ಸಫಲವಾಯ್ತು ರೈತ ಹೋರಾಟದ ಉದ್ದೇಶ

ಬಾಗಲಕೋಟೆ: ಕಬ್ಬಿನ ಬಾಕಿ ಹಣ ಪಾವತಿ ಹಾಗೂ ನ್ಯಾಯಯುತ ಬೆಲೆಗೆ ಆಗ್ರಹಿಸಿ ಜಿಲ್ಲೆಯಲ್ಲಿ ನಡೆಯುತ್ತಿದ್ದ ರೈತರ ಹೋರಾಟ ಗುರುವಾರ ತೀವ್ರಗೊಂಡು ಶುಕ್ರವಾರ ತಣ್ಣಗಾಗಿದೆ. ಜಿಲ್ಲೆಯ ಕಾರ್ಖಾನೆಗಳು ಉಳಿಸಿಕೊಂಡಿರುವ ಬಾಕಿ ಹಣ ಪಾವತಿಸಬೇಕು. ಪ್ರತಿ ಟನ್ ಕಬ್ಬಿಗೆ 3500 ರೂಪಾಯಿ ಪಾವತಿಸಬೇಕು ಎನ್ನುವುದು ಹೋರಾಟಗಾರರ ಬೇಡಿಕೆಗಳಾಗಿದ್ದವು. ಪ್ರತಿ ಟನ್ ಕಬ್ಬಿಗೆ ಈಗಾಗಲೇ ಸರ್ಕಾರ ನಿಗದಿ ಪಡಿಸಿದ ದರವನ್ನು ಕೊಡುತ್ತೇವೆ ಎನ್ನುವ ಪಟ್ಟಿಗೆ ಅಂಟಿಕೊಂಡರು. ಬಾಕಿ ಹಣ ಪಾವತಿ ಬಗೆಗೆ ಯಾವುದೇ ಚಕಾರ ಎತ್ತಿರಲಿಲ್ಲ.

ಸ್ಥಳಕ್ಕೆ ಧಾವಿಸಿದ ಸಚಿವರು:

ಏತನ್ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವ ಆರ್. ಬಿ. ತಿಮ್ಮಾಪುರ, ಜಿಲ್ಲಾಧಿಕಾರಿಗಳು ರೈತ ಹೋರಾಟಗಾರರು ಮತ್ತು ಕಾರ್ಖಾನೆಗಳ ಮಾಲೀಕರ ಸಭೆ ನಡೆಸಿದರಾದರೂ ಸಭೆ ಫಲಪ್ರದವಾಗಲಿಲ್ಲ. ಸರ್ಕಾರ ಕೂಡ ಹೋರಾಟದ ಬಗೆಗೆ ಗಮನ ಹರಿಸುತ್ತಿಲ್ಲ ಎಂದು ಅಸಮಾಧಾನಗೊಂಡ ರೈತರು ಗುರುವಾರ ಸಮೀರವಾಡಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಕಬ್ಬು ತುಂಬಿ ಟ್ರ್ಯಾಕ್ಟರ್ ಗಳು‌ ನಿಂತಿವೆ.‌ ಸಮಸ್ಯೆ ಬಗೆ ಹರಿಯುವವರೆಗೆ ಯಾವುದೇ ಕಾರಣಕ್ಕೂ ಕಾರ್ಖಾನೆ ಆರಂಭಿಸಬಾರದು ಎಂದು ಒತ್ತಾಯಿಸಲು ರೈತರು ಹೋದ ವೇಳೆ ಕಿಡಿಗೇಡಿಗಳು ಕಬ್ಬು ತುಂಬಿ‌ ನಿಂತಿದ್ದ ಟ್ರ್ಯಾಕ್ಟರ್ ಗಳಿ ಬೆಂಕಿ ಹಚ್ಚಿದ ಪರಿಣಾಮ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.

ಅಹಿತಕರ ಘಟನೆ ನಡೆಯುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.‌ ತಿಮ್ಮಾಪುರ ಗುರುವಾರ ರಾತ್ರಿಯೇ ಪ್ರಯತ್ನ ಆರಂಭಿಸಿದರು. ಜತೆಗೆ ಶುಕ್ರವಾರ ಬೆಳಗ್ಗೆ ಸಚಿವ ತಿಮ್ಮಾಪುರ‌ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲರು ಆಗಮಿಸಿ, ಸಮೀರವಾಡಿ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿ ಘಟನಾ ಸ್ಥಳ‌ ಪರಿಶೀಲನೆ ನಡೆಸಿದರು. ಈ ವೇಳೆ ಅವರು ಘಟನೆ ಆಗಬಾರದಿತ್ತು, ಘಟನೆಯಲ್ಲಿ ನಷ್ಟಕ್ಕೆ ಒಳಗಾಗಿರುವ ರೈತರಿಗೆ ಸರ್ಕಾರದಿಂದ ಇಲ್ಲವೆ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಿಂದ ಸೂಕ್ತ ಪರಿಹಾರ ಕಲ್ಪಿಸುವ ಭರವಸೆಯನ್ನು ಸಕ್ಕರೆ ಸಚಿವರು ನೀಡಿದರು.

ಸಭೆ ಯಶಸ್ವಿ:

ಬಳಿಕ ಮುಧೋಳ ಪ್ರವಾಸಿ ಮಂದಿರದಲ್ಲಿ ಸಚಿವ ತಿಮ್ಮಾಪುರ ರೈತ ಮುಖಂಡರೊಂದಿಗೆ ಸಭೆ ನಡೆಸಿ ಹೋರಾಟ ವಾಪಸ್ ಪಡೆಯುವಂತೆ ಮನವೊಲಿಸುವಲ್ಲಿ ಯಶಸ್ವಿಯಾದರು. ಕಬ್ಬಿನ ಬಾಕಿ ಹಣ ಉಳಿಸಿಕೊಂಡಿರುವ ಕಾರ್ಖಾನೆಯವರು ಮುರ್ನಾಲ್ಜು ದಿನಗಳಲ್ಲಿ ಬಾಕಿ ಪಾವತಿಸುವಂತೆ ನಿರ್ದೇಶನ ನೀಡಿ, ಕಾರ್ಖಾನೆಗಳನ್ನು ಆರಂಭಿಸುವಂತೆ ಸೂಚಿಸಿದರು.

ಈ ವೇಳೆ ರೈತ ಮುಖಂಡ ಈರಪ್ಪ ಹಂಚಿನಾಳ‌, ಕಾರ್ಖಾನೆಯವರು ಬಾಕಿ ಹಣ ಪಾವತಿಸುವುದಾಗಿ ಭರವಸೆ ನೀಡಿದ್ದಾರೆ. ನಮ್ಮ ಹೋರಾಟದ ಮುಖ್ಯ ಉದ್ದೇಶ ಕೂಡ ಬಾಕಿ ಹಣ ಪಾವತಿಸಬೇಕು ಎನ್ನುವುದೇ ಆಗಿತ್ತು. ನಮ್ಮ ಬೇಡಿಕೆಗೆ ಕಾರ್ಖಾನೆಯವರು ಒಪ್ಪಿರುವುದರಿಂದ ಹೋರಾಟ ಅಂತ್ಯಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಜಿಲ್ಲೆಯಲ್ಲಿ ರಾತ್ರಿಯಿಂದಲೇ ಸಕ್ಕರೆ ಕಾರ್ಖಾನೆಗಳು ಕಬ್ಬು‌ನುರಿಸುವಿಕೆ ಆರಂಭಿಸಿದವು. ಹೋರಾಟದ ಫಲವಾಗಿ ಬಾಕಿ ಹಣ ಪಾವತಿ ಭರವಸೆ ಸಿಕ್ಕುದ್ದರಿಂದ‌ ರೈತರಲ್ಲಿ ಸಂತಸಭಾವ ಕಂಡು‌ಬಂದಿತು.

ಮಾನವೀಯತೆ ಮೆರೆದ ಕಾರ್ಖಾನೆ:

ಮಹಾಲಿಂಗಪುರ ಬಳಿಯ ಸಮೀರವಾಡಿ ಸಕ್ಕರೆ ಕಾರ್ಖಾನೆ ಬಳಿ ಗುರುವಾರ ಸಂಜೆ ನಡೆದ ಅಹಿತಕರ ಘಟನೆಯಲ್ಲಿ ನಷ್ಟಕ್ಕೆ ಒಳಗಾಗಿರುವ ರೈತರಿಗೆ ಸೂಕ್ತ ಪರಿಹಾರ ನೀಡುವುದಾಗಿ ಕಾರ್ಖಾನೆ ಆಡಳಿತ ಮಂಡಳಿ ಭರವಸೆ ನೀಡಿದೆ ಎಂದು ಜಮಖಂಡಿ ಉಪವಿಭಾಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾರ್ಖಾನೆಯ‌ ನಿರ್ಧಾರಕ್ಕೆ ವ್ಯಾಪಕ ಸ್ವಾಗತ ವ್ಯಕ್ತವಾಗಿದೆ.

Scroll to Top