ಗ್ರಾಹಕರ ಕಲ್ಯಾಣಕ್ಕಾಗಿ ಗ್ರಾಹಕ ಪಂಚಾಯತ್

ಬಾಗಲಕೋಟೆ: ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಗ್ರಾಹಕರ ಕಲ್ಯಾಣಕ್ಕಾಗಿ ಸಮಾಜದಲ್ಲಿ ಕೆಲಸ ಮಾಡುವ ರಾಷ್ಟ್ರವ್ಯಾಪಿ ಸಂಸ್ಥೆಯಾಗಿದ್ದು, ದೇಶಾದ್ಯಂತ 40ಕ್ಕೂ ಹೆಚ್ಚು ಪ್ರಾಂತಗಳಲ್ಲಿ ಗ್ರಾಹಕ ಪಂಚಾಯತ್ ಕರ್ತವ್ಯ ನಿರ್ವಹಿಸುತ್ತಿದೆ ಎಂದು ಗ್ರಾಹಕ ಪಂಚಾಯತ್ ನ ಕರ್ನಾಟಕ ಪ್ರಾಂತ ಅಧ್ಯಕ್ಷ ನರಸಿಂಹ ನಕ್ಷತ್ರಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಖಿಲ ಭಾರತೀಯ ಗ್ರಾಹಕ ಪಂಚಾಯತ್, 1974 ರಿಂದ ಗ್ರಾಹಕರ ನಡುವೆ ಕಾರ್ಯ ನಿರತವಾಗಿದೆ. 1986ರವರೆಗೆ ಗ್ರಾಹಕರ ಹಿತ ಸಂರಕ್ಷಣೆಗೆ ಯಾವ ಕಾಯ್ದೆಯು ಇರಲಿಲ್ಲ, ಪ್ರತಿಯೊಂದು ಸಮಸ್ಯೆಗೂ, ಪರಿಹಾರಕ್ಕೂ, ಗ್ರಾಹಕನು ಸಿವಿಲ್ ಕೋರ್ಟ್ ಗಳಿಗೆ ಶರಣು ಹೋಗಬೇಕಿತ್ತು. ವಕೀಲರ ಮೇಲೆ ಅವಲಂಬನ ಅಲ್ಲದೇ ಪರಿಹಾರ ಕೂಡಾ ತೀರ ತಡವಾಗುತ್ತಿತ್ತು ಎಂದು ಹೇಳಿದರು.

ಸಂಘಟನೆಯ ಹಿರಿಯ ಪ್ರಮುಖ ಕಾರ್ಯಕರ್ತರು ಜಟಿಲತೆಯನ್ನು ಮನಗಂಡು, ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಸ್ಥಾಪಿಸಿ, ಸಮಾಜದಲ್ಲಿ ಗ್ರಾಹಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಶ್ರಮಿಸಿತಲ್ಲದೆ ಕೇಂದ್ರ ಸರ್ಕಾರ ಗ್ರಾಹಕ ಸಂರಕ್ಷಣಾ ಕಾಯ್ದೆ ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ತಿಳಿಸಿದರು.

ಗ್ರಾಹಕ ಪಂಚಾಯತ್ ಒತ್ತಾಸೆಯ ಮೇರೆಗೆ ‘ಗ್ರಾಹಕ ಸಂರಕ್ಷಣ ಕಾಯ್ದೆಯು ಡಿಸೆಂಬರ್ 24, 1986 ರಂದು ಜಾರಿಗೆ ಬಂದಿತು. ಹಾಗಾಗಿ ಡಿಸೆಂಬರ್ 24ನ್ನು “ರಾಷ್ಟ್ರೀಯ ಗ್ರಾಹಕರ ದಿನ” ವೆಂದು ಘೋಷಿಸಲಾಗಿದೆ. 15 ದಿನಗಳ ಅವಧಿಗೆ ಅನೇಕ ಗ್ರಾಹಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಆಚರಿಸುತ್ತಿದ್ದೇವೆ ಎಂದರು.

ನಿರಂತರವಾಗಿ ಗ್ರಾಹಕರಿಗೆ ಆಗುತ್ತಿರುವ ಅನ್ಯಾಯ, ಮೋಸಗಳ ವಿರುದ್ಧ ಗ್ರಾಹಕ ಪಂಚಾಯತ್ ಹೋರಾಡುತ್ತಿದೆ. ಆನ್ ಲೈನ್ ಮಾರಕಟ್ಟೆ ಮೋಸ ಇತ್ಯಾದಿ ಹೊಸ ಹೊಸ ಶೋಷಣೆಗಳಿಂದ ಗ್ರಾಹಕರಿಗೆ ರಕ್ಷಣೆ ಕೊಡಲು ಅನೇಕ ಸುಧಾರಣೆಗಳೊಂದಿಗೆ ನೂತನ “ಗ್ರಾಹಕ ಸಂರಕ್ಷಣಾ ಕಾಯ್ದೆ – 2020” ಜಾರಿಗೆ ಬಂದಿದೆ. ಈ ಕಾಯ್ದೆ ಅನ್ವಯ ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಗ್ರಾಹಕರಿಗೆ ಶಿಕ್ಷಣ ನೀಡಲು ಅನೇಕ ಕಾರ್ಯಕ್ರಮಗಳನ್ನು ಅಖಿಲ ಭಾರತೀಯ ಗ್ರಾಹಕ್ ಪಂಚಾಯತ್ ಕರ್ನಾಟಕ ಪ್ರಾಂತ ಆಯೋಜಿಸುತ್ತಿದೆ ಎಂದು ತಿಳಿಸಿದರು.

ಆನ್ ಲೈನ್ ಗೇಮಿಂಗ್ ದುಷ್ಪರಿಣಾಮಗಳ ಬಗ್ಗೆ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು ಅಂತಾ ಆಗ್ರಹ ಪಡಿಸಿದ ಪರಿಣಾಮ ಆನ್ ಲೈನ್ ಗೇಮಿಂಗ್ ಬ್ಯಾನ್ ಆಯ್ತು. ಸಂಘಟನೆ ಮೂಲಕ ಗ್ರಾಹಕ ಪಂಚಾಯತ್ ನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವುದು ಮತ್ತು ಸಾಮೂಹಿಕ ಸಂಘಟನೆಯನ್ನು ರಚಿಸುವುದು ತಮ್ಮ ಆಶಯವಾಗಿದೆ ಎಂದರು.

ನುರಿತ ಗ್ರಾಹಕರ ಸಂಘಟಿತ ಪಡೆಯನ್ನು ರಚಿಸಲು ನಾವು ಬಯಸುತ್ತೇವೆ. ಕೌಶಲ್ಯ ನಿರ್ಮಾಣ ಕಾರ್ಯದಿಂದ ಗುಣಮಟ್ಟವನ್ನು ಸುಧಾರಿಸುವ ಮೂಲಕ ಕಾರ್ಮಿಕರನ್ನು, ಗ್ರಾಹಕರನ್ನು ಸಮರ್ಥರನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ. ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಆಹಾರ, ಆರೋಗ್ಯ, ಶಿಕ್ಷಣ, ವಸತಿ, ಪರಿಸರ ಮತ್ತು ವ್ಯವಹಾರ ಕ್ಷೇತ್ರಗಳಲ್ಲಿ ಕೂಡಾ ಸೇವೆ ಸಲ್ಲಿಸುತ್ತಿದೆ ಎಂದು ಹೇಳಿದರು.

ಗ್ರಾಹಕರ ಆಂದೋಲನಕ್ಕೆ ಅಗತ್ಯವಾದ ಶಕ್ತಿಯನ್ನು ನಿರ್ಮಿಸಲು ಅಭಿಯಾನದ ರೂಪದಲ್ಲಿ ನಮಗೆ ಈ ಅವಕಾಶ ಸಿಕ್ಕಿದೆ. ಪ್ರತಿಯೊಬ್ಬರೂ ಒಂದಿಲ್ಲ ಒಂದು ರೀತಿ ಗ್ರಾಹಕರೇ ಆಗಿರುವ ಕಾರಣ ಹೆಚ್ಚು ಹೆಚ್ಚು ಜನ ಸದಸ್ಯತ್ವ ಪಡೆದು ಉತ್ತಮ ಕಾರ್ಯಕರ್ತರಾಗಿ ಸೇವೆ ಸಲ್ಲಿಸುವ ಮೂಲಕ ನಮ್ಮ ಭಾರತದ ನಾಗರೀಕರು ಮೌಲ್ಯಯುತ ಶಕ್ತಿಯುತ ಜೀವನ ಸಾಗಿಸಲು ಶ್ರಮಿಸೋಣ ಎಂದರು.

ಮಹಿಳಾ ಪ್ರಮುಖರಾದ ಡಾ. ಚಂದ್ರಿಕಾ‌ ಕುರಂದವಾಡ ಅವರು ಮಾತನಾಡಿ, ಗ್ರಾಹಕ‌ ಜಾಗೃತಿ‌ ಮೂಡಿಸಲು ಜಿಲ್ಲೆಯ ಬಾದಾಮಿ ಇಲ್ಲವೆ ಸಿದ್ದನಕೊಳ್ಳದಲ್ಲಿ ಮುಂದಿನ‌ ದಿನಗಳಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಬಹುತೇಕ‌ ಮಹಿಳೆಯರು‌ ಗ್ರಾಹಕರಾಗಿದ್ದು, ಮನೆಯ ಯಜಮಾನರು ತಂದಕೊಡುವ ಹಣವನ್ನು ಖರ್ಚು ಮಾಡುವವರು ಮಹಿಳೆಯರು.‌ ಮಹಿಳೆಯರು ವ್ಯವಹಾರದಲ್ಲಿ ಮೋಸ ಹೋಗದಂತೆ ಜಾಗೃತಿ ವಹಿಸಲು ಸಮಾವೇಶದಲ್ಲಿ ತಿಳಿವಳಿಕೆ ನೀಡಲಾಗುವುದು ಎಂದರು.

ರಂಗನಗೌಡ ದಂಡನ್ನವರ, ಎ.ಬಿ.‌ಸಿದ್ದನಗೌಡ, ಮಹದೇವ ದೀಕ್ಷಿತ, ಜಯತೀರ್ಥ ಕುಲಕರ್ಣಿ ಇದ್ದರು.

Scroll to Top