ಕೇಸರಿಕೋಟೆಯಲ್ಲಿ ಸಂಭ್ರಮದ ಕಲರವ

ಬಾಗಲಕೋಟೆ: ಕೇಸರಿಕೋಟೆ ಎಂದೇ ಹೆಸರಾಗಿರುವ ಬಾಗಲಕೋಟೆಯಲ್ಲಿ ಪ್ರತಿವರ್ಷ ವಿಜಯ ದಶಮಿ‌ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ‌ ಸೇವಕ ಸಂಘದ ವಾರ್ಷಿಕೋತ್ಸವ ನಡೆಯುತ್ತದೆ. ಈ ವೇಳೆ ನಡೆಯುವ ಘನವೇಷಧಾರಿಗಳು ಆಕರ್ಷಕ ಪಥ ಸಂಚಲನ ರಾಜ್ಯಕ್ಕೆ ಮಾದರಿ ಎನ್ನುವ ರೀತಿಯಲ್ಲಿ ನಡೆಯುತ್ತದೆ.

ಪ್ರತಿವರ್ಷ ನಡೆಯುವಂತೆ ಈ ಬಾರಿಯ ಪಥ ಸಂಚಲನ ಇನ್ನಷ್ಟು ಆಕರ್ಷಕವಾಗಿ ನಡೆಯುವಂತಾಗಲು ಈಗಲೇ ಸಿದ್ಧತೆಗಳು ಭರ್ಜರಿಯಾಗಿ ನಡೆಯುತ್ತಿವೆ. ಈ ಬಾರಿಯ ಆರೆಸ್ಸೆಸ್ ವಾರ್ಷಿಕೋತ್ಸವ ತನ್ನದೆ ಆದ ವೈಶಿಷ್ಠ್ಯವನ್ನು ಹೊಂದಿದೆ. ಆರೆಸ್ಸೆಸ್ ಶತಮಾನೋತ್ಸವ ಆಚರಣೆ ಸಂಭ್ರಮದಲ್ಲಿರುವುದು ಕಾರ್ಯಕರ್ತರ ಸಂಭ್ರಮವನ್ನು ನೂರ್ಮಡಿಗೊಳಿಸಿದೆ.

ಕೇಸರಿಮಯ:

ಆರೆಸ್ಸೆಸ್ ವಾರ್ಷಿಕೋತ್ಸವದ ಅಂಗವಾಗಿ ನಡೆಯುವ ಆಕರ್ಷಕ ಪಥಚಲನಕ್ಕೆ ಅದ್ಧೂರಿ ಸ್ವಾಗತ ನೀಡಲು ನಗರಾದ್ಯಂತ ಕೇಸರಿ‌ ಸ್ವಾಗತ ಕಮಾನುಗಳು, ಭಾರತ‌ಮಾತೆ ಹಾಗೂ ರಾಷ್ಟ್ರ ನಾಯಕರ ಭಾವಚಿತ್ರಗಳುಳ್ಳ ಬ್ಯಾನರ್ ಪ್ಲೆಕ್ಸ್ ಗಳ ಆರ್ಭಟ ಕೂಡ ಜೋರಾಗಿದೆ. ಪಥ ಸಂಚಲನದ ಮಾರ್ಗದ ಉದ್ದಕ್ಕೂ ಕೇಸರಿ ಧ್ವಜಗಳು ರಾರಾಜಿಸುತ್ತಿವೆ. ಇಡೀ ನಗರ ಕೇಸರಿಮಯವಾಗಿದೆ.

ರೋಮಾಂಚನಕಾರಿ ಸನ್ನಿವೇಶ:

ಈಗಾಗಲೇ ಪಥಸಂಚಲನದ ನಿಮಿತ್ತ ಬೈಕ್ ಮೆರವಣಿಗಳು ನಡೆದಿವೆ. ಯುವಕರಲ್ಲಿನ ಉತ್ಸಾಹ ಹೆಚ್ಚಿಸಿವೆ. ಇಲ್ಲಿನ ಬಸವೇಶ್ವರ ಕಾಲೇಜ್ ಮೈದಾನದಿಂದ ಎರಡು ತಂಡಗಳಲ್ಲಿ ಹೊರಡುವ ಘನವೇಷಧಾರಿಗಳ ಪಥಸಂಚಲನ ಪ್ರತ್ಯೇಕವಾಗಿ ನಗರಾದ್ಯಂತ ಸಂಚರಿಸಿ, ಬಸವೇಶ್ವರ ವೃತ್ತದಲ್ಲಿ ಎರಡೂ ತಂಡಗಳು ಒಟ್ಟಾಗಿ ಸೇರಿ ಮುಂದೆ ಸಾಗುವ ದೃಶ್ಯ ರೋಮಾಂಚನಕಾರಿ ಆಗಿರುತ್ತದೆ. ಈ ದೃಶ್ಯವನ್ನೇ ಕಣ್ತುಂಬಿಕೊಳ್ಳಲು ಜಿಲ್ಲೆಯ ನಾನಾ ಕಡೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಜನ ಆಗಮಿಸುತ್ತಾರೆ.

ರಂಗೋಲಿ ಚಿತ್ತಾರ:

ಪಥ ಸಂಚಲನ ಮಾರ್ಗದುದ್ದಕ್ಕೂ ಪ್ರತಿ‌ಮನೆಗಳ‌ ಮುಂದೆ ಚಿತ್ತ ಚಿತ್ತಾರದ ರಂಗೋಲಿಗಳು ಕಂಗೊಳಿಸುತ್ತಿರುತ್ತವೆ. ಮಕ್ಕಳು ಹಾಗೂ ಯುವಕರು‌ ರಾಷ್ಟ್ರ ಭಕ್ತರ ವೇಷದಲ್ಲಿ ನಿಂತುಕೊಂಡು ಪಥ ಸಂಚಲನ್ನು ಸ್ವಾಗತಿಸುವ ಪರಿ ನೋಡಿಯೇ ಅನುಭವಿಸಬೇಕು. ಹಾಗಿರುತ್ತದೆ ಅಂದಿನ ಸಂಭ್ರಮ.

ಅಂದ ಹಾಗೆ ಈ ಬಾರಿಯ ಆರೆಸ್ಸೆಸ್ಸಿನ ವಾರ್ಷಿಕೋತ್ಸವ ಶತಮಾನೋತ್ಸವ ಸಂದರ್ಭದಲ್ಲಿ ನಡೆಯಲಿರುವುದರಿಂದ ಎಲ್ಲವೂ ವಿಶೇಷವಾಗಿರಲಿದೆ. ಈ ಬಾರಿಯ ಪಥ ಸಂಚಲನದಲ್ಲಿ ಅಂದಾಜು ಎರಡುವರೆಯಿಂದ ಮೂರು ಸಾವಿರ ಜನ ಘನವೇಷಧಾರಿಗಳು ಭಾಗವಹಿಸುವ ನಿರೀಕ್ಷೆ ಇದೆ. ಈ ಬಾರಿಯ ಪಥ ಸಂಚಲನ ಸನ್ನಿವೇಶ ಐತಿಹಾಸಿಕವಾಗಲಿದೆ. ಆ ರೀತಿಯ ಸಿದ್ಧತೆಗಳು ಆಗಿವೆ.

  • ವಿಠ್ಠಲ ಆರ್. ಬಲಕುಂದಿ
Scroll to Top