ಕ್ಷೇತ್ರದ ಅಧಿಪತ್ಯಕ್ಕಾಗಿನ ಹೋರಾಟದಲ್ಲಿ ಪಕ್ಷ ಸಂಘಟನೆಗೊಬ್ಬರು, ಅಧಿಕಾರಕ್ಕಾಗೊಬ್ಬರು ಎನ್ನುವ ಸ್ಥಿತಿ ಜಿಲ್ಲೆಯ ತೇರದಾಳ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಪಕ್ಷದಲ್ಲಿ ನಿರ್ಮಾಣವಾಗಿದೆ. ಇದು ಕಾರ್ಯಕರ್ತರ ನಡುವಿನ ಅಸಮಾಧಾನಕ್ಕೂ ಕಾರಣವಾಗಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ ನಡೆದ ಪೈಪೋಟಿಯಲ್ಲಿ ಸಿದ್ದು ಕೊಣ್ಣೂರ ಅವರಿಗೆ ಪಕ್ಷದ ಬಿ ಫಾರ್ಮ್ ಸಿಕ್ಕು ಚುನಾವಣೆ ಅಖಾಡಕ್ಕಿಳಿದಿದ್ದರು. ಮೊದಲ ಬಾರಿಗೆ ಅಖಾಡಕ್ಕಿಳಿದರೂ ಬಿಜೆಪಿಯ ಪ್ರಭಾವಿ ನಾಯಕ ಸಿದ್ದು ಸವದಿ ವಿರುದ್ಧ ಗಣನೀಯ ಪ್ರಮಾಣದ ಮತಗಳನ್ನು ಪಡೆದು ಪರಾಜಿತರಾದರು.
ಹೆಗಲೇರಿದ ಜವಾವ್ದಾರಿ:
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಚುಕ್ಕಾಣಿ ಹಿಡಿದ ಪರಿಣಾಮ ಕ್ಷೇತ್ರದ ಜವಾಬ್ದಾರಿ ಕೊಣ್ಣೂರ ಅವರ ಹೆಗಲೇರಿತು. ಇದೇ ವೇಳೆ ಟಿಕೆಟ್ ವಂಚಿತ ಮಾಜಿ ಸಚಿವೆ ಉಮಾಶ್ರೀ ಅವರಿಗೆ ವಿಧಾನ ಪರಿಷತ್ ಪ್ರವೇಶಾವಕಾಶ ಸಿಕ್ಕಿತು. ಆರಂಭದಲ್ಲಿ ಎಲ್ಲವೂ ಸರಿಯಾಗಿತ್ತು. ಮೇಲ್ಮನೆ ಸದಸ್ಯರಾಗಿ ಉಮಾಶ್ರೀ ನೇಮಕಗೊಂಡ ಬಳಿಕ ಕ್ಷೇತ್ರದ ಮೇಲಿನ ಹಿಡಿತ ಸಾಧಿಸುವ ಪ್ರಯತ್ನ ಅವರ ಬೆಂಬಲಿಗರಿಂದ ಶುರುವಾದ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಅಸಮಾಧಾನಗಳು ಶುರುವಾದವು.
ಕ್ಷೇತ್ರದ ಮೇಲಿನ ಹಿಡಿತ ಸಾಧಿಸುವುದಕ್ಕಾಗಿ ಉಭಯ ಮುಖಂಡರ ನಡುವೆ ಪೈಪೋಟಿ ಆರಂಭಗೊಂಡು ಪಕ್ಷದಲ್ಲಿ ಎರಡು ಸ್ಪಷ್ಟ ಗುಂಪುಗಳು ಸೃಷ್ಟಿ ಆಗಿವೆ. ಪಕ್ಷ ಸಂಘಟನೆ ವಿಷಯದಲ್ಲಿ ಸಿದ್ದು ಕೊಣ್ಣೂರ ಗುಂಪು ಮುಂಚೂಣಿಯಲ್ಲಿದೆ. ಈಗಲೂ ಕ್ಷೇತ್ರದ ತುಂಬ ಓಡಾಡಿಕೊಂಡು ಸಿದ್ದು ಕೊಣ್ಣೂರ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಪಕ್ಷದ ಪ್ರತಿ ಸಭೆ, ಸಮಾರಂಭಗಳು, ಸರ್ಕಾರಿ ಕೆಲಸಗಳು ಅವರ ಮುಂದಾಳತ್ವದಲ್ಲೆ ನಡೆಯುತ್ತಿವೆ.
ಕ್ಷೇತ್ರದ ಮೇಲೆ ಉಮಾಶ್ರೀ ನಿಗಾ:
ಮೇಲ್ಮನೆ ಸದಸ್ಯೆ ಉಮಾಶ್ರೀ ಆಗಾಗ್ಗೆ ಕ್ಷೇತ್ರಕ್ಕೆ ಭೇಟಿ ನೀಡುತ್ತಾರಾದರೂ ಸಂಘಟನೆ ವಿಷಯದಲ್ಲಿ ಅಷ್ಟಕ್ಕಷ್ಟೆ. ಪಕ್ಷ ಹಾಗೂ ಸರ್ಕಾರದಲ್ಲಿ ಸಾಕಷ್ಟು ಪ್ರಭಾವ ಹೊಂದಿರುವ ಉಮಾಶ್ರೀ ಆಡಳಿತ ವ್ಯವಸ್ಥೆಯಲ್ಲಿ ತಮ್ಮದೇ ನಡೆಯುವಂತೆ ನೋಡಿಕೊಂಡಿದ್ದಾರೆ. ಕ್ಷೇತ್ರದಲ್ಲಿನ ಆಗು-ಹೋಗುಗಳ ಮೇಲೆ ನಿಗಾ ವಹಿಸಿದ್ದಾರೆ.
ಉಭಯ ನಾಯಕರ ನಡುವಿನ ಅಧಿಕಾರಕ್ಕಾಗಿನ ಹಾವು-ಏಣಿಯಾಟದಲ್ಲಿ ಕಾಯಕರ್ತರ ಪರಿಪಾಟಲು ಹೇಳ ತೀರದಾಗಿದೆ. ಅಂದ ಹಾಗೆ, ಬಹುತೇಕ ಕಡೆಗಳಲ್ಲಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ತಮ್ಮ ಪಕ್ಷದ ಜವಾಬ್ದಾರಿ ತೆಗೆದುಕೊಂಡಿರುತ್ತಾರೆ. ಆದರೆ ಇಲ್ಲಿಯ ಪರಿಸ್ಥಿತಿ ಭಿನ್ನವಾಗಿದೆ.
ಶಕ್ತಿಕೇಂದ್ರಗಳ ಉದಯ:
ಚುನಾವಣೆಯಲ್ಲಿ ಸಿದ್ದು ಕೊಣ್ಣೂರ ಸೋತರೂ ಅವರ ಪಕ್ಷ ರಾಜ್ಯದಲ್ಲಿ ಅಧಿಕಾರ ಗದ್ದುಗೆ ಹಿಡಿದಿದೆ. ಹಾಗಾಗಿ ಕ್ಷೇತ್ರದಲ್ಲಿ ಸಹಜವಾಗಿ ಅವರೇ ಪಕ್ಷದ ಜವಾಬ್ದಾರಿ ನೋಡುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರುತ್ತಿದ್ದಂತೆ ಉಮಾಶ್ರೀ ಪರಿಷತ್ತಿಗೆ ನೇಮಕಗೊಂಡರು. ಪರಿಣಾಮವಾಗಿ ತೇರದಾಳ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ಸಿನಲ್ಲಿ ಎರಡು ಶಕ್ತಿ ಕೇಂದ್ರಗಳು ನಿರ್ಮಾಣವಾಗಿವೆ.
ಪಕ್ಷ ಸಂಘಟನೆಗೊಂದು, ಅಧಿಕಾರಕ್ಕಾಗಿ ಇನ್ನೊಂದು ಎನ್ನುವ ಅಯೋಮಯ ಸ್ಥಿತಿ ಉಂಟಾಗಿದೆ. ಅಧಿಕಾರಸ್ಥ ಪಕ್ಷದಲ್ಲಿ ಯಾವ ಪರಿ ಅಸಮಾಧಾನ ಉಂಟಾಗಿದೆ ಎನ್ನುವುದಕ್ಕೆ ರಬಕವಿ-ಬನಹಟ್ಟಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರ ಅಧಿಕಾರ ಸ್ವೀಕಾರ ವೇಳೆ ನಡೆದ ಪ್ರತಿಭಟನೆ ಸಾಕ್ಷಿಯಾಗಿದೆ. ರಬಕವಿ-ಬನಹಟ್ಟಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರ ನೇಮಕ ವಿಷಯದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಸಿದ್ದು ಕೊಣ್ಣೂರ ಬಣ ಅಧ್ಯಕ್ಷರ ನೇಮಕ ವಿಷಯದಲ್ಲಿ ಸಾಕಷ್ಟು ಅಸಮಾಧಾನ ಹೊಂದಿದೆ.
ಅಸಮಾಧಾನ ಸ್ಪೋಟ:
ಅಧಿಕಾರರೂಢ ಪಕ್ಷಗಳಲ್ಲಿ ಕ್ಷೇತ್ರದ ಮೇಲಿನ ಹಿಡಿತ ಸಾಧಿಸಲು ಮುಖಂಡರ ನಡುವೆ ಜಿದ್ದಾಜಿದ್ದಿ ಸಹಜವಾದರೂ ಅದು ಬಹಿರಂಗವಾಗಿ ಸ್ಪೋಟಗೊಳ್ಳುವ ಹಂತ ತಲುಪಬಾರದು. ಈಗ ತೇರದಾಳ ಕ್ಷೇತ್ರದಲ್ಲಿ ಬಣ ಬಡಿದಾಟ ಪರಾಕಾಷ್ಟೆಗೆ ತಲುಪಿದೆ. ಉಭಯ ಬಣಗಳ ನಡುವೆ ಉಂಟಾಗಿರುವ ಅಸಮಾಧಾನದ ಕಂದಕ ದೊಡ್ಡದಾಗುವ ಮುನ್ನ ಅದನ್ನು ಶಮನ ಮಾಡಬೇಕಿದೆ. ಸರಿಪಡಿಸುವ ಕೆಲಸ ಸದ್ಯಕ್ಕೆ ಪಕ್ಷದಲ್ಲಿ ನಡೆಯುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ.
ಒಂದೊಮ್ಮೆ ಎರಡೂ ಬಣಗಳ ಬಡಿದಾಟ ಹೀಗೆ ಮುಂದುವರಿದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅದರ ವ್ಯತಿರಿಕ್ತ ಪರಿಣಾಮ ಪಕ್ಷದ ಮೇಲಾಗಲಿದೆ ಎನ್ನುವ ಅಭಿಪ್ರಾಯ ಕಾಂಗ್ರೆಸ್ ವಲಯದಲ್ಲಿಯೇ ಕೇಳಿ ಬರುತ್ತಿದೆ.
ಬಿಜೆಪಿಗೆ ಅನಾಯಾಸ ಲಾಭ:
ಕಾಂಗ್ರೆಸ್ ಮುಖಂಡರ ನಡುವಿನ ಅಸಮಾಧಾನ ಬಿಜೆಪಿಗೆ ಲಾಭ ತಂದುಕೊಡಲಿದೆ. ಬಿಜೆಪಿಯ ಸಿದ್ದು ಸವದಿ ಇಲ್ಲಿ ಶಾಸಕರಿದ್ದು, ಮೂರನೇ ಬಾರಿಗೆ ಕ್ಷೇತ್ರದ ಶಾಸಕರಾಗಿದ್ದು, ಕ್ಷೇತ್ರದ ಮೇಲೆ ತಮ್ಮದೆ ಆದ ಹಿಡಿತ ಹೊಂದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಕ್ಷೇತ್ರದಲ್ಲಿ ಅವರ ಪ್ರಭಾವ ಪ್ರಶ್ನಾತೀಯ ಎನ್ನುವಂತಿದೆ. ಇಂತಹ ಸನ್ನಿವೇಶದಲ್ಲಿ ಕಾಂಗ್ರೆಸ್ಸಿನಲ್ಲಿನ ಬಣ ಬಡಿದಾಟ ಶಮನ ಆಗದೇ ಹೋದಲ್ಲಿ ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬಿಜೆಪಿಗೆ ಲಾಭ ಗ್ಯಾರಂಟಿ ಎನ್ನುವ ಮಾತುಗಳು ವ್ಯಾಪಕವಾಗಿವೆ.
- ವಿಠ್ಠಲ ಆರ್. ಬಲಕುಂದಿ




