ಮಂತ್ರಿಗಿರಿ ನಿರೀಕ್ಷೆಯಲ್ಲಿದ್ದವರ ಆಸೆಗೆ ಬ್ರೇಕ್

ಬಾಗಲಕೋಟೆ: ರಾಜ್ಯ ಕಾಂಗ್ರೆಸ್‌ನಲ್ಲಿ ತಾರಕಕ್ಕೇರಿದ್ದ ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ವಿಷಯ ಬೆಳಗಾವಿ ಚಳಿಗಾಲ ಅಧಿವೇಶನದ ಹಿನ್ನೆಲೆಯಲ್ಲಿ ತಣ್ಣಗಾಗಿದ್ದು, ಇತ್ತೀಚಿನ ದಿನಗಳಲ್ಲಿ ದಿನಬೆಳಗಾದರೆ ಪರೋಕ್ಷವಾಗಿ ಮಾತಿನ ಏಟಿಗೆ ಇದಿರೇಟು ನೀಡುವಲ್ಲಿ ನಿರತರಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಶುಕ್ರವಾರ ಬೆಳಗಿನ ಉಪಹಾರಕ್ಕೆ ಸೇರುವ ಮೂಲಕ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಇದರಿಂದಾಗಿ ಸಂಪುಟ ವಿಸ್ತರಣೆ ಬಗೆಗೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದವರಲ್ಲಿ ನಿರಾಸೆ ಭಾವ, ಸಂಪುಟದಲ್ಲಿದ್ದವರಿಗೆ ನಿರಾಳಭಾವ ಮೂಡಿಸಿದೆ.

ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ರಾಜ್ಯ ಕಾಂಗ್ರೆಸ್ಸಿನಲ್ಲಿ ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ಚಟುವಟಿಕೆಗಳು ತೀವ್ರವಾಗಿ ಗರಿಗೆದರಿದ್ದವು. ಪರಿಣಾಮವಾಗಿ ಬಣ ರಾಜಕಾರಣ ಜೋರಾಗಿತ್ತು. ರಾಜ್ಯ ಕಾಂಗ್ರೆಸ್ಸಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಪ್ರತಿಪಕ್ಷಗಳು ಭಾರಿ ಕುತೂಹಲದಿಂದ ನೋಡುತ್ತಿದ್ದವು.

ಹುಸಿಯಾದ ನಿರೀಕ್ಷೆ:

ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಹಾಗೂ ಅವರ ಬೆಂಬಲಿಗರ ನಡುವಿನ ರಾಜಕೀಯ ತಿಕ್ಕಾಟದಿಂದ ಕಾಂಗ್ರೆಸ್ಸಿನಲ್ಲಿ ಏನೆಲ್ಲ ಬೆಳವಣಿಗೆಗಳು ಆಗಬಹುದು ಎನ್ನುವ ನಿರೀಕ್ಷೆಯಲ್ಲಿ ರಾಜ್ಯದ ಜನತೆ ಕೂಡ ಇದ್ದರು. ಕಾಂಗ್ರೆಸ್ ಹೈಕಮಾಂಡ್ ಇಲ್ಲಿಯ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಿದ ಹಿನ್ನೆಲೆಯಲ್ಲಿ ಉಭಯ ನಾಯಕರ ಉಪಹಾರ ಸಭೆಯೊಂದಿಗೆ ಎಲ್ಲರ ನಿರೀಕ್ಷೆಗಳು ಹುಸಿಗೊಂಡಿವೆ. ಆದರೆ ಇದು ತಾತ್ಕಾಲಿಕ ಎನ್ನುವ ಮಾತುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ.

ತತ್ಕಾಲಿನ ವಿರಾಮ:

ಬೆಳಗಾವಿಯಲ್ಲಿ ಡಿಸೆಂಬರ್‌ನಲ್ಲಿ ಚಳಿಗಾಲ ಅಧಿವೇಶನ ಆರಂಭಗೊಳ್ಳಲಿದ್ದು, ಪಕ್ಷದಲ್ಲಿನ ಚಟುವಟಿಕೆಗಳಿಂದ ಸರ್ಕಾರಕ್ಕೆ ಮುಜುಗವಾಗಬಾರದು ಎನ್ನುವ ಕಾರಣದಿಂದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಒಗ್ಗಟ್ಟಿನ ಪ್ರದರ್ಶನಕ್ಕೆ ಮುಂದಾಗಿದ್ದು, ನಾಯಕತ್ವ ಬದಲಾವಣೆ, ಸಂಪುಟ ಪುನಾರಚಣೆ ವಿಷಯ ಇತ್ಯರ್ಥಗೊಳ್ಳದೇ ಬೂದಿ ಮುಚ್ಚಿದ ಕೆಂಡವಾಗಿ ಹಾಗೆ ಉಳಿದುಕೊಂಡಿದೆ. ಅಧಿವೇಶನದ ಬಳಿಕ ಅದು ಯಾವ ಸ್ವರೂಪ ಪಡೆದುಕೊಳ್ಳಲಿದೆ. ತತ್ಕಾಲಿನ ರಾಜಕೀಯ ಕದನ ವಿರಾಮ ಯಾರಿಗೆ ವರವಾಗಲಿದೆ ಎನ್ನುವುದು ಕುತೂಹಲದ ಸಂಗತಿ ಆಗಿದೆ.

ಸದ್ಯದ ಬೆಳವಣಿಗೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗರು ನಿರಾಳವಾದಂತೆ ಕಾಣಿಸುತ್ತಿದೆ. ಉಪ ಮುಖ್ಯಮಂತ್ರಿಗಳ ಬೆಂಬಲಿಗರೂ ನಾಯಕತ್ವ ಬದಲಾವಣೆ ವಿಷಯ ಒಂದು ಹಂತಕ್ಕೆ ಬಂದಿತಲ್ಲ ಎನ್ನುವ ಮಟ್ಟಿಗೆ ಸಮಾಧಾನ ಪಡುವಂತಾಗಿದೆ.

ನಿರಾಸೆ, ನಿರಾಳ ಭಾವ:

ಸಂಪುಟ ಪುನಾರಚನೆ ವಿಷಯಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಜಿಲ್ಲೆಯಲ್ಲೂ ಮಂತ್ರಿ ಸ್ಥಾನದ ಆಕಾಂಕ್ಷಿಗಳು ಇದ್ದರು. ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಬಹಿರಂಗವಾಗಿಯೇ ಮಂತ್ರಿಸ್ಥಾನದ ಪ್ರಬಲ ಆಕಾಂಕ್ಷಿ ಎಂದು ಹೇಳಿಕೊಂಡಿದ್ದರು. ಆ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳನ್ನು ಮಾಡುತ್ತಿರುವುದಾಗಿ ಹೇಳಿದ್ದರು. ಬೀಳಗಿ ಶಾಸಕ ಜೆ.ಟಿ. ಪಾಟೀಲರೂ ಮಂತ್ರಿಸ್ಥಾನದ ಆಕಾಂಕ್ಷಿ ಆಗಿದ್ದರು. ಬಹಿರಂಗವಾಗಿ ಏನನ್ನೂ ಹೇಳದಿದ್ದರೂ, ಮಂತ್ರಿಸ್ಥಾನದ ಬಗೆಗೆ ಯಾರೊಂದಿಗೆ ಮಾತನಾಡಬೇಕೋ ಮಾತನಾಡಿದ್ದಾಗಿ ಹೇಳಿದ್ದರು.

ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವರು ಸಂಪುಟ ಪುನಾರಚನೆ ವೇಳೆ ಅಬಕಾರಿ ಖಾತೆ ಬದಲಾಗಿ, ಅಭಿವೃದ್ಧಿ ಪರ ಖಾತೆ ಕೇಳುವುದಾಗಿ ಹೇಳುವ ಮೂಲಕ ಸಂಪುಟದಲ್ಲಿ ತಮ್ಮ ಸ್ಥಾನ ಅಬಾಧಿತ ಎನ್ನುವ ರೀತಿಯಲ್ಲಿ ಬಹಿರಂಗ ಹೇಳಿಕೆ ನೀಡಿದ್ದರು.

ಜಿದ್ದಾಜಿದ್ದಿಯ ಅಖಾಡ:

ನಾಯಕತ್ವ ಬದಲಾವಣೆಗಿಂತ ಸಂಪುಟ ಪುನಾರಚನೆ ವೇಳೆ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎನ್ನುವ ಚರ್ಚೆ ಜಿಲ್ಲೆಯ ರಾಜಕೀಯ ವಲಯದಲ್ಲಿ ಜೋರಾಗಿತ್ತು. ಶಾಸಕ ಕಾಶಪ್ಪನವರ ಕುಟುಂಬ ರಾಜಕೀಯ ಕುಟುಂಬವಾಗಿದ್ದು, ಯಾವಾಗಲೂ ಕಾಂಗ್ರೆಸ್ ನಿಷ್ಠರಾಗಿ ನಡೆದುಕೊಂಡು ಬಂದಿದ್ದು, ವಿಜಯಾನಂದ ಕಾಶಪ್ಪನವರ ಎರಡನೇ ಬಾರಿಗೆ ಶಾಸಕರಾಗಿದ್ದಾರೆ. ಅವರಿಗೆ ಈ ಬಾರಿ ಅವಕಾಶ ಸಿಗಲಿದೆ ಎನ್ನುವ ಅದಮ್ಯ ವಿಶ್ವಾಸ ಅವರ ಬೆಂಬಲಿಗರಲ್ಲಿತ್ತು. ಜಿಲ್ಲೆಯಲ್ಲೂ ಕಾಶಪ್ಪನವರಿಗೆ ಈ ಬಾರಿ ಅವಕಾಶದ ಸಾಧ್ಯತೆಗಳು ಹೆಚ್ಚಾಗಿವೆ ಎನ್ನುವ ಮಾತುಗಳು ವ್ಯಾಪಕವಾಗಿತ್ತು.

ಇದೇ ವೇಳೆ ಜಿಲ್ಲಾ ಉಸ್ತವಾರಿ ಹಾಗೂ ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ ಅವರನ್ನು ಬದಲಾಯಿಸುವುದು ಕಷ್ಟ. ಹಿರಿಯರು, ಅನುಭವಿಕರಾಗಿದ್ದು, ರಾಜ್ಯ ಮತ್ತು ಕೇಂದ್ರದಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದಾರೆ. ಹಾಗಾಗಿ ಅವರೇ ಮುಂದುವರಿಯಲಿದ್ದಾರೆ ಎನ್ನುವುದು ತಿಮ್ಮಾಪುರ ಬೆಂಬಲಿಗರ ವಾದವಾಗಿತ್ತು. ಕಳೆದ ಎರಡುವರೆ ವರ್ಷಗಳ ಅವಧಿಯಲ್ಲಿ ಆಗಾಗ್ಗೆ ಆರೋಪಗಳಿಗೆ ಗುರಿಯಾಗಿದ್ದ ತಿಮ್ಮಾಪುರ ಬದಲಾವಣೆ ಸಾಧ್ಯತೆಗಳು ಹೆಚ್ಚು ಎನ್ನುವ ಚರ್ಚೆಯೂ ಇತ್ತು. ಹಾಗಾಗಿ ಉಭಯ ಮುಖಂಡರ ಬೆಂಬಲಿಗ ನಡುವೆ ಮಂತ್ರಿಸ್ಥಾನದ ಕುರಿತು ರಾಜಕೀಯ ಜಿದ್ದಾಜಿದ್ದಿ ನಡೆದಿತ್ತು ಎನ್ನುವುದು ಗಮನಾರ್ಹ.

ಮುಂದಿನ ಆಟ:

ಅಧಿವೇಶನದವರೆಗೆ ಎಲ್ಲವೂ ಚೆನ್ನಾಗಿರಲಿದ್ದು, ಬಳಿಕ ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ಗೊಂದಲ ರಾಜ್ಯದ ಕೈ ಪಾಳೆಯದಲ್ಲಿ ಆರಂಭಗೊಳ್ಳಲಿದೆ. ಆಗಲೂ ಜಿಲ್ಲೆಯ ಶಾಸಕರ ನಡುವೆ ಸಂಪುಟ ಸೇರ್ಪಡೆಗಾಗಿ ಪೈಪೋಟಿ ಮುಂದುವರಿಯುವ ಎಲ್ಲ ಸಾಧ್ಯತೆಗಳು ಇವೆಯಾದರೂ ಮುಂದಿನ ಪ್ರಯತ್ನ ಹೇಗೊ ಏನೂ ಎನ್ನುವಂತಹ ವಾತಾವಣವನ್ನಂತೂ ಸೃಷ್ಟಿಸಿದೆ.

  • ವಿಠ್ಠಲ ಆರ್. ಬಲಕುಂದಿ
Scroll to Top