ಬಾಗಲಕೋಟೆ: ಕಬ್ಬಿನ ದರ ನಿಗದಿ, ಅದರ ಇತರೇ ಉಪ ಉತ್ಪನ್ನಗಳ ಪ್ರಮಾಣವನ್ನು ಕೇಂದ್ರವೇ ನಿಗದಿ ಮಾಡುತ್ತದೆ. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರವಿಲ್ಲ ಎನ್ನುವ ವಾದಕ್ಕೆ ಜೋತು ಬಿದ್ದಿದ್ದ ಸರ್ಕಾರ ಇದೀಗ ಹೋರಾಟದ ಕಾವು ಹೆಚ್ಚಿರುವುದನ್ನು ಅರಿತು ಕಬ್ಬಿನ ಬೆಲೆ ನಿಗದಿ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಖಾನೆಗಳ ಮಾಲೀಕರು ಹಾಗೂ ರೈತ ಮುಖಂಡರೊಂದಿಗೆ ಚರ್ಚಿಸಲು ಮುಂದಾಗಿದೆ.
ಕಳೆದೊಂದು ವಾರದಿಂದ ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ತೀವ್ರಗೊಂಡಿರುವುದನ್ನು ಅರಿತ ರಾಜ್ಯ ಸರ್ಕಾರ, ಹೋರಾಟಕ್ಕೆ ಅಂತ್ಯ ಹಾಡಲು ಗುರುವಾರ ನಡೆದ ಸಂಪುಟ ಸಭೆಯಲ್ಲಿ ಬೆಲೆ ನಿಗದಿ ಬಗೆಗೆ ಚರ್ಚಿಸಲು ಮುಂದಾಗಿದ್ದು, ಇದು ರೈತ ಹೋರಾಟಕ್ಕೆ ಸಂದ ಮೊದಲ ಜಯವೆಂದು ಬಣ್ಣಿಸಬಹುದು.
ಸಿಎಂ ನೇತೃತ್ವದಲ್ಲಿ ಸಭೆ:
ರಾಜ್ಯ ಸರ್ಕಾರ ಶುಕ್ರವಾರವೇ ಕಾರ್ಖಾನೆ ಮಾಲೀಕರ ಮತ್ತು ರೈತರ ಸಭೆ ಕರೆದಿದೆ. ಸಭೆಗಳ ಬಳಿಕ ಮುಂದಿನ ನಿರ್ಧಾರ ಏನು ಎನ್ನುವುದು ಗೊತ್ತಾಗಲಿದೆ. ಎರಡು ಸಭೆಗಳು ನಡೆದು ಸರ್ಕಾರ ಏನು ನಿರ್ಧಾರಕ್ಕೆ ಬರಬಹುದು ಎನ್ನುವುದು ಶುಕ್ರವಾರ ಸಂಜೆಯ ಹೊತ್ತಿಗೆ ಗೊತ್ತಾಗಲಿದೆ. ಸಂಪುಟ ಸಭೆ ನಿರ್ಧಾರ ನೋಡಿಕೊಂಡು ಶುಕ್ರವಾರ ಹೆದ್ದಾರಿ ಬಂದ್ ನಡೆಸಲು ರೈತರು ಮುಂದಾಗಿದ್ದರು. ಇದೀಗ ಶುಕ್ರವಾರ ನಡೆಯುವ ಸಭೆಗಳ ಬಳಿಕ ರೈತರ ಹೆದ್ದಾರಿ ಬಂದ್ ನಿರ್ಧಾರ ಏನು ಎತ್ತ ಎನ್ನುವುದು ಗೊತ್ತಾಗಲಿದೆ.
ಪ್ರಧಾನಿ ಜತೆ ಮಾತುಕತೆಗೆ ಸಿಎಂ ಇಂಗಿತ:
ರಾಜ್ಯ ಸರ್ಕಾರ ಕಬ್ಬಿನ ಬೆಲೆ ನಿಗದಿಗೆ ಸಂಬಂಧಿಸಿದಂತೆ ಸಕ್ಕರೆ ಕಾಖಾನೆ ಮಾಲಿಕರು ಮತ್ತು ರೈತ ಮುಖಂಡರ ಸಭೆ ಕರೆದಿದ್ದರೂ ಕಬ್ಬಿನ ಬೆಲೆ ನಿಗದಿ ಕೇಂದ್ರಕ್ಕೆ ಸಂಬಂಧಿಸಿದ್ದು ಎನ್ನುವ ವಾದದಿಂದ ಹಿಂದಕ್ಕೆ ಸರಿದಂತೆ ಕಾಣಿಸುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕುರಿತು ಪ್ರಧಾನಿ ಅವರೊಂದಿಗೆ ಚರ್ಚಿಸಲು ಪತ್ರ ಬರೆದು ಸಮಯ ಕೇಳುವುದಾಗಿ ಹೇಳಿದ್ದು, ಸಮಯಾವಕಾಶ ಕೊಟ್ಟಲ್ಲಿ ಭೇಟಿ ಮಾಡಿ ಚರ್ಚಿಸುವುದಾಗಿ ಹೇಳಿದ್ದಾರೆ.
ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಲಿ:
ಏತನ್ಮಧ್ಯೆ ಕಬ್ಬಿನ ಬೆಲೆ ನಿಗದಿ ವಿಷಯದಕ್ಕೆ ಸಂಬಂಧಿಸಿದಂತೆ ಸಾಕಷ್ಟು ರಾಜಕೀಯ ಬೆಳವಣಿಗೆಗಳು ನಡೆದಿವೆ. ಕಬ್ಬಿನ ಬೆಲೆ ನಿಗದಿ ವಿಷಯ ಕೇಂದ್ರಕ್ಕೆ ಸಂಬಂಧಿಸಿದ್ದು, ಇದು ರಾಜ್ಯಕ್ಕೆ ಸಂಬಂಧಿಸಿದ ವಿಷಯವಲ್ಲ ಎನ್ನುವ ಹೇಳಿಕೆ ನೀಡಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಬಿಜೆಪಿ ರಾಜ್ಯಾಧ್ಯಕ್ಷರು ರೈತರ ಹೋರಾಟ ಸ್ಥಳಕ್ಕೆ ಹೋಗಿ ಹೋರಾಟ ಬೆಂಬಲಿಸಿದ್ದಾರೆ. ಅವರಿಗೆ ಕಬ್ಬು ಬೆಳೆಗಾರರ ಬಗೆಗೆ ಕಾಳಜಿ ಇದ್ದಲ್ಲಿ, ದೇಹಲಿಗೆ ಹೋಗಿ ಪ್ರತಿಭಟನೆ ನಡೆಸಿ ನ್ಯಾಯ ಕೊಡಿಸಲಿ ಎನ್ನುವ ಸವಾಲು ಹಾಕಿದ್ದಾರೆ.
ಕಬ್ಬಿನ ಬೆಲೆ ವಿಷಯದಲ್ಲಿ ಬಿಜೆಪಿಗರು ಅನಗತ್ಯವಾಗಿ ರಾಜಕೀಯ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ದೂರಿದ್ದಾರೆ. ಏನೇ ಆಗಲಿ ರಾಜ್ಯ ಸರ್ಕಾರ ರೈತರ ಹೋರಾಟಕ್ಕೆ ಮಣಿದು ತನ್ನ ನಿಲುವು ಬದಲಾಯಿಸಿಕೊಂಡು ಸಭೆ ನಡೆಸಲು ಮುಂದಾಗಿರುವುದು ರೈತರ ಪಾಲಿಗೆ ಇದೊಂದು ಬಹುದೊಡ್ಡ ಬೆಳವಣಿಗೆ ಎಂದು ಅರ್ಥೈಸಲಾಗುತ್ತಿದೆ.
ಕುತೂಹಲಕರ ಸಭೆ:
ಶುಕ್ರವಾರ ರಾಜ್ಯ ಸರ್ಕಾರ ನಡೆಸಲು ಉದ್ದೇಶಿಸಿರುವ ಕಾರ್ಖಾನೆ ಮಾಲೀಕರ ಸಭೆಗೆ ಅದೆಷ್ಟು ಜನ ಕಾರ್ಖಾನೆ ಮಾಲೀಕರು ಭಾಗವಹಿಸಲಿದ್ದಾರೆ ಎನ್ನುವುದು ಬಹಳ ಮುಖ್ಯವಾಗಲಿದೆ. ಜತೆಗೆ ಕಬ್ಬಿನ ಬೆಲೆ ನಿಗದಿ ವಿಷಯದಲ್ಲಿ ಸರ್ಕಾರದ ನಿಲುವಿಗೆ ಅವರೆಲ್ಲ ಎಷ್ಟರ ಮಟ್ಟಿಗೆ ಸ್ಪಂದಿಸಲಿದ್ದಾರೆ ಎನ್ನುವುದು ಕುತೂಹಲಕರ ಅಂಶವಾಗಿದೆ.
ಇವರ ಸಭೆಯ ಬಳಿಕ ರೈತ ಮುಖಂಡರ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಕಾರ್ಖಾನೆ ಮಾಲೀಕರ ನಿಲುವನ್ನು ರೈತರು ಹೇಗೆ ಸ್ವೀಕರಿಸಲಿದ್ದಾರೆ ಎನ್ನುವುದು ಮಹತ್ತರವಾಗಿದೆ. ಶುಕ್ರವಾರ ನಡೆಯುವ ಎರಡೂ ಸಭೆಗಳಲ್ಲಿ ಸರ್ಕಾರ ಇಬ್ಬರನ್ನೂ ಒಟ್ಟಾಭಿಪಾಯಕ್ಕೆ ತಂದಲ್ಲಿ ಅದು ಸರ್ಕಾರದ ಬಹುದೊಡ್ಡ ಗೆಲುವಾಗಲಿದೆ.
ತಮ್ಮ ವಾದಕ್ಕೆ ಪಟ್ಟು ಹಿಡಿವ ಸಾಧ್ಯತೆ:
ಶುಕ್ರವಾರ ನಡೆಯಲಿರುವ ಎರಡೂ ಸಭೆಗಳ ಬಳಿಕ ರೈತರ ಮುಂದಿನ ಹೋರಾಟ ಯಾವ ದಿಕ್ಕಿಗೆ ಸಾಗಲಿದೆ ಎನ್ನುವುದು ಸ್ಪಷ್ಟವಾಗಲಿದೆ. ಸದ್ಯ ರೈತರು ಪ್ರತಿ ಟನ್ ಕಬ್ಬಿಗೆ 3500 ರೂಪಾಯಿ ನೀಡುವಂತೆ ಪಟ್ಟ ಹಿಡಿದಿದ್ದು, ಅಷ್ಟು ಸಾಧ್ಯವಿಲ್ಲ ಎನ್ನುವುದು ಕಾರ್ಖಾನೆ ಆಡಳಿತ ಮಂಡಳಿಯವರ ವಾದವಾಗಿದೆ. ಕಾರ್ಖಾನೆಯವರು 3200 ರೂಪಾಯಿ ನೀಡಲು ಮುಂದೆ ಬರಬಹುದು ಎನ್ನುವ ಆಶಾವಾದ ಸರ್ಕಾರದ್ದಾಗಿದೆ. ಆದರೆ ರೈತರು 3500 ರೂಪಾಯಿ ಪಟ್ಟಿನಿಂದ 3400 ರೂಪಾಯಿ ಕೊಡಿಸುವಂತೆ ಪ್ರತಿಪಟ್ಟು ಹಿಡಿಯುವ ಸಾಧ್ಯತೆಗಳಿವೆ.
ಬೆಂಬಲ ಬೆಲೆ ಪ್ರಸ್ತಾಪ:
ಉಭಯತರು ತಮ್ಮ ಪಟ್ಟು ಸಡಿಲಿಸಲು ಹಿಂದೇಟು ಹಾಕಿದಲ್ಲಿ ರಾಜ್ಯ ಸರ್ಕಾರವೇ ಪ್ರತಿ ಟನ್ ಕಬ್ಬಿಗೆ ನೂರು ರೂಪಾಯಿ ಘೋಷಿಸುವ ಮನಸ್ಸು ಮಾಡಬಹುದು. ಅಂದುಕೊಂಡಂತೆ ಶುಕ್ರವಾರದ ಸಭೆಯಲ್ಲಿ ಎಲ್ಲವೂ ನಡೆದಲ್ಲಿ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮು ಶನಿವಾರದಿಂದಲೇ ಶುರುವಾಗಲಿದೆ. ಯಾರೂ ತಮ್ಮ ನಿಲುವುಗಳಿಂದ ಹಿಂದಕ್ಕೆ ಸರಿಯಲು ಮುಂದಾಗದಿದ್ದಲ್ಲಿ ಕಬ್ಬು ನುರಿಸುವ ಕಾರ್ಯ ಇನ್ನಷ್ಟು ವಿಳಂಬವಾಗಲಿದೆ. ರೈತರ ಹೋರಾಟದ ಕಾವು ಇನ್ನಷ್ಟು ತೀವ್ರಗೊಳ್ಳಲಿದೆ.
- ವಿಠ್ಠಲ ಆರ್. ಬಲಕುಂದಿ




