ಬಾಗಲಕೋಟೆ: ಒಂದು ಕಡೆ ತೀವ್ರಗೊಂಡಿದ್ದ ಹೋರಾಟ ತಣ್ಣಗಾಯಿತು ಎನ್ನವಷ್ಟರಲ್ಲೇ ಮತ್ತೊಂದು ಕಡೆ ಜ್ವಾಲಾಮುಖಿಯಾಗಿ ಸ್ಪೋಟಗೊಂಡಿದೆ.
ಪ್ರತಿಟನ್ ಕಬ್ಬಿಗೆ 3,500 ರೂಪಾಯಿ ನೀಡಬೇಕು ಎಂದು ಆಗ್ರಹಿಸಿ ಮೂಡಲಗಿ ತಾಲೂಕು ಗುರ್ಲಾಪುರ ಕ್ರಾಸ್‌ದಲ್ಲಿ ಆರಂಭಗೊಂಡ ಹೋರಾಟ ವಾರದಲ್ಲಿ ರಾಜ್ಯದಾದ್ಯಂತ ವ್ಯಾಪ್ತಿಸಿ, ತೀವ್ರತೆ ಪಡೆದುಕೊಂಡಾಗ ಸರ್ಕಾರವೇ ಹೋರಾಟದ ಮೂಲ ಸ್ಥಳಕ್ಕೆ ತೆರಳಿ ಸಂಧಾನ ನಡೆಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಮುಖ್ಯಮಂತ್ರಿಗಳು ಸಂಪುಟ ಸಭೆ ನಡೆಸಿ ನ್ಯಾಯಯುತ ಬೆಲೆ ನಿಗದಿಗೆ ಚರ್ಚೆ ನಡೆಸಿದರೂ ಒಮ್ಮತ ಮೂಡಲಿಲ್ಲ. ಕೊನೆಗೆ ಮುಖ್ಯಮಂತ್ರಿಗಳು ರೈತ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರ ಪ್ರತ್ಯೇಕ ಸಭೆ ನಡೆಸಿ ಪ್ರತಿ ಟನ್ ಕಬ್ಬಿಗೆ 3,300 ರೂಪಾಯಿ ಘೋಷಣೆ ಮಾಡಿದರು.
ಮುಂದುವರಿದ ಹೋರಾಟ:
ಮುಖ್ಯಮಂತ್ರಿಗಳು ಪ್ರತಿಟನ್ ಕಬ್ಬಿಗೆ 3,300 ರೂಪಾಯಿ ಘೋಷಣೆ ಮಾಡಿದಾಗ ರೈತ ವಲಯದಲ್ಲಿ ವ್ಯಾಪಕ ಸ್ವಾಗತ ವ್ಯಕ್ತಗೊಂಡು ಗುರ್ಲಾಪುರ ಸೇರಿದಂತೆ ಅನೇಕ ಕಡೆಗಳಲ್ಲಿ ರೈತರ ಹೋರಾಟ ಸ್ಥಗಿತಗೊಂಡಿತಾದರೂ ಬಾಗಲಕೋಟೆ, ವಿಜಯಪುರ, ಯಾದಗಿರಿ ಸೇರಿದಂತೆ ಇನ್ನೂ ಹಲವು ಕಡೆ ಸರ್ಕಾರ ಘೋಷಿಸಿದ 3,300 ರೂಪಾಯಿ ದರಕ್ಕೆ ವಿರೋಧ ವ್ಯಕ್ತವಾಗಿ ಹೋರಾಟ ಹಾಗೆ ಮುಂದುವರಿಯಿತು.
ರೈತ ಹೋರಾಟಕ್ಕೆ ಹೆಸರಾದ ಮುಧೋಳದಲ್ಲಿ ಮುಂದುವರಿದಿರುವ ಹೋರಾಟ ದಿನದಿಂದ ದಿನಕ್ಕೆ ನಾನಾ ರೂಪಗಳನ್ನು ಪಡೆದುಕೊಳ್ಳುತ್ತಿದೆ. ಶತಾಯ-ಗತಾಯ ಸರ್ಕಾರ ಪ್ರತಿ ಟನ್‌ಗೆ 3,500 ರೂಪಾಯಿ ಘೋಷಣೆ ಮಾಡುವಂತೆ ಒತ್ತಾಯ ತೀವ್ರಗೊಂಡಿದೆ. ಬೀದಿಗಿಳಿದು ಹೋರಾಟ ನಡೆಸುತ್ತಿರುವ ರೈತರು ಈಗಾಗಲೇ ನಗರಾದ್ಯಂತ ಬೃಹತ್ ಪಾದಯಾತ್ರ ನಡೆಸಿದ್ದಾರೆ. ಸರ್ಕಾರಿ ಕಚೇರಿಗಳಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಹೆದ್ದಾರಿ ತಡೆ ನಡೆಸಿದ್ದಾರೆ. ಗುರುವಾರ ಇಡೀ ಮುಧೋಳ ಪಟ್ಟಣದ ವ್ಯಾಪಾರಸ್ಥರು ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಿ ಹೋರಾಟಕ್ಕೆ ಬೆಂಬಲ ನೀಡಿದ್ದು, ಪಟ್ಟಣ ಸಂಪೂರ್ಣ ನಿರ್ಜನ ಪ್ರದೇಶವಾಗಿ ಮಾರ್ಪಟ್ಟಿದೆ. ಇದರಿಂದಾಗಿ ಮುಂದುವರಿದಿರುವ ಹೋರಾಟದ ಕಿಚ್ಚು ಹೆಚ್ಚುತ್ತಲೇ ಇದೆ.
ಫಲಪ್ರದವಾಗದ ಸಭೆಗಳು:
ಏತನ್ಮಧ್ಯೆ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವರಿ ಹಾಗೂ ಅಬಕಾರಿ ಸಚಿವರು ರೈತರು, ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರೊಂದಿಗೆ ಸಭೆ ನಡೆಸಿದರೂ ಪ್ರಯೋಜನವಾಗಿಲ್ಲ. ಜಿಲ್ಲೆಯ ಸಕ್ಕರೆ ಕಾರ್ಖಾನೆಯವರು ಮುಧೋಳದ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಬರಬೇಕು. ರೈತರೊಂದಿಗೆ ಮಾತುಕತೆ ನಡೆಸುವ ಮೂಲಕ ಪ್ರತಿ ಟನ್ ಕಬ್ಬಿಗೆ ಯೋಗ್ಯಬೆಲೆ ಘೋಷಣೆ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಗುರ್ಲಾಪುರ ಕ್ರಾಸ್ ಹೋರಾಟ ಸಮಯದಲ್ಲಿ ಸರ್ಕಾರ 3,300 ರೂಪಾಯಿ ಘೋಷಿಸಿದ್ದು, ಈಗ ಅದಕ್ಕಿಂತ ಹೆಚ್ಚಿನ ದರ ಘೋಷಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಬೆಲೆ ನಿಗದಿ ಆಗದೇ ಕಾರ್ಖಾನೆಗಳನ್ನು ಆರಂಭಿಸುವಂತಿಲ್ಲ ಎನ್ನುವ ಎಚ್ಚರಿಕೆಯನ್ನು ಸತತವಾಗಿ ನೀಡುತ್ತಿದ್ದಾರೆ. ರೈತರ ಹೋರಾಟದ ಮಧ್ಯೆಯೂ ಆರಂಭಗೊಂಡ ಕಾರ್ಖಾನೆಗಳಿಗೆ ಮುತ್ತಿಗೆ ಹಾಕಿ, ಅವುಗಳನ್ನು ಯಶಸ್ವಿಯಾಗಿ ಬಂದ್ ಮಾಡಿಸಿದ್ದಾರೆ. ಅಷ್ಟೆ ಅಲ್ಲ, ಅಂತಹ ಕಾರ್ಖಾನೆಗಳಿಗೆ ಸಾಗಣೆ ಆಗುತ್ತಿದ್ದ ಕಬ್ಬನ್ನು ತಡೆದಿದ್ದಾರೆ.
ರೈತರ ಬೇಡಿಕೆ ಒಪ್ಪುತ್ತಿಲ್ಲ:
ಮುಧೋಳ ಸುತ್ತಲಿನ ಪ್ರದೇಶಗಳಲ್ಲಿ ಹೋರಾಟ ನಡೆಯುತ್ತಿದ್ದರೂ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಯವರು ಸರ್ಕಾರ ಈಗಾಗಲೇ ನಿಗದಿ ಪಡಿಸಿರುವ ಬೆಲೆ ನೀಡಲಾಗುವುದು. ಅದಕ್ಕಿಂತ ಹೆಚ್ಚಿನ ಬೆಲೆ ನೀಡಲು ಸಾಧ್ಯವಿಲ್ಲ ಎನ್ನುವ ಸ್ಪಷ್ಟ ಮಾತುಗಳನ್ನು ಹೇಳುತ್ತಿದ್ದಾರೆ. ಕಬ್ಬಿಗೆ ಬೆಲೆ ನಿಗದಿ ವಿಷಯದಲ್ಲಿ ರೈತ ಹೋರಾಟಗಾರರು ಮತ್ತು ಕಾರ್ಖಾನೆ ಆಡಳಿತ ಮಂಡಳಿಯವರ ನಡುವೆ ಬೆಲೆ ಸಂಘರ್ಷ ನಡೆಯುತ್ತಿದ್ದರೂ ಸರ್ಕಾರ ಮಾತ್ರ ಮೌನಕ್ಕೆ ಶರಣಾಗಿದೆ. ಹೋರಾಟದ ಬಗೆಗಿನ ಸರ್ಕಾರದ ನಿರ್ಲಕ್ಷ್ಯ ಮುಂದುವರಿದಲ್ಲಿ ಹೋರಾಟ ದಿಕ್ಕು ತಪ್ಪುವ ಸಾಧ್ಯತೆ ಹೆಚ್ಚಾಗಿದೆ. ಕಾನೂನು, ಸುವ್ಯವಸ್ಥೆಗೆ ಅಡಚಣೆ ಆಗುವ ಆತಂಕದ ವಾತಾವರಣ ಸೃಷ್ಟಿಯಾಗುತ್ತಿದೆ.
ನಷ್ಟ ತಪ್ಪಿದ್ದಲ್ಲ:
ಹೋರಾಟಗಾರರು ಮತ್ತು ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರು ನಡುವೆ ದರ ಸಂಧಾನ ಆಗದೇ, ಹೋರಾಟ ಮುಂದುವರಿದಲ್ಲಿ ಇಬ್ಬರಿಗೂ ನಷ್ಟ ತಪ್ಪಿದ್ದಲ್ಲ. ಹೋರಾಟ ನಿಲ್ಲುವಂತಾಗಲು ಸರ್ಕಾರ ಮತ್ತೊಂದು ಸುತ್ತಿನ ಸಂಧಾನಕ್ಕೆ ಮುಂದಾಗದ ಹೊರತು ಪರ್ಯಾಯ ಮಾರ್ಗವೇ ಇಲ್ಲವಾಗಿದೆ. ಮುಧೋಳದಲ್ಲಿ ಕಬ್ಬಿನ ಬೆಲೆ ನಿಗದಿಗಾಗಿನ ಹೋರಾಟ ಇಂದು ನಿನ್ನೆಯದಲ್ಲ. ನಿರಂತರವಾಗಿ ನಡೆದುಕೊಂಡು ಬಂದಿದೆ. ಕಬ್ಬಿನ ಬೆಲೆ ನಿಗದಿಗಾಗಿ ಹೋರಾಟದಲ್ಲಿ ಸಾಕಷ್ಟು ತೊಂದರೆ ಆಗಿರುವ ಸಂದರ್ಭಗಳೂ ಇವೆ. ಹಿಂದಿನ ಹೋರಾಟಗಳಿಂದ ಆಗಿರುವ ಬೆಳವಣಿಗೆಗಳನ್ನು ಅರಿತು ಸರ್ಕಾರ ಹೋರಾಟ ಅಂತ್ಯಗೊಳಿಸುವತ್ತ ಗಮನ ಹರಿಸಬೇಕಾದ ಅನಿವಾರ್ಯ ಪ್ರಸಂಗ ಸದ್ಯ ನಿರ್ಮಾಣವಾಗಿದೆ.
ದರ ಪರಿಷ್ಕರಣೆ:
ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ಸ್ವಕ್ಷೇತ್ರದಲ್ಲಿ ನಡೆಯುತ್ತಿರುವ ರೈತ ಹೋರಾಟ ಸುಖಾಂತ್ಯ ಕಾಣುವಂತೆ ಸಚಿವರು ಹೋರಾಟಗಾರರ ಮನವೊಲಿಸುವ ನಿರಂತರ ಪ್ರಯತ್ನ ಪಡಬೇಕಿದೆ. ಸರ್ಕಾರ ಈಗ ಕೈಗೊಂಡಿರುವ ನಿರ್ಧಾರವರನ್ನು ಪುನರ್ ಪರಾಮರ್ಶಿಸಿ ಬೆಲೆಯನ್ನು ಇನ್ನಷ್ಟು ಹೆಚ್ಚಿಸಿದಾಗಲೇ ಹೋರಾಟ ನಿಲ್ಲಲಿದೆ. ಅಲ್ಲಿಯವರೆಗೂ ಹೋರಾಟ ಅಂತ್ಯಗೊಳ್ಳುವ ಸಾಧ್ಯತೆಗಳ ಕಾಣಿಸುತ್ತಿಲ್ಲ.
ಈಗಲೇ ಸರ್ಕಾರ ಘೋಷಣೆ ಮಾಡಿರುವ 3,300 ರೂಪಾಯಿ ನೀಡಲು ಒಪ್ಪದ ಅನೇಕ ಜನ ಕಾರ್ಖಾನೆ ಮಾಲೀಕರು ಇದ್ದಾರೆ. ಹೆಚ್ಚುವರಿ 50 ರೂಪಾಯಿ ನೀಡಲು ಸುತಾರಾಂ ಸಾಧ್ಯವಿಲ್ಲವೆಂದು ಬಹಿರಂಗವಾಗಿಯೇ ಹೇಳಿದ್ದಾರೆ. ಇಂತಹ ಸನ್ನಿವೇಶದಲ್ಲಿ ಪ್ರತಿ ಟನ್ ಕಬ್ಬಿಗೆ 3,500 ರೂಪಾಯಿ ಕೊಡಲೇ ಬೇಕು ಎನ್ನುವ ರೈತರ ಆಗ್ರಹಕ್ಕೆ ಸರ್ಕಾರ ಎಷ್ಟರ ಮಟ್ಟಿಗೆ ಮನ್ನಣೆ ನೀಡಲಿದೆ ಎನ್ನುವುದು ಕುತೂಹಲದ ಸಂಗತಿ ಆಗಿದ್ದರೂ ಮುಧೋಳ ರೈತರು ಅಂದುಕೊಂಡಷ್ಟು ಸರಳವಾಗಿ ಹೋರಾಟದಿಂದ ಹಿಂದೆ ಸರಿಯಲಾರರು ಎನ್ನುವುದು ಸರ್ಕಾರಕ್ಕೂ ಗೊತ್ತಿರುವ ಮಾತಾಗಿದೆ.
- ವಿಠ್ಠಲ ಆರ್. ಬಲಕುಂದಿ




