ಶಾಸಕ ಎಚ್.ವಾಯ್. ಮೇಟಿ ಯುಗಾಂತ್ಯ

ಕಾಂಗ್ರೇಸ್ ಪಕ್ಷದ ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಎಚ್.ವಾಯ್. ಮೇಟಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಅಸ್ತಂಗತರಾಗಿದ್ದಾರೆ.

ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಮೇಟಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ವಿಧಿವಶರಾಗಿದ್ದಾರೆ. ಮೇಟಿ ಅವರಿಗೆ 79 ವರ್ಷ ವಯಸ್ಸಾಗಿತ್ತು. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ಪತ್ರೆಯಲ್ಲಿ ಭೇಟಿಯಾಗಿ ಮೇಟಿ ಅವರ ಆರೋಗ್ಯವನ್ನು ವಿಚಾರಿಸಿದ್ದರು.

ಸರಳ ಸಜ್ಜನಿಕೆಯ ರಾಜಕಾರಣಿಯಾಗಿದ್ದ ಮೇಟಿ ಅವರು ಸಿದ್ದರಾಮಯ್ಯನವರ ಪರಮಾಪ್ತ ಬಳಗದ ಸದಸ್ಯರಾಗಿದ್ದರು. ಸಿದ್ದರಾಮಯ್ಯ ಇರುವ ಕಡೆ ತಮ್ಮ ರಾಜಕೀಯ ಎನ್ನುತ್ತಿದ್ದರು.

ಪಂಚಾಯಿತಿಯಿಂದ ಪಾರ್ಲಿಮೆಂಟ್ ಗೆ:

1946, ಅಕ್ಟೋಬರ 9 ರಂದು ಬಾಗಲಕೋಟೆ ಜಿಲ್ಲೆ ತಿಮ್ಮಾಪೂರ ಗ್ರಾಮದಲ್ಲಿ ಜನಿಸಿದ ಮೇಟಿ ಅವರು ಬಾಗಲಕೋಟೆ ಮತಕ್ಷೇತ್ರದ ಹಾಲಿ ಶಾಸಕರಾಗಿದ್ದರು. ಪತ್ನಿ ಲಕ್ಷ್ಮೀಬಾಯಿ, ಮಕ್ಕಳಾದ ಮಲ್ಲಿಕಾರ್ಜುನ, ಉಮೇಶ, ಬಾಯಕ್ಕ ಹಾಗೂ ಮಾದೇವಿ ಎಂಬುವರನ್ನು ಅಗಲಿದ್ದಾರೆ.

ಬಿಲ್ ಕೆರೂರ ಮಂಡಳ ಪಂಚಾಯತಿ ಸದಸ್ಯ ಹಾಗೂ ಅಧ್ಯಕ್ಷರಾಗಿ ರಾಜಕೀಯ ಜೀವನ ಆರಂಭಿಸಿದ ಅವರು ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕರಾಗಿ, ನಂತರದಲ್ಲಿ ಅಧ್ಯಕ್ಷರಾಗಿ ರಾಜಕಾರಣದ ಮುಖ್ಯ ಭೂಮಿಕೆಗೆ ಬಂದರು. ಮಾಜಿ ಶಾಸಕ ದಿವಂಗತ ಜಿ.ವಿ.ಮಂಟೂರು ಅವರು ಮೇಟಿ ಅವರ ಗುರುಗಳಾಗಿದ್ದರು.

1989 ರಲ್ಲಿ ಗುಳೇದಗುಡ್ಡ ಕ್ಷೇತ್ರದಿಂದ ಮೊದಲ ಬಾರಿಗೆ ಜನತಾ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾದಿಸಿದ್ದರು. 1994 ರಲ್ಲಿ 2ನೇ ಬಾರಿ ಗುಳೇಗುಡ್ಡ ಕ್ಷೇತ್ರದಿಂದ ಗೆಲುವು ಸಾಧಿಸಿ ದೇವೇಗೌಡರ ಸಂಪುಟದಲ್ಲಿ ಮೊದಲ ಬಾರಿಗೆ ಅರಣ್ಯ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಸಚಿವರಿದ್ದಾಗಲೇ 1996 ರಲ್ಲಿ ಲೋಕಸಭೆ ಸ್ಪರ್ಧಿಸಿ, ಗೆಲುವು ಕಂಡರು.

ಸೋಲು-ಗೆಲವು ಎರಡೂ ಕಂಡವರು:

1998 ರಲ್ಲಿ ಬಾಗಲಕೋಟೆ ಲೋಕಸಭೆ ಕ್ಷೇತ್ರದಲ್ಲಿ ಜನತಾ ದಳದಿಂದ ಸೋಲು ಕಂಡರು. ನಂತರ ಜನತಾ ಪರಿವಾರ ಇಬ್ಬಾಗವಾದಾಗ ಸಿದ್ದರಾಮಯ್ಯ ಜೊತೆಗೆ ಜೆಡಿಎಸ್‍ನಲ್ಲಿ ಉಳಿದ ಮೇಟಿ, 1999 ರಲ್ಲಿ ಗುಳೇದಗುಡ್ಡ ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಕಂಡು, 2004 ರಲ್ಲಿ ಜೆ.ಡಿ.ಎಸ್ ನಿಂದ ಮತ್ತೇ ಗುಳೇದಗುಡ್ಡದಿಂದ ಸ್ಪರ್ಧಿಸಿ ಗೆಲುವು ಕಂಡರು.

ಉತ್ತರ ಕರ್ನಾಟಕದಲ್ಲಿ ಜೆ.ಡಿ.ಎಸ್ ಈವರೆಗೂ ಎರಡು ಸ್ಥಾನ ಮಾತ್ರ ಗೆದ್ದಿದ್ದು, ಅದರಲ್ಲಿ ಎಚ್.ವಾಯ್. ಮೇಟಿ ಒಬ್ಬರಾಗಿದ್ದರು. ಜೆಡಿಎಸ್ ಬಿಟ್ಟು ಸಿದ್ದರಾಮಯ್ಯ ಹೊರ ಬಂದಾಗ ಸ್ವಾಮಿ ನಿಷ್ಠೆ ಮೂಲಕ ಜೆಡಿಎಸ್ ಬಿಟ್ಟು ಮೇಟಿ ಕೂಡ ಹೊರಬಂದಿದ್ದರು. 2008ರಲ್ಲಿ ಕ್ಷೇತ್ರ ಪುನರ್ ವಿಂಗಡೆಯಾಗಿ ಗುಳೇದಗುಡ್ಡ ಕ್ಷೇತ್ರ ಹೋಗಿದ್ದರಿಂದ ಮೊದಲ ಬಾರಿಗೆ ಕಾಂಗ್ರೇಸ್‍ನಿಂದ ಬಾಗಲಕೋಟೆ ಮತಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡರು. 2013ರಲ್ಲಿ ಮತ್ತೆ ಬಾಗಲಕೋಟೆ ಮತಕ್ಷೇತ್ರದಿಂದ ಗೆಲುವು ಕಂಡರು.

2016 ರಲ್ಲಿ ಸಿದ್ದು ಸಂಪುಟದಲ್ಲಿ ಅಲ್ಪ ಸಮಯ ಅಬಕಾರಿ ಸಚಿವರಾಗಿ ಕೆಲಸ ಮಾಡಿದ ಮೇಟಿ, 2018ರಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಸೋಲುಂಡರು. ಈ ಅವಧಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. 2023 ರಲ್ಲಿ ಮತ್ತೆ ಕಾಂಗ್ರೆಸ್‍ನಿಂದ ಬಾಗಲಕೋಟೆ ಕ್ಷೇತ್ರದಲ್ಲಿ ಗೆಲುವು ಸಾಧಿಸಿ, ಸದ್ಯ ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಬಾಗಲಕೋಟೆ ಡಿಸಿಸಿ ಬ್ಯಾಂಕ್‍ನ ನಿರ್ದೇಶಕರಾಗಿದ್ದಾರೆ.

Scroll to Top