ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡುವರೆ ವರ್ಷ ಪೂರೈಸಿದೆ. ಇನ್ನೂ ಎರಡುವರೆ ವರ್ಷ ಅಧಿಕಾರಾವಧಿ ಇರುವಾಗಲೇ ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಶಾಸಕ ಎಚ್.ವೈ.ಮೇಟಿ ಅವರು ನಿಧನರಾಗಿದ್ದಾರೆ. ಅವರ ನಿಧನದಿಂದಾಗಿ ಅನಿವಾರ್ಯವಾಗಿ ಉಪಚುನಾವಣೆ ಎದುರಿಸಬೇಕಾಗಿ ಬಂದಿದೆ.
ಚುನಾವಣೆ ಆಯೋಗ ಯಾವುದೇ ಸಮಯದಲ್ಲೂ ಬಾಗಲಕೋಟೆ ವಿಧಾನಸಭೆ ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಮಾಡಬಹುದಾಗಿದೆ. ಆ ಹಿನ್ನೆಲೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಅಭ್ಯರ್ಥಿಗಳು ಯಾರಾಗಬಹುದು ಎನ್ನುವ ಚರ್ಚೆ ಈಗಲೇ ಶುರುವಾಗಿದೆ.
ಆಪ್ತರೊಂದಿಗೆ ಸಮಾಲೋಚನೆ:
ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಸಹಜವಾಗಿಯೇ ಯಾವುದಾದರೂ ಕ್ಷೇತ್ರದ ಶಾಸಕರು ನಿಧನರಾದಲ್ಲಿ ಅವರ ಕುಟುಂಬಸ್ಥರಿಗೆ ಟಿಕೆಟ್ ನೀಡುವ ಪದ್ಧತಿ ಮೊದಲಿನಿಂದ ನಡೆದುಕೊಂಡು ಬಂದಿದೆ. ಹಾಗೆ ನೋಡಿದಲ್ಲಿ ದಿ. ಶಾಸಕ ಎಚ್.ವೈ.ಮೇಟಿ ಅವರ ಕುಟುಂಬದವರಿಗೆ ಟಿಕೆಟ್ ಸಿಗುವ ಸಾಧ್ಯತೆಗಳು ಹೆಚ್ಚು.
ಏತನ್ಮಧ್ಯೆ ಅಜಾತ ಶತ್ರು ಎಚ್.ವೈ.ಮೇಟಿ ಅವರ ನಿಧನದ ಬಳಿಕ ಕ್ಷೇತ್ರದಲ್ಲಿನ ಕಾಂಗ್ರೆಸ್ ಪಾಳೆಯದಲ್ಲಿ ದಿನಕ್ಕೊಂದು ರೀತಿಯ ಬೆಳವಣಿಗೆಗಳು ಆಂತರಿಕವಾಗಿ ನಡೆಯುತ್ತಿವೆ. ಒಂದು ಕಡೆ ಮೇಟಿ ಅವರ ಕುಟುಂಬದವರಿಗೆ ಟಿಕೆಟ್ ಸಿಗಬೇಕು ಎನ್ನುವ ಮುಖಂಡರು, ಅಭಿಮಾನಿಗಳು ಇದ್ದಾರೆ. ಇನ್ನೊಂದು ಕಡೆ ರಾಜ್ಯದಲ್ಲಿ ನಮ್ಮದೆ ಸರ್ಕಾರ ಇದೆ. ಪಕ್ಷದ ಟಿಕೆಟ್ ಸಿಕ್ಕಲ್ಲಿ ಗೆಲುವು ಸುಲಭ ಎನ್ನುವ ಲೆಕ್ಕಾಚಾರದಲ್ಲಿ ಮುರ್ನಾಲ್ಕು ಜನ ಹಿರಿಯ ಮುಖಂಡರು ಟಿಕೆಟ್ ಗಾಗಿ ಪ್ರಯತ್ನಿಸಲು ಆಪ್ತರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ.
ಟಿಕೆಟ್ ಹಂಚಿಕೆ ವಿಷಯದಲ್ಲಿ ಪಕ್ಷದ ವರಿಷ್ಠರ ನಿರ್ಧಾರ ಏನಾಗಿರಲಿದೆ ಎನ್ನುವುದು ಕುತೂಹಲದ ಸಂಗತಿ. ಬಹುತೇಕ ಸಂದರ್ಭದಲ್ಲಿ ಪಕ್ಷ ಕುಟುಂಬಸ್ಥರಲ್ಲಿಯೆ ಟಿಕೆಟ್ ನೀಡಿದೆ. ಈಗಲೂ ಹಾಗೆ ಆಗಬಹುದು ಎನ್ನುವ ಬಲವಾದ ಲೆಕ್ಕಾಚಾರಗಳಿವೆ. ಅದರ ಮಧ್ಯೆಯೂ ಕಳೆದ ಚುನಾವಣೆಯಲ್ಲಿ ಕಮಲಕ್ಕೆ ಕೈಕೊಟ್ಟು, ಕೈ ಹಿಡಿದ ಯುವ ಮುಖಂಡರೊಬ್ಬರು ಸೇರಿದಂತೆ ಕೆಲ ಹಿರಿಯ ಮುಖಂಡರು ಟಿಕೆಟ್ ಆಶಯ ಹೊಂದಿದ್ದಾರೆ. ಕೊನೆ ಕ್ಷಣದಲ್ಲಿ ಪಕ್ಷದ ವರಿಷ್ಠರ ನಿರ್ಧಾರ ಬದಲಾದಲ್ಲಿ ಮೇಟಿ ಅವರ ಕುಟುಂಬೇತರರಿಗೆ ಅವಕಾಶ ಸಿಗಬಹುದು ಎಂಬ ಅಂದಾಜುಗಳ ಕಾರಭಾರು ಜೋರಾಗಿದೆ. ಈ ಸಾಧ್ಯತೆಗಳು ತೀರ ಕಡಿಮೆ. ಆದರೂ ರಾಜಕಾರಣದಲ್ಲಿ ಯಾವುದನ್ನೂ ತಳ್ಳಿ ಹಾಕಲಾಗದು. ಒಂದಂತೂ ನಿಜ, ಇಡೀ ಕ್ಷೇತ್ರದ ಮೇಲೆ ಮೇಟಿ ಅವರು ಹಿಡಿತ ಸಾಧಿಸಿದಷ್ಟು, ಕಾಂಗ್ರೆಸ್ಸಿನ ಇನ್ನಾವ ಮುಖಂಡರಿಂದಲೂ ಹಿಡಿತ ಸಾಧಿಸಲು ಸಾಧ್ಯವಾಗಿಲ್ಲ.
ಮೇಟಿ ಕಾರಣದಿಂದ ಗೆಲುವು:
ಇತ್ತೀಚಿನ ದಶಕಗಳಲ್ಲಿ ಬಾಗಲಕೋಟೆ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಬಲಾಢ್ಯವಾಗಿ ಬೆಳೆದು ನಿಂತಿದೆ. 1997, 1999, 2004, 2008, 2018 ರಲ್ಲಿ ಬಿಜೆಪಿ ಇಲ್ಲಿ ಗೆದ್ದು ಬೀಗಿದೆ. 2013 ಮತ್ತು 2023ರಲ್ಲಿ ಕಾಂಗ್ರೆಸ್ಸಿನಿಂದ ಎಚ್.ವೈ.ಮೇಟಿ ಗೆಲುವು ಸಾಧಿಸಿದ್ದರು.
ಕ್ಷೇತ್ರದಲ್ಲಿ ಕಾಂಗ್ರೆಸ್ ಮೇಟಿ ಅವರ ಕಾರಣದಿಂದಲೇ ಎರಡು ಬಾರಿ ಗೆದ್ದಿದೆ. ಅವರ ಬದಲಿಗೆ ಬೇರೆಯವರು ಯಾರೇ ಅಭ್ಯರ್ಥಿ ಆಗಿದ್ದಲ್ಲಿ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತಿರಲಿಲ್ಲ ಎನ್ನುವ ಮಾತು ಬಿಜೆಪಿಯಲ್ಲಲ್ಲ, ಕಾಂಗ್ರೆಸ್ಸಿನಲ್ಲಿಯೇ ಇದೆ. ಅಂತಹ ಹಿಡಿತವನ್ನು ಮೇಟಿ ಅವರು ಕ್ಷೇತ್ರದ ಮೇಲೆ ಹೊಂದಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ.
ಕಮಲಕ್ಕೆ ಮಗ್ಗಲು ಮುಳ್ಳಾದ ಭಿನ್ನಮತ:
ಕ್ಷೇತ್ರದಲ್ಲಿನ ಬಿಜೆಪಿ ನಾಯಕರಲ್ಲಿ ಯಾವಾಗ ಭಿನ್ನಮತ ಸೃಷ್ಟಿ ಆಗಿದೆಯೋ ಆಗ ಮೇಟಿ ಅವರು ಗೆಲುವಿನ ನಗೆ ಬೀರಿದ್ದಾರೆ. ಈಗಲೂ ಕ್ಷೇತ್ರದಲ್ಲಿ ಬಿಜೆಪಿ ತನ್ನದೇ ಆದ ವರ್ಚಸ್ಸು ಹೊಂದಿದೆ. ಮುಖಂಡರ ನಡುವಿನ ಭಿನ್ನಮತ ದಿಂದ ಕಾರ್ಯಕರ್ತರಲ್ಲಿ ಮುಖಂಡರ ಬಗೆಗೆ ಅಸಮಾಧಾನವಿದ್ದರೂ ಪಕ್ಷದ ಬಗೆಗೆ ಅಭಿಮಾನ ಹೊಂದಿದ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಬಹುದೊಡ್ಡ ಪಡೆ ಇದೆ. ಬಿಹಾರ ವಿಧಾನ ಸಭೆ ಚುಮಾವಣೆಯಲ್ಲಿ ಎನ್ ಡಿಎ ಗೆಲುವು ಕೂಡ ಕಮಲ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿಸಿದೆ.
ಉಪ ಚುನಾವಣೆಯಲ್ಲಿ ಅನುಕಂಪ ಕೆಲಸ ಮಾಡದು ಎನ್ನುವ ಲೆಕ್ಕಾಚಾರದಲ್ಲಿ ಬಿಜೆಪಿಗರು ಇದ್ದಾರೆ. ಜತೆಗೆ ಈಗ ಟಿಕೆಟ್ ತಪ್ಪಿಸಿಕೊಂಡಲ್ಲಿ ಭವಿಷ್ಯದಲ್ಲೂ ಪಕ್ಷದ ಟಿಕೆಟ್ ತಪ್ಪಬಹುದು ಎನ್ನುವ ಅಂದಾಜಿನ ಹಿನ್ನೆಲೆಯಲ್ಲಿ ಟಿಕೆಟ್ ಗಾಗಿ ಹಕ್ಕೋತ್ತಾಯ ಮಂಡಿಸಲು ಮುಖಂಡರು ಸಜ್ಜಾಗುತ್ತಿದ್ದಾರೆ.
ಟಿಕೆಟ್ ಕದನ:
ಹಾಗಾಗಿ ಶತಾಯ-ಗತಾಯ ಟಿಕೆಟ್ ಗಾಗಿ ಮುಖಂಡರ ನಡುವೆ ಭಾರೀ ಪೈಪೋಟಿ ನಡೆಯುವ ಎಲ್ಲ ಸಾಧ್ಯತೆಗಳು ಹೆಚ್ಚಿವೆ. ಒಟ್ಟಾರೆ ಬಾಗಲಕೋಟೆ ವಿಧಾನ ಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಟಿಕೆಟ್ ಗಾಗಿ ಮಹಾ ಯುದ್ಧವೇ ನಡೆಯಲಿದೆ ಎನ್ನುವ ವಾತಾವರಣವಂತೂ ಸೃಷ್ಟಿಯಾಗುತ್ತಿದೆ.
- ವಿಠ್ಠಲ ಆರ್. ಬಲಕುಂದಿ



