ಕಳೆದೊಂದು ವಾರದಿಂದ ಕಿತ್ತೂರು ಕರ್ನಾಟಕದಲ್ಲಿ ಕಬ್ಬಿಗೆ ನ್ಯಾಯಯುತ ಬೆಲೆ ನೀಡುವಂತೆ ಆಗ್ರಹಿಸಿ ಹೋರಾಟ ನಡೆಯುತ್ತಿದ್ದರೂ ಸರ್ಕಾರ ಕ್ಯಾರೇ ಎನ್ನುತ್ತಿಲ್ಲ. ಪರಿಣಾಮವಾಗಿ ಹೋರಾಟದ ಕಿಚ್ಚು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಇಡೀ ಕಿತ್ತೂರು ಕರ್ನಾಟಕದಲ್ಲಿ ವ್ಯಾಪಿಸಿದೆ. ಒಂದು ಹಂತದಲ್ಲಿ ಹೋರಾಟಗಾರರು ತಾಳ್ಮೆ ಕಳೆದುಕೊಳ್ಳುವ ಪ್ರಸಂಗಗಳು ಅಲ್ಲಲ್ಲಿ ನಡೆದಿವೆ.
ಕಾರ್ಖಾನೆ ಆಡಳಿತ ಮಂಡಳಿಯವರು ಪ್ರತಿಟನ್ ಕಬ್ಬಿಗೆ 3500 ರೂಪಾಯಿ ನೀಡಬೇಕು ಎನ್ನುವುದು ರೈತರ ಆಗ್ರಹವಾಗಿದೆ. ಅದಕ್ಕೆ ಕಾರ್ಖಾನೆ ಆಡಳಿತ ಮಂಡಳಿಗಳು ಒಪ್ಪುತ್ತಿಲ್ಲ. ಇದರಿಂದ ರೈತರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ರೈತರು ಮತ್ತು ಕಾರ್ಖಾನೆ ಆಡಳಿತ ಮಂಡಳಿಯವರ ನಡುವೆ ಮಧ್ಯಸ್ಥಿಕೆ ವಹಿಸುವ ಮೂಲಕ ಬೆಲೆ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕಾದ ಸರ್ಕಾರ ಸುಮ್ಮನೆ ಕುಳಿತಿದೆ ಎನ್ನುವುದು ರೈತರ ಆರೋಪವಾಗಿದೆ.
ಅಹಿತಕರ ಘಟನೆಗಳಿಗೆ ನಾಂದಿ:
ಸರ್ಕಾರದ ನಿರ್ಲಕ್ಷ್ಯ ಭಾವದಿಂದಾಗಿ ಹೋರಾಟ ನಿರತ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಒಂದು ಕಡೆ ನಡೆದರೆ, ಇನ್ನೊಂದು ಕಡೆ ಸಕ್ಕರೆ ಕಾರ್ಖಾನೆಗೆ ನುಗ್ಗಿ ದಾಂಧಲೆ ಮಾಡಿದ ಘಟನೆ ನಡೆದಿದೆ. ಅಷ್ಟೆ ಅಲ್ಲ ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆ ಸೇರಿದಂತೆ ಇಡೀ ಕಿತ್ತೂರು ಕರ್ನಾಟಕದಲ್ಲಿ ಹೆದ್ದಾರಿ ತಡೆ ನಡೆಸಲಾಗುತ್ತಿದೆ. ಇದರಿಂದ ನಿತ್ಯ ಸಂಚಾರಿ ವಾಹನಗಳು, ಪ್ರಯಾಣಿಕರು ತೊಂದರೆ ಅನುಭವಿಸಬೇಕಾಗಿ ಬಂದಿದೆ.
ಏತನ್ಮಧ್ಯೆ ರೈತರ ಹೋರಾಟ ಸ್ಥಳಗಳಿಗೆ ಬಿಜೆಪಿ ಮುಖಂಡರು ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಲಾರಂಭಿಸಿದ್ದರು. ಇದೀಗ ಬಿಜೆಪಿಯೇ ಹೋರಾಟಕ್ಕೆ ಬೆಂಬಲ ಘೋಷಿಸಿದೆ. ಹೋರಾಟ ಸ್ಥಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು ಭೇಟಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ರೈತರ ನ್ಯಾಯಯುತ ಹೋರಾಟ ರಾಜಕೀಯ ಬಣ್ಣ ಪಡೆದುಕೊಳ್ಳುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎನ್ನುವ ಎಚ್ಚರಿಕೆಯನ್ನು ರೈತರು ಹೋರಾಟದ ವೇದಿಕೆಗಳ ಮೂಲಕ ನೀಡುತ್ತಿದ್ದಾರೆ.
ಉದಾಸೀನ ಮನೋಭಾವ ಬೇಡ:
ಕಾರ್ಖಾನೆ ಆಡಳಿತ ಮಂಡಳಿಯವರು ಮತ್ತು ರೈತ ಮುಖಂಡರ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಸೂಚಿಸುವ ಕೆಲಸ ಮಾಡಬೇಕಿದೆ. ಅದು ಬಿಟ್ಟು ಕಬ್ಬಿನ ಬೆಲೆ ನಿಗದಿ ಮಾಡುವವರು ನಾವಲ್ಲ. ಸಾರಿಗೆ ಹಾಗೂ ಕಟಾವಿಗೆ ದರ ನಿಗದಿ ಮಾಡುವವರಲ್ಲ. ನ್ಯಾಯಯುತ ಬೆಲೆನಿಗದಿಯಿಂದ ಹಿಡಿದು ಎಲ್ಲವನ್ನೂ ಕೇಂದ್ರ ಸರ್ಕಾರ ನಿಗದಿ ಮಾಡುತ್ತದೆ. ಸಮಸ್ಯೆಗೆ ಅವರೆ ಪರಿಹಾರ ಕಂಡು ಹಿಡಿಯಲಿ ಎನ್ನುವ ಉದಾಸೀನ ಮನೋಭಾವದಿಂದ ಹೊರಬರಲಿ ಎನ್ನುವುದು ರೈತರ ಆಗ್ರಹವಾಗಿದೆ.
ಸಂಘರ್ಷಕ್ಕೂ ಮುನ್ನ ಕ್ರಮ ಅಗತ್ಯ:
ರಾಜ್ಯದಲ್ಲಿ ಕಾನೂನು ಸುವ್ಯಸ್ಥೆಗೆ ಧಕ್ಕೆ ಬರುವ ಮುನ್ನ ಈ ಹಿಂದಿನಂತೆ ಉಭಯತರ ಮಧ್ಯೆ ಸಂಧಾನ ಮಾತುಕತೆ ಮೂಲಕ ಕಾರ್ಖಾನೆಗಳು ಆರಂಭಗೊಳ್ಳುವಂತೆ ಸರ್ಕಾರ ಜಾಣ ಹೆಜ್ಜೆ ಇಡಬೇಕಿದೆ. ಒಂದೊಮ್ಮೆ ನ್ಯಾಯಯುತ ಬೆಲೆ ನಿಗದಿ ವಿಷಯದಲ್ಲಿ ರಾಜಕಾರಣ ಆರಂಭಗೊಂಡಲ್ಲಿ ಹೋರಾಟ ಯಾವ ಹಂತ ತಲುಪಲಿದೆ ಎಂದು ಊಹಿಸುವುದು ಕಷ್ಟವಾಗಲಿದೆ ಎನ್ನುವ ಆತಂಕ ವ್ಯಕ್ತ ಪಡಿಸುತ್ತಿದ್ದಾರೆ.
ಪ್ರತಿಪಕ್ಷಗಳು ಸಹಕರಿಸಲಿ:
ಏನೇ ಸಮಸ್ಯೆ ಎದುರಾದರೂ ಅನುಭವಿಸುವವರು ರೈತರು ಮತ್ತು ಕಾರ್ಖಾನೆ ಆಡಳಿತ ಮಂಡಳಿಯವರೆ ಆಗುತ್ತಾರೆ. ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮಕ್ಕೆ ಮುಂದಾಗಬೇಕಿದೆ. ಈ ಹಿಂದೆ ಅನೇಕ ಬಾರಿ ಕಬ್ಬಿಮ ಬೆಲೆ ನಿಗದಿ ವಿಷಯ ಕಗ್ಗಂಟಾಗಿ ರೈತರು ಮತ್ತು ಕಾರ್ಖಾನೆ ಆಡಳಿತ ಮಂಡಳಿಯವರ ನಡುವೆ ಸಂಘರ್ಷಗಳು ತಾರಕಕ್ಕೇರಿರುವ ನಿದರ್ಶನಗಳು ಕಣ್ಮುಂದೆ ಇವೆ ಎನ್ನುವುದನ್ನು ಸರ್ಕಾರ ಮರೆಯಬಾರದು ಎನ್ನುವ ಸಲಹೆ ಮಾಡುತ್ತಿದ್ದಾರೆ.
ಅಂತಹ ಸಂದರ್ಭ ಎದುರಾಗದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕಿದೆ. ಪ್ರತಿಪಕ್ಷಗಳು ಬೆಲೆ ನಿಗದಿ ವಿಷಯದಲ್ಲಿ ಸಾಥ್ ನೀಡಬೇಕು ಅಂದಾಗ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿದು ಕಾರ್ಖಾನೆಗಳು ಆರಂಭಗೊಳ್ಳಲು ಸಾಧ್ಯವಾಗಲಿದೆ ಎನ್ನುವುದು ರೈತ ಮುಖಂಡರ ಅಭಿಮತವಾಗಿದೆ.
- ವಿಠ್ಠಲ ಆರ್. ಬಲಕುಂದಿ




