ಬಾಗಲಕೋಟೆ: ಲೋಕಸಭೆ ಚಳಿಗಾಲ ಅಧಿವೇಶನ ಆರಂಭಗೊಳ್ಳುತ್ತಿದ್ದು, ಬಾಗಲಕೋಟೆ ಲೋಕಸಭೆ ಸದಸ್ಯರು ಈ ಬಾರಿಯಾದರೂ ರಾಜ್ಯದ ಸಮಸ್ಯೆಗಳನ್ನು ಬಿಡಿ, ಕನಿಷ್ಠ ಪಕ್ಷ ಕ್ಷೇತ್ರದ ಸಮಸ್ಯೆಗಳ ಬಗೆಗೆ ಬೆಳಕು ಚೆಲ್ಲುವ ಕೆಲಸ ಮಾಡಬೇಕಿದೆ. ದೀರ್ಘಾವಧಿಯಿಂದ ನನೆಗುದಿಗೆ ಬಿದ್ದಿರುವ ಅಭಿವೃದ್ಧಿ ಕಾರ್ಯಗಳ ಅನುಷ್ಠಾನಕ್ಕೆ ಸಂಸದರು ಮುಂದಾಗಬೇಕಿದೆ.
ಬಾಗಲಕೋಟೆ ಲೋಕಸಭೆ ಕ್ಷೇತ್ರದ ಸಂಸದರಿಗೆ ರಾಜಕಾರಣದಲ್ಲಿ ಎಷ್ಟು ಅನುಭವವಿದೆಯೋ ಅಷ್ಟೆ ವರ್ಷಗಳಿಂದ ಇಲ್ಲಿಯ ಯೋಜನೆಗಳು ನನೆಗುದಿಗೆ ಬಿದ್ದಿವೆ. ಅವುಗಳ ಬಗೆಗೆ ಅಧಿವೇಶನದಲ್ಲಿ ಚರ್ಚಿಸಬೇಕು ಎನ್ನುವುದು ಕ್ಷೇತ್ರದ ಜನತೆಯ ಆಶಯವಾಗಿದೆ.
ಕೇಂದ್ರ ಪರಿಸರ ಇಲಾಖೆ ಅನುಮತಿ:
ಬಾಗಲಕೋಟೆ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಬಾಗಲಕೋಟೆ ಮತ್ತು ಗದಗ ಜಿಲ್ಲೆಯ ನರಗುಂದ, ರೋಣ ಪ್ರದೇಶಗಳ ಪಾಲಿಗೆ ವರದಾನವಾಗಲಿರುವ ಮಹತ್ವಾಕಾಂಕ್ಷಿ ಮಹಾದಾಯಿ ಯೋಜನೆ ಅನುಷ್ಠಾನಕ್ಕೆ ಇರುವ ತಾಂತ್ರಿಕ ಅಡ್ಡಿಗಳನ್ನು ನಿವಾರಿಸುವತ್ತ ಸಂಸದರು ಗಮನ ಹರಿಸಬೇಕಿದೆ. ವ್ಯರ್ಥವಾಗಿ ಹರಿದು ಸಮುದ್ರ ಸೇರುತ್ತಿರುವ ಮಹಾದಾಯಿ, ಕಳಸಾ-ಬಂಡೂರಿ ನಾಲಾ ನೀರಿಗಾಗಿ ಅರ್ಧ ಶತಮಾನದಿಂದ ಹೋರಾಟ ನಡೆಯುತ್ತಿದೆ. ಮೊದಲು ಹೋರಾಟ ಆರಂಭಗೊಂಡಿದ್ದೆ ಬಾದಾಮಿ ತಾಲೂಕಿನಿಂದ ಎನ್ನುವುದು ಗಮನಾರ್ಹ ಸಂಗತಿ.
ನಿರಂತರ ಜನಪರ ಹೋರಾಟ, ಕಾನೂನು ಹೋರಾಟಗಳ ಮೂಲಕ ಮಹಾದಾಯಿ, ಕಳಸಾ- ಬಂಡೂರಿ ನಾಲಾ ನೀರನ್ನು ಬಳಕೆ ಮಾಡಿಕೊಳ್ಳಲು ಮಹಾದಾಯಿ ನ್ಯಾಯಾಧೀಕರಣ ನೀರು ಹಂಚಿಕೆ ಮಾಡುವ ಕುರಿತು ಕೇಂದ್ರಕ್ಕೆ ವರದಿ ಸಲ್ಲಿಸಿದೆ. ಸದ್ಯ ರಾಜ್ಯದ ಪಾಲಿನ ನೀರನ್ನು ಬಳಕೆ ಮಾಡಿಕೊಳ್ಳಲು ಪರಿಸರ ಇಲಾಖೆ ಅನುಮತಿ ಮಾತ್ರ ಬಾಕಿ ಉಳಿದಿದೆ. ಅದು ಕ್ಲೀಯರ್ ಆಗುತ್ತಿಲ್ಲ.
ಕ್ಷೇತ್ರದ ಸಂಸದರಾದ ಪಿ.ಸಿ. ಗದ್ದಿಗೌಡರ ಈ ಬಗೆಗೆ ಗಮನ ಸೇಳೆಯುವ ಕೆಲಸ ಮಾಡಬೇಕಿದೆ. ಪರಿಸರ ಇಲಾಖೆ ಅನುಮತಿ ಸಿಕ್ಕರೆ ಸಾಕು, ಬೆಳಗಾವಿ, ಧಾರವಾಡ ಜಿಲ್ಲೆಗಳು ಸೇರಿದಂತೆ ಬಾಗಲಕೋಟೆ ಲೋಕಸಭೆ ಕ್ಷೇತ್ರದ ಗದಗ ಜಿಲ್ಲೆಯ ನರಗುಂದ, ರೋಣ, ಬಾಗಲಕೋಟೆ ಜಿಲ್ಲೆಯ ಬಾದಾಮಿ, ಹುನಗುಂದ ತಾಲೂಕಿನ ಮಲಪ್ರಭಾ ನದಿ ತೀರದ ಗ್ರಾಮಗಳ ಜನತೆಯ ಕುಡಿವ ನೀರಿನ ಸಮಸ್ಯೆ ಶಾಶ್ವತ ನಿವಾರಣೆಗೆ ಅನುಕೂಲವಾಗಲಿದೆ.
ಕೃಷ್ಣಾ ನ್ಯಾಯಾಧೀಕರಣ ಆದೇಶ:
ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆ ಸೇರಿದಂತೆ ಗದಗ, ಕೊಪ್ಪಳ, ಯಾದಗಿರಿ, ಕಲಬುರಗಿ, ರಾಯಚೂರ ಜಿಲ್ಲೆಗಳ ಪಾಲಿಗೆ ವರದಾನವಾಗಲಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ -3ರ ಅನುಷ್ಠಾನಕ್ಕೆ ಕೃಷ್ಣಾ ನ್ಯಾಯಾಧೀಕರಣ-2ರ ವರದಿಯ ಅಧಿಸೂಚನೆಯನ್ನು ಕೇಂದ್ರ ಹೊರಡಿಸಬೇಕಿದೆ. ಕೃಷ್ಣಾ ನದಿ ನೀರು ಹಂಚಿಕೆ ಕುರಿತಂತೆ ಕೃಷ್ಣಾ ನ್ಯಾಯಾಧೀಕರಣ -2ರ ಅಂತಿಮ ವರದಿ ಸಲ್ಲಿಕೆ ಆಗಿ ದಶಕವೇ ಸಂದಿದೆ. ನೆರೆ ರಾಜ್ಯಗಳ ತಕರಾರನ್ನು ನೆಪವಾಗಿಸಿಕೊಂಡಿರುವ ಕೇಂದ್ರ ಸರ್ಕಾರ ವರದಿಯ ಹಿನ್ನೆಲೆಯಲ್ಲಿ ಅಧಿಸೂಚನೆ ಹೊರಡಿಸುವುದನ್ನು ವಿಳಂಬ ಮಾಡುತ್ತಿದೆ.
ಕಾವೇರಿ ನದಿ ನೀರು ಹಂಚಿಕೆಯಲ್ಲಿ ಅನುಸರಿಸಿದ ನೀತಿಯನ್ನೇ ಕೃಷ್ಣಾ ನ್ಯಾಯಾಧೀಕರಣ -2ರಲ್ಲೂ ಅನುಸರಿಸುವ ಮೂಲಕ ಕೇಂದ್ರ ಅಧಿಸೂಚನೆ ಹೊರಡಿಸಿದಲ್ಲಿ 5 ಲಕ್ಷ ಎಕರೆಗೂ ಅಧಿಕ ಜಮೀನು ನೀರಾವರಿ ವ್ಯಾಪ್ತಿಗೆ ಒಳಪಡಲಿದೆ. ಇದರಲ್ಲಿ ಅಖಂಡ ವಿಜಯಪುರ ಜಿಲ್ಲೆಯ ಲಕ್ಷಕ್ಕೂ ಅಧಿಕ ಎಕರೆ ಜಮೀನು ನೀರಾವರಿ ವ್ಯಾಪ್ತಿಗೆ ಒಳಪಡಲಿದೆ.
ಇಂತಹ ಮಹತ್ವಾಕಾಂಕ್ಷಿ ಯೋಜನೆ ರಾಜಕೀಯ ಇಚ್ಛಾಶಕ್ತಿ ಕೊರತೆ ಪರಿಣಾಮ ನನೆಗುದಿಗೆ ಬಿದ್ದಿದೆ. ಬಾಗಲಕೋಟೆ ಲೋಕಸಭೆ ಕ್ಷೇತ್ರದ ಸಂಸದರು ರಾಜ್ಯದ ಇತರ ಸಂಸದರು, ಕೇಂದ್ರದಲ್ಲಿನ ರಾಜ್ಯದ ಸಚಿವರ ಸಹಕಾರದೊಂದಿಗೆ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿ, ಸಮಸ್ಯೆಗೆ ಪರಿಹಾರ ಕಲ್ಪಿಸುವ ಕೆಲಸಕ್ಕೆ ಮುಂದಾಗಬೇಕಿದೆ.
ಕೇಂದ್ರ ಸರ್ಕಾರ ಒಂದೊಮ್ಮೆ ಕೃಷ್ಣಾ ನ್ಯಾಯಾಧೀಕರಣ -2ರ ಅಧಿಸೂಚನೆ ಹೊರಡಿಸಿದಲ್ಲಿ, ರಾಜ್ಯದಲ್ಲೂ ಯುಕೆಪಿ ಹಂತ-3ರ ಕಾರ್ಯಾನುಷ್ಠಾನ ಇನ್ನಷ್ಟು ಚುರುಕುಗೊಳ್ಳಲಿದೆ. ಈಗಾಗಲೇ ನಾಲ್ಕು ಆರ್ಥಿಕ ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿ ಅಗತ್ಯ ಕ್ರಮಗಳಿಗೆ ಮುಂದಾಗಿದೆ ಎನ್ನುವುದು ಗಮನಾರ್ಹ.
ಕಬ್ಬು ಬೆಳೆಗಾರರ ಸಮಸ್ಯೆ:
ಇದುವರೆಗೂ ಕಬ್ಬು ಬೆಳೆಗಾರರು ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಗಾಗಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರು ಮತ್ತು ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿದು ನ್ಯಾಯಯುತ ಬೆಲೆ ಪಡೆದುಕೊಳ್ಳುತ್ತಿದ್ದರು. ಈ ಬಾರಿಯ ನ್ಯಾಯಯುತ ಬೆಲೆಗೆ ಆಗ್ರಹಿಸಿ ರೈತರು ಬೀದಿಗಿಳಿದು ಹೋರಾಟ ನಡೆಸಿದಾಗ ರಾಜ್ಯ ಸರ್ಕಾರ ಕಬ್ಬು ಬೆಲೆ ನಿಗದಿ ವಿಷಯ ತಮಗೆ ಸಂಬಂಧಿಸಿದ್ದಲ್ಲ. ಅದೆನಿದ್ದರೂ ಕೇಂದ್ರದ ವಿಷಯ. ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿ ಪಡಿಸುವುದು ಕೇಂದ್ರ ಸರ್ಕಾರ, ಸಕ್ಕರೆ ಉತ್ಪಾದನೆ, ಎಥಿನಾಲ್ ಉತ್ಪಾದನೆ, ವಿದ್ಯುತ್ ಉತ್ಪಾದನೆ ಪ್ರಮಾಣ ನಿಗದಿ ಪಡಿಸುವುದು ಕೂಡ ಕೇಂದ್ರ ಸರ್ಕಾರ. ಹಾಗಾಗಿ ಕಬ್ಬಿನ ವಿಷಯ ಏನಿದ್ದರೂ ಕೇಂದ್ರಕ್ಕೆ ಸಂಬಂಧಿಸಿದ್ದು ಎಂದು ಕೇಂದ್ರದತ್ತ ಬೊಟ್ಟು ಮಾಡಿದೆ. ಪರಿಸ್ಥಿತಿ ಕೈ ಮೀರಿದಾಗ, ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಲ್ಪಿಸಿದೆ.
ಮುಂಬರುವ ವರ್ಷಗಳಲ್ಲೂ ರಾಜ್ಯ ಸರ್ಕಾರ ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿ ಕೇಂದ್ರದ್ದು ಎಂದು ರಾಜ್ಯ ಸುಮ್ಮನಾಗುವ ಸಾಧ್ಯತೆಗಳು ಹೆಚ್ಚಿವೆ. ರಾಜ್ಯದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ಜಿಲ್ಲೆಗಳ ಪೈಕಿ ಬಾಗಲಕೋಟ ಲೋಕಸಭೆ ಕ್ಷೇತ್ರವೂ ಒಂದಾಗಿದೆ. ಹಾಗಾಗಿ ಸಂಸದರು ಕಬ್ಬು ಬೆಲೆ ನಿಗದಿ ವಿಷಯವನ್ನೂ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರ ಕಲ್ಪಿಸಲು ಮುಂದಾಗಬೇಕಿದೆ.
ಪ್ರವಾಸೋದ್ಯಮ:
ಬಾಗಲಕೋಟೆ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಬಾಗಲಕೋಟೆ ಜಿಲ್ಲೆಯ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಗದಗ ಜಿಲ್ಲೆಯ ನಗರಗುಂದ ವಿಧಾನಸಭೆ ಕ್ಷೇತ್ರದ ಲಕ್ಕುಂಡಿ ಪ್ರದೇಶಗಳು ವಾಸ್ತುಶಿಲ್ಪ ಕಲೆಯಿಂದಾಗಿ ಪ್ರವಾಸಿ ತಾಣಗಳಾಗಿವೆ. ದೇಶ-ವಿದೇಶಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಈ ಪ್ರದೇಶಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವ ಅಗತ್ಯವಿದೆ. ಜತೆಗೆ ಬಾದಾಮಿ, ಐಹೊಳೆ ಪ್ರವಾಸಿ ತಾಣಗಳ ಸುತ್ತಲಿನ ಜನವಸತಿ ಪ್ರದೇಶಗಳ ಸ್ಥಳಾಂತರಕ್ಕೂ ಆದ್ಯ ಗಮನ ನೀಡಬೇಕಿದೆ. ಬಾಗಲಕೋಟೆ ಲೋಕಸಭೆ ಕ್ಷೇತ್ರವನ್ನು ಸತತ ಐದನೇ ಬಾರಿಗೆ ಪ್ರತಿನಿಧಿಸುತ್ತಿರುವ ಅನುಭವಿ ಸಂಸದರಾದ ಗದ್ದಿಗೌಡರು ಚಳಿಗಾಲ ಅಧಿವೇಶದಲ್ಲಿ ಕ್ಷೇತ್ರದಲ್ಲಿನ ಕೇಂದ್ರವೇ ಗಮನ ಹರಿಸಬೇಕಿರುವ ಸಮಸ್ಯೆಗಳನ್ನು ಪ್ರಸ್ತಾಪಿಸುವ ಮೂಲಕ ಶಾಶ್ವತ ಪರಿಹಾರ ಕಲ್ಪಿಸುವ ಕೆಲಸ ಮಾಡಬೇಕಿದೆ.
- ವಿಠ್ಠಲ ಆರ್. ಬಲಕುಂದಿ



