ಬಾಗಲಕೋಟೆ: ಮುಧೋಳ ಕಬ್ಬು ಬೆಳೆಗಾರರ ಹೋರಾಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದೇ ಹೋದ ಪರಿಣಾಮ ಇಂದು ಇಡೀ ಮುಧೋಳ ಭಾಗ ಹೊತ್ತು ಉರಿಯಲಾರಂಭಿಸಿದೆ. ಸರ್ಕಾರದ ವಿರುದ್ಧ ರೈತರ ಆಕ್ರೋಶದ ಕಟ್ಟೆ ಒಡೆದು ಕೋಟ್ಯಂತರ ರೂಪಾಯಿ ಮೌಲ್ಯದ ಕಬ್ಬು ಬೆಂಕಿಗಾಹುತಿಯಾಗಿದ್ದಲ್ಲದೆ, ಕಾನೂನು ಸುವ್ಯವಸ್ಥೆ ಕೈ ಮೀರಿ ಹೋಗಿದೆ.
ಕಳೆದೊಂದು ವಾರದಿಂದ ಮುಧೋಳ ರೈತರು ಪ್ರತಿ ಟನ್ ಕಬ್ಬಿಗೆ 3300 ರೂಪಾಯಿ ಒಪ್ಪಲು ಸಾಧ್ಯವಿಲ್ಲ. 3500 ರೂಪಾಯಿ ಪ್ರತಿ ಟನ್ ಕಬ್ಬಿಗೆ ನಿಗದಿ ಪಡಿಸಿದಾಗಲೇ ಹೋರಾಟ ವಾಪಸ್ ಪಡೆಯುವುದಾಗಿ ಎಚ್ಚರಿಕೆ ನೀಡುತ್ತ ಬಂದಿದ್ದರು. ರೈತ ಹೋರಾಟಗಾರರು ಬೆಲೆ ನಿಗದಿಗಾಗಿ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತವಾರಿ ಸಚಿವರು, ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರೊಂದಿಗೆ ಮಾತುಕತೆ ನಡೆಸುವ ಜತೆಗೆ ಹೋರಾಟವನ್ನು ತೀವ್ರಗೊಳಿಸಿದ್ದರು. ಸಚಿವರು, ಅಧಿಕಾರಿಗಳ, ಕಾರ್ಖಾನೆ ಆಡಳಿತ ಮಂಡಳಿಯವರ ಜತೆ ನಡೆಸಿದ ಮಾತುಕತೆ ಫಲಪ್ರದವಾಗಲೇ ಇಲ್ಲ.
ಮುರಿದ ಮಾತುಕತೆ:
ಪರಿಣಾಮವಾಗಿ ಜಿಲ್ಲೆಯ ಕಾರ್ಖಾನೆಗಳನ್ನು ಬಂದ್ ಮಾಡಿಸಿ, ಹೆದ್ದಾರಿ ತಡೆ ನಡೆಸಿದರು, ಕಬ್ಬು ನುರಿಸುವಿಕೆ ಆರಂಭಿಸಿದ್ದ ಕಾರ್ಖಾನೆಗಳ ಮುಂದೆ ಪ್ರತಿಭಟನೆ ನಡೆಸಿ ಅವುಗಳನ್ನು ಬಂದ್ ಮಾಡಿಸಿದ್ದರು. ಮುಧೋಳದಲ್ಲಿ ಬೃಹತ್ ಪಾದಯಾತ್ರೆ ನಡೆಸಿ ಸರ್ಕಾರಿ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿದರು. ಗುರುವಾರ ಮುಧೋಳದಲ್ಲಿನ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಮೂಲಕ ಸಂಪೂರ್ಣ ಬಂದ್ ನಡೆಸಿದರು. ಹೋರಾಟದ ಪ್ರತಿ ಹಂತದಲ್ಲೂ ರೈತರು ಸರ್ಕಾರ ಎಚ್ಚರಿಕೆ ಕೊಟ್ಟು ಪ್ರತಿ ಟನ್ ಕಬ್ಬಿಗೆ ೩೫೦೦ ರೂಪಾಯಿ ಕೊಡಲೇ ಬೇಕು ಎನ್ನುವ ಪಟ್ಟು ಸಡಿಲಿಸಲೇ ಇಲ್ಲ.

ಕಬ್ಬಿಗೆ ಬಿತ್ತು ಬೆಂಕಿ:
ಹೋರಾಟಗಾರರು ಗುರುವಾರ ಮಧ್ಯಾಹ್ನದ ವರೆಗೂ ಬೆಲೆ ಘೋಷಣೆ ಬಗೆಗೆ ಸರ್ಕಾರಕ್ಕೆ ಗಡುವು ನೀಡುವ ಜತೆಗೆ ಪ್ರತಿಭಟನೆ ಮಧ್ಯಾಹ್ನದ ಬಳಿಕ ಯಾವ ಸ್ವರೂಪ ಪಡೆದುಕೊಳ್ಳಲಿದೆ ಗೊತ್ತಿಲ್ಲ. ಅಷ್ಟರೊಳಗಾಗಿ ಸಮಸ್ಯೆಗೆ ಪರಿಹಾರ ಒದಗಿಸಬೇಕು. ಇಲ್ಲದೆ ಹೋದಲ್ಲಿ ಮುಂದಿನ ಘಟನೆಗಳಿಗೆ ಸರ್ಕಾರವೇ ಹೊಣೆ ಎನ್ನುವ ಸ್ಪಷ್ಟ ಎಚ್ಚರಿಕೆ ನೀಡಿದ್ದರು.
ಹೋರಾಟಗಾರರ ಮಾತನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳದೇ ಹೋಗಿದ್ದರಿಂದ ಗುರುವಾರ ಮಧ್ಯಾಹ್ನದ ಬಳಿಕ ಹೋರಾಟಗಾರರು ಸಮೀರವಾಡಿ ಸಕ್ಕರೆ ಕಾರ್ಖಾನೆ ಶುರುವಾಗಿದೆ ಎನ್ನುವ ಮಾಹಿತಿಯೊಂದಿಗೆ ಅದನ್ನು ಬಂದ್ ಮಾಡಿಸಲು ಕಾರ್ಖಾನೆ ಅತ್ತ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ಕಬ್ಬು ಹೊತ್ತು ನಿಂತಿದ್ದ ಟ್ರ್ಯಾಕ್ಟರ್ ಕಾಣಿಸುತ್ತಿದ್ದಂತೆ ಅವರ ತಾಳ್ಮೆಯ ಕಟ್ಟೆಯೊಡೆದಾಗ ಅದನ್ನು ಉರುಳಿಸಿದ ಅವರು ಕಬ್ಬಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತ ಪಡಿಸಿದರು. ಅಲ್ಲಿಂದ ಮುಂದೆ ಸಾಗಿದ ಹೋರಾಟಗಾರರು ಸಮೀರವಾಡಿ ಕಾರ್ಖಾನೆ ಮುಂಭಾಗದಲ್ಲಿ ಕಬ್ಬು ಹೊತ್ತು ಸಾಲಾಗಿ ನಿಂತಿದ್ದ ಟ್ರ್ಯಾಕ್ಟರ್ಗಳು ಕಂಡಾಗ, ಸಂಪೂರ್ಣ ತಾಳ್ಮೆ ಕಳೆದುಕೊಂಡು ಟ್ರ್ಯಾಕ್ಟರ್ಗಳಲ್ಲಿನ ಕಬ್ಬಿಗೆ ಬೆಂಕಿ ಹಚ್ಚಿದರು. ಇದರಿಂದ ರೈತರು ಬೆಳೆಗೆ ಕೋಟ್ಯಂತರ ರೂಪಾಯಿ ಮೌಲ್ಯದ ಕಬ್ಬು ಬೆಂಕಿಗೆ ಆಹುತಿಯಾಗಿ ಸುಟ್ಟು ಕರಕಲಾಗಿ ಹೋಗಿದೆ.
ಬಿಗಡಾಯಿಸಿದ ಸ್ಥಿತಿ:
ರೈತ ಹೋರಾಟಗಾರರ ಎಚ್ಚರಿಕೆ ಮಧ್ಯೆಯೂ ಸರ್ಕಾರ ಅವರ ಎಚ್ಚರಿಕೆಗೆ ಕ್ಯಾರೇ ಅನ್ನದ ಹಿನ್ನೆಲೆಯಲ್ಲಿ ಕಬ್ಬಿನ ಕಿಚ್ಚಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಕಬ್ಬು ಸುಟ್ಟು ಹೋಗಿದೆ. ಸದ್ಯ ಮುಧೋಳ, ರಬಕವಿ-ಬನಹಟ್ಟಿ ಹಾಗೂ ಜಮಖಂಡಿ ಭಾಗದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಇನ್ನಾದರೂ ಸರ್ಕಾರ ಎಚ್ಚತ್ತುಕೊಳ್ಳದೇ ಹೋದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಗಳು ನಿಚ್ಚಳವಾಗಿದೆ.
ಮುಧೋಳದ ಸುತ್ತಲಿನ ಪ್ರದೇಶದಲ್ಲಿ ಗುರುವಾರ ನಡೆದ ಅಹಿತಕರ ಘಟನೆ ಹಿಂದೆ ಯಾರಿರಬಹುದು ಎನ್ನುವುದನ್ನು ತನಿಖೆ ಮೂಲಕ ಪತ್ತೆ ಹಚ್ಚಿ, ನಿಜವಾದ ತಪ್ಪಿಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಬೇಕಿದೆ. ಇಲ್ಲಿ ಸ್ವಲ್ಪವೇ ಯಡವಟ್ಟಾದರೂ ಅಮಾಯಕರು ಇಲ್ಲದ ಸಮಸ್ಯೆ ಎದುರಿಸಬೇಕಾಗಿ ಬರುತ್ತದೆ. ಇನ್ನಾದರೂ ಕ್ಷೇತ್ರದ ಶಾಸಕರೂ ಆಗಿರುವ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ರೈತರ ಆಕ್ರೋಶ ತಣಿಸುವ ಕಾರ್ಯಕ್ಕೆ ಮುಂದಾಗಲಿ ಎನ್ನುವುದು ಬಹುತೇಕರ ಅಭಿಮತವಾಗಿದೆ.




