ಕೋಟೆನಾಡಲ್ಲೂ ಅನುರಣಿಸಿದ ದಲಿತ ಸಿಎಂ ಕೂಗು

ಬಾಗಲಕೋಟೆ: ಕನ್ನಡ ರಾಜ್ಯೋತ್ಸವದ ಸಂಭ್ರಮದ ಮಧ್ಯೆಯೇ ರಾಜ್ಯ ಕಾಂಗ್ರೆಸ್ ಪಾಳೆಯಲ್ಲಿ ಕೇಳಿ ಬರುತ್ತಿರುವ ದಲಿತ ಸಿಎಂ ಕೂಗು ಜಿಲ್ಲೆಯಲ್ಲೂ ಅನುರಣಿಸಿತು. ಜಿಲ್ಲೆಯ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ ಮತ್ತು ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಹಾಗೂ ಶಾಸಕ ಜೆ.ಟಿ. ಪಾಟೀಲ ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿನ ದಲಿತ ಮುಖ್ಯಮಂತ್ರಿ ಚರ್ಚೆಗೆ ಮತ್ತಷ್ಟು ಗ್ರಾಸ ಒದಗಿಸಿದರು.

ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿ ಈಗ ನವೆಂಬರ್ ಕ್ರಾಂತಿಯ ಕುರಿತಾದ ಚರ್ಚೆ ವ್ಯಾಪಕವಾಗಿದ್ದು, ಏತನ್ಮಧ್ಯೆ ದಲಿತ ಮುಖ್ಯಮಂತ್ರಿ ಆಯ್ಕೆ ಕುರಿತ ವಿಷಯ ಸಾಕಷ್ಟು ಸದ್ದು ಮಾಡುತ್ತಿದೆ. ಕಾಂಗ್ರೆಸ್ ಪಾಳೆಯದಲ್ಲಿಯೇ ಒಬ್ಬೊಬ್ಬ ಮುಖಂಡರು ಈ ಬಗೆಗೆ ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಆದರೆ ಜಿಲ್ಲೆಯ ಇಬ್ಬರು ಹಿರಿಯ ಕಾಂಗ್ರೆಸ್ಸಿಗರು ಒಟ್ಟಾಭಿಪ್ರಾಯ ವ್ಯಕ್ತ ಪಡಿಸಿದ್ದು ಗಮನಾರ್ಹ.

ದಲಿತ ಸಿಎಂ ಬೇಡಿಕೆ ತಪ್ಪಲ್ಲ:

ಇಷ್ಟರ ಮಧ್ಯೆ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ದಲಿತ ಮುಖ್ಯಮಂತ್ರಿ ಬೇಡಿಕೆ ತಪ್ಪಲ್ಲ ಎನ್ನುವ ಅಭಿಪ್ರಾಯ ವ್ಯಕಿಪಡಿಸಿದರೆ, ಶಾಸಕ ಜೆ.ಟಿ. ಪಾಟೀಲ ಅವರು ಇನ್ನೂ ಒಂದು ಹೆಜ್ಜೆ ಮುಂದು ಹೋಗಿ ಈ ಹಿಂದೆಯೇ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಆಗಬೇಕಿತ್ತು. 2028ಕ್ಕೆ ಸಚಿವ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗುವ ಬಯಕೆ ವ್ಯಕ್ತ ಪಡಿಸಿದ್ದಾರೆ. ಅವರು ಮುಖ್ಯಮಂತ್ರಿ ಆಗಲಿ ಎನ್ನುವ ಮಾತನ್ನಾಡಿದ್ದಾರೆ.

ಇಂದಿನದಲ್ಲ ದಲಿತ ಸಿಎಂ ಕೂಗು:

ರಾಜ್ಯ ರಾಜಕಾರಣದಲ್ಲಿ ದಲಿತ ಮುಖ್ಯಮಂತ್ರಿ ಕೂಗು ಕೇಳಿ ಬರುತ್ತಿರುವುದು ಇಂದು ನಿನ್ನೆಯ ವಿಷಯವಲ್ಲ. ಎಸ್. ನಿಜಲಿಂಗಪ್ಪ ಅವರ ಕಾಲದಿಂದಲೂ ಈ ವಿಷಯ ಆಗಾಗ್ಗೆ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಕೇಳಿ ಬರುತ್ತಲೇ ಇದೆ. ಆದರೆ ಇದು ಬರಿ ಚರ್ಚೆಗೆ ಸೀಮಿತವಾಗುತ್ತಿರುವುದು ದುರದೃಷ್ಟಕರ ಸಂಗತಿ. ಎಸ್. ನಿಜಲಿಂಗಪ್ಪ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಅವರಿಗೆ ಎಐಸಿಸಿ ಅಧ್ಯಕ್ಷರಾಗುವ ಅವಕಾಶ ಬಂದಿತು. ಆ ವೇಳೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ತಮ್ಮ ಸಂಪುಟದಲ್ಲಿ ಸಚಿವರಾಗಿ ಬಿ. ರಾಚಯ್ಯ ಅವರನ್ನು ತರಬೇಕು ಎನ್ನುವ ವಿಚಾರ ಮುನ್ನೆಲೆಗೆ ಬರುತ್ತಲೆ, ಅಪಸ್ವರ ಕೇಳಿ ಬಂದಾಗ ನಯವಾಗಿ ಹುದ್ದೆ ನಿರಾಕರಿಸಿದ್ದರಿಂದ ವೀರೇಂದ್ರ ಪಾಟೀಲರಿಗೆ ಮುಖ್ಯಮಂತ್ರಿ ಸ್ಥಾನ ಒಲಿಯಿತು. ಮುಂದೆ ಬಿ. ಬಸವಲಿಂಗಪ್ಪ ಅವರ ಹೆಸರು ಬಲವಾಗಿ ಕೇಳಿ ಬಂದಿತಾದರೂ ಬೂಸಾ ವಿವಾದದ ಹಿನ್ನೆಲೆಯಲ್ಲಿ ತಣ್ಣಗಾಯಿತು.

ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಅವರ ವಿರುದ್ಧ ಟೆಲಿಪೋನ್ ಕದ್ದಾಲಿಕೆ ಆರೋಪ ಕೇಳಿ ಬಂದು, ರಾಜೀನಾಮೆ ಕೊಡುವ ಪರಿಸ್ಥಿತಿ ನಿರ್ಮಾಣವಾಗುತ್ತಲೇ ಮತ್ತೊಮ್ಮೆ ಬಿ. ರಾಚಯ್ಯ ಅವರ ಹೆಸರು ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿ ಬಂದಿತ್ತು. ಆಗಲೂ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೈತಪ್ಪಿ ಪ್ರಬಲ ಲಿಂಗಾಯತ ಸಮುದಾಯದ ಎಸ್. ಆರ್. ಬೊಮ್ಮಾಯಿ ಅವರ ಪಾಲಾಯಿತು.

ಅಲ್ಲಿಂದ ಎಸ್. ಬಂಗಾರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂದರ್ಭ ಬಂದಾಗ ಕೆ.ಎಚ್. ರಂಗನಾಥ ಅವರು ಮುಖ್ಯಮಂತ್ರಿ ಆಗಲಿದ್ದಾರೆ ಎನ್ನುವ ಸನ್ನಿವೇಶ ನಿರ್ಮಾಣವಾದಾಗಲೂ ದಲಿತ ಮುಖ್ಯಮಂತ್ರಿ ಕನಸು ನನಸಾಗಲೇ ಇಲ್ಲ. ಆಗ ಕಾಂಗ್ರೆಸ್ ಹೈಕಮಾಂಡ್ ವೀರಪ್ಪ ಮೊಯ್ಲಿ ಅವರಿಗೆ ಅವಕಾಶ ಕಲ್ಪಿಸಿತು.

ಇದಾದ ನಂತರ ಸದ್ಯ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ಕಾಂಗ್ರೆಸ್ಸಿನಲ್ಲಿ ಸಾಕಷ್ಟು ಪ್ರವರ್ಧಮಾನಕ್ಕೆ ಬಂದಿದ್ದರು. 1999ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಬಹುಮತಗಳಿಸಿದಾಗ ಖರ್ಗೆ ಅವರ ಹೆಸರು ಮುಂಚೂಣಿಯಲ್ಲಿ ಕಾಣಿಸಿಕೊಂಡರೂ ಮುಖ್ಯಮಂತ್ರಿ ಸ್ಥಾನ ಎಸ್. ಎಂ. ಕೃಷ್ಣ ಅವರ ಪಾಲಾಯಿತು. 2004ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರದ ವೇಳೆ ಇನ್ನೆನು ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಆಗಲಿದ್ದಾರೆ ಎನ್ನುತ್ತಿರುವಾಗಲೇ ಜೆಡಿಸ್ ನಾಯಕರ ಕೈಚಳಕದ ಪರಿಣಾಮ ಧರ್ಮಸಿಂಗ್ ಮುಖ್ಯಮಂತ್ರಿ ಆದರು. ಇಷ್ಟೆಲ್ಲ ಆದ ಬಳಿಕವೂ ಕಾಂಗ್ರೆಸ್ ಪಾಳೆಯದಲ್ಲಿ ದಲಿತ ಮುಖ್ಯಮಂತ್ರಿ ಕೂಗು ನಿಂತಿರಲಿಲ್ಲ.

ರಾಷ್ಟ್ರ ರಾಜಕಾರಣಕ್ಕೆ ಖರ್ಗೆ:

ಇಷ್ಟು ಹೊತ್ತಿಗಾಗಲೇ ಅಹಿಂದ ಸಮಾವೇಶಗಳನ್ನು ನಡೆಸುವ ಮೂಲಕ ರಾಜ್ಯದಲ್ಲಿ ಅಹಿಂದ ಬಿರುಗಾಳಿ ಎಬ್ಬಿಸಿದ್ದ ಸಿದ್ದರಾಮಯ್ಯ ಮತ್ತು ಎಚ್. ಡಿ. ದೇವೇಗೌಡರ ರಾಜಕೀಯ ಸಂಬಂಧ ಹಳಸಿ ಹೋಗಿತ್ತು. ಸಿದ್ದರಾಮಯ್ಯ ಅವರನ್ನು ಪಕ್ಷದಿಂದಲೇ ಹೊರ ಹಾಕಲಾಯತು. ಆಗ ಅವರು ಅಖಿಲ ಭಾರತ ಪ್ರಗತಿಪರ ಪಕ್ಷ ಕಟ್ಟಿದರಾದರೂ ನಂತರ ಕಾಂಗ್ರೆಸ್ಸಿನಲ್ಲಿ ಪಕ್ಷವನ್ನು ವಿಲಿನಗೊಳಿಸಿದರು. ಸಿದ್ದರಾಮಯ್ಯನವರ ಕಾಂಗ್ರೆಸ್ ಸೇರ್ಪಡೆಯಿಂದಾಗಿ ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರ ರಾಜಕಾರಣಕ್ಕೆ ಹೋದರು.

ಪರಮೇಶ್ವರಗೂ ತಪ್ಪಿತು:

ಯಾವಾಗ ಖರ್ಗೆ ಅವರು ರಾಷ್ಟ್ರ ರಾಜಕಾರಣದಲ್ಲಿ ಬ್ಯೂಸಿ ಆದರೋ ಆಗ ಮುಂಚೂಣಿಗೆ ಬಂದಿದ್ದೆ ಜಿ. ಪರಮೇಶ್ವರ ಅವರ ಹೆಸರು. 2013ರ ಚುನಾವಣೆ ಬಳಿಕ ಪರಮೇಶ್ವರ ಅವರು ಮುಖ್ಯಮಂತ್ರಿ ಗ್ಯಾರಂಟಿ ಎನ್ನುವ ಮಾತುಗಳು ಜನಜನಿತವಾಗಿದ್ದವು. ನಿರೀಕ್ಷೆಯಂತೆ 2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತಾದರೂ ಜಿ. ಪರಮೇಶ್ವರ ಜೆಡಿಎಸ್ ಅಭ್ಯರ್ಥಿ ವಿರುದ್ಧ ಸೋಲು ಕಂಡಿದ್ದರು. ಸೋಲಿನ ಪರಿಣಾಮವಾಗಿ ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿತು ಎನ್ನುವ ಮಾತು ಇಂದಿಗೂ ರಾಜಕೀಯ ಮೊಗಸಾಲೆಯಲ್ಲಿ ಆಗಾಗ್ಗೆ ಓಡಾಡುತ್ತಿರುತ್ತದೆ.

ಮತ್ತೆ ಜೋರಾದ ಬೇಡಿಕೆ:

ಸದ್ಯ ರಾಜ್ಯದಲ್ಲಿ ಈಗ ಮತ್ತೆ ದಲಿತ ಮುಖ್ಯಮಂತ್ರಿ ಬೇಡಿಕೆ ಜೋರಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಜಿ. ಪರಮೆಶ್ವರ, ಕೆ.ಎಚ್. ಮುನಿಯಪ್ಪ, ಸತೀಶ್ ಜಾರಕಿಹೊಳಿ, ಎಚ್.ಸಿ. ಮಹಾದೇವಪ್ಪ ಮೊದಲಾದವರು ಹೆಸರುಗಳು ಓಡಾಡುತ್ತಿವೆ. ಸತೀಶ್ ಜಾರಕಿಹೊಳಿ ಅವರು 2028ಕ್ಕೆ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಹೇಳಿಕೊಂಡಿದ್ದಾರಾದರೂ ರಾಜಕಾರಣದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು ಎನ್ನುವ ಸಮೀಕರಣ ಕೆಲಸ ಮಾಡಲಿರುವುದರಿಂದ ಅವರ ಹೆಸರೂ ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿ ಬರುತ್ತಿದೆ.

ವರಿಷ್ಠರ ನಿರ್ಧಾರ ಅಂತಿಮ:

ದಲಿತ ಮುಖ್ಯಮಂತ್ರಿ ಕೂಗು ಜೋರಾಗಿರುವಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ದಲಿತ ಮುಖ್ಯಮಂತ್ರಿ ಬೇಡಿಕೆಯಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸುವ ಜತೆಗೆ ಪಕ್ಷದ ವರಿಷ್ಠರು ಮತ್ತು ಪಕ್ಷದ ಶಾಸಕಾಂಗ ಸಭೆ ಕೈಗೊಳ್ಳುವ ನಿರ್ಧಾರ ಅಂತಿಮ ಎನ್ನುವ ಮಾತನ್ನು ಹೇಳಿದ್ದಾರೆ. ಇವರ ಹೇಳಿಕೆ ಬೆನ್ನಲ್ಲೆ ಶಾಸಕ ಜೆ.ಟಿ. ಪಾಟೀಲ ಕೂಡ ಈ ಹಿಂದೆಯೇ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಆಗಬೇಕಿತ್ತು. 2028ಕ್ಕೆ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗಲಿ ಎಂದಿದ್ದಾರೆ.

ಬಿಜೆಪಿಯಲ್ಲೂ ಕೇಳಿ ಬಂದಿತ್ತು:

ರಾಜ್ಯೋತ್ಸವ ಸಂಭ್ರಮದಲ್ಲಿ ದಲಿತ ಮುಖ್ಯಮಂತ್ರಿ ಬೇಡಿಕೆ ಕುರಿತು ಜಿಲ್ಲೆಯಲ್ಲೂ ಚರ್ಚೆ ನಡೆದಿರುವುದು ಗಮನಾರ್ಹ ಸಂಗತಿ ಆಗಿದೆ. ಅಂದ ಹಾಗೆ ದಲಿತ ಮುಖ್ಯಮಂತ್ರಿ ಕೂಗು ಕೇವಲ ಕಾಂಗ್ರೆಸ್ ಪಾಳೆಯಕ್ಕೆ ಮಾತ್ರ ಸೀಮಿತವಾಗಿಲ್ಲ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ವೇಳೆಯೂ ದಲಿತ ಮುಖ್ಯಮಂತ್ರಿ ಕೂಗು ಕೇಳಿಬಂದಿತ್ತು. ಆ ವೇಳೆ ಸದ್ಯ ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಸಂಸದರಾಗಿರುವ ಗೋವಿಂದ ಕಾರಜೋಳರ ಹೆಸರು ಮುನ್ನೆಲೆಗೆ ಬಂದಿತ್ತು. ಆಗ ಮುಖ್ಯಮಂತ್ರಿ ಸ್ಥಾನಕ್ಕೆ ನಡೆದ ಪೈಪೋಟಿಯಲ್ಲಿ ಅದು ಬಸವರಾಜ ಬೊಮ್ಮಾಯಿ ಅವರ ಪಾಲಾಯಿತು. ಒಟ್ಟಾರೆ ರಾಜ್ಯದಲ್ಲಿ ಮೊದಲಿನಿಂದಲೂ ದಲಿತ ಮುಖ್ಯಮಂತ್ರಿ ಕೂಗು ಆಗಾಗ್ಗೆ ಕೇಳಿ ಬರುತ್ತಿದ್ದರೂ ಇದುವರೆಗೂ ಒಮ್ಮೆಯೂ ಅವಕಾಶ ಸಿಕ್ಕಿಲ್ಲ. ವಿಷಯ ಬರಿ ಚರ್ಚೆಗೆ ಮಾತ್ರ ಸೀಮಿತ ಎನ್ನುವಂತಾಗಿದೆ.

  • ವಿಠ್ಠಲ ಆರ್. ಬಲಕುಂದಿ
Scroll to Top