ಬಾಗಲಕೋಟೆ: ಜಿಲ್ಲೆಯ ಜನತೆಯ ಬಹುನಿರೀಕ್ಷಿತ ಸರ್ಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆ ಆಗಬೇಕು ಎನ್ನುವುದು ದಶಕದ ಕನಸು. ಆ ಕನಸು ದಿ. ಶಾಸಕ ಎಚ್. ವೈ. ಮೇಟಿ ಅವರ ಸತತ ಪ್ರಯತ್ನದಿಂದ ನನಸಾಗಿದ್ದು, ಜಿಲ್ಲಾಕೇಂದ್ರ ಬಾಗಲಕೋಟೆಗೆ ಸರ್ಕಾರಿ ಮೆಡಿಕಲ್ ಕಾಲೇಜ್ ಮಂಜೂರಾಗಿ, ಅಗತ್ಯ ಜಾಗೆ, ಹಣಕಾಸಿನ ವ್ಯವಸ್ಥೆಯೂ ಆಗಿದೆ. ಇನ್ನೆನು ಕಾಲೇಜು ಕಟ್ಟಡ ಕೆಲಸ ಆರಂಭಗೊಳ್ಳಬೇಕಿದೆ.
ಕಾಲೇಜು ಕಟ್ಟಡದ ಶಂಕುಸ್ಥಾಪನೆ ಸಮಾರಂಭ ಯಾವಾಗ ಎನ್ನುವುದು ಸದ್ಯ ಕುತೂಹಲದ ಪ್ರಶ್ನೆ. ಶಂಕುಸ್ಥಾಪನೆ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಬರಬೇಕು ಎನ್ನುವುದು ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಬಹುತೇಕ ಕಾಂಗ್ರೆಸ್ಸಿಗರ ಆಶಯವಾಗಿದೆ. ದಿ. ಎಚ್.ವೈ.ಮೇಟಿ ಅವರ ಸತತ ಪ್ರಯತ್ನದ ಫಲವಾಗಿ ಸ್ಥಾಪನೆ ಆಗುತ್ತಿರುವ ಕಾಲೇಜಿನ ಕಟ್ಟಡದ ಶಂಕು ಸ್ಥಾಪನೆ ಸಮಾರಂಭಕ್ಕೆ ಮುಖ್ಯಮಂತ್ರಿಗಳು ಬರಬೇಕು ಎನ್ನುವ ಆಶಯದ ಹಿಂದೆ ಸಾಕಷ್ಟು ರಾಜಕೀಯ ಲೆಕ್ಕಾಚಾರಗಳು ಅಡಗಿದಂತೆ ಕಾಣಿಸುತ್ತಿದೆ.
ಲಾಭದ ಲೆಕ್ಕಾಚಾರ:
ದಿ. ಶಾಸಕ ಮೇಟಿ ಅವರ ನಿಧನದಿಂದ ತೆರವಾಗಿರುವ ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಶಾಸಕ ಸ್ಥಾನಕ್ಕೆ ಉಪ ಚುನಾವಣೆ ನಡೆಯಬೇಕಿದೆ. ಸರ್ಕಾರಿ ಕಾಲೇಜು ಸ್ಥಾಪನೆ ಕ್ರೆಡಿಟ್ ಪಡೆದುಕೊಳ್ಳಲು ಕಾಂಗ್ರೆಸ್ಸಿಗರು ತುದಿಗಾಲ ಮೇಲೆ ನಿಂತಿದ್ದಾರೆ. ಇಂತಹ ವಿಚಾರ ಯಾವುದೇ ರಾಜಕೀಯ ಪಕ್ಷದಲ್ಲೂ ಸಾಮಾನ್ಯ. ಉಪಚುನಾವಣೆ ಘೋಷಣೆಗೂ ಮುನ್ನವೇ ಶಂಕುಸ್ಥಾಪನೆ ಕಾರ್ಯಕ್ರಮ ಆಯೋಜನೆ ಮಾಡಿ, ಆ ಸಮಾರಂಭಕ್ಕೆ ಕ್ಷೇತ್ರದ ಮೂಲೆ ಮೂಲೆಗಳಿಂದ ಅಭಿಮಾನಿಗಳನ್ನು ಕರೆ ತರುವ ಮೂಲಕ ಉಪ ಚುನಾವಣೆ ಪೂರ್ವ ಒಂದು ಬೃಹತ್ ಕಾರ್ಯಕ್ರಮ ನಡೆಸಿ ಪಕ್ಷಕ್ಕೆ ಬಹುದೊಡ್ಡ ಲಾಭ ಮಾಡಿಕೊಳ್ಳಬಹುದು ಎನ್ನುವ ಲೆಕ್ಕಾಚಾರದಲ್ಲಿ ಮೇಟಿ ಅವರ ಅಭಿಮಾನಿಗಳು ಇದ್ದಾರೆ. ಉಪಚುನಾವಣೆ ಪೂರ್ವದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಿಂದ ಚುನಾವಣೆ ವೇಳೆ ಪಕ್ಷಕ್ಕೆ ಆ ವಿಷಯವನ್ನು ಬಹುದೊಡ್ಡ ಟ್ರಂಪ್ ಕಾರ್ಡ್ ಆಗಿಸಿಕೊಳ್ಳಬಹುದು ಎನ್ನುವ ಚರ್ಚೆ ವ್ಯಾಪಕವಾಗಿದೆ.
ಅದೊಂದು ರೋಚಕ ಕಥೆ:
ಸರ್ಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆ ಆಗಬೇಕು ಎನ್ನುವುದರ ಹಿಂದೆ ಬಹುದೊಡ್ಡ ರೋಚಕ ಕಥೆ ಇದೆ. 2013ರ ವಿಧಾನಸಭೆ ಚುನಾವಣೆ ಗೆದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಆ ವೇಳೆ ಜಿಲ್ಲೆಗೊಂದು ಮೆಡಿಕಲ್ ಕಾಲೇಜ್ ಸ್ಥಾಪನೆ ಆಗಬೇಕು ಎನ್ನುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಬಾಗಲಕೋಟೆ ಜಿಲ್ಲೆಗೂ ಮೆಡಿಕಲ್ ಕಾಲೇಜ್ ಸ್ಥಾಪಿಸಲಾಗುವುದು ಎಂದು ಘೋಷಣೆ ಮಾಡಿದರು. ಬಳಿಕ ಅದು ಬರೀ ಘೋಷಣೆಯಾಗಿ ಉಳಿಯಿತು. 2018ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಕೂಡ ಕಾಲೇಜ್ ಸ್ಥಾಪನೆಯತ್ತ ಗಮನ ಹರಿಸಲೇ ಇಲ್ಲ.
ಮೆಡಿಕಲ್ ಕಾಲೇಜ್ ಘೋಷಣೆಯಿಂದ ಹಿಡಿದು ಇಲ್ಲಿಯವರೆಗೂ ನಡೆದ ಹೋರಾಟ, ಪ್ರತಿಭಟನೆ, ಧರಣಿಗಳಿಗೆ ಲೆಕ್ಕವೇ ಇಲ್ಲ. ಕರವೇ ಸೇರಿದಂತೆ ನಾನಾ ಸಂಘಟನೆಗಳು ನಿರಂತರ ಹೋರಾಟ ನಡೆಸುತ್ತ ಬಂದವು. ಕೆಲ ಹಂತದಲ್ಲಿ ಹೋರಾಟ ತೀವ್ರತೆ ಪಡೆದುಕೊಂಡು ಬೂಟ್ ಪಾಲೀಶ್ ಕಾರ್ಯಕ್ರಮ ನಡೆಸಿ, ಆ ಮೂಲಕ ಸರ್ಕಾರಕ್ಕೆ ಹಣ ಕಳುಹಿಸುವ ವಿನೂತನ ಹೋರಾಟ ಕೂಡ ನಡೆದ ನಿದರ್ಶನವಿದೆ.
ಮೆಡಿಕಲ್ ಕಾಲೇಜ್ ಶಂಕುಸ್ಥಾಪನೆ ಬಾಕಿ:
2023ರಲ್ಲಿ ರಾಜ್ಯದಲ್ಲಿ ನಡೆದ ವಿಧಾನಸಭೆ ಚುನಾವಣೆ ಗೆದ್ದು ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತಲೇ ಸರ್ಕಾರಿ ಮೆಡಿಕಲ್ ಕಾಲೇಜ್ ಹೋರಾಟ ನಿರಂತರವಾಗಿ ಶುರುವಾಯಿತು. ಎಚ್.ವೈ.ಮೇಟಿ ಅವರು ಬಾಗಲಕೋಟೆ ವಿಧಾನಸಭೆ ಕ್ಷೇತ್ರದಿಂದ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಗೊಳ್ಳುತ್ತಲೇ ಕಾಲೇಜು ಸ್ಥಾಪನೆಯತ್ತ ಗಮನ ಹರಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸತತ ಬೆನ್ನುಹತ್ತಿ ಕಳೆದ ಬಜೆಟ್‌ನಲ್ಲಿ ಸರ್ಕಾರಿ ಮೇಡಿಕಲ್ ಕಾಲೇಜ್‌ಗೆ ಮಂಜೂರಾತಿ ಪಡೆದುಕೊಂಡರು. ಜತೆಗೆ ಅದಕ್ಕೆ ಬೇಕಾದ ಅಗತ್ಯ ಜಮೀನನ್ನು ಬಿಟಿಡಿಎದಿಂದ ವ್ಯವಸ್ಥೆ ಮಾಡಿದರು. ಸರ್ಕಾರದಿಂದ ಅಂದಾಜು 480.60 ಕೋಟಿ ರೂ. ಅನುದಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಇನ್ನೆನು ಕಾಲೇಜಿನ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಿಸಿ ಕೆಲಸ ಪ್ರಾರಂಭಗೊಳ್ಳಬೇಕಿದೆ.
ಚುನಾವಣೆ ಅಸ್ತ್ರ:
ಉಪ ಚುನಾವಣೆ ಪೂರ್ವದಲ್ಲೇ ಶಂಕುಸ್ಥಾಪನೆ ಕಾರ್ಯಕ್ರಮ ಮುಗಿದು ಬಿಟ್ಟರೆ ಚುನಾವಣೆ ವೇಳೆ ರಾಜಕೀಯವಾಗಿ ಅನುಕೂಲವಾಗಲಿದೆ ಎನ್ನುವ ಮುಂದಾಲೋಚನೆ ಬಹುತೇಕ ಕಾಂಗ್ರೆಸ್ಸಿಗರದ್ದಾಗಿದೆ. ಬಾಗಲಕೋಟೆ ಕ್ಷೇತ್ರದ ಕಾಂಗ್ರೆಸ್ಸಿಗರ ಭಾವನೆಗೆ ಮುಖ್ಯಮಂತ್ರಿಗಳು ಎಷ್ಟರ ಮಟ್ಟಿಗೆ ಅಸ್ತು ಎನ್ನುತ್ತಾರೆ ಎನ್ನುವುದು ಬಹುಮುಖ್ಯವಾಗಿದೆ. ಒಂದಂತೂ ನಿಜ, ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ವೇಳೆ ಸರ್ಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆ ವಿಷಯ ರಾಜಕೀಯ ಅಸ್ತ್ರವಾಗಲಿದೆ. ಇದರ ಜತೆಗೆ ಕೃಷ್ಣಾ ಮೇಲ್ದಂಡೆ ಹಂತ-3ರ ಅನುಷ್ಠಾನ ವಿಷಯದಲ್ಲಿ ಕೈಗೊಂಡ ರಾಜ್ಯ ಸರ್ಕಾರದ ನಿರ್ಧಾರಗಳೂ ಕಾಂಗ್ರೆಸ್‌ಗೆ ಸಾಥ್ ನೀಡಲಿವೆ ಎನ್ನುವ ಬಲವಾದ ನಂಬಿಕೆ ಕಾಂಗ್ರೆಸ್ಸಿಗರದ್ದಾಗಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
- ವಿಠ್ಠಲ ಆರ್. ಬಲಕುಂದಿ




