ರಾಜ್ಯದ ಹಿತಾಸಕ್ತಿಗೆ ಬೇಕಿದೆ ಸಂಸದರ ಕಿಂಚಿತ್ ಕಾಳಜಿ

ಬಾಗಲಕೋಟೆ: ರಾಜ್ಯದ ಸಂಸದರಿಗೆ ಅದೇನು ಗರ ಬಡದಿದೆಯೋ ಎನ್ನುವ ಬಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಕ್ಕದಾಗಿದೆ. ರಾಜ್ಯದ ಹಿತಾಸಕ್ತಿ ವಿಷಯದ ಬಂದಾಗಲೂ ರಾಜ್ಯದ ಸಂಸದರು ಚಕಾರವೆತ್ತುವ ಗೋಜಿಗೆ ಹೋಗುವುದಿಲ್ಲ. ನೆರೆ ರಾಜ್ಯಗಳ ಸಂಸದರು ರಾಜ್ಯದ ಹಿತಾಸಕ್ತಿಗೆ ಧಕ್ಕೆ ಆಗುವಂತಹ ಮಾತನ್ನಾಡಿದರೂ ಸುಮ್ಮನೆ ಇರುತ್ತಾರೆ. ಇವರೇನಾದರೂ ಕಿಂಚಿತ್ ಕಾಳಜಿ ವಹಿಸಿದಲ್ಲಿ ರಾಜ್ಯದ ಲಕ್ಷಾಂತರ ಎಕರೆ ಭೂಮಿ ನೀರಾವರಿ ವ್ಯಾಪ್ತಿಗೆ ಒಳಪಡಲಿದೆ. ಆದರೆ ಯಾವ ಸಂಸದರಿಗೂ ಅದರ ಬಗೆಗೆ ಲಕ್ಷ್ಯವಿಲ್ಲ. ಯಾವ ಪ್ರದೇಶಗಳು ನೀರಾವರಿ ವ್ಯಾಪ್ತಿಗೆ ಬರುತ್ತವೆಯೋ ಆ ಪ್ರದೇಶಗಳ ವ್ಯಾಪ್ತಿಯ ಸಂಸದರೂ ಕೂಡ ಆ ಬಗೆಗೆ ಗಮನ ಹರಿಸದೇ ಇರುವುದು ದುರದೃಷ್ಟಕರ ಸಂಗತಿ.

ಭೂಸ್ವಾಧೀನ ಕ್ರಮಕ್ಕೆ ಆದೇಶ:

ದಶಕಗಳ ಕಾಲ ನನೆಗುದಿಗೆ ಬಿದ್ದಿದ್ದ ರಾಜ್ಯದ ಮಹತ್ವಾಕಾಂಕ್ಷಿ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ರ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರ ಮನಸ್ಸು ಮಾಡಿ, ಹಂತ-3 ರಲ್ಲಿ ಭೂಸ್ವಾಧೀನಕ್ಕೊಳಪಡುವ ಜಮೀನುಗಳಿಗೆ ಏಕರೂಪ ಪರಿಹಾರ ಘೋಷಣೆ ಮಾಡಿದೆ. ಭೂಸ್ವಾಧೀನ, ಪುನರ್ ವಸತಿ, ಪುನರ್ ನಿರ್ಮಾಣಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಂಪುಟ ಸಭೆ ಅಸ್ತು ಎಂದು ಅನುಮೋದನೆ ನೀಡಿ, ಆದೇಶ ಕೂಡ ಹೊರಡಿಸಿದೆ. ನಾಲ್ಕು ಆರ್ಥಿಕ ವರ್ಷಳಲ್ಲಿ ಯೋಜನೆ ಪೂರ್ಣಗೊಳಿಸಲು ಸಜ್ಜಾಗಿರುವ ಸರ್ಕಾರ ಪ್ರಥಮ ವರ್ಷದಲ್ಲಿ 18,000 ಸಾವಿರ ಕೋಟಿ ರೂ. ಖರ್ಚು ಮಾಡಲು ಮುಂದಾಗಿದೆ.

ನೆರೆಯವರ ಆಕ್ಷೇಪಕ್ಕೂ ಪ್ರತಿಕ್ರಿಯೆ ಇಲ್ಲ:

ರಾಜ್ಯ ಸರ್ಕಾರ ಇಷ್ಟೆಲ್ಲ ಚುರುಕಾಗಿರುವಾಗಲೇ ಆಲಮಟ್ಟಿ ಎತ್ತರ ಹೆಚ್ಚಳ ವಿಷಯದಲ್ಲಿ ನೆರೆಯ ಮಹಾರಾಷ್ಟ್ರ ಮತ್ತು ತೇಲಂಗಾಣ ರಾಜ್ಯದ ಮುಖಂಡರು ತಕರಾರು ತೆಗೆದು, ನ್ಯಾಯಾಲಯದ ಮೆಟ್ಟಿಲು ಹತ್ತುವ ಮಾತುಗಳನ್ನಾಡಿದ್ದಾರೆ. ಕರ್ನಾಟಕದ ಸಂಸದರೂ ಮಾತ್ರ ಯಾವುದೇ ಪ್ರತಿಕ್ರಿಯೆಯ ಗೋಜಿಗೆ ಹೋಗಿಲ್ಲ. ರಾಜ್ಯದ 20 ಜನ ಸಂಸದರು ಕೇಂದ್ರದಲ್ಲಿನ ಆಡಳಿತಾರೂಢ ಎನ್‌ಡಿಎ ಕೂಟದ ಪಕ್ಷಗಳಿಗೆ ಸೇರಿದ ಸಂಸದರಿದ್ದಾರೆ. ಕೃಷ್ಣಾ ನ್ಯಾಯಾಧೀಕರಣ -2 ರ ಪ್ರಕಾರ ರಾಜ್ಯದ ಪಾಲಿಗೆ ಹಂಚಿಕೆ ಆಗಿರುವ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕಿದೆ. ಕೇಂದ್ರ ಸರ್ಕಾರ ಮಾತ್ರ ಈ ವಿಷಯದಲ್ಲಿ ಅಧಿಸೂಚನೆ ಹೊರಡಿಸುತ್ತಿಲ್ಲ.

5 ಲಕ್ಷಕ್ಕೂ ಅಧಿಕ ಎಕರೆಗೆ ನೀರು:

ಒಂದೊಮ್ಮೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದಲ್ಲಿ 5 ಲಕ್ಷಕ್ಕೂ ಅಧಿಕ ಎಕರೆ ಭೂಮಿ ನೀರಾವರಿ ವ್ಯಾಪ್ತಿಗೆ ಒಳಪಡಲಿದೆ. ಉತ್ತರ ಕರ್ನಾಟಕ ಸಮೃದ್ಧ ಪ್ರದೇಶವಾಗಿ ಹೊರ ಹೊಮ್ಮಲಿದೆ. ಆದರೆ ಅಧಿಸೂಚನೆ ಹೊರಡಿಸಿ ಎಂದು ಕೇಂದ್ರದ ಮೇಲೆ ಒತ್ತಡ ಹಾಕುವವರೆ ಇಲ್ಲವಾಗಿದೆ. ಕೇಂದ್ರದ ಮೇಲೆ ಒತ್ತಡ ಹಾಕು ಕೆಲಸ ಅದೇನಿದ್ದರೂ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ್ದು ಎನ್ನುವಂತಾಗಿ ಬಿಟ್ಟಿದೆ. ರಾಜ್ಯ ಸರ್ಕಾರ ಈ ವಿಷಯದಲ್ಲಿ ಕೇಂದ್ರದ ಮೇಲೆ ಎಷ್ಟೆ ಒತ್ತಡ ಹಾಕಿದರೂ ಪ್ರಯೋಜನವಾಗುತ್ತಿಲ್ಲ.

ರಾಜ್ಯ ಸರ್ಕಾರದ ಪ್ರಯತ್ನಕ್ಕೆ ರಾಜ್ಯದ ಸಂಸದರು ಸಾಥ್ ನೀಡದ ಹೊರತು ಪ್ರಯತ್ನ ಫಲಕಾರಿ ಆಗಲಾರದು ಎನ್ನುವ ಅಂಶವನ್ನು ರಾಜ್ಯದ ಸಂಸದರು ಮನಗಂಡಿದ್ದರೂ ಮನಸ್ಸು ಮಾಡುತ್ತಿಲ್ಲ. ರಾಜ್ಯ ಸರ್ಕಾರ ಅತ್ಯಂತ ಚುರುಕಿನಿಂದ ಯೋಜನಾನುಷ್ಠಾನಕ್ಕೆ ಮುಂದಾಗಿರುವಾಗ ರಾಜ್ಯದ ಸಂಸದರು ಸುಮ್ಮನೆ ಇರುವ ಬಗೆಗೆ ಜನರಲ್ಲಿ ಅಸಮಾಧಾನ ಮಡುಗಟ್ಟುತ್ತಿದೆ. ಆಲಮಟ್ಟಿ ಎತ್ತರ ಹೆಚ್ಚಿಸುವ ವಿಷಯದಲ್ಲಿ ಆಕ್ಷೇಪ ವ್ಯಕ್ತಪಡಿಸುತ್ತಿರುವ ನೆರೆ ರಾಜ್ಯಗಳ ಆಕ್ಷೇಪಕ್ಕೆ ಕನಿಷ್ಠ ಪಕ್ಷ ಉತ್ತರ ಕೊಡುವ ಕೆಲಸ ಮಾಡಬೇಕಿದೆ.

ಅಧಿಸೂಚನೆಯತ್ತ ಆದ್ಯ ಗಮನ:

ಕೃಷ್ಣಾ ನ್ಯಾಯಾಧೀಕರಣ-2 ರ ಅಧಿಸೂಚನೆ ಹೊರಡಿಸುವಂತೆ ಪ್ರಧಾನಿಗಳ ಮೇಲೆ ಒತ್ತಡ ಹಾಕುವ ಕೆಲಸ ಕರ್ನಾಟಕದ ಸಂಸದರಿಂದ ತ್ವರಿತವಾಗಿ ಆಗಬೇಕಿದೆ. ವಿಳಂಬವಾದಲ್ಲಿ ನೆರೆ ರಾಜ್ಯಗಳ ಒತ್ತಡ ಹೆಚ್ಚಾಗಿ ಯೋಜನಾನುಷ್ಠಾನಕ್ಕೆ ತೊಂದರೆ ಆಗುವ ಸಾಧ್ಯತೆಗಳು ಹೆಚ್ಚು. ಹಾಗಾಗದಂತೆ ಅಧಿಸೂಚನೆ ಹೊರಡಿಸುವುದರತ್ತ ಸಂಸದರು ಆದ್ಯ ಗಮನ ನೀಡಬೇಕಿದೆ. ಅಧಿಸೂಚನೆ ಹೊರ ಬಿದ್ದಲ್ಲಿ ಆಲಮಟ್ಟಿ ಅಣೆಕಟ್ಟು ಎತ್ತರವನ್ನು 519.60 ಮೀಟರ್ ನಿಂದ 524.256 ಮೀಟರ್‌ಗೆ ಹೆಚ್ಚಿಸಿ ಹಂಚಿಕೆ ನೀರನ್ನು ಸಂಗ್ರಹಿಸಿ ಬಳಕೆ ಮಾಡಲು ಸಾಧ್ಯವಾಗಲಿದೆ. ಅಣೆಕಟ್ಟು ಎತ್ತರ ಹೆಚ್ಚಿಸದ ಹೊರತು ಹಂಚಿಕೆ ನೀರಿನ ಸಂಗ್ರಹ ಹಾಗೂ ಬಳಕೆ ಸಾಧ್ಯವಾಗದು.

ಕರ್ನಾಟಕದ ಸಂಸದರು, ಕೇಂದ್ರ ಸಂಪುಟದಲ್ಲಿರುವ ಕರ್ನಾಟಕದ ಸಚಿವರು ಪ್ರಧಾನಿ ಅವರನ್ನು ಭೇಟಿ ಮಾಡಿ, ಅಧಿಸೂಚನೆ ಹೊರಡಿಸುವಂತೆ ಇನ್ನಿಲ್ಲದ ಒತ್ತಡ ಹಾಕಬೇಕಾದ ಅನಿವಾರ್ಯತೆ ಇದೆ. ಕೇಂದ್ರದ ಮೇಲೆ ಒತ್ತಡ ಹಾಕದೇ ಹೋದಲ್ಲಿ ಯೋಜನಾನುಷ್ಠಾನ ಕಷ್ಟವಾಗಲಿದೆ. ಅಣೆಕಟ್ಟು ಎತ್ತರ ಹೆಚ್ಚಳದಿಂದ 5 ಲಕ್ಷಕ್ಕೂ ಅಧಿಕ ಭೂಮಿ ನೀರಾವರಿ ವ್ಯಾಪ್ತಿಗೆ ಒಳಪಡಲಿದೆ ಎನ್ನುವುದನ್ನಾದರೂ ಸಂಸದರು ಮನಗಾಣಬೇಕಿದೆ. ಈ ವಿಷಯದಲ್ಲಿ ಕರ್ನಾಟಕದ ಸಂಸದರು ನಿರ್ಲಕ್ಷ್ಯ ಮನೋಭಾವ ತಾಳಿದಲ್ಲಿ, ಯೋಜನೆ ವಿಳಂಬಕ್ಕೆ ಸಂಸದರ ಅಸಡ್ಡೆ ಕಾರಣ ಎಂದು ಕರ್ನಾಟಕ ಸರ್ಕಾರದ ಪ್ರತಿನಿಧಿಗಳಿಂದ ಗೂಬೆ ಕೂಡಿಸುವ ಪ್ರಯತ್ನಗಳು ನಡೆದಲ್ಲಿ ಅಚ್ಚರಿ ಪಡಬೇಕಿಲ್ಲ.

ಒತ್ತಡ ಅನಿವಾರ್ಯ:

ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಸಂಸದರಾದರೂ ಈ ಬಗೆಗೆ ಗಮನ ಹರಿಸಿ, ರಾಜ್ಯದ ಇತರ ಸಂಸದರು, ಕೇಂದ್ರ ಸಂಸದರ ಮನವೊಲಿಸಿ, ಪ್ರಧಾನಿಗಳನ್ನು ಭೇಟಿ ಮಾಡಿ, ಅಧಿಸೂಚನೆ ಹೊರಡಿಸುವಂತೆ ಒತ್ತಡ ಹಾಕಬೇಕಿದೆ. ಒತ್ತಡ ತಂತ್ರಕ್ಕೆ ಮೊರೆ ಹೋಗದೆ ಇದ್ದಲ್ಲಿ ಸಂಸದರು ರೈತರ ಹಿಡಿಶಾಪಕ್ಕೆ ಗುರಿ ಆಗುವುದರಲ್ಲಿ ಸಂದೇಹವೇ ಇಲ್ಲ.

ಕನಸು ನನಸಾಗಬೇಕಿದೆ:

ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದ ನನೆಗುದಿಗೆ ಬಿದ್ದಿರುವ ಯೋಜನೆ ಅನುಷ್ಠಾನಕ್ಕೆ ಕರ್ನಾಟಕ ಸರ್ಕಾರ ಮುಂದಾಗಿರುವ ವೇಳೆ ಅದಕ್ಕೆ ಸಾಥ್ ಕೊಡುವ ಕೆಲಸಕ್ಕೆ ಸಂಸದರು ಅಣಿಯಾಗಬೇಕು. ಅಂದಾಗ ಮಾತ್ರ ಯೋಜನೆಗೆ ವೇಗ ಸಿಗಲಿದೆ. ಸ್ವಲ್ಪವೇ ಯಾಮಾರಿದರೂ ಯೋಜನೆ ರಾಜಕೀಯ ದಾಳಕ್ಕೆ ಸಿಲುಕಿ ರೈತರು ತಮ್ಮ ಭೂಮಿಗೆ ನೀರು ಬರುವ ಕನಸು ಕಾಣುತ್ತ ಕಾಲ ಕಳೆಯಬೇಕಾಗಿ ಬರುತ್ತದೆ. ಹಾಗಾಗದಂತೆ ಎಚ್ಚರಿಕೆ ವಹಿಸುವ ಗುರುತರ ಜವಾಬ್ದಾರಿ ಸಂಸದರ ಮೇಲಿದೆ. ಅವರು ಅದನ್ನು ನಿಭಾಯಿಸುವ ಕೆಲಸ ಮಾಡಬೇಕಷ್ಟೆ.

  • ವಿಠ್ಠಲ ಆರ್. ಬಲಕುಂದಿ
Scroll to Top