ಮೇಟಿಗೆ ಮೇಟಿಯೇ ಸಾಟಿ: ಸಿದ್ದರಾಮಯ್ಯ

ಬಾಗಲಕೋಟೆ: ಶಾಸಕ, ಮಾಜಿ ಸಚಿವ ಎಚ್.ವೈ . ಮೇಟಿ ರಾಜಕೀಯ‌ ನಿಷ್ಠೆಗೆ ಹೆಸರಾದವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬಾಗಲಕೋಟೆ ತಾಲೂಕಿನ ತಿಮ್ಮಾಪುರದಲ್ಲಿ ನಡೆದ ಶಾಸಕ, ಮಾಜಿ ಸಚಿವ ಎಚ್.ವೈ. ಮೇಟಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ, ಮೇಟಿ ಅವರ ಪಾರ್ಥಿವ ಶರೀರಕ್ಕೆ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು.

1983 ರಿಂದ ಇಲ್ಲಿಯವರೆಗೂ ತಾವು ಮತ್ತು ಮೇಟಿ ಒಡನಾಟದಲ್ಲಿದ್ದವರು. ತಮ್ಮ ನಿರ್ಧಾರಗಳಿಗೆ ಯಾವಾಗಲೂ ಬದ್ದರಾಗಿರುತ್ತಿದ್ದರು. ತಾವು ಎಲ್ಲಿಯೇ ಇದ್ದರೂ ತಮ್ಮೊಂದಿಗೆ ಇರುತ್ತಿದ್ದರು. ನಿಷ್ಠೆ ಎನ್ನುವುದು ಎಲ್ಲರಿಗೂ ಬರುವುದಿಲ್ಲ. ನಿಷ್ಠೆಗೆ ಹೆಸರಾದವರು. ಅವರೊಬ್ಬ ನಿಷ್ಠಾವಂತ ರಾಜಕಾರಣಿ ಎಂದು‌ ಬಣ್ಣಿಸಿದರು.

ಮೇಟಿ ಅವರ ಜನ ಸಂಪರ್ಕ ಚೆನ್ನಾಗಿತ್ತು. ಅವರೊಬ್ಬ ಜಾತ್ಯತಿತ ವ್ಯಕ್ತಿ ಆಗಿದ್ದರು. ಅವರ ಸಾವಿನಿಂದ ರಾಜಕೀಯವಾಗಿ ನಷ್ಟ ಆಗಿದೆ ಎಂದರು.

ಭವಿಷ್ಯದಲ್ಲಿ ಮತ್ತೊಬ್ಬ ಮೇಟಿ ಹುಟ್ಟಿ ಬರುವುದು ಕಷ್ಟ. ಹಾಗಾಗಿ ಮೇಟಿಗೆ ಮೇಟಿಯೇ ಸಾಟಿ. ಎಲ್ಲರೊಂದಿಗೂ ಉತ್ತಮ ಒಡನಾಟ ಹೊಂದಿದ್ದ ಅವರಲ್ಲಿ ಎಲ್ಲರನ್ನೂ ತೆಗೆದುಕೊಂಡು ಹೋಗುವ ಶಕ್ತಿ ಇತ್ತು ಎಂದರು.

ಬಾಗಲಕೋಟೆಗೆ ಸರ್ಕಾರಿ‌ ಮೆಡಿಕಲ್ ಬರಬೇಕು ಎನ್ನುವುದು ಅವರ ಬಹುದಿನಗಳ ಕನಸಾಗಿತ್ತು. ಬಾಗಲಕೋಟೆಗೆ ಮೆಡಿಕಲ್ ಕಾಲೇಜ್ ಬಂದಿದ್ದೆ ಅವರಿಂದ. ಮೆಡಿಲ್ ಕಾಲೇಜ್ ಮಂಜೂರಾಗಿದ್ದು, ಟೆಂಡರ್ ಕರೆಯಲಾಗಿದೆ. ಆದಷ್ಟು ಬೇಗ ಭೂಮಿಪೂಜೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮೇಟಿ ಅವರು ಇರಬೇಕಿತ್ತು. ಅವರ ಅಗಲಿಕೆಯಿಂದ ಜಿಲ್ಲೆಗೆ ದೊಡ್ಡ ನಷ್ಟವಾಗಿದೆ ಎಂದು ಹೇಳಿದರು.

ವೈದ್ಯ ಕಾಲೇಜ್ ಸ್ಥಾಪನೆ ಜತೆ, ಆಸ್ಪತ್ರೆಯೂ ಆರಂಭಗೊಳ್ಳಲಿದೆ. ಭವಿಷ್ಯದಲ್ಲಿ ಸೂಪರ ಸ್ಪೇಷಾಲಿಟಿ ಆಸ್ಪತ್ರೆ ಮಾಡಿಯೇ ಮಾಡಿತ್ತೇವೆ ಎಂದರು.

ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಮಾತನಾಡಿ, ಅವಿಭಜಿತ ವಿಜಯಪುರ ಜಿಲ್ಲೆಯಿಂದ ರಾಜಕೀಯ ಆರಂಭಿಸಿದ ಮೇಟಿ ಅವರು ಸಿದ್ದರಾಮಯ್ಯ ನಾಯಕತ್ವದಲ್ಲಿ ಮುನ್ನಡೆದವರು. ಜನಮನ ಗೆದ್ದವರು. ಅಖಂಡ ಜಿಲ್ಲೆಯ ಸಮಸ್ಯೆಗಳ ಬಗೆಗೆ ಚಿಂತನೆ ನಡೆಸಿದವರು. ಯುಕೆಪಿ ಹಂತ-3ರ ಅನುಷ್ಠಾನ ಕಾಳಜಿ ಹೊಂದಿದ್ದರು ಎಂದರು.

ಪೌರಾಡಳಿತ ಸಚಿವ ಭೈರತಿ ಸುರೇಶ ಮಾತನಾಡಿ, ಸಂಭಾವಿತ ರಾಜಕಾರಣಿ. ಅವರ ಕೆಲಸ ಕಾರ್ಯಗಳು ಅರ್ಧಕ್ಕೆ ನಿಲ್ಲಬಾರದು. ಅವುಗಳು ಪೂರ್ಣಗೊಳ್ಳಬೇಕು. ಅವರ ನಿಧನದಿಂದ ಸಮಾಜಕ್ಕೆ ತುಂಬಲಾಗದ‌ನಷ್ಟ ಉಂಟಾಗಿದೆ ಎಂದರು.

ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹಾದೇವಪ್ಪ ಮಾತನಾಡಿ, ಮೇಟಿ ಅವರು ನಮಗೆಲ್ಲ ದೊಡ್ಡ ಶಕ್ತಿ ಆಗಿದ್ದರು. ಅವರು ಮಿತ್ರ ಕೂಟದ ನಾಯಕರಾಗಿದ್ದರು ಎಂದರು.

ಲೋಕೋಪಯೋಗಿ ಸತೀಶ ಜಾರಕಿಹೊಳಿ ಮಾತನಾಡಿ, ಮೇಟಿ ಅವರು ಹಳೆಯ ಹಾಗೂ ಅನುಭವಿ ರಾಜಕಾರಣಿ, ಅವರ ಸೇವೆ ಅವಿಸ್ಮರಣಿಯ. ಅವರ ನಿಧನದಿಂದ ಸಮಾಜಕ್ಕೆ ದೊಡ್ಡ ನಷ್ಟ ಉಂಟಾಗಿದೆ. ನಾವೆಲ್ಲ ಅವರ ಕುಟುಂಬದ ಜತೆ ಗಟ್ಟಿಯಾಗಿ ನಿಲ್ಲುತ್ತೇವೆ ಎಂದರು.

ಸಕ್ಕರೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಮೇಟಿ ತಮ್ಮ ರಾಜಕೀಯ ಗುರುವಾಗಿದ್ದವರು. ನಮ್ಮೆಲ್ಲರ ಹಿರಿಯರಾಗಿದ್ದರು. ಅವರ ಕುಟುಂಬಕ್ಕೆ ಜಿಲ್ಲೆಯನ್ನು ರಾಜಕೀಯವಾಗಿ ನಿರ್ವಹಿಸುವ ಶಕ್ತಿ ಕೊಡಲಿ ಎಂದರು.

ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ ಮಾತನಾಡಿ, ದೊಡ್ಡವರು, ಸಣ್ಣವರ ಎನ್ನುವ ಬೇಧ ಮೇಟಿ ಅವರಲ್ಲಿ ಇರಲಿಲ್ಲ. ಮೇಟಿ ಅವರಿಂದ ಕಲಿಯಬೇಕಾದದ್ದು ಬಹಳಷ್ಟಿದೆ. ಮೆಡಿಕಲ್ ಕಾಲೇಜು ಅವರ ಕೊಡುಗೆ ಎಂದ ಅವರು ಕಾಂಗ್ರೆಸ್ ಅವರ ಕುಟುಂಬದೊಂದಿಗೆ ಸದಾ ನಿಲ್ಲಲಿದೆ ಎಂದರು.

ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ಮೇಟಿ ಜನಾನುರಾಗಿ ಆಗಿದ್ದರು. ಮಂತ್ರಿ ಪದವಿ ಬಿಟ್ಟು ಲೋಕಸಭೆಗೆ ಹೋದವರು. ಅವರೊಬ್ಬ ಅಜಾತ ಶತ್ರು. ಎಲ್ಲ‌ ಸಮುದಾಯಗಳನ್ನು ಒಟ್ಟಾಗಿ ತೆಗೆದುಕೊಂಡು‌ ಹೋಗುವ ಗುಣದವರು ಎಂದು ಭಾವುಕರಾಗಿ‌ ಮಾತಮಾಡಿದರು.

ಶಾಸಕರಾದ ಜೆ.ಟಿ.‌ಪಾಟೀಲ, ವಿಜಯಾನಂದ ಕಾಶಪ್ಪನವರ, ಜಿ.ಎಸ್. ಪಾಟೀಲ ರೋಣ, ಅಪ್ಪಾಜಿ ನಾಡಗೌಡ, ಸಿದ್ದು ಸವದಿ, ಸಂಸದ ಪಿ.ಸಿ. ಗದ್ದಿಗೌಡರ, ರಾಜ್ಯಸಭೆ ಸದಸ್ಯ ನಾರಾಯಣಸಾ ಭಾಂಡಗೆ, ಮೇಲ್ಮನೆ ಸದಸ್ಯ ಪಿ.ಎಚ್. ಪೂಜಾರ್, ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ , ಮಾಜಿ ಸಚಿವರಾದ ಎಸ್.‌ಆರ್. ಪಾಟೀಲ ,‌ ಅಜಯಕುಮಾರ ಸರನಾಯಕ, ಮಾಜಿ ಶಾಸಕ ಆನಂದ ನ್ಯಾಮಗೌಡ, ಕಮತಗಿ ಹೊಳೆ ಹುಚ್ಚೇಶ್ವರ ಸ್ವಾಮೀಜಿ, ಡಾ. ಮಲ್ಲಿಕಾ ಘಂಟಿ ಮಾತನಾಡಿದರು.

Scroll to Top