“ಮೆಣಸಿನಕಾಯಿ ಉತ್ಪಾದನೆಗೆ ಸಮಗ್ರ ನಿರ್ವಹಣೆ ಅಗತ್ಯ”

ಬಾಗಲಕೋಟೆ: ಮೆಣಸಿನಕಾಯಿ ಇಲ್ಲದೇ ಅಡುಗೆ ಆರಂಭವಾಗುವುದಿಲ್ಲ ಎನ್ನುವ ಮಾತು ಜಗಜ್ಜನಿತ. ಕೆಲ ಪಾಶ್ಚಾತ್ಯ ರಾಷ್ಟ್ರಗಳನ್ನು ಬಿಟ್ಟರೆ ಎಲ್ಲ ದೇಶಗಳಲ್ಲಿಯೂ ಮೆಣಸಿನಕಾಯಿಯ ಬಳಕೆ ಇದೆ. ಅದರಲ್ಲಿಯೂ ಏಷ್ಯಾದ ಎಲ್ಲ ದೇಶಗಳಲ್ಲಿ ಮೆಣಸಿನಕಾಯಿ ಇಲ್ಲದೆ ಅಡುಗೆ ಮಾಡುವುದಿಲ್ಲ. ಭಾರತವು ವಿಶ್ವದಲ್ಲೇ ಅತಿ ದೊಡ್ಡ ಮೆಣಸಿನಕಾಯಿ ಉತ್ಪಾದಕ ಮತ್ತು ರಫ್ತುದಾರ ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ. ಅಶೋಕ ದಳವಾಯಿ ಹೇಳಿದರು.

ಇಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಸೋಮವಾರ ರಾಷ್ಟ್ರೀಯ ಮೆಣಸಿನಕಾಯಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ರೈತರು ಮತ್ತು ಕೃಷಿ ವಿಜ್ಞಾನಿಗಳ ಕಠಿಣ ಶ್ರಮದಿಂದಾಗಿ, ಪ್ರತಿ ವರ್ಷ ಉತ್ಪಾದನೆ ಮತ್ತು ರಫ್ತು ಎರಡರ ನಕ್ಷೆ ಹೆಚ್ಚುತ್ತಿದೆ. ನಾವು ಉತ್ತಮ ಗುಣಮಟ್ಟದ ಮೆಣಸಿನಕಾಯಿ ಬೆಳೆಯಲು ಸಮಗ್ರ ನಿರ್ವಹಣೆ ಅಗತ್ಯ ಎಂದು ಹೇಳಿದರು.

ಸಮಗ್ರ ನಿರ್ವಹಣೆಯ ಮೆಣಸಿನಕಾಯಿ ಬೆಳೆಯನ್ನು ಸಂಗ್ರಹ, ಸಂರಕ್ಷಣೆ, ಮೌಲ್ಯವರ್ಧನೆಗಳನ್ನು ವೈಜ್ಞಾನಿಕವಾಗಿ ಅನುಸರಿಸುವುದರಿಂದ ರೈತರು ಆರ್ಥಿಕ ಭದ್ರತೆಯನ್ನು ಪಡೆಯಬಹುದು. ಒಣಮೆಣಸಿನಕಾಯಿ 2 ರಿಂದ 4.5 ಮಿಲಿಯನ್ ಟನ್‌ಗಳಿಗೆ ಮತ್ತು ಹಸಿಮೆಣಸಿನಕಾಯಿ 17 ರಿಂದ 36 ಮಿಲಿಯನ್ ಟನ್‌ಗಳಿಗೆ ಹೆಚ್ಚಾಗಿದೆ. ಭಾರತವು ವಿಶ್ವದ ಮೆಣಸಿನಕಾಯಿ ಉತ್ಪಾದನೆಯಲ್ಲಿ ಸರಿಸುಮಾರು ಶೇ. 40 ರಷ್ಟು ಕೊಡುಗೆ ನೀಡಿದೆ. ಭಾರತೀಯ ಮೆಣಸಿನಕಾಯಿಯ ಉತ್ಪಾದಕತೆ ಮತ್ತು ರೈತರ ಆರ್ಥಿಕ ಭದ್ರತೆಗಳೆರಡಲ್ಲಿಯೂ ತನ್ನದೇ ಆದ ಸವಾಲುಗಳನ್ನು ಎದುರಿಸುತ್ತಿದೆ ಎಂದರು.

ಕೀಟ-ರೋಗಗಳಿಂದ ಹಿಡಿದು ಹವಾಮಾನ ವೈಪರೀತ್ಯ ಮತ್ತು ಮಾರುಕಟ್ಟೆಯ ಅತಂತ್ರತೆಯವರೆಗೆ ಸಮಗ್ರ ಜ್ಞಾನದ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಮೆಣಸಿನಕಾಯಿ ಕೃಷಿಯನ್ನು ಅಭಿವೃದ್ಧಿ ಪಡಿಸಲು ಕಾರ್ಯತಂತ್ರಗಳನ್ನು ಅನುಸರಿಸುವ ಅಗತ್ಯವಿದೆ. ಎಲೆಸುರುಳಿ ರೋಗ, ಎಲೆಚುಕ್ಕೆ ರೋಗ, ಬೂದಿರೋಗ, ಕಪ್ಪು ನುಸಿ, ಬೇರುಗಂಟು ರೋಗ, ಜೈವಿಕ ಒತ್ತಡಗಳು ಮತ್ತು ತಾಪಮಾನದೊಂದಿಗೆ ಮಣ್ಣಿನ ತೇವಾಂಶಗಳಂತಹ ನೈಸರ್ಗಿಕ ಒತ್ತಡಗಳು ಮೆಣಸಿನಕಾಯಿ ಉತ್ಪಾದನೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತಿವೆ. ಮೆಣಸಿನಕಾಯಿ ತಳಿಗಳ ಬೆಳೆ ಸುಧಾರಣೆ ಹಾಗೂ ಸುಧಾರಿತ ತಂತ್ರಜ್ಞಾನಗಳ ಬೇಸಾಯ ಪರಿಣಾಮಕಾರಿಯಾಗಿ ಕೀಟ ಮತ್ತು ರೋಗ ನಿರ್ವಹಣೆಯಿಂದ ನಿಯಂತ್ರಿಸಬಹುದಾಗಿದೆ ಎಂದು ವಿವರಿಸಿದರು.

ಡಾ. ಎನ್. ಕೆ. ಕೃಷ್ಣಕುಮಾರ್, ಪ್ರತಿ ರಾಜ್ಯದಲ್ಲಿ ಪ್ರತಿ ಪ್ರದೇಶಗಳಲ್ಲಿಯೂ ವಿವಿಧ ತಳಿಯ ಮೆಣಸಿನಕಾಯಿ ಬೆಳೆಗಳನ್ನು ಉತ್ಪಾದಿಸಲಾಗುತ್ತದೆ. ಮೆಣಸಿನಕಾಯಿ ಮಾರಾಟ, ರಫ್ತುವಿನಲ್ಲಿ ರೈತರಿಗೆ ಇರುವ ಸವಾಲುಗಳ ಕುರಿತು ಮಾತನಾಡಿದರು. ಡಾ. ಸುರೇಂದ್ರ ಟಿಕೂ, ನಿರ್ದೇಶಕರು, ಎಟಿಪಿಬಿಆರ್, ಔರಂಗಬಾದ್ ಇವರು ಮೆಣಸಿನಕಾಯಿ ಬೆಳೆಯ ಸಮಗ್ರ ನಿರ್ವಹಣೆ ಕುರಿತಾಗಿ ಮಾತಾಡಿದರು.

ಕುಲಪತಿ ಡಾ. ವಿಷ್ಣುವರ್ಧನ ಅಧ್ಯಕ್ಷೀಯ ಭಾಷಣದಲ್ಲಿ 210 ಕ್ಕೂ ಹೆಚ್ಚು ಪ್ರತಿನಿಧಿಗಳು, 38 ಆಹ್ವಾನಿತ ಭಾಷಣಕಾರರು ಮತ್ತು 20 ಉದ್ಯಮ ತಜ್ಞರನ್ನು ಹೊಂದಿರುವ ಈ ಸಮ್ಮೇಳನವು ಮೆಣಸಿನಕಾಯಿ ಸಮಗ್ರ ಮಾಹಿತಿ ರೂಪಿಸಲು ಪರಿಪೂರ್ಣ ವೇದಿಕೆಯನ್ನು ಒದಗಿಸುತ್ತದೆ ಎಂದರು.

ಡಿಜಿಟಲ್ ಫಿನೋಟೈಪಿಂಗ್, ಜೀನೋಮಿಕ್ ಆಯ್ಕೆ ಮತ್ತು ಬ್ಲಾಕ್‌ಚೈನ್ ಆಧಾರಿತ ಆಹಾರ ಸುರಕ್ಷತೆ ಮೇಲ್ವಿಚಾರಣೆಯಂತಹ ಉದ್ಯಮಗಳ ಮೂಲಕ ಭಾರತ ಮುನ್ನಡೆಸಬಹುದಾದ ಕ್ಷೇತ್ರಗಳಾದ ಜೀನೋಮಿಕ್- ನೇತೃತ್ವದ ಸುಧಾರಣೆ, ಹವಾಮಾನ ಸ್ಥಿತಿಸ್ಥಾಪಕತ್ವ ಮತ್ತು ಆಹಾರ ವ್ಯವಸ್ಥೆಗಳಲ್ಲಿ ಪತ್ತೆ ಹಚ್ಚುವಿಕೆಯನ್ನು ನಾವು ನಿರ್ದಿಷ್ಟವಾಗಿ ಒತ್ತಿ ಹೇಳೋಣ ಎಂದರು.

Scroll to Top