ನವಲಿಹಿರೇಮಠರಿಗೆ ಯತ್ನಾಳರ ರಾಜಕೀಯ ಶ್ರೀರಕ್ಷೆ

ಬಾಗಲಕೋಟೆ: ಕಟು ಹಿಂದುತ್ವ ಪ್ರತಿಪಾದಕ, ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ ಯತ್ನಾಳರೊಂದಿಗೆ ಹುನಗುಂದದ ಪ್ರಭಾವಿ ಮುಖಂಡ ಎಸ್. ಆರ್. ನವಲಿಹಿರೇಮಠ ಕಾಣಿಸಿಕೊಂಡಿದ್ದು ಹುನಗುಂದ ವಿಧಾನಸಭೆ ಕ್ಷೇತ್ರದ ರಾಜಕಾರಣದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ಎರಡುವರೆ ವರ್ಷಗಳ ಹಿಂದೆ ನಡೆದ ವಿಧಾನಸಭೆ ಚುನಾವಣೆ ಸೋಲಿನ ಬಳಿಕ ರಾಜಕೀಯವಾಗಿ ಎಲ್ಲಿಯೂ ಗುರುತಿಸಿಕೊಳ್ಳದ ನವಲಿಹಿರೇಮಠರು ಇದೀಗ ಬಿಜೆಪಿಯ ಉಚ್ಛಾಟಿತಗೊಂಡಿರುವ ಹಿಂದುತ್ವ ಪ್ರತಿಪಾದಕ ಬಸನಗೌಡ ಪಾಟೀಲ ಯತ್ನಾಳ್ ಅವರೊಂದಿಗೆ ಗುರುತಿಸಿಕೊಂಡಿರುವುದು ರಾಜಕೀಯವಾಗಿ ನಾನಾ ರೀತಿ ಅರ್ಥೈಸಲಾಗುತ್ತಿದೆ.

ಭವಿಷ್ಯದ ನೆಲೆಗಾಗಿ ಸ್ನೇಹ:

ಮುಂಬರುವ ವಿಧಾನಸಭೆ ಚುನಾವಣೆಯ ಮೇಲೆ ಕಣ್ಣಿಟ್ಟು ನವಲಿಹಿರೇಮಠರು ಯತ್ನಾಳ್ ಅವರಿಗೆ ಜತೆಯಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಯತ್ನಾಳ್ ಅವರು ಎಲ್ಲಿಯೇ ಇದ್ದರೂ ಅವರ ಮೂಲಕ ಹುನಗುಂದ ಕ್ಷೇತ್ರದ ಟಿಕೆಟ್ ಗಿಟ್ಟಿಸಿಕೊಳ್ಳಬಹುದು ಎನ್ನುವ ಬಲವಾದ ನಂಬಿಕೆ ಅವರದ್ದಾಗಿದೆ ಎನ್ನಲಾಗುತ್ತಿದೆ. ಸದ್ಯ ಉಚ್ಚಾಟನೆಗೊಂಡಿರುವ ಯತ್ನಾಳ್ ಅವರನ್ನು ಬಿಜೆಪಿ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ವಾಪಸ್ ಸೇರಿಸಿಕೊಂಡಲ್ಲಿ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಳ್ಳಬಹುದು. ಇಲ್ಲವೆ ಅವರೇ ಪಕ್ಷ ಕಟ್ಟಿದರೂ ಆ ಪಕ್ಷದಿಂದ ಟಿಕೆಟ್ ಪಡೆದುಕೊಳ್ಳಲು ಸಹಾಯಕವಾಗುತ್ತದೆ ಎನ್ನುವ ದೂರಾಲೋಚನೆ ಹೊಂದಿದಂತಿದೆ ಎನ್ನುವ ಮಾತುಗಳು ವ್ಯಾಪಕವಾಗಿವೆ.

ನವಲಿಹಿರೇಮಠರ 3ನೇ ಪ್ರಯತ್ನ ಆರಂಭ:

ಎಸ್.ಆರ್. ನವಲಿಹಿರೇಮಠರು ಈಗಾಗಲೇ ಎರಡು ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡಿದ್ದಾರಾದಾರೂ ಗಣನೀಯ ಪ್ರಮಾಣದಲ್ಲಿ ಮತಗಳನ್ನು ಪಡೆದಿದ್ದರು ಎನ್ನುವುದು ಗಮನಾರ್ಹ ಸಂಗತಿ. ಒಮ್ಮೆ ಜೆಡಿಎಸ್‌ನ ಬಾಹ್ಯ ಬೆಂಬಲದಿಂದ ಕಣಕ್ಕಿಳಿದಿದ್ದರು. ಇನ್ನೊಂದು ಬಾರಿ ಜನಾರ್ಧನರೆಡ್ಡಿ ಅವರ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದಿಂದ ಸ್ಪರ್ಧಿಸಿದ್ದರು. ಸತತ ಎರಡು ಸೋಲುಗಳಿಂದ ಧೃತಿಗೇಡದ ಅವರು ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯ ಮೆರೆಯಲು ತಮ್ಮದೆ ಆದ ಸಾಮಾಜಿಕ ಸಂಘಟನೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಷ್ಟರಲ್ಲೆ ನಡೆಯಲಿರುವ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರ ಚುನಾವಣೆಗೂ ನಿಲ್ಲಲಿದ್ದು, ಅದಕ್ಕಾಗಿ ಸಿದ್ದತೆ ಕೂಡ ನಡೆಸಿದ್ದಾರೆ ಎನ್ನುವ ಮಾತಿದೆ.

ವಿರೋಧಿ ಹಣಿಯಲು ಯತ್ನ:

ಏತನ್ಮಧ್ಯೆ ಒಂದು ಕಾಲಕ್ಕೆ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ರಾಜ್ಯದಾದ್ಯಂತ ಜೋಡೆತ್ತಿನಂತೆ ಹೋರಾಟಕ್ಕೆ ಧುಮುಕಿದ್ದ ಯತ್ನಾಳ್- ಕಾಶಪ್ಪನವರ ಜೋಡಿ ನಡುವೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬರುತ್ತಲೇ ಹದಗೆಟ್ಟು ಹೋಗಿದೆ. ಯತ್ನಾಳ್ ಮತ್ತು ಕಾಶಪ್ಪನವರ ನಡುವೆ ರಾಜಕೀಯ ಹಾಗೂ ಸಮುದಾಯದ ವಿಷಯಗಳಲ್ಲಿ ಇಂದಿಗೂ ಪರಸ್ಪರರ ನಡುವೆ ವಾಗ್ದಾಳಿ ನಡೆಯುತ್ತಲೇ ಇದೆ. ಹುನಗುಂದ ಕ್ಷೇತ್ರದಲ್ಲಿ ಕಾಶಪ್ಪನವರನ್ನು ಹೇಗಾದರೂ ಮಾಡಿ ಹಣಿಯಲೇ ಬೇಕು ಎನ್ನುವ ಉದ್ದೇಶದಿಂದ ಯತ್ನಾಳ್ ಅವರು ಕಾಶಪ್ಪನವರ ಇನ್ನೋರ್ವ ರಾಜಕೀಯ ವಿರೋಧಿ ನವಲಿಹಿರೇಮಠ ಅವರೊಂದಿಗೆ ಕೈಜೋಡಿಸಿದ್ದಾರೆ ಎನ್ನುವ ಮಾತು ರಾಜಕೀಯ ವಲದಲ್ಲಿ ವ್ಯಾಪಕವಾಗಿದೆ.

ಹಿಂದುತ್ವದ ದಾಳ:

ಹುನಗುಂದ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯ ಪ್ರಬಲವಾಗಿದ್ದು, ಆ ಸಮುದಾವನ್ನು ತಮ್ಮತ್ತ ಸೆಳೆಯುವ ಜತೆಗೆ ಹಿಂದುತ್ವದ ದಾಳ ಉರುಳಿಸುವ ಮೂಲಕ ಕಾಶಪ್ಪನವರನ್ನು ರಾಜಕೀಯವಾಗಿ ಎದುರಿಸಬೇಕು ಎನ್ನುವ ಮಹದುದ್ದೇಶ ಉಭಯ ಮುಖಂಡರದ್ದಾಗಿದೆ ಎನ್ನುವುದು ರಾಜಕೀಯ ಮೊಗಸಾಲೆಯಲ್ಲಿ ಜನಜನಿತವಾಗಿದೆ.

ಯತ್ನಾಳ್ ಕಾರಣದಿಂದಾಗಿ ಕ್ಷೇತ್ರದಲ್ಲಿನ ಪ್ರಬಲ ಲಿಂಗಾಯತ ಸಮುದಾಯ ಹಾಗೂ ಹಿಂದುತ್ವವಾದಿಗಳು ನವಲಿಹಿರೇಮಠರಿಗೆ ಸಾಥ್ ನೀಡುವರೋ ಹೇಗೆ ಎನ್ನುವುದು ಗಮನಾರ್ಹ ಸಂಗತಿ. ಈಗಾಗಲೇ ಕ್ಷೇತ್ರದಲ್ಲಿನ ಹಿಂದುತ್ವವಾದಿಗಳು ಮತ್ತು ಬಿಜೆಪಿ ಬೆಂಬಲಿತ ಲಿಂಗಾಯತ ಸಮುದಾಯ ಮಾಜಿ ಶಾಸಕ ದೊಡ್ಡನಗೌಡ ಪಾಟೀಲರೊಟ್ಟಿಗಿದೆ. ಮುಂದಿನ ದಿನಗಳಲ್ಲಿ ಯಾರು ಬಿಜೆಪಿಯಿಂದ ಕ್ಷೇತ್ರದ ಸಾರಥ್ಯ ವಹಿಸುವರೋ ಅವರೊಟ್ಟಿಗೆ ಇರಲಿದೆ.

ಯತ್ನಾಳ್ ಬೆಂಬಲಿಗರ ಶ್ರೀರಕ್ಷೆ:

ಸದ್ಯಕ್ಕೆ ಯತ್ನಾಳ್ ಬೆಂಬಲಿಗರು ನವಲಿಹಿರೇಮಠರ ಬೆನ್ನಿಗೆ ನಿಲ್ಲಲಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಯಾರ ಪ್ರಾಬಲ್ಯ ಎಷ್ಟು ವೃದ್ಧಿ ಆಗಲಿದೆ ಎನ್ನುವ ಕಾತರವಂತೂ ಜನತೆಯಲ್ಲಿ ಶುರುವಾಗಿದೆ. ಸತತ ಎರಡು ಸೋಲುಗಳನ್ನು ಕಂಡಿರುವ ನವಲಿಹಿರೇಮಠರು ಮೂರನೇ ಪ್ರಯತ್ನದಲ್ಲಾದರೂ ಯಶಸ್ಸು ಕಾಣುವ ಕನಸಿನೊಂದಿಗೆ ಯತ್ನಾಳರ ಬೆಂಬಲಕ್ಕೆ ನಿಂತಿದ್ದು, ಈ ಪ್ರಯತ್ನದಲ್ಲಿ ಅವರಿಗೆ ಎಷ್ಟರ ಮಟ್ಟಿಗೆ ಗೆಲುವು ಸಾಧ್ಯವಾಗಲಿದೆ ಎನ್ನುವುದನ್ನು ಭವಿಷ್ಯದ ದಿನಗಳು ನಿರ್ಧರಿಸಲಿವೆ.

ಮೂರನೇಯವರಿಗೆ ಮಣೆ?:

ಹುನಗುಂದ ಕ್ಷೇತ್ರದ ರಾಜಕಾರಣದಲ್ಲಿ ಇತ್ತೀಚಿನ ಚುನಾವಣೆಗಳಲ್ಲಿ ಕಾಶಪ್ಪನವರ ಕುಟುಂಬಕ್ಕೆ ರಾಜಕೀಯವಾಗಿ ಸೆಡ್ಡು ಹೊಡೆದು ಮೂರು ಬಾರಿ ದೊಡ್ಡನಗೌಡ ಪಾಟೀಲ ಗೆಲುವು ಸಾಧಿಸಿದ್ದಾರೆ. ಈಗಲೂ ಬಿಜೆಪಿ ಅವರ ಹಿಡಿತದಲ್ಲಿದೆ. ಕ್ಷೇತ್ರದಲ್ಲಿ ಕಾಶಪ್ಪನವರ ಮತ್ತು ದೊಡ್ಡನಗೌಡರನ್ನು ಹೊರತು ಪಡಿಸಿ ಇತರರು ಪ್ರಾಬಲ್ಯ ಸಾಧಿಸಲು ಸಾಧ್ಯವಾಗಿಲ್ಲ. ಸ್ವತಃ ನವಲಿಹಿರೇಮಠರ ಪ್ರಯತ್ನವೇ ಕೈಗೂಡಿಲ್ಲ. ಆದರೂ ಪ್ರಯತ್ನ ಬಿಡದ ಅವರು ಕ್ಷೇತ್ರದ ಮೇಲೆ ಹಿಡಿತ ಸಾಧಿಸುವುದಕ್ಕಾಗಿ ಯತ್ನಾಳ್ ಗೌಡರ ಜತೆ ನಿಂತಿದ್ದಾರೆ. ಅವರ ಸತತ ಪ್ರಯತ್ನದ ಫಲಕ್ಕೆ ಕಾಯ್ದು ನೋಡಬೇಕಷ್ಟೆ.

  • ವಿಠ್ಠಲ ಆರ್. ಬಲಕುಂದಿ
Scroll to Top