ಆಕ್ಷೇಪಕ್ಕೆ ರಾಜ್ಯ ಬಿಜೆಪಿ ಸಂಸದರ ತಿರುಗೇಟು

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಿಸುವ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವಾಗಲೇ ರಾಜ್ಯ ಬಿಜೆಪಿ ಸಂಸದರು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕೇಂದ್ರ‌ ಜಲಶಕ್ತಿ ಸಚಿವ ಸಿ. ಆರ್. ಪಾಟೀಲ ಅವರನ್ನು ಭೇಟಿ ಮಾಡಿದ್ದು ಸಾಕಷ್ಟು‌ ಮಹತ್ವ ಪಡೆದುಕೊಂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರಕ್ಕೆ ಪತ್ರ ಬರೆದು ಕೃಷ್ಞಾ ನ್ಯಾಯಾಧೀಕರಣ -2 ರ ವರದಿಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಬೇಕು. ಆಲಮಟ್ಟಿ ಅಣೆಕಟ್ಟು ಎತ್ತರವನ್ನು 519.60 ಮೀಟರಿನಿಂದ 524.256 ಮೀಟರಿಗೆ ಹೆಚ್ಚಿಸಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದ ಬೆನ್ನಲ್ಲೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಅಣೆಕಟ್ಟೆ ಎತ್ತರ ಹೆಚ್ಚಳದಿಂದ ಮಹಾರಾಷ್ಟ್ರದ ಕೆಲ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಲಿದೆ ಎನ್ನುವ ತಕರಾರು ತೆಗೆದು ಪತ್ರ ಬರೆದಿದ್ದರು.‌

ಆಕ್ಷೇಪ ಎತ್ತಿದ ಸಂಸದರು:

ಇಷ್ಟಕ್ಕೆ ಸುಮ್ಮನೆ ಕೂಡದ ಅವರು ಕೇಂದ್ರ ಜಲಶಕ್ತಿ ಸಚಿವರಿಗೂ ಪತ್ರ ಬರೆದು ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಸಾಲದು ಎನ್ನುವಂತೆ ಕೇಂದ್ರ ಜಲಶಕ್ತಿ ಸಚಿವರನ್ನು ಮಹಾ ಸಂಸದರೊಂದಿಗೆ ಭೇಟಿ ಮಾಡಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಅವಕಾಶ ನೀಡದಂತೆ ಮನವಿ ಮಾಡಿದ್ದರು.

ಕೃಷ್ಞಾ ನ್ಯಾಯಾಧೀಕರಣ-2 ರ ಐತೀರ್ಪಿನಲ್ಲಿ ಅಣೆಕಟ್ಟು ಎತ್ತರ ಹೆಚ್ಚಿಸಲು ಅವಕಾಶ ಇದ್ದರೂ ಮಹಾರಾಷ್ಟ್ರ ಇಲ್ಲದ ತಕರಾರಿಗೆ ಮುಂದಾಗಿರುವುದು ದುರದೃಷ್ಟಕರ ಸಂಗತಿ. ಇಂತಹ ಸನ್ನಿವೇಶದಲ್ಲಿ ರಾಜ್ಯದ ಬಿಜೆಪಿ ಸಂಸದರು ಬೊಮ್ಮಾಯಿ ಅವರ ನೇತೃತ್ವದಲ್ಲಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಮಹಾರಾಷ್ಟ್ರ ಸರ್ಕಾರದ ತಕರಾರಿಗೆ ಸ್ಪಷ್ಟನೆ ನೀಡಿದ್ದಲ್ಲದೆ, ಅವರ ತಕರಾರಿಗೆ ತೀವ್ರ ವಿರೋಧ ವ್ಯಕ್ತ ಪಡಿಸಿ ಕಾನೂನಾತ್ಮಕ ಕ್ರಮಗಳನ್ನು ಜರುಗಿಸುವಂತೆ ಒತ್ತಾಯಿಸಿದ್ದಾರೆ.

ಅಣೆಕಟ್ಟು ಎತ್ತರ ಹೆಚ್ಚಳ ಮತ್ತು ಕೃಷ್ಞಾ ನ್ಯಾಯಾಧೀಕರಣ – 2 ರ ಅಧೀಸೂಚನೆ ಹೊರಡಿಸುವಂತೆ ಕೇಂದ್ರದ ಮೇಲೆ ಒತ್ತಡ ಹಾಕುತ್ತಿರುವಾಗಲೇ ರಾಜ್ಯದಲ್ಲಿನ ಪ್ರತಿಪಕ್ಷ ಬಿಜೆಪಿ ಸಂಸದರು ಕೇಂದ್ರ ಸಚಿವರನ್ನು ಭೇಟಿ‌ ಮಾಡಿದ್ದು ಉತ್ತಮ‌ ಬೆಳವಣಿಗೆ ಆಗಿದೆ.

ಅಧೀಸೂಚನೆ ಹೊರಡಿಸದ ಕೇಂದ್ರ:

ನ್ಯಾಯಾಧೀಕರಣ -2 ರ ಅಂತಿಮ ವರದಿ ಸಲ್ಲಿಕೆ ಆಗಿದ್ದರೂ ಇದುವರೆಗೂ ಕೇಂದ್ರ ಅಧಿಸೂಚನೆ ಹೊರಡಿಸುತ್ತಿಲ್ಲ. ಪರಿಣಾಮವಾಗಿ ಯುಕೆಪಿ-ಹಂತ 3 ರ ಕೆಲಸಗಳು ಕುಂಠಿತಗೊಂಡಿವೆ. ಅಗತ್ಯ ಭೂಸ್ವಾಧೀನ, ಪರಿಹಾರ ಹಂಚಿಕೆ, ಮುಳುಗಡೆ ಗ್ರಾಮಗಳ ಸ್ಥಳಾಂತರ, ಪುನರ್ ವಸತಿ ,ಪುನರ್ ನಿರ್ಮಾಣ ನನೆಗುದಿಗೆ ಬಿದ್ದಿವೆ.‌ ಜತೆಗೆ ಯೋಜನಾ‌ ವೆಚ್ಚ ಕೂಡ ಹೆಚ್ಚುತ್ತಲೇ ಇದೆ.

ಯೋಜನೆ ತೀವ್ರಗತಿಯಲ್ಲಿ ಅನುಷ್ಠಾನಗೊಳಿಸುವ ಹಿನ್ನೆಲೆಯಲ್ಲಿ ನ್ಯಾಯಾಧೀಕರಣ -2 ರ ಅಂತಿಮ ವರದಿ ಜಾರಿಗೆ ಶೀಘ್ರ ಅಧೀಸೂಚನೆ ಹೊರಡಿಸುವಂತೆ ಒತ್ತಾಯಿಸಲು ಮುಖ್ಯಮಂತ್ರಿಗಳು ಪ್ರಧಾನಿ ಅವರ ಬಳಿಗೆ ಸರ್ವಪಕ್ಷ ನಿಯೋಗ ಕೊಂಡೋಯ್ಯಬೇಕಾಗಿದ್ದು ಇಂದಿನ ಅನಿವಾರ್ಯತೆ ಕೂಡ ಆಗಿದೆ. ಇದಕ್ಕೆ ಪ್ರತಿಪಕ್ಷಗಳೂ ಸಾಥ್ ನೀಡುವ ಮೂಲಕ ಯೋಜನಾನುಷ್ಠಾನಕ್ಕೆ ಮುಂದಾಗಬೇಕಿದೆ.

ಬೇಕಿದೆ ಇಚ್ಛಾಶಕ್ತಿ:

ನ್ಯಾಯಾಧೀಕರಣ -2 ರ ಅಂತಿಮ ವರದಿ ಹಿನ್ನೆಲೆಯಲ್ಲಿ ಅಧೀಸೂಚನೆ ಹೊರಡಿಸುವಂತೆ ಕೇಂದ್ರದ ಮೇಲೆ ಪಕ್ಷಾತೀತ ಒತ್ತಡ ಆದಲ್ಲಿ ಮಾತ್ರ ಯೋಜನಾನುಷ್ಠಾನ ಸಾಧ್ಯವಾಗಲಿದೆ. ಇದಕ್ಕೆ ಪ್ರಮುಖ ರಾಜಕೀಯ ಪಕ್ಷಗಳ ಇಚ್ಛಾಶಕ್ತಿ ಬಹಳ ಮುಖ್ಯವಾಗಿದೆ.

  • ವಿಠ್ಠಲ ಆರ್. ಬಲಕುಂದಿ.
Scroll to Top