ಬಾಗಲಕೋಟೆ: ಮಧ್ಯಮ ವರ್ಗದ ಜನತೆಯ ಅನುಕೂಲಕ್ಕಾಗಿ ಬಾಗಲಕೋಟೆಯಲ್ಲಿ ಹೋಟೆಲ್, ಪ್ರವಾಸಿ ತಾಣ ಪಟ್ಟದಕಲ್ಲಿನಲ್ಲಿ ಪಾರ್ಕ್ ನಿರ್ಮಾಣದ ಚಿಂತನೆ ಇದೆ ಎಂದು ಕೈಗಾರಿಕೆ ಹಾಗೂ ಮೂಲ ಸೌಕರ್ಯಗಳ ಕಾರ್ಪೋರೇಷನ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಹೇಳಿದರು.
ನಗರದ ಹೊಸ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಬಿಟಿಡಿಎ ಜಾಗೆ ಕೊಟ್ಟರೆ ಹೋಟೆಲ್:
ಬಾಗಲಕೋಟೆಯಲ್ಲಿ ಬಿಟಿಡಿಎ ಐದು ಎಕರೆ ಜಮೀನು ನೀಡಿದಲ್ಲಿ ಹೋಟೆಲ್ ನಿರ್ಮಿಸಲಾಗುವುದು. ಪಟ್ಟದಕಲ್ಲಿನಲ್ಲಿ ಪಾರ್ಕ್ ಮತ್ತು ಬಾಗಲಕೋಟೆಯಲ್ಲಿ ಹೋಟೆಲ್ ನಿರ್ಮಾಣದಿಂದ ಪ್ರವಾಸಿಗರು ಹಾಗೂ ಮಧ್ಯಮ ವರ್ಗದ ಜನತೆಗೆ ಅನುಕೂಲವಾಗಲಿದೆ ಎಂದರು.
ವಿಜಯಪುರದಲ್ಲಿ ವಿಮಾನ ನಿಲ್ದಾಣ ಕೆಲಸ ಶೇ. 95 ರಷ್ಟು ಮುಗಿದಿದೆ. ಶೀಘ್ರ ಲೋಕಾರ್ಪಣೆ ಕಾರ್ಯ ಆಗಲಿದೆ. ಶಿವಮೊಗ್ಗದಲ್ಲಿ ರಾತ್ರಿ ವಿಮಾನ ಇಳಿಯುವ ಬಗೆಗೆ ಚಿಂತನೆ ನಡೆದಿದೆ. ರಾಯಚೂರಲ್ಲಿ ವಿಮಾನ ನಿಲ್ದಾಣ ಕೆಲಸ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಪುನರ್ ವಸತಿಯಲ್ಲಿ ಬೇಕಿದೆ ಸ್ಪಷ್ಟತೆ:
ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ರ ವ್ಯಾಪ್ತಿಗೆ ಒಳ ಪಡುವ ಜಮೀನುಗಳ ಸ್ವಾಧೀನಕ್ಕಾಗಿ ಸರ್ಕಾರ ಏಕರೂಪ ಪರಿಹಾರ ನಿಗದಿಪಡಿಸಿ, ಆದೇಶಿಸಿರುವುದನ್ನು ಸ್ವಾಗತಿಸಿದ ಅವರು ಇದೊಂದು ಐತಿಹಾಸಿಕ ನಿರ್ಧಾರ ಎಂದರು.
ಯುಕೆಪಿ ಹಂತ- 3 ರ ಅನುಷ್ಠಾನಕ್ಕೆ ಒತ್ತಾಯಿಸಿ ರೈತರು ಸರ್ಕಾರದ ಮುಂದೆ ಬೇಡಿಕೆ ಇಟ್ಟಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದನ್ನು ಗಂಭೀರವಾಗಿ ಪರಿಗಣಿಸಿ, ಹತ್ತು ಹಲವು ಬಾರಿ ಸಭೆಗಳನ್ನು ನಡೆಸಿ ಚರ್ಚಿಸಿದ ಬಳಿಕ ಎಲ್ಲರಿಗೂ ಒಪ್ಪಿಗೆ ಆಗುವಂತೆ ಏಕರೂಪ ದರ ನಿಗದಿ ಪಡಿಸಿದ್ದಾರೆ. ನೀರಾವರಿಗೆ ಪ್ರತಿ ಎಕರೆಗೆ 40 ಲಕ್ಷ ರೂ., ಒಣ ಬೇಸಾಯಕ್ಕೆ 30 ಲಕ್ಷ ರೂ.ನಿಗದಿ ಪಡಿಸಿದ್ದು ಸ್ವಾಗತಾರ್ಹ ಅಂಶವಾಗಿದೆ ಎಂದರು.
ಹಂತ – 3 ರಲ್ಲಿ 75 ಸಾವಿರ ಎಕರೆ ಜಮೀನಿಗೆ 3 ಹಂತದಲ್ಲಿ ಪರಿಹಾರ ಕೊಡಲು ಮುಖ್ಯಮಂತ್ರಿಗಳು ಒಪ್ಪಿದ್ದಾರೆ. ನ್ಯಾಯಾಲಯಕ್ಕೆ ಹೋದವರೂ ಪ್ರಾಧಿಕಾರಕ್ಕೆ ಬಂದಲ್ಲಿ ಈ ಕಾರ್ಯ ಇನ್ನಷ್ಟು ಚುರುಕುಗೊಳ್ಳಲಿದೆ ಎಂದರು.
ಮುಳುಗಡೆ ಗ್ರಾಮಗಳ ಪುನರ್ ವಸತಿ ಮತ್ತು ಪುನರ್ ನಿರ್ಮಾಣ ವಿಷಯದಲ್ಲಿ ಸ್ವಲ್ಪ ಗೊಂದಲವಿದ್ದು, ಮುಂದಿನ ದಿನಗಳಲ್ಲಿ ಅದಕ್ಕೆ ಸೂಕ್ತ ಪರಿಹಾರ ಸಿಗಲಿದೆ ಎನ್ನುವ ಆಶಾಭಾವನೆ ವ್ಯಕ್ತಪಡಿಸಿದರು.
ಕಿಟ್ ನಿರ್ಧಾರ ಸ್ವಾಗತಾರ್ಹ:
ಪಡಿತರ ಕಾರ್ಡುದಾರರಿಗೆ ಹತ್ತು ಕೆಜಿ ಅಕ್ಕಿ ಬದಲಿಗೆ 5 ಕೆಜಿ ಅಕ್ಕಿ ಮತ್ತು ಕಿಟ್ ಕೊಡಲು ಸರ್ಕಾರ ಮುಂದಾಗಿರುವುದನ್ನು ಶ್ಲಾಘಿಸಿದ ನಂಜಯ್ಯಮಠ ಅವರು ಹೊಸ ವ್ಯವಸ್ಥೆಯಿಂದ ಕಾಳಸಂತೆಯಲ್ಲಿ ಅಕ್ಕಿ ಮಾರಾಟ ತಪ್ಪಿಸಲು ಅನುಕೂಲವಾಗಲಿದೆ ಎಂದು ಹೇಳಿದರು.
ಮಾಜಿ ಸಚಿವ ಅಜಯಕುಮಾರ ಸರನಾಯಕ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಅನೀಲ ದಡ್ಡಿ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ. ನಾಗರಾಜ್ ಹದ್ಲಿ, ನಕಾಶ ಟೇಲರ್ ಇತರರು ಇದ್ದರು.




