ಸುಖಾಂತ್ಯಗೊಂಡ ರೈತರ ಹೋರಾಟ

ರಾಜ್ಯ ಸರ್ಕಾರದ ಮಧ್ಯಸ್ಥಿಕೆಯಿಂದಾಗಿ ಕಬ್ಬಿಗೆ ನ್ಯಾಯಯುತ ಬೆಲೆ ಪಡೆದುಕೊಳ್ಳುವಲ್ಲಿ ರಾಜ್ಯದ ರೈತರು ಕಳೆದೊಂದು ವಾರದಿಂದ ನಡೆಸುತ್ತಿದ್ದ ಹೋರಾಟಕ್ಕೆ ನಿರೀಕ್ಷಿತ ಗೆಲುವು ಸಿಕ್ಕಿದೆ. ಪರಿಣಾಮವಾಗಿ ನಾಳೆಯಿಂದಲೇ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವಿಕೆ ಆರಂಭಿಸಲಿವೆ ಎನ್ನುವುದು ನಿಚ್ಚಳವಾಗಿದೆ.

ಪ್ರತಿ ಟನ್ ಕಬ್ಬಿಗೆ 3,500 ರೂಪಾಯಿ ಮುಂಗಡ ಹಣ ನೀಡುವಂತೆ ಒತ್ತಾಯಿಸಿ ಬೆಳಗಾವಿ ಜಿಲ್ಲೆಯ ಮೂಡಲಗಿ ಗುರ್ಲಾಪುರ ಕ್ರಾಸ್‌ನಲ್ಲಿ ಆರಂಭಗೊಂಡ ರೈತರ ಹೋರಾಟ ದಿನದಿಂದ ದಿನಕ್ಕೆ ರಾಜ್ಯವಾಪಿ ವಿಸ್ತರಿಸಿ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಈ ವೇಳೆ ರಾಜ್ಯ ಸರ್ಕಾರ ಬೆಲೆ ನಿಗದಿ ವಿಷಯ ನಮಗೆ ಸಂಬಂಧಿಸಿದ್ದಲ್ಲ, ಅದೆನಿದ್ದರೂ ಕೇಂದ್ರ ಸರ್ಕಾರವೇ ಈ ಬಗೆಗೆ ಕ್ರಮಕೈಗೊಳ್ಳಬೇಕು ಎಂದು ಕೇಂದ್ರದತ್ತ ಬೊಟ್ಟು ಮಾಡುವ ಮೂಲಕ ಪಲಾಯನವಾದಕ್ಕೆ ಮೊರೆ ಹೋಯಿತು.

ಕೇಂದ್ರಕ್ಕೆ ಸಂಬಂಧಿಸಿದ್ದು:

ಮುಖ್ಯಮಂತ್ರಿಗಳು ಬೆಲೆ ನಿಗದಿ ವಿಷಯದ ಬಗೆಗೆ ಕೇಂದ್ರದತ್ತ ಬೊಟ್ಟು ಮಾಡುತ್ತಲೇ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಆರೋಪ, ಪ್ರತ್ಯಾಪರೋಪಗಳು ಶುರುವಾದವು. ರಾಜ್ಯ ಸರ್ಕಾರದ ಈ ನೀತಿಯನ್ನು ಪ್ರತಿಪಕ್ಷಗಳು ತೀವ್ರವಾಗಿ ತರಾಟೆಗೆ ತೆಗೆದುಕೊಂಡಾಗಲೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಕ್ಕರೆ ಸಚಿವ ಶಿವಾನಂದ ಪಾಟೀಲ ಸೇರಿದಂತೆ ಹಲವು ಜನ ಸಚಿವರು ಸರ್ಕಾರದ ನಿಲುವಿಗೆ ಜೋತು ಬಿದ್ದು, ತಮ್ಮ ವಾದವನ್ನು ಸಮರ್ಥಿಸಿಕೊಂಡು, ಕಬ್ಬಿಗೆ ಬೆಲೆ ನಿಗದಿ ಮಾಡುವುದು ಕೇಂದ್ರ ಸರ್ಕಾರ, ಸಕ್ಕರೆ ಉತ್ಪಾದನೆ, ಎಥಿನಾಲ್ ಉತ್ಪಾದನೆ, ವಿದ್ಯುತ್ ಉತ್ಪಾದನೆ ನಿಗದಿ ಪಡಿಸುವುದು ಕೂಡ ಕೇಂದ್ರ ಸರ್ಕಾರವೇ ಆಗಿರುವಾಗ ಬೆಲೆ ನಿಗದಿ ವಿಷಯ ರಾಜ್ಯಕ್ಕೆ ಸಂಬಂಧಿಸಿದ್ದಲ್ಲ ಎನ್ನುವುದನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಲೇ ಬಂದರು. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆಗಳಲ್ಲೂ ಸಕ್ಕರೆ ಸಚಿವರು ಇದೇ ವಾದವನ್ನು ಮಂಡಿಸಿದರು ಎನ್ನುವುದು ಗಮನಾರ್ಹ.

ಮಧ್ಯಸ್ಥಿಕೆಗೆ ಮುಂದಾಯ್ತು ಸರ್ಕಾರ:

ರೈತರ ಹೋರಾಟ ಬಹಳಷ್ಟು ತೀವ್ರಗೊಂಡು ಕೈ ಮೀರುವ ಹಂತ ತಲುಪಿರುವುದನ್ನು ಗಮನಿಸಿದ ಸರ್ಕಾರ ತನ್ನ ನಿಲುವಿನಿಂದ ಹಿಂದಕ್ಕೆ ಸರಿದು ಉಭಯತರ ಮಧ್ಯೆ ಮಧ್ಯಸ್ಥಿಕೆ ವಹಿಸಲು ಮನಸ್ಸು ಮಾಡಿತು. ಪರಿಣಾಮವಾಗಿ ಶುಕ್ರವಾರ ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತ ಮುಖಂಡರ ಸಭೆ ನಿಗದಿ ಪಡಿಸಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಶುಕ್ರವಾರ ಸಕ್ಕರೆ ಕಾರ್ಖಾನೆ ಮಾಲೀಕರು, ರೈತ ಮುಖಂಡರ ಪ್ರತ್ಯೇಕ ಬೆಲೆ ಸಂಧಾನ ಮಾತುಕತೆ ನಡೆಸಿದರು.

ಶುಕ್ರವಾರ ಸಂಜೆಯವರೆಗೂ ಸಭೆಗಳನ್ನು ನಡೆಸಿದ ಮುಖ್ಯಮಂತ್ರಿಗಳು ಉಭಯತರ ಮಧ್ಯೆ ಬೆಲೆ ಹೊಂದಾಣಿಕೆ ಮಾಡುವಲ್ಲಿ ಯಶಸ್ಸು ಕಂಡರು. ಈ ವೇಳೆ ಕಾರ್ಖಾನೆ ಮಾಲೀಕರು, ರೈತರು ತಮ್ಮ ಪಟ್ಟುಗಳಿಗೆ ಕಟ್ಟು ಬೀಳದೆ ಒಂದೊಂದು ಹೆಜ್ಜೆ ಹಿಂದೆ ಸರಿದಾಗ, ಸರ್ಕಾರ ಕೂಡ ಒಂದು ಹೆಜ್ಜೆ ಮುಂದೆ ಇಟ್ಟು ಪ್ರತಿ ಟನ್ ಕಬ್ಬಿಗೆ 50 ರೂಪಾಯಿ ಬೆಂಬಲ ಬೆಲೆ ನೀಡಲು ಮುಂದಾಯಿತು. ಆದರೆ ಕಾರ್ಖಾನೆ ಮಾಲೀಕರು ನೂರು ರೂಪಾಯಿ ಸಬ್ಸಿಡಿ ನೀಡುವಂತೆ ಮನವಿ ಮಾಡಿದರಾದರೂ ಪ್ರತಿ ಟನ್ ಕಬ್ಬಿಗೆ 50 ರೂಪಾಯಿ ಸಬ್ಸಿಡಿ ಘೋಷಣೆ ಮಾಡಿದೆ.

ಕಾರ್ಖಾನೆ ಮಾಲೀಕರ ಬೇಸರ:

ಸಕ್ಕರೆ ಕಾರ್ಖಾನೆ ಮಾಲೀಕರು ಪ್ರತಿ ಟನ್ ಕಬ್ಬಿಗೆ 3,200 ರೂಪಾಯಿ ಕೊಡಲು ಒಪ್ಪಿಕೊಂಡಿದ್ದರು. ನೂರು ರೂಪಾಯಿ ಸರ್ಕಾರ ಕೊಡುವಂತೆ ಕೇಳಿಕೊಂಡಿದ್ದರು. ಆದರೆ ಸರ್ಕಾರ 50 ರೂಪಾಯಿ ಸಬ್ಸಿಡಿ ಕೊಡಲು ಮುಂದಾಗಿ, ಕಾರ್ಖಾನೆ ಅವರಿಗೆ 3,250 ರೂಪಾಯಿ ಕೊಡಲು ಸೂಚಿಸಿದೆ. ಕಾರ್ಖಾನೆ ಮಾಲೀಕರು ಸದ್ಯ 3,200 ರೂ., ತಮ್ಮ ಬೇಡಿಕೆಗಳು ಈಡೇರಿದ ಬಳಿಕ ಉಳಿದ 50 ರೂಪಾಯಿ ಕೊಡುವುದಾಗಿ ಪ್ರಕಟಿಸಿದ್ದಾರೆ.

ಸರ್ಕಾರಕ್ಕೆ ಮೂನ್ನೂರು ಕೋಟಿ ಹೊರೆ:

ಸರ್ಕಾರ ಪ್ರತಿ ಟನ್‌ಗೆ 50 ರೂಪಾಯಿ ಸಬ್ಸಿಡಿ ಘೋಷಣೆ ಮಾಡಿದ್ದರಿಂದ ಸರ್ಕಾರಕ್ಕೆ 300 ಕೋಟಿ ರೂಪಾಯಿ ಹೊರೆ ಆಗಲಿದೆಯಾದರೂ ರೈತರ ಹಿತದೃಷ್ಟಿಯಿಂದ ಹೊರೆ ಹೊರಲು ಸಜ್ಜಾಗಿದ್ದು ಶ್ಲಾಘನೀಯ.

ಅಂದ ಹಾಗೆ ಸರ್ಕಾರ ಪ್ರತಿ ಟನ್ ಕಬ್ಬಿಗೆ 3,300 ರೂಪಾಯಿ ನಿಗದಿ ಪಡಿಸಿದೆ. ಈ ದರವನ್ನು ಸಕ್ಕರೆ ಕಾರ್ಖಾನೆಗಳ ಮಾಲೀಕರು, ರೈತ ಮುಖಂಡರು ಒಪ್ಪಿಕೊಂಡ ಪರಿಣಾಮ ನ್ಯಾಯಯುತ ಬೆಲೆ ನಿಗದಿ ನಿರ್ಧಾರ ಒಂದೇ ದಿನದಲ್ಲಿ ಇತ್ಯರ್ಥಗೊಳ್ಳಲು ಸಾಧ್ಯವಾಗಿದೆ.

ಪ್ರಧಾನಿಗಳ ಭೇಟಿಗೆ ನಿರ್ಧಾರ:

ಇಷ್ಟೆಲ್ಲದರ ನಡುವೆಯೂ ಸಕ್ಕರೆ ಕಾರ್ಖಾನೆಗಳು ಹಾಗೂ ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಪ್ರಧಾನಿಗಳು ನಿಯೋಗದಲ್ಲಿ ಭೇಟಿ ಮಾಡುವ ಇಂಗಿತವನ್ನು ಮುಖ್ಯಮಂತ್ರಿಗಳು ಮತ್ತೊಮ್ಮೆ ಪ್ರಸ್ತಾಪಿಸಿದ್ದಾರೆ. ಈಗಾಗಲೇ ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಚರ್ಚಿಸಲು ಅವಕಾಶ ಕೇಳಿ ಪತ್ರಕೂಡ ಬರೆದಿದ್ದಾರೆ. ಅವಕಾಶ ಕೊಟ್ಟಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಚರ್ಚಿಸುವುದಾಗಿಯೂ ಹೇಳಿದ್ದಾರೆ.

ಏನೇ ಆಗಲಿ ಕಬ್ಬು ಬೆಳೆಗಾರರ ಹೋರಾಟ ಸೌಹಾರ್ದ ವಾತಾವಾರಣದಲ್ಲಿ ಬಗೆ ಹರಿಯಿತಲ್ಲ ಎನ್ನುವುದೇ ಸಮಾಧಾನದ ಸಂಗತಿ. ಕಬ್ಬು ಬೆಳೆಗಾರರ ಹೋರಾಟ ಆರಂಭಗೊಂಡಾಗ ಮುಖ್ಯಮಂತ್ರಿ ಸಮಸ್ಯೆ ಪರಿಹಾರಕ್ಕೆ ಕೇಂದ್ರದತ್ತ ಬೊಟ್ಟು ಮಾಡಿದಾಗ ಎಲ್ಲಿ ಸಮಸ್ಯೆ ಪರಿಹಾರ ಕಾಣದೆ ಕಗ್ಗಂಟಾಗಲಿದೆ ಎನ್ನುವ ಆತಂಕ ಬಹುತೇಕ ಎಲ್ಲರ ಮನದಲ್ಲೂ ಮನೆ ಮಾಡಿತ್ತು.

ಕಬ್ಬಿನ ಬೆಲೆ ನಿಗದಿ ವಿಷಯದಲ್ಲಿ ಮುಖ್ಯಮಂತ್ರಿಗಳ ಹೇಳಿಕೆಯಿಂದ ಆಡಳಿತ ಮತ್ತು ಪ್ರತಿಪಕ್ಷಗಳ ಮುಖಂಡರ ನಡುವೆ ಆರಂಭಗೊಂಡ ಕಬ್ಬಿನ ರಾಜಕಾರಣ ಎಲ್ಲಿಗೆ ಹೋಗಿ ತಲುಪುತ್ತೋ ಏನೋ ಎನ್ನುವ ದುಗೂಢ ಹುಟ್ಟಿಕೊಂಡಿದ್ದು ಸುಳ್ಳಲ್ಲ.

  • ವಿಠ್ಠಲ ಆರ್. ಬಲಕುಂದಿ
Scroll to Top