ಬಾಗಲಕೋಟೆ: ಆಲಮಟ್ಟಿ ಹಿನ್ನೀರಿನಲ್ಲಿ ಅನುಮತಿ ಇಲ್ಲದೆ ಮೀನುಗಾರಿಕೆ ನಡೆಯುತ್ತಿರುವುದನ್ನು ತಡೆಯಲು ಪರಿಣಾಮಕಾರಿ ಕ್ರಮ ಕೈಗೊಳ್ಳುವುದು, ಖಾಲಿ ಇರುವ ಸರ್ಕಾರಿ ಕಟ್ಟಡಗಳಲ್ಲಿ ಅಂಗನವಾಡಿ ಕೇಂದ್ರಗಳ ಆರಂಭದ ಬಗೆಗೆ ಕಾಳಜಿ ವ್ಯಕ್ತ ಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಪಡಿತರ ಅಕ್ಕಿಯ ಅಕ್ರಮ ಸಾಗಣೆ ವಿಷಯದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಹಿರಿಯ ಅಧಿಕಾರಿ ಶ್ರೀಶೈಲ ಕಂಕಣವಾಡಿ ವಿರುದ್ಧ ಕೆಂಡಾಮಂಡಲರಾದ ಪ್ರಸಂಗ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ನಡೆಯಿತು.
ಇಲ್ಲಿನ ಜಿಲ್ಲಾಡಳಿತ ಭವನದ ನೂತನ ಜಿಪಂ. ಸಭಾಭವನದಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮೇಲಿನ ವಿಷಯಗಳ ಕುರಿತು ಕಾವೇರಿದ ಚರ್ಚೆ ನಡೆಯಿತು.
ಕಂಕಣವಾಡಿ ವಿರುದ್ಧ ಗರಂ:
ಜಿಲ್ಲೆಯಲ್ಲಿ ನಿರಂತರವಾಗಿ ಪಡಿತರ ಅಕ್ಕಿಯ ಅಕ್ರಮ ಸಾಗಣೆ ನಡೆಯುತ್ತಿದೆ. ಈ ಕುರಿತು ಮಾಧ್ಯಮಗಳಲ್ಲೂ ವರದಿಗಳು ಪ್ರಕಟವಾಗುತ್ತಿವೆ. ನೀವೇನೂ ಮಾಡುತ್ತಿದ್ದೀರಿ ಎಂದು ಅಧಿಕಾರಿ ಕಂಕಣವಾಡಿ ವಿರುದ್ಧ ಗರಂ ಆದ ಸಚಿವರು ಪಡಿತರ ಅಕ್ಕಿಯ ಅಕ್ರಮ ಸಾಗಣೆ ತಡೆಯಲು ಏಕೆ ಸಾಧ್ಯವಾಗುತ್ತಿಲ್ಲ. ಪರಿಣಾಮಕಾರಿ ಕ್ರಮಗಳನ್ನು ಏಕೆ ಕೈಗೊಂಡಿಲ್ಲ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿ ಶ್ರೀಶೈಲ ಕಂಕಣವಾಡಿ ಅವರು ಸಚಿವರ ಪ್ರಶ್ನೆಗಳಿಗೆ ಉತ್ತರಿಸಲು ಮುಂದಾದರೂ ಪ್ರಯೋಜನವಾಗಲಿಲ್ಲ. ಇದುವರೆಗೆ ಎಷ್ಟು ಪ್ರಕರಣಗಳನ್ನು ದಾಖಲಿಸಿದ್ದೀರಿ, ಎಷ್ಟು ಜನರಿಗೆ ಶಿಕ್ಷೆ ಆಗಿದೆ ಎನ್ನುವ ಮರು ಪ್ರಶ್ನೆಗೆ ಅಧಿಕಾರಿಗಳು ನಿರುತ್ತರರಾದರು. ಇಲಾಖೆಯ ಜಾಗೃತಿ ಕಮೀಟಿ ಏನು ಮಾಡುತ್ತಿದೆ. ಇದುವರೆಗೂ ಎಷ್ಟು ಸಭೆಗಳನ್ನು ಮಾಡಿದ್ದೀರಿ ಎಂದು ಪ್ರಶ್ನಿಸಿದಾಗ, ಇದುವರೆಗೂ ಒಂದೇ ಒಂದು ಸಭೆ ನಡೆಸಿಲ್ಲ ಎನ್ನುವ ಮಾಹಿತಿಯನ್ನು ಸಭೆಗೆ ಅವರು ನೀಡಿದರು.
ಹುಲಿ ಅಲ್ಲ, ಇಲಿ ಹಿಡಿಯುತ್ತಿದ್ದಾರೆ:
ಪಡಿತರ ಅಕ್ಕಿಯ ಅಕ್ರಮ ಸಾಗಣೆ ಕುರಿತು ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಾಗ ಮಧ್ಯೆ ಪ್ರವೇಶಿಸಿದ ಶಾಸಕ ಜೆ.ಟಿ. ಪಾಟೀಲ, ಅಧಿಕಾರಿಗಳು ಇಲಿಗಳನ್ನು ಹಿಡಿಯುವ ಕೆಲಸ ಮಾಡುತ್ತಿದ್ದಾರೆ, ವಿನಃ ಹುಲಿಗಳನ್ನು ಹಿಡಿಯುತ್ತಿಲ್ಲ ಎಂದು ಲೇವಡಿ ಮಾಡಿದರು. ರಾಜ್ಯಸಭೆ ಸದಸ್ಯ ನಾರಾಯಣಸಾ ಭಾಂಡಗೆ ಅವರು ಅಕ್ರಮ ಪಡಿತರ ಅಕ್ಕಿ ಸಾಗಣೆ ಬಗೆಗಿನ ಮಾಹಿತಿದಾರರ ವಿವರವನ್ನು ಅಧಿಕಾರಿಗಳೇ ನೀಡುತ್ತಾರೆ. ಸದಾ ಸಿದ್ಧ ಉತ್ತರ ನೀಡುತ್ತಾರೆ ಎಂದು ಆಪಾದಿಸಿದರು.
ಬಿಪಿಎಲ್ ಕಾರ್ಡ್ ಗೆ 3 ಸಾವಿರ ರೂ.:
ಚರ್ಚೆಯ ಮಧ್ಯೆ ಪ್ರವೇಶಿಸಿದ ಶಾಸಕ ಸಿದ್ದು ಸವದಿ ಅಧಿಕಾರಿಗಳು ಶ್ರೀಮಂತರ ಕಾರ್ಡಗಳನ್ನು ರದ್ದು ಮಾಡುವ ಬದಲಿಗೆ ಬಡವರ ಕಾರ್ಡ್ಗಳನ್ನು ರದ್ದು ಮಾಡುತ್ತಿದ್ದಾರೆ. ರದ್ದಾದ ಕಾರ್ಡಗಳನ್ನು ವಾಪಸ್ ನೀಡಲು ಮೂರು ಸಾವಿರ ರೂಪಾಯಿ ತೆಗೆದುಕೊಳ್ಳುತ್ತಾರೆ ಎಂದು ದೂರಿದರು. ಕೊನೆಗೆ ಸಚಿವರು ಅಧಿಕಾರಿಗೆ ಎಚ್ಚರಿಕೆ ನೀಡಿ, ಜಿಲ್ಲೆಯಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಣೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಬಡವರ ಬಿಪಿಎಲ್ ಕಾರ್ಡ್ ಗಳು ರದ್ದಾಗದಂತೆ ನೋಡಿಕೊಳ್ಳಬೇಕು ಎಂದರು.
ಸರ್ಕಾರಿ ಕಟ್ಟಡ ಬಳಸಿಕೊಳ್ಳಿ:
ಜಿಲ್ಲೆಯಲ್ಲಿನ ಅಂಗನವಾಡಿ ಕೇಂದ್ರಗಳಿಗೆ ಸೂಕ್ತ ಕಟ್ಟಡಗಳಿಲ್ಲ. ಬಹುತೇಕ ಕಡೆಗಳಲ್ಲಿ ಅಂಗನವಾಗಿ ಕೇಂದ್ರಗಳನ್ನು ಆರಂಭಿಸಲು ಕಟ್ಟಡಗಳ ಕೊರತೆ ಆಗಿದೆ ಎನ್ನುವುದನ್ನು ಅಧಿಕಾರಿಗಳು ಸಭೆ ಗಮನಕ್ಕೆ ತಂದಾಗ ಸಚಿವರು ಸರ್ಕಾರದ ಸಮುದಾಯ ಭವನ, ಖಾಲಿ ಕಟ್ಟಡಗಳನ್ನು ಅಂಗನವಾಡಿ ಕೇಂದ್ರಗಳ ಸ್ಥಾಪನೆಗೆ ಬಳಕೆ ಮಾಡಿಕೊಳ್ಳುವಂತೆ ಸಲಹೆ ಮಾಡಿದರು.
ಆಂಧ್ರ ಮೀನುಗಾರಿಕೆ ತಡೆಗಟ್ಟಿ:
ಆಲಮಟ್ಟಿ ಹಿನ್ನೀರಿನಲ್ಲಿ ಯಂತ್ರಗಳನ್ನು ಬಳಕೆ ಮಾಡಿಕೊಂಡು ಮೀನುಗಾರಿಕೆ ನಡೆಯುತ್ತಿದೆ. ಅನುಮತಿ ಇಲ್ಲದೆ ಅನೇಕರು ಮೀನುಗಾರಿಕೆ ನಡೆಸುತ್ತಿದ್ದಾರೆ. ಇದರಿಂದ ಜಿಲ್ಲೆಗೆ ವಾರ್ಷಿಕವಾಗಿ ನೂರಾರು ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಅನುಮತಿ ಇಲ್ಲದೆ ಮೀನುಗಾರಿಕೆ ಮಾಡುವವರಿಗೆ ಏನು ಮಾಡಬೇಕು ಎನ್ನುವುದಕ್ಕೆ ವಿವರ ಮಾಹಿತಿ ಕೊಡಿ ಎಂದು ಸಚಿವರು ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಚಿವರ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿಗಳು ಆಂಧ್ರ ಮೀನುಗಾರಿಕೆ ತಡೆಯಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮೀನುಗಾರಕೆ ಸಾಮಗ್ರಿಗಳನ್ನು ವಶಕ್ಕೆ ಪಡೆದರೂ ಕಾನೂನು ಮೂಲಕ ವಾಪಸ್ ಪಡೆಯುತ್ತಿದ್ದಾರೆ. ವಶಕ್ಕೆ ಪಡೆದಾಗ ಅವುಗಳನ್ನು ನಾಶ ಪಡಿಸಬೇಕು ಎನ್ನುವ ಸಲಹೆ ಶಾಸಕರಿಂದ ಕೇಳಿ ಬಂದಿತು. ಆಂಧ್ರದವರ ಮೀನುಗಾರಿಕೆಯಿಂದಾಗಿ ಸ್ಥಳೀಯ ಮೀನುಗಾರರಿಗೆ ತೊಂದರೆ ಆಗುತ್ತಿದ್ದು, ತಡೆಗೆ ಅಗತ್ಯ ಕ್ರಮಕ್ಕೆ ಸೂಚಿಸಿದರು.
ಇದೇ ವೇಳೆ ನೇಕಾರರ ವಿದ್ಯುತ್ ಮಗ್ಗಗಳ ವಿದ್ಯುತ್ ಬಾಕಿ ಪಾವತಿ, ಬಿಡಾಡಿ ದನಗಳ ಹಾವಳಿ ತಡೆಗಟ್ಟುವುದು ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಮೇಲ್ಮನೆ ಸದಸ್ಯರಾದ ಪಿ.ಎಚ್.ಪೂಜಾರ್, ಎಚ್.ಆರ್. ನಿರಾಣಿ, ಡಿಸಿ ಸಂಗಪ್ಪ, ಜಿಪಂ ಸಿಇಒ ಶಶಿಧರ ಕುರೇರ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.




