ಕಬ್ಬಿನ ಬೆಲೆ ನಿಗದಿ ಕೇಂದ್ರಕ್ಕೆ ಬಿಟ್ಟದ್ದು; ರಾಜ್ಯದ ಹೊಸ ವರಸೆ

ಮೊದಲೆಲ್ಲ ನ್ಯಾಯಯುತ ಕಬ್ಬಿನ ಬೆಲೆಗಾಗಿ ಕಬ್ಬು ಬೆಳೆಗಾರರು ಬೀದಿಗಿಳಿದು ಹೋರಾಟ ಆರಂಭಿಸಿದಾಗ ರಾಜ್ಯ ಸರ್ಕಾರ ಮಧ್ಯೆ ಪ್ರವೇಶಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸುತ್ತಿತ್ತು. ಆದರೆ ಅದೇಕೋ ಈ‌ ಬಾರಿ‌ ಕೇಂದ್ರದತ್ತ ಬೊಟ್ಟು‌ ಮಾಡಿ ಪಲಾನಯವಾದಕ್ಕೆ ಜೋತು ಬಿದ್ದಿದೆ.

ಕಬ್ಬು ಬೆಳೆಗಾರರು ಪ್ರತಿ ಟನ್‌ ಕಬ್ಬಿಗೆ 3500 ರೂ. ನೀಡಬೇಕು ಎಂದು ಆಗ್ರಹಿಸಿ ಹೋರಾಟ‌ ಆರಂಭಿಸಿದ್ದಾರೆ. ಕಳೆದೊಂದು ವಾರದಿಂದ ಹೋರಾಟ ನಡೆಯುತ್ತಿದ್ದು, ದಿನದಿಂದ ದಿನಕ್ಕೆ ಅದು ತೀವ್ರಗೊಂಡು, ರಾಜ್ಯವ್ಯಾಪಿ ವ್ಯಾಪಿಸುತ್ತಿದೆ. ರೈತರ ಹೋರಾಟಕ್ಕೆ ಕ್ಯಾರೇ ಎನ್ನದ ಸರ್ಕಾರ ಕಬ್ಬಿನ ಬೆಲೆ ನಿಗದಿ ತನಗೆ ಸಂಬಂಧಿಸಿದ್ದಲ್ಲ. ಅದೆನಿದ್ದರೂ ಕೇಂದ್ರಕ್ಕೆ‌ ಸಂಬಂಧಿಸಿದ್ದು, ಅದು‌ ಕಬ್ಬಿನ ದರ ನಿಗದಿ ಮಾಡುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ.

ಶುಕ್ರವಾರ ಹೆದ್ದಾರಿ ಬಂದ್:

ಏತನ್ಮಧ್ಯೆ ಸಚಿವರಾದ ಎಚ್.ಕೆ. ಪಾಟೀಲ, ಎಂ.ಬಿ.‌ ಪಾಟೀಲರು ರೈತರ ಹೋರಾಟ ಸ್ಥಳಗಳಿಗೆ ಭೇಟಿ ನೀಡಿ ಗುರುವಾರ ನಡೆಯುವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಅದರ ಮಧ್ಯೆ ಹೋರಾಟಗಾರರು ಶುಕ್ರವಾರ ರಾಷ್ಟ್ರೀಯ ಹೆದ್ದಾರಿ ಬಂದ್ ಗೆ ಕರೆ ನೀಡಿದ್ದಾರೆ.

ರಾಜ್ಯದ ಎಲ್ಲ ಹೆದ್ದಾರಿಗಳನ್ನು ಬಂದ್ ಮಾಡುವ ಎಚ್ಚರಿಕೆ ನೀಡಿದ್ದಾರೆ. ತೀವ್ರಗೊಂಡಿರುವ ರೈತರ ಹೋರಾಟವನ್ನು ಬಿಜೆಪಿ ಬೆಂಬಲಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ರೈತರ ಹೋರಾಟ ಬೆಂಬಲಿಸಿ, ಹೋರಾಟ ಸ್ಥಳದಲ್ಲೆ ಠಿಕಾಣಿ ಹೂಡಿದ್ದಾರೆ. ಇತರ ಮುಖಂಡರು ಹೋರಾಟ ಬೆಂಬಲಿಸಿ ಅಖಾಡಕ್ಕೆ ಇಳಿದಿದ್ದಾರೆ.

ರೈತ ಹೋರಾಟಕ್ಕೆ ಬಿಜೆಪಿ ಬೆಂಬಲ:

ಪ್ರತಿ ಟನ್ ಕಬ್ಬಿಗೆ 3500 ರೂಪಾಯಿ ಕೇಳುತ್ತಿರುವುದು ನ್ಯಾಯಯುತವಾಗಿದೆ. ಬಿಜೆಪಿಗರು ಕೂಡ ಪ್ರತಿ ಟನ್ ಕಬ್ಬಿಗೆ 3500 ರೂ. ಕೊಡಿ ಎಂದು ಆಗ್ರಹಿಸುತ್ತಿದ್ದಾರೆ. ಆದರೆ ಇದುವರೆಗೂ ರಾಜ್ಯ ಸರ್ಕಾರದ ಮಾತಿಗೆ ಪ್ರತಿಕ್ರಿಯಿಸುತ್ತಿಲ್ಲ. ಆಡಳಿತ ಮತ್ತು ಪ್ರತಿಪಕ್ಷ ನಾಯಕರು ತಮ್ಮ ನಿಲುವುಗಳಿಗೆ ಜೋತು ಬಿದ್ದಲ್ಲಿ ರೈತರ ಬೇಡಿಕೆಗೆ ಸ್ಪಂದನೆ ಮಾಡಬೇಕಾದವರು ಯಾರು ಎನ್ನುವುದೇ ಸದ್ಯ ಬಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ರಾಜ್ಯದ ಪ್ರಶ್ನೆಗೆ ಬಿಜೆಪಿ ನಿರುತ್ತರ:

ಕಬ್ಬಿನ ಬೆಲೆ ನಿರ್ಧರಿಸುವುದು ಕೇಂದ್ರ ಸರ್ಕಾರ, ರೈತರ ಬೆಲೆ ನಿಗದಿ ಬಗೆಗಿನ‌ ಹೋರಾಟಕ್ಕೆ ಉತ್ತರ ಕೊಡಬೇಕಾದವರು ಅವರು ತಾನೆ? ಅದರಲ್ಲಿ ನಮ್ಮ ಪಾತ್ರವೆನೂ ಇಲ್ಲ ಎಂದು ರಾಜ್ಯ ಸರ್ಕಾರದಲ್ಲಿ ಪ್ರತಿನಿಧಿಗಳು ವಾದಿಸುತ್ತಿದ್ದಾರೆ.

ಕೇಂದ್ರವೇ ಕಬ್ಬಿನ ಬೆಲೆ ನಿರ್ಧರಿಸುತ್ತಾದರೂ ಇದುವರೆಗೂ ರಾಜ್ಯ ಸರ್ಕಾರ ಕಬ್ಬಿನ‌ ಬೆಲೆ ನಿಗದಿಗಾಗಿನ ಹೋರಾಟ ತೀವ್ರಗೊಂಡಾಗಲೆಲ್ಲ. ರೈತರು ಹಾಗೂ ಕಾರ್ಖಾನೆ ಆಡಳಿತ ಮಂಡಳಿಯವರ ಮಧ್ಯೆ ಸಂಧಾನ‌ ಸಭೆಗಳನ್ನು‌ ನಡೆಸಿದೆ. ಕಾರ್ಖಾನೆ ಆಡಳಿತ ಮಂಡಳಿಯವರು ರೈತರು ಕೇಳಿದಷ್ಟು‌ ಬೆಲೆ ಕೊಡಲು ಆಗಲ್ಲ ಎಂದು ಪಟ್ಟು‌ ಹಿಡಿದಾಗ ರಾಜ್ಯ ಸರ್ಕಾರ ಬೆಂಬಲ‌ ಬೆಲೆ ಘೋಷಣೆ ಮಾಡಿ, ಹೋರಾಟ ಅಂತ್ಯಗೊಳಿಸಿದ ನಿದರ್ಶನಗಳು ಇವೆ.

ರಾಜ್ಯದ ನಡೆ ನಿಗೂಢ:

ಇದೀಗ ರಾಜ್ಯ ಸರ್ಕಾರ ಕಬ್ಬಿನ ಬೆಲೆ ನಿಗದಿ‌ ವಿಷಯ ತನಗೆ ಸೇರಿದ್ದಲ್ಲ ಎನ್ನುವ ಮಾತಿಗೆ ಕಟ್ಟು ಬಿದ್ದಿರುವ ಹಿಂದೆ ಏನು ತಂತ್ರ ಅಡಗಿದೆ ಎನ್ನುವುದು ಅರ್ಥವಾಗುತ್ತಿಲ್ಲವಾದರೂ ಹೇಗೂ ಕೇಂದ್ರವೇ ಬೆಲೆ ನಿಗದಿ ಮಾಡುತ್ತದೆ. ಅದೇ ಸಮಸ್ಯೆಗೆ ಪರಿಹಾರ ಕಲ್ಪಿಸಲಿ ಎನ್ನುವ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಂತೆ ಕಾಣಿಸುತ್ತಿದೆ.

ಕಬ್ಬಿನ ಬೆಲೆ ನಿಗದಿ ವಿಷಯದಲ್ಲಿ ಉಂಟಾಗಿರುವ ಹೊಸ ಸಮಸ್ಯೆಗೆ ಹೋರಾಟಕ್ಕೆ ಬೆಂಬಲ ನೀಡಿರುವ ಬಿಜೆಪಿಯೇ ಉತ್ತರ ಕಂಡು ಹಿಡಿಯಬೇಕಾದ ಸನ್ನಿವೇಶ ರಾಜ್ಯದಲ್ಲಿ ನಿರ್ಮಾಣವಾಗುತ್ತಿದೆ. ಇಷ್ಟರ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರದ ಸಂಪುಟ ಸಭೆಯಲ್ಲಿ ಈ ಬಗೆಗೆ ಚರ್ಚಿಸುವ ಭರವಸೆ ನೀಡಿದ್ದಾರಾದರೂ ಹೊಸ ವರಸೆಗೆ ಅಂಟಿಕೊಂಡು, ಕಬ್ಬಿನ‌ ಬೆಲೆ ನಿಗದಿ ವಿಷಯ ಕೇಂದ್ರಕ್ಕೆ ಬಿಟ್ಟದ್ದು ಎನ್ನುವ ನಿರ್ಧಾರಕ್ಕೆ ಬಂದಲ್ಲಿ ಅಚ್ಚರಿ ಪಡಬೇಕಿಲ್ಲ.

ರಾಜ್ಯ ಸರ್ಕಾರ ತನ್ನ ಸದ್ಯದ ನೀತಿಗೆ ಜೋತು ಬಿದ್ದಲ್ಲಿ, ಹೋರಾಟ ಸ್ವರೂಪ ಸಂಪೂರ್ಣ ಬದಲಾಗುವ ಸಾಧ್ಯತೆಗಳು ಹೆಚ್ಚಿವೆ. ರಾಜ್ಯ ಕೇಂದ್ರದ‌ ಮೇಲೆ, ಕೇಂದ್ರ ರಾಜ್ಯದ ಮೇಲೆ ಹಾಕುತ್ತ ನಡೆದಲ್ಲಿ ಕಬ್ಬು ಬೆಳೆಗಾರರು ಇನ್ನಷ್ಟು ಸಂಕಷ್ಟ ಎದುರಿಸಬೇಕಾಗಿ ಬರಲಿದೆ.

  • ವಿಠ್ಠಲ ಆರ್. ಬಲಕುಂದಿ
Scroll to Top