ಬಾಗಲಕೋಟೆ: ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲಿ 1977ರಲ್ಲಿ ದೇಶದಲ್ಲಿ ವಿಧಿಸಲಾಗಿದ್ದ ತುರ್ತು ಪರಿಸ್ಥಿತಿಯ ಕರಾಳ ಅಧ್ಯಾಯ ಇಂದಿಗೂ ಸಾರ್ವಜನಿಕವಾಗಿ ಒಂದಿಲ್ಲೊಂದು ಕಡೆ ಚರ್ಚೆ ಆಗುತ್ತಲೇ ಇದೆ. ಅದು ಬಾಗಲಕೋಟೆಯ ನವನಗರದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಯುವಜನೋತ್ಸವ ಉದ್ಘಾಟನೆ ಸಮಾರಂಭದಲ್ಲೂ ಅನುರಣಿಸಿತು.
ರಾಜ್ಯಸಭೆ ಸದಸ್ಯ ನಾರಾಯಣಸಾ ಭಾಂಡಗೆ ಮತ್ತು ಶಾಸಕ ಎಚ್.ವೈ. ಮೇಟಿ ಅವರ ನಡುವೆ ತುರ್ತು ಪರಿಸ್ಥಿತಿ ವಿಷಯ ಜುಗಲಬಂದಿಗೂ ಕಾರಣವಾಗಿ ಪರಿಣಮಿಸಿತು. ಇದೇ ವೇಳೆ ಒಬ್ಬರನ್ನೊಬ್ಬರು ಮಾತಿನಲ್ಲಿ ತಿವಿದ ಪ್ರಸಂಗ ನಡೆಯಿತು.
ಭಾಷಣ ಸ್ಪರ್ಧೆಗೆ ತುರ್ತು ಪರಿಸ್ಥಿತಿ ವಿಷಯ :
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ ಆಯೋಜನೆಗೊಂಡಿತ್ತು. ಯುವಜನೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಜಾನಪದ ನೃತ್ಯ, ಜಾನಪದ ಗೀತೆ, ಕಥೆ ಬರೆಯುವುದು, ಚಿತ್ರಕಲೆ, ವಿಜ್ಞಾನ ಮೇಳ ಪ್ರದರ್ಶನ, ಕವಿತೆ ಹಾಗೂ ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ‘ಭಾರತದಲ್ಲಿ ತುರ್ತು ಪರಿಸ್ಥಿತಿಯ ಅವಧಿ ಮತ್ತು ಸಂವಿಧಾನದ ಉಲ್ಲಂಘನೆ ಹಾಗೂ ಪ್ರಜಾಪ್ರಭುತ್ವವನ್ನು ಕಾಪಾಡುವುದು ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ’ ವಿಷಯ ಭಾಷಣ ಸ್ಪರ್ಧೆಗೆ ಆಯ್ಕೆ ಮಾಡಲಾಗಿತ್ತು.
ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶ:
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಜ್ಯಸಭೆ ಸದಸ್ಯ ನಾರಾಯಣಸಾ ಭಾಂಡಗೆ ಇದೇ ವಿಷಯವನ್ನು ಅಸ್ತ್ರವಾಗಿಸಿಕೊಂಡು ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ಸ್ಮರಿಸಿಕೊಂಡು ಮಾತನಾಡಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ತಮ್ಮ ಅಧಿಕಾರ ಉಳಿಸಿಕೊಳ್ಳಲು ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದರು ಎಂದು ಆರೋಪಿದರು. ಪ್ರತಿಪಕ್ಷ ನಾಯಕರನ್ನು ಜೈಲಿಗೆ ಕಳುಹಿಸಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸ ನಡೆದ ಕುರಿತು ಮಾತನಾಡಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಜತೆಗೆ ಮುಂದಿನ ಪೀಳಿಗಿಗೆ ತುರ್ತು ಪರಿಸ್ಥಿತಿ ವಿಷಯ ನೆನೆಪಿಸುವ ಉದ್ಧೇಶದಿಂದ ಈ ವಿಷಯವನ್ನು ಸರ್ಕಾರ ಭಾಷಣ ಸ್ಪರ್ಧೆಗೆ ಎತ್ತಿಕೊಂಡಿದೆ ಎನ್ನುವ ಅಂಶವನ್ನು ಪುನರುಚ್ಛರಿಸಿ, ಮುಂದೆ ಎಂದೂ ಅಂದಿನ ಪರಿಸ್ಥಿತಿ ನಿರ್ಮಾಣವಾಗಬಾರದು ಎನ್ನುವ ಉದ್ದೇಶದಿಂದ ತಿಳಿವಳಿಕೆ ನೀಡಲು ವಿಷಯ ಗೊತ್ತಾಗಬೇಕು ಎನ್ನುವ ಉದ್ದೇಶದಿಂದ ಸರ್ಕಾರವೇ ಈ ವಿಷಯವನ್ನು ಆಯ್ಕೆ ಮಾಡಿರಬಹುದು ಎನ್ನುವ ಅಭಿಪ್ರಾಯ ವ್ಯಕ್ತ ಪಡಿಸಿದರು.
ತುರ್ತುಸ್ಥಿತಿ ವಿಷಯ ಅಪ್ರಸ್ತುತ:
ಬಳಿಕ ಶಾಸಕ ಎಚ್.ವೈ.ಮೇಟಿ ಅವರು ಮಾತನಾಡಿ, ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿ ಆಗಿದ್ದ ವಿಷಯ ಈಗ ಅಪ್ರಸ್ತುತ, ಅಂದಿನ ಪರಿಸ್ಥಿತಿಯಲ್ಲಿ ದೇಶದಲ್ಲಿ ಏನೋ ಆಗಬಹುದು ಎನ್ನುವ ಕಾರಣಕ್ಕೆ ಅದನ್ನು ಜಾರಿಗೊಳಿಸಿದ್ದರು. ವಿದ್ಯಾರ್ಥಿಗಳು ಆ ಬಗೆಗೆ ತಲೆ ಕೆಡಿಸಿಕೊಳ್ಳುವುದು ಬೇಡ. ಜಿಲ್ಲಾಧಿಕಾರಿ ಸಂಗಪ್ಪ, ಜಿಪಂ. ಸಿಇಒ ಶಶಿಧರ ಕುರೇರ ಅವರ ಹಾಗೆ ಉನ್ನತ ಅಧಿಕಾರಿಗಳಾಗುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ಮಾಡುವ ಮೂಲಕ ತುರ್ತು ಪರಿಸ್ಥಿತಿ ಜಾರಿ, ಸಂವಿಧಾನ ಉಲ್ಲಂಘನೆ ಹಾಗೂ ಪ್ರಜಾಪ್ರಭುತ್ವವನ್ನು ಕಾಪಾಡುವುದು ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಕುರಿತು ಭಾಷಣ ಸ್ಪರ್ಧೆ ಏರ್ಪಡಿಸಿರುವುದನ್ನು ಮರೆ ಮಾಚುವ ಪ್ರಯತ್ನ ಮಾಡಿದರು. ಅಂದು ತಾವು ಕಾಂಗ್ರೆಸ್ಸಿನಲ್ಲಿ ಇರಲಿಲ್ಲ ಎನ್ನುವ ಮಾತನ್ನೂ ಹೇಳಿದರು.
ಗಮನಾರ್ಹ ಅಂಶವೆಂದರೆ ರಾಜ್ಯಸಭೆ ಸದಸ್ಯ ನಾರಾಯಣಸಾ ಭಾಂಡಗೆ ತುರ್ತು ಪರಿಸ್ಥಿತಿ ವಿಷಯದ ಮೇಲೆ ಮಾತನಾಡುತ್ತಿರುವಾಗಲೇ ಸಂಘಟಕರನ್ನು ಕರೆದು ಭಾಷಣ ಸ್ಪರ್ಧೆಗೆ ತುರ್ತು ಪರಿಸ್ಥಿತಿ ವಿಷಯ ಆಯ್ಕೆ ಮಾಡಿರುವ ಬಗೆಗೆ ಅಸಮಾಧಾನ ವ್ಯಕ್ತ ಪಡಿಸಿದ ಪ್ರಸಂಗ ನಡೆದಂತೆ ಕಾಣಿಸಿತು.
ಸರ್ಕಾರಕ್ಕೆ ಮುಜುಗರ :
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವಾಗ, ಯುವಜನೋತ್ಸವ ಕಾರ್ಯಕ್ರಮದಲ್ಲಿ ತುರ್ತು ಪರಿಸ್ಥಿತಿ ವಿಷಯ ಭಾಷಣ ಸ್ಪರ್ಧೆಗೆ ಆಯ್ಕೆಗೊಂಡಿದ್ದು ಹೇಗೆ ಎನ್ನುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದಲ್ಲದೆ, ವ್ಯಾಪಕ ಚರ್ಚೆಗೂ ಕಾರಣವಾಗಿದೆ. ರಾಜ್ಯಸಭೆ ಸದಸ್ಯ ನಾರಾಯಣಸಾ ಭಾಂಡಗೆ ಅವರು ತುರ್ತು ಪರಿಸ್ಥಿತಿ ವಿಷಯವನ್ನೇ ಅಸ್ತ್ರವಾಗಿಸಿಕೊಂಡು ಮಾತನಾಡುವ ವೇಳೆ ಶಾಸಕ ಎಚ್. ವೈ. ಮೇಟಿ ಅವರು ಮುಜುಗರಕ್ಕೆ ಒಳಗಾದಂತೆ ಕಂಡು ಬಂದಿತು.
ವಿಷಯ ಆಯ್ಕೆ ಮಾಡಿದ್ಯಾರು ? :
ಯುವಜನೋತ್ಸವ ಕಾರ್ಯಕ್ರಮದಲ್ಲಿನ ಭಾಷಣ ಸ್ಪರ್ಧೆಗೆ ತುರ್ತು ಪರಿಸ್ಥಿತಿ ವಿಷಯ ಆಯ್ಕೆ ಆಗಿದ್ದು ಹೇಗೆ ಎನ್ನುವುದು ಈಗ ಬಿಲಿಯನ್ ಡಾಲರ್ ಪ್ರಶ್ನೆಯಾಗಿ ಪರಿಣಮಿಸಿದೆ. ಸಂಘಟಕರು ಭಾಷಣ ಸ್ಪರ್ಧೆಗೆ ಆಯ್ಕೆ ಮಾಡಿರುವ ವಿಷಯ ಜಿಲ್ಲಾಡಳಿತದ ಗಮನಕ್ಕೆ ತರಲಿಲ್ಲವೋ ಹೇಗೆ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ತುರ್ತು ಪರಿಸ್ಥಿತಿ ವಿಷಯದ ಆಯ್ಕೆ ಈಗ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಭಾಷಣದ ವಿಷಯದ ಆಯ್ಕೆಯಲ್ಲಿ ಯಡವಟ್ಟಾಗಿರುವುದು ಎಲ್ಲಿ ಎನ್ನುವ ಬಗೆಗೆ ಸರ್ಕಾರದಲ್ಲಿರುವವರು ತಲೆ ಕಡೆಸಿಕೊಳ್ಳುವ ಸಾಧ್ಯತೆಗಳು ನಿಚ್ಚಳವಾಗಿವೆ. ಈ ವಿಷಯದಲ್ಲಿ ಪ್ರತಿಪಕ್ಷಗಳು ಇದೇ ವಿಷಯವನ್ನು ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಮುಗಿಬಿದ್ದಲ್ಲಿ ಅಚ್ಚರಿ ಪಡಬೇಕಾಗಿಲ್ಲ.
- ವಿಠ್ಠಲ ಆರ್. ಬಲಕುಂದಿ




