದಾರೆ. ಆ ಕೋಟೆಯ ಮೇಲಿನ ಹಿಡಿತ ಮುಂಬರುವ ಉಪಚುನಾಣೆಯಲ್ಲೂ ಮುಂದುವರಿಯುತ್ತೋ ಹೇಗೆ ಎನ್ನುವುದು ಕುತೂಹಲದ ಸಂಗತಿ ಆಗಿದೆ.

ದಿ. ಶಾಸಕ ಎಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಅವರ ಕುಟುಂಬಸ್ಥರಿಗೆ ಟಿಕೆಟ್ ಸಿಗಲಿದೆ ಎನ್ನುವ ವಿಶ್ವಾಸವನ್ನು ಬಹುತೇಕ ಕಾಂಗ್ರೆಸ್ಸಿಗರು ಸಹಜವಾಗಿಯೇ ವ್ಯಕ್ತ ಪಡಿಸುತ್ತಿದ್ದಾರೆ. ಅದರ ಮಧ್ಯೆ ಹಲವರು ಟಿಕೆಟ್‌ಗಾಗಿ ಪ್ರಯತ್ನ ಶುರುಮಾಡಿಕೊಂಡಿದ್ದಾರೆ.

ಗೆಲುವಿನ ಉಮೇದಿನಲ್ಲಿ ಬಿಜೆಪಿಗರು:

ಬಿಹಾರ ವಿಧಾನಸಭೆ ಚುನಾವಣೆ ಗೆಲುವಿನ ಉಮೇದಿನಲ್ಲಿರುವ ರಾಜ್ಯ ಬಿಜೆಪಿಗರು ಕಳೆದುಕೊಂಡಿರುವ ಕೇಸರಿ ಕೋಟಿಯನ್ನು ಮತ್ತೆ ವಾಪಸ್ ಪಡೆದುಕೊಳ್ಳಲು ಉತ್ಸುಕರಾಗಿದ್ದಾರೆ. ಮಾಜಿ ಶಾಸಕ ವೀರಣ್ಣ ಚರಂತಿಮಠ ಬಿಟ್ಟರೆ ಇನ್ನಾರು ಅಭ್ಯರ್ಥಿ ಎನ್ನುವ ಸ್ಥಿತಿಯ ಮಧ್ಯೆಯೂ ಟಿಕೆಟ್ ದಂಗಲ್ ಶುರುವಾಗಿದೆ. ಮಾಜಿ ಶಾಸಕ ಚರಂತಿಮಠ ಅವರು ಕ್ಷೇತ್ರದಲ್ಲಿ ಸಾಕಷ್ಟು ಪ್ರಭಾವಿ ಮುಖಂಡರಾಗಿದ್ದರೂ ಪಕ್ಷದಲ್ಲಿ ಆಂತರಿಕ ಅಸಮಾಧಾನ ಕಡಿಮೆ ಏನಿಲ್ಲ. ಜತೆಗೆ ಜಿಲ್ಲಾ ಬಿಜೆಪಿಯಲ್ಲೂ ಅವರ ವಿರೋಧಿ ಬಣವಿದೆ. ಚರಂತಿಮಠರ ವಿರೋಧಿ ಬಣದಿಂದಲೂ ಟಿಕೆಟ್ ಗಿಟ್ಟಿಸುವ ಪ್ರಯತ್ನಗಳು ಶುರುವಾಗಿವೆ.

ದಿನಕ್ಕೊಂದು ಹೆಸರು:

ಬಿಜೆಪಿಯಲ್ಲಿ ಚರಂತಿಮಠರೊಂದಿಗೆ ದಿನಕ್ಕೊಂದು ಹೊಸ ಹೆಸರುಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿವೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವಿರುದ್ಧ ಪೈಪೋಟಿಗೆ ಇಳಿಯುವುದು, ಪ್ರವಾಹದ ವಿರುದ್ಧ ಈಜುವುದು ಅಂದುಕೊಂಡಷ್ಟು ಸುಲಭವಲ್ಲ. ಆದರೂ ಸದ್ಯಕ್ಕೆ ಟಿಕೆಟ್ ಗಿಟ್ಟಿಸಿಕೊಂಡಲ್ಲಿ, ಭವಿಷ್ಯದ ರಾಜಕಾರಣದಲ್ಲಿ ಅನುಕೂಲವಾಗಲಿದೆ ಎನ್ನುವ ಕಾರಣಕ್ಕೆ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳು ಹುಟ್ಟುಕೊಳ್ಳುತ್ತಿದ್ದಾರೆ.

ಬೂದಿಮುಚ್ಚಿದ ಕೆಂಡ:

ಸದ್ಯ ಬಿಜೆಪಿಯಲ್ಲಿ ಮುಖಂಡರ ನಡುವಿನ ಆಂತರಿಕ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತಿದೆ. ಮೇಲ್ನೋಟಕ್ಕೆ ಎಲ್ಲವೂ ಸರಿ ಇರುವಂತೆ ಕಾಣಿಸಿಕೊಂಡರೂ ಒಳೊಳಗೆ ಧಗಧಗಿಸುತ್ತಲೇ ಇದೆ. ಇದನ್ನು ಶಮನ ಮಾಡಲು ಪಕ್ಷದಲ್ಲಿ ಇನ್ನಿಲ್ಲದ ಪ್ರಯತ್ನಗಳು ನಡೆಯುತ್ತಿವೆಯಾದರೂ ಯಾವುದೇ ಬದಲಾವಣೆ ಕಾಣಿಸುತ್ತಿಲ್ಲ. ಮುಖಂಡರ ನಡುವಿನ ಹಠಮಾರಿ ಧೋರಣೆ ಕಡಿಮೆ ಆಗುತ್ತಿಲ್ಲ. ಆದಾಗ್ಯೂ ಪಕ್ಷದ ಹಿರಿಯ ಮುಖಂಡರು ಅಸಮಾಧಾನಿತರನ್ನೆಲ್ಲ ಸಮಾಧಾನಗೊಳಿಸುವ ಪ್ರಯತ್ನದಲ್ಲಿದ್ದಾರೆ.

ಅರ್ಧಗಳೆದ ಅವಧಿ:

ರಾಜ್ಯ ಕಾಂಗ್ರೆಸ್ ಸರ್ಕಾರ ಎರಡುವರೆ ವರ್ಷ ಅಧಿಕಾರ ನಡೆಸಿ, ಆಡಳಿತಾವಧಿಯ ಅರ್ಧ ದಾರಿ ಕ್ರಮಿಸಿದೆ. ಇನ್ನರ್ಧ ಉಳಿದಿದೆ. ಕಳೆದ ಎರಡುವರೆ ವರ್ಷದಲ್ಲಿ ಅದರ ಆಡಳಿತ ವೈಖರಿಗೆ ಉಪಚುನಾವಣೆ ಕೈಗನ್ನಡಿ ಆಗಲಿದೆ. ಕಳೆದ ಎರಡುವರೆ ವರ್ಷಗಳ ಅವಧಿಯಲ್ಲಿನ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಅಖಾಡಕ್ಕೆ ಧುಮುಕಬೇಕಿದೆ. ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವೇ ಬಂದು ಚುನಾವಣೆ ಅಖಾಡಕ್ಕೆ ಇಳಿಯಲಿದೆ. ಇಂತಹ ಸನ್ನಿವೇಶದಲ್ಲಿ ಪ್ರವಾಹದ ವಿರುದ್ಧ ಈಜುವುದೇ ಒಂದು ಪವಾಡ. ಹಾಗಾಗಿ ಕಳೆದುಕೊಂಡಿರುವ ಕೇಸರಿ ಕೋಟೆಯನ್ನು ವಾಪಸ್ ಪಡೆಯಲು ಬಿಜೆಪಿ ಸಾಕಷ್ಟು ಬೆವರು ಹರಿಸಬೇಕಿದೆ.

‘ಕೈ’ ವಿರುದ್ಧ ಅಸ್ತ್ರಗಳ ಮೂಟೆ:

ಬಿಜೆಪಿ ಕೈಯಲ್ಲಿ ಕಾಂಗ್ರೆಸ್ ವಿರುದ್ಧ ಹೂಡಲು ಸಾಕಷ್ಟು ಅಸ್ತ್ರಗಳಿವೆ. ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡಲು ಕ್ಷೇತ್ರದ ಬಿಜೆಪಿ ಪಾಳೆಯದಲ್ಲಿ ಇರುವ ವ್ಯತ್ಯಾಸಗಳನ್ನು ಸರಿ ಪಡಿಸುವ ಕೆಲಸ ಆಗಬೇಕಿದೆ. ಅಂದುಕೊಂಡ ಮಟ್ಟದಲ್ಲಿ ಸರಿಪಡಿಸುವ ಕೆಲಸ ನಡೆಯುತ್ತಿಲ್ಲ ಎನ್ನುವ ಬೇಸರವನ್ನು ಬಿಜೆಪಿ ಮುಖಂಡರೇ ವ್ಯಕ್ತ ಪಡಿಸುತ್ತಿದ್ದಾರೆ.

ಏತನ್ಮಧ್ಯೆ ಹೊಸಬರು ಟಿಕೆಟ್ ಪ್ರಯತ್ನ ಆರಂಭಿಸಿದ್ದಾರೆ. ಮುಂದಿನ ಎರಡುವರೆ ವರ್ಷಗಳ ಅವಧಿಗಾಗಿನ ಅಧಿಕಾರಕ್ಕಾಗಿ ಏಕೆ ಟಿಕೆಟ್‌ಗಾಗಿ ಬಡಿದಾಡಬೇಕು. ಟಿಕೆಟ್ ಸಿಕ್ಕರೂ ಅಧಿಕಾರರೂಢ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸೆಡ್ಡು ಹೊಡೆಯುವುದು ಸಣ್ಣ ಮಾತಲ್ಲ ಎನ್ನುವ ವಾದದ ಮಧ್ಯೆಯೇ ಭವಿಷ್ಯದ ಲೆಕ್ಕಾಚಾರಗಳಿಂದ ಆಕಾಂಕ್ಷಿಗಳ ಸಂಖ್ಯೆ ಅಧಿಕವಾಗುತ್ತಿದೆ.

ಬೇಕಿದೆ ಆದ್ಯ ಗಮನ:

ಉಪ ಚುನಾವಣೆಯ ಅಖಾಡಕ್ಕೆ ಯಾರನ್ನು ಇಳಿಸಬೇಕು ಎನ್ನುವುದಕ್ಕಿಂತ ಮೊದಲು ಪಕ್ಷದಲ್ಲಿ ಬೂದಿ ಮುಚ್ಚಿದ ಕೆಂಡದಂತಿರುವ ಅಸಮಾಧಾನ ನೀಗಿಸಬೇಕಿದೆ. ಅದು ಸಾಧ್ಯವಾದಾಗ ಮಾತ್ರ ಮುಂದಿನದು ಎನ್ನುವ ವಾತಾವರಣವಿದೆ. ಏನೇ ಆಗಲಿ ಉಪಚುನಾವಣೆಯಲ್ಲಿ ಕೇಸರಿ ಕೋಟೆ ವಾಪಸ್ ಪಡೆಯಲೇ ಬೇಕು ಎನ್ನುವ ಉತ್ಸಾಹದಲ್ಲಿರುವ ರಾಜ್ಯ ಬಿಜೆಪಿಗರು ಕ್ಷೇತ್ರದಲ್ಲಿನ ಆಂತರಿಕ ಅಡತಡೆಗಳತ್ತ ಆದ್ಯ ಗಮನ ಹರಿಸಬೇಕಿದೆ. ಇಲ್ಲದೆ ಹೋದಲ್ಲಿ ದಿನಕ್ಕೊಬ್ಬರು ಹೊಸದಾಗಿ ಟಿಕೆಟ್ ಆಕಾಂಕ್ಷಿಗಳು ಹುಟ್ಟಿಕೊಳ್ಳುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಕೊನೆಗೆ ಈ ಸಮಸ್ಯೆಯೇ ಬಿಜೆಪಿಗರಿಗೆ ಸವಾಲಿನ ಪ್ರಶ್ನೆಯಾಗಿ ಪರಿಣಮಿಸಲಿದೆ ಎನ್ನುವ ಮಾತು ಆ ಪಕ್ಷದ ಕಾರ್ಯಕರ್ತರ ವಲಯದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ.

  • ವಿಠ್ಠಲ ಆರ್. ಬಲಕುಂದಿ
Scroll to Top