ಬಾಗಲಕೋಟೆ ಲೋಕಸಭೆ ಕ್ಷೇತ್ರದ ಜನತೆ ಸತತ ಐದನೇ ಬಾರಿಗೆ ಪಿ.ಸಿ. ಗದ್ದಿಗೌಡರ ಅವರನ್ನು ಸಂಸತ್ತಿಗೆ ಆಯ್ಕೆ ಮಾಡುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಇದುವರೆಗೂ ಎಚ್.ಬಿ.ಪಾಟೀಲರು ಸತತ ನಾಲ್ಕುಬಾರಿ ಆಯ್ಕೆ ಆಗಿದ್ದರು. ಅವರ ದಾಖಲೆಯನ್ನು ಹಿಂದಿಕ್ಕಿ ಸಂಸದ ಗದ್ದಿಗೌಡರ ಐದನೇ ಬಾರಿ ಗೆದ್ದಿದ್ದಾರೆ. ಸಂಸತ್ತಿಗೆ ದಾಖಲೆ ಮಟ್ಟದಲ್ಲಿ ಆಯ್ಕೆ ಮಾಡಿರುವ ಜನತೆಯ ಆಶಯಗಳಿಗೆ ಎಷ್ಟರ ಮಟ್ಟಿಗೆ ಸ್ಪಂದಿಸಿದ್ದಾರೆ ಎನ್ನುವುದನ್ನು ಒಮ್ಮೆ ಅವರು ತಿರುಗಿ ನೋಡಬೇಕಾಗಿದೆ.
ಗದ್ದಿಗೌಡರ ಐದನೆ ಬಾರಿಗೆ ಆಯ್ಕೆಗೊಂಡಿದ್ದರೂ ಸಾಧನೆ ಹಾದಿಯಲ್ಲಿ ಇನ್ನೂ ಕ್ರಮಿಸಬೇಕಾದ ದಾರಿ ಸಾಕಷ್ಟಿದೆ. ಇದುವರೆಗಿನ ಇವರ ಅವಧಿಯಲ್ಲಿ ರುಟೀನ್ ಕೆಲಸಗಳಾಗಿವೆಯೆ ಹೊರತು ದಾಖಲೆ ಆಗಿ ಉಳಿಯಬೇಕಾದ ಕೆಲಸಗಳು ಆಗಿಲ್ಲ. ದಾಖಲೆ ಬರೆಯಬೇಕಾಗಿರುವ ಕೆಲಸಗಳ ಬಗೆಗೆ ಅವರು ಆದ್ಯ ಗಮನ ಹರಿಸುತ್ತಿಲ್ಲವೆನೋ ಎನ್ನುವ ಭಾವ ಜನತೆಯಲ್ಲಿ ಬೇರೂರುತ್ತಿದೆ.
ಪ್ರಮುಖ ಯೋಜನೆಗಳು ನನೆಗುದಿಗೆ:
ಗದ್ದಿಗೌಡರು ಸಂಸದರಾಗುವ ಮುನ್ನವೇ ಆರಂಭಗೊಂಡಿರುವ ಬಾಗಲಕೋಟೆ- ಕುಡಚಿ ರೈಲ್ವೆ ಮಾರ್ಗ ಪೂರ್ಣಗೊಳ್ಳದೆ ತೆವಳುತ್ತ ಸಾಗಿದೆ. ಹಾಗೆ ಬಾದಾಮಿಯಲ್ಲಿನ ಐತಿಹಾಸಿಕ ಸ್ಮಾರಕಗಳ ಸುತ್ತಲಿನ ಕಟ್ಟಡಗಳ ತೆರವು ಕಾರ್ಯ ಕೂಡ ಸಂಪೂರ್ಣ ನನೆಗುದಿಗೆ ಬಿದ್ದಿದೆ. ಇವುಗಳ ಸ್ಥಿತಿ ಹೀಗಿದ್ದರೆ ಈ ಭಾಗದ ಲಕ್ಷಾಂತರ ಎಕರೆ ಭೂಮಿಗೆ ನೀರುಣಿಸಬೇಕಿರುವ ಕೃಷ್ಣಾ ಮೇಲ್ದಂಡೆ ಹಂತ -3ನ್ನು ಪೂರ್ಣಗೊಳಿಸುವತ್ತ ಕಿಂಚಿತ್ ಗಮನ ಹರಿಸುತ್ತಿಲ್ಲ ಎನ್ನುವ ಸಾತ್ವಿಕ ಆಕ್ರೋಶ ಜನರಲ್ಲಿ ಮನೆ ಮಾಡುತ್ತಿದೆ. ಈಗಲಾದರೂ ಸಂಸದ ಗದ್ದಿಗೌಡರ ದಾಖಲೆ ಮಟ್ಟದಲ್ಲಿ ಲೋಕಸಭೆಗೆ ಆಯ್ಕೆ ಮಾಡಿರುವ ಜನತೆಯ ಋಣ ತೀರಿಸುವ ಕೆಲಸಕ್ಕೆ ಅಣಿಯಾಗಬೇಕಿದೆ.
ಕೇಂದ್ರದ ಅಧಿಸೂಚನೆ ಅಗತ್ಯ:
ರಾಜ್ಯ ಸರ್ಕಾರ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಹೊಸ ಭರವಸೆ ಮೂಡಿಸುವ ಕೆಲಸ ಮಾಡುತ್ತಿದೆ. ಹಂತ-3 ರ ವ್ಯಾಪ್ತಿಯಲ್ಲಿ ಸ್ವಾಧೀನಗೊಳ್ಳಲಿರುವ ಭೂಮಿಗೆ ಏಕರೂಪ ದರ ನಿಗದಿ ಪಡಿಸಿ, ಸಂಪುಟ ಅನುಮೋದನೆ ನೀಡಿದೆ. ಭೂಸ್ವಾಧೀನ ಪರಿಹಾರ ಹಂಚಿಕೆ, ಪುನರ್ ವಸತಿ, ಪುನರ್ ನಿರ್ಮಾಣ ಕಾರ್ಯಗಳತ್ತ ಗಮನ ಹರಿಸಲು ಪ್ರಾಧಿಕಾರದ ರಚನೆಗೆ ಮುಂದಾಗಿದೆ. ಯುಕೆಪಿ ಹಂತ- 3ರ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರ ತನ್ನ ಪ್ರಯತ್ನ ಆರಂಭಿಸಿದ್ದರೂ ಬಹು ಮುಖ್ಯವಾಗಿ ಕೇಂದ್ರ ಸರ್ಕಾರ ಕೃಷ್ಣಾ ನ್ಯಾಯಾಧೀಕರಣ -2 ರ ವರದಿಯ ಅಧಿಸೂಚನೆ ಹೊರಡಿಸಬೇಕಿದೆ. 2010 ರಲ್ಲಿಯೇ ವರದಿ ಸಲ್ಲಿಕೆ ಆಗಿದ್ದು, 2013 ರಲ್ಲಿ ಅಂತಿಮ ವರದಿ ಕೂಡ ಸಲ್ಲಿಕೆ ಆಗಿದೆ.
ಬೇಕಿದೆ ಗೌಡರ ನೇತೃತ್ವ:
ಕೃಷ್ಣಾ ನ್ಯಾಯಾಧೀಕರಣ -2ರ ವರದಿ ಕೇಂದ್ರಕ್ಕೆ ಸಲ್ಲಿಕೆ ಆಗಿದ್ದರೂ ಇದುವರೆಗೂ ಅಧಿಸೂಚನೆ ಹೊರ ಬೀಳುತ್ತಿಲ್ಲ. ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸುವಂತೆ ಹತ್ತಾರು ಬಾರಿ ಕೇಂದ್ರವನ್ನು ಒತ್ತಾಯಿಸುತ್ತ ಬಂದರೂ ಕೇಂದ್ರ ಸರ್ಕಾರ ಮಾತ್ರ ಈ ವಿಷಯದಲ್ಲಿ ಮೌನಕ್ಕೆ ಶರಣಾಗಿದೆ.
ಗದ್ದಿಗೌಡರು ಸಂಸದರಾಗಿ ಆಯ್ಕೆಗೊಂಡು 10 ವರ್ಷಗಳ ಬಳಿಕ ಕೃಷ್ಣಾ ನ್ಯಾಯಾಧೀಕರಣ -2 ರ ಅಂತಿಮ ವರದಿ ಕೇಂದ್ರಕ್ಕೆ ಸಲ್ಲಿಕೆ ಆಗಿದೆ. ಅಂತಿಮ ವರದಿ ಸಲ್ಲಿಕೆ ಆಗಿ 10 ವರ್ಷ ಆಗಿದೆ. ಇಷ್ಟು ವರ್ಷಗಳ ಕಾಲವೂ ಅವರೆ ಸಂಸದರಾಗಿದ್ದಾರೆ.
ಇಷ್ಟೊಂದು ಸುದೀರ್ಘ ಅವಧಿಯಲ್ಲಿ ಒಮ್ಮೆಯೂ ಅವರು ಕೃಷ್ಣಾ ನ್ಯಾಯಾಧೀಕರಣ -2ರ ವರದಿಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಿ ಎಂದು ಪ್ರಧಾನಿ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಒತ್ತಾಯಿಸಿರುವುದನ್ನು ಬಿಡಿ ಕನಿಷ್ಠ ಪಕ್ಷ ಪತ್ರ ಬರೆಯುವ ಕೆಲಸವನ್ನೂ ಮಾಡಿಲ್ಲ ಎನ್ನುವ ಗುರುತರ ಆರೋಪ ಅವರ ಮೇಲಿದೆ.
ಋಣ ತೀರಿಸುವ ಕೆಲಸ ಆಗಲಿ:
ಯುಕೆಪಿ ಹಂತ -3 ನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರ ಮುಂದಾಗಿರುವ ಈ ಸನ್ನಿವೇಶದಲ್ಲಾದರೂ ಅವರು ಕೃಷ್ಣಾ ನ್ಯಾಯಾಧೀಕರಣ -2ರ ವರದಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸುವಂತೆ ಇನ್ನಿಲ್ಲದ ಒತ್ತಡ ಹಾಕುವ ಕಾರ್ಯಕ್ಕೆ ಮುಂದಾಗಬೇಕಿದೆ. ಈಗ ಅಂತಹ ಸನ್ನಿವೇಶ ಎದುರಾಗಿದೆ. ಸಂಸದ ಗದ್ದಿಗೌಡರ ಅವರು ರಾಜ್ಯದ ಇತರ ಸಂಸದರು, ಕೇಂದ್ರ ಸಂಪುಟದಲ್ಲಿ ಇರುವ ರಾಜ್ಯದ ಸಚಿವರ ಮನವೊಲಿಸಿ, ಅವರನ್ನೆಲ್ಲ ಒಗ್ಗೂಡಿಸಿಕೊಂಡು ಪ್ರಧಾನಿ ಅವರನ್ನು ನಿಯೋಗದಲ್ಲಿ ಭೇಟಿ ಮಾಡಿ ನ್ಯಾಯಾಧೀಕರಣ ವರದಿಯ ಅಧಿಸೂಚನೆ ಹೊರಡಿಸುವಂತೆ ಒತ್ತಡ ಹಾಕಬೇಕಾದ ಅನಿವಾರ್ಯತೆ ಇದೆ.
ಅಚ್ಚರಿಯ ಸಂಗತಿ ಎಂದರೆ ಸಂಸದ ಗದ್ದಿಗೌಡರ ಅವರು ಬಾಗಲಕೋಟೆ ಜಿಲ್ಲಾಡಳಿತ ಭವನದ ಮುಂದೆ ಯುಕೆಪಿ ಹಂತ- 3ರ ಅನುಷ್ಠಾನಕ್ಕೆ ನಡೆದ ರೈತರ ಅಹೋರಾತ್ರಿ ಧರಣಿ ವೇಳೆ, ಸ್ಥಳಕ್ಕೆ ಭೇಟಿ ನೀಡಿ ರೈತ ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡುವಾಗ, ಈ ಯೋಜನೆ ರಾಜ್ಯಕ್ಕೆ ಸಂಬಂಧಿಸಿದ್ದು, ಕೇಂದ್ರಕ್ಕೆ ಸಂಬಂಧಿಸಿದ್ದಲ್ಲವಾದರೂ ಕೇಂದ್ರದ ಮೇಲೂ ಅಗತ್ಯ ಒತ್ತಡ ಹಾಕುವ ಭರವಸೆ ನೀಡಿದ್ದರು. ಆದರೆ ಅವರು ನಿಯೋಗವೊಂದರಲ್ಲಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿದಾಗ ಒತ್ತಾಯಿಸಿದ್ದು ಭದ್ರಾ ಜಲಾಶಯಕ್ಕಾಗಿ ಎನ್ನುವುದು ಗಮನಾರ್ಹ.
ಗೌಡರು ಇಚ್ಚಾಶಕ್ತಿ ಮೆರೆಯಬೇಕಿದೆ:
ಯುಕೆಪಿ ಕೇಂದ್ರದ ಯೋಜನೆ ಅಲ್ಲ ಎನ್ನುವ ಮನೋಭಾವದಿಂದ ಅವರು ಹೊರ ಬಂದು ಕೇಂದ್ರದ ಮೇಲೆ ಅಧಿಸೂಚನೆ ಹೊರಡಿಸುವಂತೆ ಒತ್ತಡ ಹಾಕಬೇಕಿದೆ. ಈ ವಿಷಯದಲ್ಲಿ ಅವರು ಮುಂದಾಳತ್ವ ವಹಿಸಿಕೊಂಡು ಅಧಿಸೂಚನೆ ಜಾರಿಗೊಳಿಸುವ ವಿಷಯದಲ್ಲಿ ಮುತುವರ್ಜಿ ವಹಿಸಬೇಕಿದೆ. ಅಧಿಸೂಚನೆ ಹೊರ ಬೀಳದ ಹೊರತು ಯೋಜನಾನುಷ್ಠಾನ ಕಷ್ಟವಾಗಲಿದೆ.
ಅಧಿಸೂಚನೆ ಕಷ್ಟ ಸಾಧ್ಯವಾದಲ್ಲಿ ಕೊನೆ ಪಕ್ಷ ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ನಡೆದುಕೊಂಡಂತೆ ಕೃಷ್ಣೆಯ ವಿಷಯದಲ್ಲೂ ಐತೀರ್ಪಿನಲ್ಲಿ ಹಂಚಿಕೆ ಆಗಿರುವ ನೀರಿನ್ನು ಸದ್ಬಳಕೆ ಮಾಡಿಕೊಳ್ಳುವುದಕ್ಕಾದರೂ ಅವಕಾಶ ಕಲ್ಪಿಸಿಕೊಳ್ಳಬೇಕಿದೆ. ಇದು ಸಂಸದರ ಇಚ್ಛಾಶಕ್ತಿಯನ್ನು ಅವಲಂಬಿಸಿದೆ. ಸತತ ಐದನೇ ಬಾರಿಗೆ ದಾಖಲೆ ಗೆಲುವಿಗೆ ಕಾರಣರಾಗಿರುವ ಜನತೆಯ ಋಣ ತೀರಿಸಲಾದರೂ ಗದ್ದಿಗೌಡರ. ಕೇಂದ್ರದ ಮೇಲೆ ಒತ್ತಡ ಹಾಕಲು ತಮ್ಮ ನೇತೃತ್ವದಲ್ಲೆ ವೇದಿಕೆ ಸಜ್ಜುಗೊಳಿಸಬೇಕಿದೆ. ಇದು ಸಾಧ್ಯವೋ ಹೇಗೆ ಎನ್ನುವುದನ್ನು ಕಾಯ್ದು ನೋಡಬೇಕಷ್ಟೆ.
- ವಿಠ್ಠಲ ಆರ್. ಬಲಕುಂದಿ



